ಎಲ್ಲರಿಗೂ ಸಂತಸ ತಂದಿಲ್ಲ ಮಳೆ, ಸಂಕಷ್ಟದಲ್ಲಿದ್ದಾರೆ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು
ಶಿವಮೊಗ್ಗ, ಜನವರಿ 08: 2024ರ ಮೇ, ಜೂನ್ ತಿಂಗಳಿನಲ್ಲಿ ಆರಂಭವಾದ ಮಳೆ ವಾಡಿಕೆಗಿಂತ ಹೆಚ್ಚು ಸುರಿದಿದೆ. ಎಲ್ಲಾ ಡ್ಯಾಂಗಳು ಭರ್ತಿಯಾಗಿವೆ. ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ, ಬೇಸಿಗೆ ಬೆಳೆಗಳಿಗೆ ನೀರಿನ ಸಮಸ್ಯೆ ಇರುವುದಿಲ್ಲ ಎಂಬ ಸಂತಸದ ವಿಚಾರ ಒಂದು ಕಡೆ. ಆದರೆ ಅತಿ ಹೆಚ್ಚಾಗಿ ಸುರಿದ ಮಳೆ ವಿವಿಧ ಬೆಳೆ ಬೆಳೆಯುವ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗಾರರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ.
ಸಾಂಪ್ರದಾಯಿಕ ಅಡಿಕೆ ಬೆಳೆಯುವ ರೈತರ ಎರಡು, ಮೂರು ಕೊಯ್ಲು ಮುಗಿದಿದೆ. ಈ ಬಾರಿ ಎಷ್ಟು ಕ್ವಿಂಟಾಲ್ ಅಡಿಕೆ ಕಡಿಮೆ? ಪ್ರಶ್ನೆಯನ್ನು ಎಲ್ಲಾ ರೈತರು ಕೇಳುತ್ತಿದ್ದಾರೆ. ಮೂರು ಬಾರಿ, ನಾಲ್ಕು ಬಾರಿ ಔಷಧಿ ಸಿಂಪಡಣೆ ಮಾಡಿದರೂ ಸಹ ರೈತರು ಅಡಿಕೆ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಡಿಕೆ ಹೋಗಿದೆ, ಮರವಾದರೂ ಉಳಿದರೆ ಸಾಕು ಎಂದು ರೈತರು ಹೇಳುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಡಿಕೆ ಬೆಳೆಯುವ ರೈತರಾದ ಪ್ರಬಂಧ ಅಂಬುತೀರ್ಥ ಈ ವರ್ಷ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟವನ್ನು ಬರಹದ ಮೂಲಕ ವಿವರಿಸಿದ್ದಾರೆ. ಈ ಬರಹದ ಭಾಗ-1 'ನಲವತ್ತು ಪರ್ಸೆಂಟ್, ಐವತ್ತು ಪರ್ಸೆಂಟ್‌ನವರ ನಡುವೆ ಎಪ್ಪತ್ತು ಪರ್ಸೆಂಟ್ ಉತ್ಪತ್ತಿ ಕಳೆದುಕೊಂಡ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು' ಎಂಬ ಬರಹ, ಅಡಿಕೆ ಬೆಳೆಗಾರರ ಸಂಕಷ್ಟದ ಚಿತ್ರಣ ಇಲ್ಲಿದೆ ಓದಿ....
ಅಡಿಕೆ ಸುಗ್ಗಿ ಮುಗಿಯುತ್ತಾ ಬಂತು; ಮಲೆನಾಡಿನಲ್ಲಿ ಅಡಿಕೆ ಸುಗ್ಗಿ ಆರಂಭವಾಗಿ ಮುಗಿಯುತ್ತ ಬಂತು. ಬಹುತೇಕ ಅಡಿಕೆ ಬೆಳೆಗಾರರು ತಮಗೆ ಈ ವರ್ಷ ಮುಕ್ಕಾಲು ಪಾಲು ಅಡಿಕೆ ಉತ್ಪತ್ತಿ ಇಲ್ಲ ಎನ್ನುತ್ತಿದ್ದಾರೆ...! ಹೌದು....ಹಿಂದೆ ಇದಕ್ಕಿಂತಲೂ ದೊಡ್ಡ ದೊಡ್ಡ 'ಹುಚ್ಚು ಮಳೆ' ಮಲೆನಾಡು ಕರಾವಳಿಯಲ್ಲಿ ಬಂದಿದೆ. ಹೆಚ್ಚು ಮಳೆ ಬಂದಾಗಲೆಲ್ಲ ಕೊಳೆ ಶಿಲೀಂಧ್ರ ರೋಗ ಬಾಧೆಗೆ ಅಡಿಕೆ ಫಸಲು ನಷ್ಟವಾಗುವುದು ಸಾಮಾನ್ಯ. ಆದರೆ ಈ ಸರ್ತಿ ಅಡಿಕೆ ಬೆಳೆಗಾರರ ಅನುಭವದ ಇತಿಹಾಸದಲ್ಲೆಲ್ಲೂ ಈ ಪ್ರಮಾಣದ ಅಡಿಕೆ ನಷ್ಟ ವಾಗಿಲ್ಲ. ಇದಕ್ಕೆ ಅಡಿಕೆ ಕೊಳೆ ರೋಗ ಬಾಧೆಯೊಂದೇ ಮಾತ್ರ ಕಾರಣವೇ....?. ಈ ಮಳೆಗಾಲಕ್ಕೆ ಮೊದಲೇ ಒಂದು ರೌಂಡ್ ಸಿಂಗಾರ ಅತಿಯಾದ ಉಷ್ಣಾಂಶಕ್ಕೆ ಅರಳದೇ ಕರಟಿ ಹೋಗಿದೆ, ಚಿಗುರು ಅಡಿಕೆಯೂ ಉದುರಿದೆ, ಆದರೆ ಅದೆಲ್ಲಾ ಲೆಕ್ಕಾಚಾರ ಹಾಕಿದರೂ ಅರವತ್ತು ಎಪ್ಪತ್ತು ಪ್ರತಿಶತ ಅಡಿಕೆ ಉತ್ಪತ್ತಿ ನಷ್ಟವಾಗಿದೆ. ಇದಕ್ಕೆ ಖಂಡಿತವಾಗಿಯೂ ಅಡಿಕೆ ಕೊಳೆಯೊಂದೇ ಕಾರಣವಲ್ಲ.
ಅಡಿಕೆ ಕೊಳೆ ಶಿಲೀಂಧ್ರ ಮತ್ತು ಎಲೆಚುಕ್ಕಿ ಶಿಲೀಂಧ್ರ ಜೊತೆಯಾಗಿ ಕೆಲಸ ಮಾಡಿದ್ದು ಈಗ ಕೊನೆ ತೆಗದ ಮೇಲೆ ಅನುಭವಕ್ಕೆ ಬರುತ್ತಿದೆ. ನಮ್ಮ ಕಡೆಯಲ್ಲಿ ಅಡಿಕೆ ಸೋಗೆಯಲ್ಲಿ ಎಲೆಚುಕ್ಕಿ ಕಾಣಿಸುತ್ತಿಲ್ಲ. ಆದರೆ ಅಡಿಕೆ ಗೊನೆಯ ಅಡಿಕೆ ಕಾಯಿ ಮೇಲೆ ಚುಕ್ಕಿ ಚುಕ್ಕಿ ಸಿಂಗಾರ ಮೂಡಿದೆ. ಅಡಿಕೆ ಕೊಳೆ ಶಿಲೀಂಧ್ರ ಎಲೆಚುಕ್ಕಿ ಶಿಲೀಂಧ್ರಗಳ ಜೊತೆಗೆ ಎಂದಿನಂತೆ ಮಂಗಗಳೂ ತಮ್ಮ ಶಕ್ತಿ ಮೀರಿ ಸೇವೆ ಸಲ್ಲಿಸಿದೆ. ಅಡಿಕೆ ಫಸಲು ಮೂವತ್ತು ಪ್ರತಿಶತಕ್ಕಿಂತ ಈ ಬಾರಿ ಕಡಿಮೆ.
ಇದು ಒಬ್ಬ, ಇಬ್ಬರು ಅಥವಾ ಒಂದು ಊರು, ಒಂದು ತಾಲ್ಲೂಕು, ಒಂದು ಜಿಲ್ಲೆಯ ಅಡಿಕೆ ಬೆಳೆಗಾರರ ಪರಿಸ್ಥಿತಿ ಅಲ್ಲ. ಸಮಸ್ತ ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರೆಲ್ಲರ ಪರಿಸ್ಥಿತಿ. 10 ಕ್ವಿಂಟಾಲ್ ಅಡಿಕೆ ಬೆಳೆ ತೆಗೆಯತ್ತಿದ್ದ ಅಡಿಕೆ ಬೆಳೆಗಾರನಿಗೆ ಈ ಬಾರಿ 3 ಕ್ವಿಂಟಾಲ್ ಮಾತ್ರ ಅಡಿಕೆ ಉತ್ಪತ್ತಿಯಾದರೆ, ಕೇವಲ 3 ಕ್ವಿಂಟಾಲ್ ಅಡಿಕೆಯ ಮಾರುಕಟ್ಟೆಯ ಚಾಲ್ತಿ ದರ ಒಂದು ಒಂದೂವರೆ ಲಕ್ಷ ರೂಪಾಯಿಯಲ್ಲಿ ಕೃಷಿ ಬದುಕು ಮತ್ತು ದೈನಂದಿನ ಜೀವನ ಹೇಗೆ ನೆಡಸುತ್ತಾನೆ?
ಯಾಕೆ ಹೀಗಾಯಿತು?: ನೀವು ಗಮನಿಸಿ ನೋಡಿ ನಮ್ಮ ಮಲೆನಾಡಿನಲ್ಲಿ ಅಕ್ಟೋಬರ್‌ನಿಂದ ಚಳಿಗಾಲ ಆರಂಭವಾಗಿ ಜನವರಿ ತಿಂಗಳ ಅಂತ್ಯಕ್ಕೆ ಚಳಿಗಾಲದ ಅಧಿವೇಶನ ಮುಗಿಯಬೇಕು. ಈ ಲೆಕ್ಕದಲ್ಲಿ ಮೂರು ತಿಂಗಳ ಚಳಿಗಾಲ ಮುಗಿದಿದೆ. ಆದರೆ ಈ ಬಾರಿ ಚಳಿ ಇದ್ದದ್ದು ಒಂದೇ ಒಂದು ದಿನ ಮಾತ್ರ. ಸಾಮಾನ್ಯ ಚಳಿ ಒಂದೆರಡು ದಿನಗಳ ಕಾಲ ಇತ್ತೇನೋ. ಇನ್ನುಳಿದ ಎಲ್ಲಾ ದಿನಗಳಲ್ಲಿ ರಾತ್ರಿಯೂ ಫ್ಯಾನ್ ಇಲ್ಲದೇ ಮಲಗಲು ಅಸಾಧ್ಯ ಎನ್ನುವಷ್ಟು ಸೆಖೆ.
ಮಳೆಗಾಲ ಕೂಡ ಹಾಗೇ ಆಗುತ್ತಿದೆ. ಸರಿಯಾಗಿ ಜೂನ್ ಮೊದಲ ವಾರ ಮಲೆನಾಡಿನಲ್ಲಿ ಆರಂಭವಾಗಿ ಸೆಪ್ಟೆಂಬರ್ ಹೊತ್ತಿಗೆ ಬಿಡುವು ಕೊಡುತ್ತಿತ್ತು. ಇಪ್ಪತ್ತು ವರ್ಷಗಳ ಈಚೆ ಮಳೆ ಹೆಚ್ಚು ಬೀಳುತ್ತಿದೆ ಎಂದಿನಿಸುತ್ತಿದೆ. ಆದರೆ ಇದು ತಪ್ಪಾದ ಅನಿಸಿಕೆ. ಆಗ ಈಗಿಗಿಂತ ಹೆಚ್ಚು ಮಳೆ ಬೀಳುತ್ತಿತ್ತು. ಸುಮಾರು 300 ಇಂಚು ಮಳೆಗಾಲವನ್ನು ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದಿನ ಮಲೆನಾಡು ಸಲೀಸಾಗಿ ತಡೆದುಕೊಳ್ಳುತ್ತಿತ್ತು. ಈಗ 150 ರಿಂದ 200 ಇಂಚಿನ ಮಳೆ ನಮ್ಮ ಮಲೆನಾಡಿನಲ್ಲಿ ಬರುತ್ತಿದೆ. ಈ ಲೆಕ್ಕಾಚಾರದಲ್ಲಿ ಮೊದಲಿಗಿಂತ ಈಗ ಮಳೆ ಕಡಿಮೆಯೇ ಸರಿ. ಆದರೆ ಮಳೆಗಾಲ ವಾಯಿದೆಯಲ್ಲಿ ಅತ್ಯಂತ ತಡವಾಗಿ ಆರಂಭವಾಗಿ ವಾಯಿದೆ ಮುಗಿದರೂ ಮುಗಿಯದೇ ನಿಸರ್ಗದ ಎಲ್ಲ ಚಟುವಟಿಕೆಗಳಿಗೆ ವಿರುದ್ಧವಾಗಿ ದುಷ್ಪರಿಣಾಮ ಬೀರುತ್ತಿದೆ.
ಮೊನ್ನೆ ಮಳೆಗಾಲದಲ್ಲಿ ನಮ್ಮೂರಿನಲ್ಲಿ ಒಂದೇ ದಿನ 24 ಗಂಟೆಗಳಲ್ಲಿ ಸುಮಾರು ಹನ್ನೊಂದು ಇಂಚು ಮಳೆ ಹೊಯ್ದಿದೆ. ಹೀಗೆ ಒಂದೇ ದಿನ ಹೈ ಕಂಪ್ರಷರ್ ವಾಟರ್ ವಾಷರ್‌ನಲ್ಲಿ ಅತಿ ವೇಗವಾಗಿ ಒತ್ತಡದಿಂದ ನೀರು ಬಿಟ್ಟಂತೆ ಭೂಮಿಗೆ ಮಳೆ ಬಿದ್ದರೆ ಭೂಮಿಯ ಮೇಲ್ಮೈ ನ ಸಾರ ಸೂಕ್ಷ್ಮ ಜೀವಿಗಳು ಮತ್ತು ಸೂಕ್ಷ್ಮ ಪೋಷಕಾಂಶಗಳು ಉಳಿಯುತ್ತದೆಯೇ?. ಮುನ್ನೂರು ಇಂಚು ಮಳೆ ನೂರಿಪ್ಪತ್ತು ದಿನಗಳ ಕಾಲ ಪ್ರತಿ ದಿನವೂ ಹಂತ ಹಂತವಾಗಿ ಎರಡೋ ಮೂರೋ ಇಂಚು ಮಳೆಯಂತೆ ಹದವಾಗಿ ಮಳೆ ಸುರಿದರೆ ಇಳಿಜಾರಿನ ಮಲೆನಾಡಿನ ಭೂಮಿ ತಡೆದು ಕೊಳ್ಳಲು ಸಾದ್ಯ. ಆದರೆ ಇಪ್ಪತ್ತು ಮೂವತ್ತು ದಿನಗಳಲ್ಲೇ ನೂರಿಂಚು ಮಳೆ ಹೋಯ್ದರೆ ಮಲೆನಾಡಿನಲ್ಲಿ ಯಾವ ಕೃಷಿ ಮಾಡಿ ಉಳಿಸಿಕೊಳ್ಳಲು ಸಾದ್ಯ?. ಈ ಹೈ ಪ್ರಷರ್ ಮಳೆ ನೀರು ಭೂಮಿಯ ಮೇಲಿನ ಸತ್ವ ಸಾರ ತೊಳೆದು ಹೋಗುತ್ತದೆ.
ಇದರ ನಂತರ ನಾಡಿದ್ದಿನಿಂದ ಬೇಸಿಗೆ ಶುರುವಾಗುತ್ತದೆ. ಸಾಮಾನ್ಯವಾಗಿ ನಮ್ಮ ಮಲೆನಾಡಿನ ಭಾಗಕ್ಕೆ 32 ಡಿಗ್ರಿ ಅತಿ ಹೆಚ್ಚಿನ ಉಷ್ಣಾಂಶ. ಆದರೆ ಇತ್ತೀಚಿನ ವರ್ಷಗಳಲ್ಲಿ ನಮ್ಮ ಭಾಗದಲ್ಲಿ 40 ಡಿಗ್ರಿ ಉಷ್ಣಾಂಶ ಏರಿಕೆಯಾದದ್ದೂ ಇದೆ. ಈ ಅತಿಯಾದ ಉಷ್ಣಾಂಶ ಅಡಿಕೆ ಸಿಂಗಾರ ಕರಟುವಲ್ಲಿ ನೇರವಾಗಿ ಕಾರಣ ಕರ್ತವಾಗಿದೆ. ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಳೆ, ಅತಿ ಹೆಚ್ಚು ಉಷ್ಣಾಂಶ ಕೃಷಿ ಬೆಳೆಗಳ ಮೇಲೆ ಇಳುವರಿಯ ಮೇಲೆ ಮತ್ತು ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.
ಈ ಸಮಶೀತೋಷ್ಣ ವಲಯದಲ್ಲಿ ಮಳೆಗಾಲ ಬೇಸಿಗೆ ಕಾಲದಂತೆ ಚಳಿಗಾಲವೂ ನಿಸರ್ಗದ ಚಟುವಟಿಕೆಗಳಿಗೆ ಅತ್ಯವಶ್ಯಕ. ಆದರೆ ಚಳಿಗಾಲ ಮಲೆನಾಡಿನಲ್ಲಿ ಇಲ್ಲವೇ ಇಲ್ಲ ಅಥವಾ ಅತಿ ಕಡಿಮೆ. ಮಳೆಗಾಲ ನಮಗೆ ಚೆನ್ನಾಗಿ ಅನುಭವಕ್ಕೆ ಬರುತ್ತದೆ. ಬೇಸಿಗೆಯ ಸೆಖೆ ಉರಿಬಿಸಿಲೂ ಅನುಭವಕ್ಕೆ ಬರುತ್ತದೆ. ಆದರೆ ಈ ಅತಿವೃಷ್ಟಿಯ ಮಳೆಗಾಲ ಮತ್ತು ಅನಾವೃಷ್ಟಿಯ ಬೇಸಿಗೆ ಕಾಲ ನಮಗೆ ಅನುಭವಕ್ಕೆ ಬಂದಂತೆ ಚಳಿಗಾಲ ಕಳೆದು ಹೋದದ್ದೇ ಗೊತ್ತಾಗಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದೆಷ್ಟೋ ವರ್ಷದಿಂದ 'ಚಳಿಗಾಲ' ಕಾಣೆಯಾಗಿದೆ. ಬೇಸಿಗೆ ಕಾಲ ಮತ್ತು ಮಳೆಗಾಲದಂತೆ ಚಳಿಗಾಲವೂ ಈ ನಿಸರ್ಗದ ಅತ್ಯಂತ ಅವಶ್ಯಕ ಋತುಮಾನ. ಆದರೆ ಮನುಷ್ಯನ ನಿಸರ್ಗದ ಮೇಲಿನ ದಾಳಿಗೆ ಚಳಿಗಾಲ ಸಂಪೂರ್ಣ ಇಲ್ಲದಾಗಿದೆ. ಚಳಿಗಾಲ ಕೃಷಿ ಬೆಳೆಗಳಿಗೆ ಅತಿ ಮುಖ್ಯ. ಈ ಶುಷ್ಕತೆ ಕೃಷಿಗೆ ಮಾರಕವಾದ ಶಿಲೀಂಧ್ರವನ್ನ ನಾಶ ಮಾಡುತ್ತದೆ. ಮಲೆನಾಡು ಕರಾವಳಿಯಲ್ಲಿ ಸರಿಯಾಗಿ ಜೂನ್‌ನಿಂದ ಆರಂಭವಾಗಿ ಸೆಪ್ಟೆಂಬರ್‌ನಲ್ಲಿ ಮಳೆಗಾಲ ಮುಗಿದು ಸರಿಯಾಗಿ ಪರಿಣಾಮಕಾರಿಯಾಗಿ ಅಕ್ಟೋಬರ್ ತಿಂಗಳಲ್ಲಿ ಚಳಿಗಾಲ ಆರಂಭವಾಗಿ ನಾಲ್ಕು ತಿಂಗಳ ಕಾಲ ಇದ್ದಿದ್ದರೆ ಮಲೆನಾಡು ಕರಾವಳಿಯಲ್ಲಿ ಎಲೆಚುಕ್ಕಿ ಶಿಲೀಂಧ್ರ ಈ ಪ್ರಮಾಣದ ಭಾದೆಯುಂಟು ಮಾಡುತ್ತಿರಲಿಲ್ಲ. (ಮುಂದುವರೆಯುತ್ತದೆ)
ಬರಹ ಕೃಪೆ : ಪ್ರಬಂಧ ಅಂಬುತೀರ್ಥ












Click it and Unblock the Notifications