ರೈತರಿಗೆ ಸಿಹಿಸುದ್ದಿ; ಮಲಪ್ರಭಾ ಡ್ಯಾಂನಿಂದ 1 ಟಿಎಂಸಿ ನೀರು ಬಿಡುಗಡೆ
ಬೆಳಗಾವಿ, ನವೆಂಬರ್ 07; ರೈತರ ಹಿತದೃಷ್ಟಿಯಿಂದ ಮಲಪ್ರಭಾ ಜಲಾಶಯದಿಂದ ಕಾಲುವೆಗಳಿಗೆ 1 ಟಿಎಂಸಿ ನೀರು ಹರಿಸಲು ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆಯಿತು. ಸಭೆಯ ಬಳಿಕ ಮಾತನಾಡಿದ ಸಚಿವರು, "ಮಲಪ್ರಭಾ ಬಲದಂಡೆ ಕಾಲುವೆ, ನರಗುಂದ ಶಾಖಾ ಕಾಲುವೆ ಹಾಗೂ ಶಿಂಗಾರಕೊಪ್ಪ ಏತ ನೀರಾವರಿ ಯೋಜನೆಯ ಕಾಲುವೆಗಳ ಮೂಲಕ ನವೆಂಬರ್ 7ರಿಂದ ಒಟ್ಟಾರೆ ಒಂದು ಟಿಎಂಸಿ ನೀರು ಬಿಡಗಡೆಗೆ ನಿರ್ಧರಿಸಲಾಗಿದೆ" ಎಂದರು.

ರೈತರಿಗೆ ಸೂಚನೆ; ಜಲಾಶಯದಲ್ಲಿನ ನೀರಿನ ಲಭ್ಯತೆಗೆ ಅನುಗುಣವಾಗಿ, ಬರಗಾಲವನ್ನು ಗಮನಿಸಿ ರೈತರ ಒತ್ತಾಯದ ಹಿನ್ನಲೆಯಲ್ಲಿ ನೀರನ್ನು ಜನಜಾನುವಾರುಗಳಿಗಾಗಿ, ಮೇವಿಗಾಗಿ ಹರಿಸಲಾಗುತ್ತಿದೆ. ರೈತರು ಮಲಪ್ರಭಾ ಜಲಾಶಯದ ಈ ನೀರನ್ನು ಅವಲಂಬಿಸಿ ಮುಂದಿನ ಯಾವುದೇ ಬಿತ್ತನೆಯನ್ನು ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಮಾಡದಂತೆ ಸೂಚಿಸಲಾಗಿದೆ.
ಮಳೆ ಕೊರತೆಯ ಕಾರಣ ಜಲಾಶಯ ಭರ್ತಿಯಾಗಿಲ್ಲ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ತಾಲೂಕಗಳನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಡ್ಯಾಂ ಅಚ್ಚುಕಟ್ಟು ಪ್ರದೇಶದ ರೈತರು ಅಧಿಕಾರಿಗಳ ಜೊತೆ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.
ಸಚಿವರು ಮಾತನಾಡಿ, "ಈ ವರ್ಷ ಮಳೆ ಕಡಿಮೆಯಾಗಿರುವುದರಿಂದ ನೀರಿನ ಕೊರತೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಬೆಳೆಗಳಿಗೆ ಮಾತ್ರವಲ್ಲದೇ ಕುಡಿಯುವ ನೀರಿಗೂ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಆದರೆ ರೈತರ ಹಿತದೃಷ್ಟಿಯಿಂದ ಒಂದು ಟಿಎಂಸಿ ನೀರು ಬಿಡುಗಡೆಗೆ ತೀರ್ಮಾನಿಸಲಾಗಿದೆ. ನೀರಾವರಿ ಹಿತಾಸಕ್ತಿ ಹಾಗೂ ಕುಡಿಯುವ ನೀರು ಒದಗಿಸುವುದು ಈ ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಹೇಳಿದರು.
ಸಭೆಯಲ್ಲಿ ಸವದತ್ತಿ ಶಾಸಕ ವಿಶ್ವಾಸ್ ವೈದ್ಯ ಮಾತನಾಡಿ, "ಪ್ರಸ್ತುತ ಬರಗಾಲ ಇರುವುದರಿಂದ ಮಲಪ್ರಭಾ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇತರೆ ಪಟ್ಟಣಗಳಿಗೆ ನಿರಂತರ (24×7) ನೀರು ಬಿಡುವ ಬದಲಾಗಿ ನಾಲ್ಕೈದು ದಿನಗಳಿಗೊಮ್ಮೆ ನೀರು ಬಿಡುಗಡೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಬೇಕು" ಎಂದರು.
ನವಲಗುಂದ ಶಾಸಕ ಎನ್. ಎಚ್. ಕೋನರೆಡ್ಡಿ ಮಾತನಾಡಿ, "ಜಲಾಶಯದಲ್ಲಿರುವ 15 ಟಿಎಂಸಿ ನೀರನ್ನು ಕುಡಿಯುವ ಉದ್ಧೇಶ, ಕೃಷಿ ಬಳಕೆಗೆ ಆದ್ಯತೆ ಆಧರಿಸಿ ನೀರು ಬಿಡುಗಡೆಗೆ ಸಲಹಾ ಸಮಿತಿಯು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ" ಎಂದು ಹೇಳಿದರು.
ಸಭೆಯಲ್ಲಿ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ, ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಮುಖ್ಯ ಎಂಜಿನಿಯರ್ ಅಶೋಕ ವಾಸನದ, ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಎಂಜಿನಿಯರ್ ವಿ. ಎಸ್. ಮಧುಕರ್ ಮುಂತಾದವರು ಪಾಲ್ಗೊಂಡಿದ್ದರು.
ಈ ಸಭೆಗೂ ಮೊದಲು ಸಚಿವರು ಹಾಗೂ ಶಾಸಕರ ಜತೆ ಚರ್ಚೆ ನಡೆಸಿದ ರೈತರು, ತಮ್ಮ ಸಂಕಷ್ಟವನ್ನು ಪರಿಗಣಿಸಿ ಜನ-ಜಾನುವಾರುಗಳ ಹಿತರಕ್ಷಣೆಗಾಗಿ ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದರು.












Click it and Unblock the Notifications