12 ಬೇಡ 2 ಸಾವಿರ ಕೋಟಿ ಕೊಡ್ಸಿ ನೋಡೋಣ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬರ ಅಧ್ಯಯನ ಪ್ರವಾಸ ನಿರತರಾಗಿರುವ ಬಿಎಸ್ ಯಡಿಯೂರಪ್ಪ ಅವರು ಮಾತನಾಡುತ್ತಾ, ಕಾಂಗ್ರೆಸ್ ನಾಯಕರು ಜನರ ನೋವಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಕೇಂದ್ರದಲ್ಲಿರುವ ರಾಜ್ಯದ ಪ್ರತಿನಿಧಿಗಲಾದ ಎಸ್ ಎಂ ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಕೆಎಚ್ ಮುನಿಯಪ್ಪ ಹಾಗೂ ವೀರಪ್ಪ ಮೊಯ್ಲಿ ಯಾವುದೇ ಚಕಾರ ಎತ್ತಿಲ್ಲ
ಕೇಂದ್ರದ ಸೂಚನೆ ಮೇರೆಗೆ ಕರ್ನಾಟಕ ಸರ್ಕಾರ 12 ಸಾವಿರ ಕೋಟಿ ರು ನೆರವಿಗೆ ಅಂಗಲಾಚಿ ಎರಡು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆವಿಗೂ ಕೇಂದ್ರ ಸರ್ಕಾರ ಪರಿಗಣಿಸಿಲ್ಲ. ಹಣ ಬಿಡುಗಡೆ ಮಾಡಿಲ್ಲ ಎಂದು ಯಡಿಯೂರಪ್ಪ ಟೀಕಿಸಿದ್ದಾರೆ.
ರೈತರ ಪರವಾಗಿ ಬಿಜೆಪಿ ಕೈಗೊಂಡಿರುವ ಕ್ರಮಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಕಾಂಗ್ರೆಸ್ಸಿಗರು ಸುಖಾಸುಮ್ಮನೆ ನಮ್ಮನ್ನು ಟೀಕಿಸುವ ಬದಲು ರೈತರ ಸಾಲ ಮನ್ನಾ ಮಾಡಿರುವ 3,500 ಕೋಟಿ ಮೊದಲು ಕೊಟ್ಟು ಆಮೇಲೆ ಮಾತನಾಡಲಿ ಎಂದು ಯಡಿಯೂರಪ್ಪ ಸವಾಲು ಹಾಕಿದರು.
ಇದು ಬರ ಅಧ್ಯಯನ ಪ್ರವಾಸ, ಚುನಾವಣೆ ಪ್ರವಾಸವಲ್ಲ. ಜನರ ಕಷ್ಟ ಅರಿಯುವುದು ಅವರಿಗೆ ಕೈಲಾದಷ್ಟು ಸಹಾಯ ಮಾಡುವುದು ನೆರವಿನ ದಾರಿ ತೋರಿಸುವುದು ನನ್ನ ಉದ್ದೇಶ ಎಂದು ಯಡಿಯೂರಪ್ಪ ಹೇಳಿದರು.
ಮೊದಲ ಹಂತದ ಬರ ಪ್ರವಾಸ ಮುಗಿಯುತ್ತಿದ್ದಂತೆ ಬೆಂಗಳೂರಿಗೆ ಮರಳಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬುಧವಾರ ಮಲ್ಲೇಶ್ವರಂನ ಮೈದಾನದಲ್ಲಿ ನಡೆದ ಅತಿರುದ್ರ ಮಹಾಯಾಗದಲ್ಲಿ ಪಾಲ್ಗೊಂಡಿದ್ದರು.
ರಾಜ್ಯ ಕಲ್ಯಾಣ, ಸಮೃದ್ಧವಾಗಿ ಮಳೆ ಬೆಳೆ, ಜನರ ಯೋಗ ಕ್ಷೇಮಕ್ಕಾಗಿ ಪ್ರಾರ್ಥಿಸಲು ನಾನು ಈ ಯಾಗದಲ್ಲಿ ಪಾಲ್ಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ಇನ್ನೊಂದೆಡೆ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರ ಬರ ಅಧ್ಯಯನ ಪ್ರವಾಸ ಜಾರಿಯಲ್ಲಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ನೇತೃತ್ವದ ತಂಡ ಸೆ. 8 ಮತ್ತು 9ರ ನಂತರ ಡಿವಿಎಸ್ ತಂಡ ಸೇರುವ ಸಾಧ್ಯತೆಯಿದೆ.












Click it and Unblock the Notifications