ಬೆಂಗಳೂರು : ಅಬ್ಬಾ ತರಕಾರಿ ಬೆಲೆ ಕಡಿಮೆ ಆಯ್ತು!

ಮೇ ತಿಂಗಳಲ್ಲಿ ನಿಧಾನಗತಿಯಲ್ಲಿ ಏರಿಕೆ ಕಂಡಿದ್ದ ತರಕಾರಿ ಬೆಲೆ, ನೂರು ರೂ. ಗಡಿಯನ್ನು ದಾಟಿ ಬಡ-ಮಧ್ಯಮ ವರ್ಗದವರನ್ನು ಚಿಂತೆಗೆ ತಳ್ಳಿತ್ತು. ಅದರಲ್ಲೂ ಜೂನ್ ತಿಂಗಳಿನಲ್ಲಿ ತರಕಾರಿ ಕೇವಲ ನೋಡಲು ಮಾತ್ರ ಸೀಮಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.
ನೀರಿನ ಅಭಾವ, ಸಾಲು ಸಾಲು ಸಮಾರಂಭಗಳಿಂದಾಗಿ ತರಕಾರಿ ಬೆಲೆ ಗಗನಕ್ಕೆ ಏರಿತ್ತು. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿತ್ತು. ಸದ್ಯ ವರುಣ ದೇವನ ಕೃಪೆಯಿಂದಾಗಿ ತರಕಾರಿ ಬೆಲೆಗೆ ಅಂಕುಶ ಬಿದ್ದಿದೆ. ಸಮಾರಂಭಗಳು ಕಡಿಮೆ ಆದ್ದರಿಂದ ತರಕಾರಿ ಜನರ ಕೈಗೆ ಸಿಗುವಂತಾಗಿದೆ.
ಅತಿ ಹೆಚ್ಚು ಏರಿಕೆಯಾಗಿದ್ದ ಕೆಲವು ತರಕಾರಿಗಳ ಬೆಲೆಗಳಲ್ಲಿ ಶೇ.20 ರಿಂದ 30 ರಷ್ಟು ಇಳಿಕೆಯಾದರೆ, ಕೆಲ ತರಕಾರಿ ಬೆಲೆಗಳು ಇನ್ನೂ ಸ್ಥಿರವಾಗಿದೆ. ಟೊಮೆಟೋ ಬೆಲೆಯಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ.
ಯಾವುದು ಎಷ್ಟು ಕಡಿಮೆ ಯಾಗಿದೆ : ಎರಡು ತಿಂಗಳಿನಿಂದ ಸತತವಾಗಿ ಕೆ.ಜಿ.ಗೆ 100 ರೂ. ಇದ್ದ ಬೀನ್ಸ್(ಹುರಳಿಕಾಯಿ) ಬೆಲೆ ಹಾಪ್‌ಕಾಮ್ಸ್‌ನಲ್ಲಿ 29 ರೂ.ಗೆ ಇಳಿದಿದೆ. ಮಾರುಕಟ್ಟೆಯಲ್ಲಿ 30 ರಿಂದ 60 ರೂ.ವರೆಗೂ ಬೆಲೆ ಇದೆ.
ಬೆಂಡೇಕಾಯಿ ಕೆ.ಜಿ.ಗೆ 50 ರಿಂದ 60 ರೂ. ಆಗಿತ್ತು. ಸದ್ಯ 32 ರೂ.ಗೆ ಇಳಿಕೆಯಾಗಿದೆ. ಕೊತ್ತಂಬರಿ ಸೊಪ್ಪು ಕಟ್ಟಿಗೆ 50 ರೂ. ಆಗಿತ್ತು. ಇದು ಸದ್ಯ 30 ರೂ.ಗೆ ಇಳಿಕೆಯಾಗಿದೆ. ಈರುಳ್ಳಿ 30 ರೂ.ಗೆ ಇಳಿಕೆಯಾಗಿ ಗ್ರಾಹಕರಿಗೆ ನೆಮ್ಮದಿ ಮೂಡಿಸಿದೆ.
ಬದನೇಕಾಯಿ ಬೆಲೆ ನಿಯಂತ್ರಣಕ್ಕೆ ಬಂದಿದ್ದು, 21 ರೂ.ಗೆ ಇಳಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಬದನೇಕಾಯಿ ಬೆಲೆ 42 ರೂ.ವರೆಗೆ ಏರಿಕೆಯಾಗಿತ್ತು.
ಟೊಮೆಟೋ ಬೆಲೆ ಸದ್ಯ ಕಡಿಮೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಹಾಪ್‌ಕಾಮ್ಸ್ ಪ್ರತಿ ಕೆ.ಜಿ. 48 ರೂ.ಗೆ ಟೊಮೆಟೋ ದೊರೆಯುತ್ತಿದ್ದರೆ, ಮಾರುಕಟ್ಟೆಯಲ್ಲಿ ಕೆ.ಜಿ.ಗೆ 60ರೂ. ವರೆಗೂ ಮಾರಾಟವಾಗುತ್ತಿದೆ.











Click it and Unblock the Notifications