ಕಾವೇರಿ ವಿವಾದ : ಸೆ.15 ರಂದು ಮಂಡ್ಯ ಬಂದ್

ಮಂಡ್ಯ ಜಿಲ್ಲಾ ರೈತಹಿತರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಜಿ.ಮಾದೇಗೌಡ ಅವರ ನೇತೃತ್ವದಲ್ಲಿ ಗುರುವಾರ (ಸೆ.13) ದಿಂದ ಸೆ.19ರವರೆಗಿನ ಸಾಂಕೇತಿಕ ಧರಣಿ ನಡೆಯಲಿದೆ.
ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಮುಖಂಡರು ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ತಡೆಯಲು ಒತ್ತಾಯಿಸಿ ಧರಣಿ ಹಮ್ಮಿಕೊಳ್ಳಲಾಗಿದೆ. ಸೆ. 19ರಂದು ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ತೀರ್ಮಾನ ಕೈಗೊಳ್ಳಲು ಒತ್ತಡ ತಂತ್ರವಾಗಿ ಬಂದ್‌ಗೆ ಕರೆ ನೀಡುತ್ತಿದ್ದೇವೆ ಎಂದು ಮಾದೇಗೌಡ ಅವರು ತಿಳಿಸಿದರು.
ಕೇಂದ್ರ ಸರ್ಕಾರ ತಮಿಳುನಾಡಿನ ಬ್ಲಾಕ್‌ಮೇಲ್ ತಂತ್ರಕ್ಕೆ ಮಣಿಯುತ್ತ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುವಂತಹ ತೀರ್ಮಾನ ತೆಗೆದುಕೊಳ್ಳುವುದನ್ನು ತಪ್ಪಿಸಲು ಬಂದ್ ಮೂಲಕ ಎಚ್ಚರಿಕೆ ನೀಡಬೇಕಾಗಿದೆ.
ಜಿಲ್ಲೆಯಾದ್ಯಂತ ಎಲ್ಲಾ ಜನರು ಬಂದ್‌ಗೆ ಸಹಕರಿಸಿ ಯಶಸ್ವಿಗೊಳಿಸಬೇಕು.ತಾಲೂಕು ಕೇಂದ್ರಗಳಲ್ಲೂ ಧರಣಿ ನಡೆಸುವ ಮೂಲಕ ಚಳವಳಿಯನ್ನು ತೀವ್ರಗೊಳಿಸಬೇಕು ಎಂದು ಮಾದೇಗೌಡರು ಮನವಿ ಮಾಡಿದರು.
ಸೆ.19ಕ್ಕೆ ಮೊದಲು ಬಂದ್ ನಂತರ ಸೆ.17ರಂದು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಬೃಹತ್ ಜಾಥಾ ಮೂಲಕ ಕೇಂದ್ರಕ್ಕೆ ಎಚ್ಚರಿಕೆಯ ಗಂಟೆ ಭಾರಿಸಬೇಕು ಎಂದೂ ಅವರು ಕರೆಕೊಟ್ಟರು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿ.ಮಾದೇಗೌಡ ತಿಳಿಸಿದರು.












Click it and Unblock the Notifications