ಹೊರನಾಡು; ಎಲೆಚುಕ್ಕಿ ರೋಗ ನಿವಾರಣೆಯಾಗಲೆಂದು ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆ
ಚಿಕ್ಕಮಗಳೂರು, ಅಕ್ಟೋಬರ್, 18: ಜಿಲ್ಲೆ ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗತಗುಲಿದ್ದು, ಇದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಎಲೆಚುಕ್ಕಿ ರೋಗ ನಿಯಂತ್ರಣ ಆಗಲೆಂದು ಪ್ರಸಿದ್ಧ ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಪೂಜೆ, ಹೋಮ ನಡೆಸಿ ಎಲೆಚುಕ್ಕಿ ರೋಗ ನಿವಾರಣೆ ಮಾಡುವಂತೆ ಕೃಷಿಕರ ಪರವಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ. ಈ ಮೂಲಕವಾದರೂ ಎಲೆಚುಕ್ಕಿ ರೋಗದಿಂದ ಪಾರಾಗಲು ದಾರಿ ಸಿಗಬಹುದು ಎಂಬ ನಿರೀಕ್ಷೆ ಅಡಿಕೆ ಕೃಷಿಕರಲ್ಲಿ ಹುಟ್ಟಿಕೊಂಡಿದೆ. ಮಲೆನಾಡಿನ ಮುಖ್ಯ ಬೆಳೆಯಾದ ಅಡಿಕೆ ಬೆಳೆಗೆ ಕಾಡುತ್ತಿರುವ ಎಲೆಚುಕ್ಕಿ ರೋಗವನ್ನು ಹೋಗಲಾಡಿಲು ಈ ಹೋಮ, ಹವನವನ್ನು ನಡೆಸಲಾಗಿದೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಮುಖ್ಯಸ್ಥ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.

ಅಡಿಕೆ ಬೆಳೆಗಾರರಿಗೆ ಜೋಷಿ ಅಭಯ
ಕಳಸ ಸೇರಿದಂತೆ ಸುತ್ತಮುತ್ತಲಿನ ಭಾಗದ ಎಲ್ಲಾ ಕೃಷಿಕರು ದೇವಸ್ಥಾನಕ್ಕೆ ಬಂದು ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆದು ಶ್ರೀಮುಡಿ ಗಂಧಪ್ರಸಾದ ಸ್ವೀಕರಿಸಿ ತಮ್ಮ ಜಮೀನಿಗೆ ಸಿಂಪಡಿಸಬೇಕು. ಈ ಹಿಂದೆಯೂ ಜಗನ್ಮಾತೆಯ ಭಂಡಾರದ ಪ್ರಸಾದವನ್ನು ಕೃಷಿ ಭೂಮಿಗೆ ಹಾಕಿದ್ದರ ಪರಿಣಾಮ ಅನೇಕ ಸಮಸ್ಯೆಗಳು ಪರಿಹಾರ ಆಗಿರುವ ನಿದರ್ಶನಗಳೂ ಇದೆ. ಅನ್ನಪೂರ್ಣೆಯ ಅನುಗ್ರಹದಿಂದ ಕೃಷಿಕರಿಗೆ ಬಂದಿರುವ ಗಂಡಾಂತರ ಪರಿಹಾರ ಆಗುವ ಎಲ್ಲ ಭರವಸೆ ಇದೆ. ಈ ರೋಗದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಮಾಡಬೇಕು ಮತ್ತು ನಿವಾರಣೆಯ ಮಾರ್ಗವನ್ನು ಕಂಡು ಹಿಡಿಯಬೇಕು ಎಂದು ಮುಖ್ಯಮಂತ್ರಿ, ಕೃಷಿ ಸಚಿವ ಮತ್ತು ಶಾಸಕರಲ್ಲಿ ಮನವಿ ಮಾಡಿದ್ದೇವೆ. ಈ ಕುರಿತು ಅಗತ್ಯವಾಗಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಹವಾಮಾನ ವೈಪರೀತ್ಯದಿಂದ ರೈತ ಕಂಗಾಲು
ಕೃಷಿಕರು ದುಡುಕು ನಿರ್ಧಾರ ಕೈಗೊಳ್ಳದೆ ಧೈರ್ಯದಿಂದ ಇರುವಂತೆ ಭೀಮೇಶ್ವರ ಜೋಷಿಗಳು ಮನವಿ ಮಾಡಿದ್ದಾರೆ. ಎಲ್ಲ ಕೃಷಿಕರೂ ಧೈರ್ಯದಿಂದ, ಸಾಮೂಹಿಕವಾಗಿ ಈ ರೋಗಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕೃಷಿಕರು ಆತ್ಮಹತ್ಯೆಯಂತಹ ದುಡುಕಿನ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದರು. ಕಳೆದ ಹಲವು ತಿಂಗಳುಗಳಿಂದ ಮಲೆನಾಡು ಭಾಗದ ರೈತರ ತೋಟಗಳಿಗೆ ಮಾರಕವಾದ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗಗಳು ಬಾಧಿಸುತ್ತಿದ್ದು, ಕೃಷಿಕರು ಆತಂಕಕ್ಕೆ ಸಿಲುಕಿದ್ದಾರೆ.












Click it and Unblock the Notifications