ಧಾರವಾಡ; ರೇಷ್ಮೆ ಕೃಷಿ ಕೇಂದ್ರಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಭೇಟಿ
ಧಾರವಾಡ, ಸೆಪ್ಟೆಂಬರ್ 06; ಕರ್ನಾಟಕದಲ್ಲಿ ರೇಷ್ಮೆ ಕೃಷಿ ಈಗ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಹಲವು ಜಿಲ್ಲೆಗಳಲ್ಲಿ ರೈತರು ರೇಷ್ಮೆ ಕೃಷಿ ಮೂಲಕ ಉತ್ತಮ ಆದಾಯವನ್ನು ಕಂಡುಕೊಳ್ಳುತ್ತಿದ್ದಾರೆ. ಧಾರವಾಡದಲ್ಲಿಯೂ ರೈತರು ರೇಷ್ಮೆ ಕೃಷಿಯನ್ನು ಕೈಗೊಂಡಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ. ಕೆ. ಜಿಲ್ಲೆಯ ವಿವಿಧ ರೇಷ್ಮೆ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿದರು. ರೇಷ್ಮೆ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪರಿಶೀಲಿಸಿದರು. ರೇಷ್ಮೆ ತೋಟಗಳಿಗೆ ಭೇಟಿ ನೀಡಿ, ರೈತರಿಂದ ಮಾಹಿತಿ ಪಡೆದುಕೊಂಡರು.

ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿರುವ ಖಾಸಗಿ ರೇಷ್ಮೆ ಹುಳು ಚಾಕಿ ಸಾಕಾಣಿಕೆ ಕೇಂದ್ರಗಳಿಗೆ ಭೇಟಿದರು. ಚಾಕಿ ಕೇಂದ್ರಗಳ ಮಾಲೀಕರು ಚಾಕಿ ಹುಳುಗಳನ್ನು ಉತ್ತರ ಕರ್ನಾಟಕದ 6 ರಿಂದ 7 ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೆ ವಿತರಿಸುವ ಬಗ್ಗೆ ವಿವರಣೆ ಕೊಟ್ಟರು. ಬಳಿಕ ಸಿಇಒ ರೇಷ್ಮೆ ತೋಟಗಳಿಗೆ ಭೇಟಿ ಕೊಟ್ಟರು.
ರೇಷ್ಮೆ ಕೃಷಿಯಿಂದ ಉತ್ತಮ ಲಾಭ; ಸ್ವರೂಪ ಟಿ. ಕೆ. ಜಿ ಚಿಕ್ಕಮಲ್ಲಿಗವಾಡ ಗ್ರಾಮದ ಬಸವರಾಜ ಹುಚ್ಚಯ್ಯನವರ ತೋಟಕ್ಕೆ ಭೇಟಿ ನೀಡಿದರು. ರೇಷ್ಮೆ ಕೃಷಿಯಿಂದ ಉತ್ತಮ ಲಾಭಾಂಶ ಪಡೆದುಕೊಳ್ಳುತ್ತಿರುವುದನ್ನು ತಿಳಿದು ಸಂತಸ ವ್ಯಕ್ತಪಡಿಸಿದರು. ಸಮಗ್ರ ಕೃಷಿ ಕೈಗೊಂಡಿದ್ದು, ಅದರಡಿ ಕೈಗೊಂಡಿರುವ ಹೈನುಗಾರಿಕೆ ಮತ್ತು ಎರೆಹುಳು ಸಾಕಾಣಿಕೆಯನ್ನು ಸಹ ವೀಕ್ಷಣೆ ಮಾಡಿದರು.
ಗ್ರಾಮದ ರೈತರು ವೈಜ್ಞಾನಿಕವಾಗಿ ಉತ್ಪಾದಿಸುವ ಎರೆಹುಳು ಗೊಬ್ಬರ ಘಟಕವನ್ನು ವೀಕ್ಷಿಸಿ ಸಾಕಷ್ಟು ಮಾಹಿತಿಯನ್ನು ಪಡೆದುಕೊಂಡರು. ರೈತರು ಪ್ರತಿ ಮಾಸಿಕ ಎರೆಹುಳು ಗೊಬ್ಬರ ಉತ್ಪಾದಿಸಿ ಮಾರಾಟ ಮಾಡಿ ಸಾಕಷ್ಟು ಲಾಭಾಂಶ ಪಡೆಯುತ್ತಿರುವದಾಗಿ ಮತ್ತು ಸಮಗ್ರ ಕೃಷಿಯಿಂದ ಅತೀ ಹೆಚ್ಚಿನ ಆರ್ಥಿಕ ಪ್ರಗತಿ ಹೊಂದುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಬಳಿಕ ರಾಯಾಪುರದ ಕೈಗಾರಿಕೆ ಪ್ರದೇಶದಲ್ಲಿರುವ ದೇವಿ ಸಿಲ್ಕ್ ಕಾರ್ಪೊರೇಶನ್ ಸಂಸ್ಥೆಗೆ ಭೇಟಿ ನೀಡಿದರು. ಮಾಲೀಕರಾದ ದೇವಕಿ ಇವರನ್ನು ಭೇಟಿ ಮಾಡಿ ಸ್ವಯಂ ಚಾಲಿತ ನೂಲು ಬಿಚ್ಚಾಣಿಕೆ ಘಟಕ ಕಾರ್ಯ ನಿರ್ವಹಣೆ ವೀಕ್ಷಿಸಿದರು.
ಬಳಿಕ ತದನಂತರ ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಮಾಲತೇಶ ಎಸ್. ಪಾಟೀಲ, ಸಹಾಯಕ ನಿರ್ದೇಶಕ ಕೆ. ಎಚ್. ಪೂಜಾರ, ಕೇಂದ್ರ ರೇಷ್ಮೆ ಮಂಡಳಿಯ ಹಿರಿಯ ವಿಜ್ಞಾನಿ ಡಾ. ಉದಯ ಜವಳಿ ಅವರ ಜೊತೆ ರಾಯಾಪುರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗೆ, ಕೇಂದ್ರ ರೇಷ್ಮೆ ಮಂಡಳಿ ಸಂಸ್ಥೆಗೆ ಭೇಟಿ ನೀಡಿದರು.
ಧಾರವಾಡ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ರೇಷ್ಮೆ ಕೃಷಿ ಮಾಡುವ ರೈತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಜಿಲ್ಲೆಯಲ್ಲಿ ಬಿಳಿಗೂಡು ರೇಷ್ಮೆಗೆ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ರೈತರು ಈ ಕೃಷಿಯನ್ನು ಹೆಚ್ಚಾಗಿ ಕೈಗೊಂಡಿದ್ದಾರೆ.
ಮೊದಲು ಹುಬ್ಬಳ್ಳಿ, ಧಾರವಾಡ, ಕಲಘಟಗಿ ತಾಲೂಕುಗಳಿಗೆ ಮಾತ್ರ ರೇಷ್ಮೆ ಕೃಷಿ ಸೀಮಿತವಾಗಿತ್ತು. 2017ರ ಬಳಿಕ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಸಹ ಈ ಕೃಷಿ ವಿಸ್ತರಣೆಯಾಗಿದೆ. ಜಿಲ್ಲಾ ರೇಷ್ಮೆ ಇಲಾಖೆಯ ಅಧಿಕಾರಿಗಳು ಸಹ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನೀರಾವರಿ ಸೌಲಭ್ಯ ಹೊಂದಿರುವ ಜಿಲ್ಲೆಯ ಅನೇಕ ರೈತರು ರೇಷ್ಮೆ ಕೃಷಿಯನ್ನು ಕೈಗೊಂಡಿದ್ದಾರೆ. ಇಲಾಖೆ ಸಹ ಕಾಲ ಕಾಲಕ್ಕೆ ರೈತರಿಗೆ ಲಭ್ಯವಿರುವ ಯೋಜನೆಗಳು, ಕೃಷಿಯ ಬಗ್ಗೆ ಮಾಹಿತಿಯನ್ನು ನೀಡುವ ಮೂಲಕ ಅವರಿಗೆ ಸಹಕಾರ ನೀಡುತ್ತಿದೆ.












Click it and Unblock the Notifications