ಧಾರವಾಡ: ನಾಲ್ಕು ದಿನದ ರೈತರ ಹಬ್ಬಕ್ಕೆ ತೆರೆ; ದಾಖಲೆ ಪ್ರಮಾಣದಲ್ಲಿ ಬೀಜಗಳ ಮಾರಾಟ
ಧಾರವಾಡ, ಸೆಪ್ಟೆಂಬರ್, 2: ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ನಾಲ್ಕು ದಿನಗಳ ಕೃಷಿ ಮೇಳಕ್ಕೆ ನಿನ್ನೆಗೆ ತೆರೆ ಬಿದ್ದಿದೆ. ಸೆಪ್ಟೆಂಬರ್ 17ರಿಂದ ಸೆಪ್ಟೆಂಬರ್ 20ರವರೆಗೆ ಮೇಳ ಆಯೋಜಿಸಲು ದಿನಾಂಕ ನಿಗದಿಪಡಿಸಿದ್ದು, ನಿನ್ನೆಗೆ ಮೇಳಕ್ಕೆ ತೆರೆ ಬಿದ್ದಿದೆ. ಯಾವುದೇ ಅಡ್ಡಿ ಇಲ್ಲದೇ ಕೃಷಿ ಮೇಳ ಅದ್ಧೂರಿಯಾಗಿ ನಡೆದಿದೆ.
ಧಾರವಾಡದಲ್ಲಿ ನಡೆದ ಕೃಷಿ ಮೇಳದ ಆರಂಭದ ದಿನದಿಂದಲೂ ಲಕ್ಷಾಂತರ ರೈತರು, ಆಸಕ್ತರು ಕ್ರಿಯಾಶೀಲರಾಗಿ ಭಾಗವಹಿಸಿದ್ದರು. ಜಿಲ್ಲೆಯವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಮೇಳವನ್ನು ಉದ್ಘಾಟಿಸುವ ಭಾಗ್ಯ ದೊರೆಯಲಿಲ್ಲ. ಬದಲಾಗಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಮೇಳಕ್ಕೆ ಚಾಲನೆ ನೀಡಿದ್ದು, ಹಳೆಯ ಸಂಪ್ರದಾಯ ಬಿಟ್ಟು ವೈಜ್ಞಾನಿಕವಾಗಿ ಚಿಂತನೆ ಮಾಡಿ. ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಮಾಡಿ ಆದಾಯವನ್ನು ದ್ವಿಗುಣ ಮಾಡಿಕೊಳ್ಳಿ. ಇದಕ್ಕೆ ಬೇಕಾದ ಪೂರಕ ಸಹಕಾರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒದಗಿಸಲಿವೆ ಎನ್ನುವ ಸಲಹೆಯನ್ನು ನೀಡಿದರು.
ಇದರೊಂದಿಗೆ ವೇದಿಕೆಯಲ್ಲಿ ನಾಲ್ಕು ದಿನಗಳ ಕಾಲ "ರೈತರಿಂದ ರೈತರಿಗಾಗಿ ಕಾರ್ಯಕ್ರಮ", ನೈಸರ್ಗಿಕ ಕೃಷಿ ಗೋಷ್ಠಿ, ಕೃಷಿಯಲ್ಲಿ ಸಾಧನೆ ಮಾಡಿದ ಏಳು ಜಿಲ್ಲೆಗಳ ಶ್ರೇಷ್ಠ ಕೃಷಿಕರು, ಶ್ರೇಷ್ಠ ಕೃಷಿಕ ಮಹಿಳೆಯರಿಗೆ ಪ್ರಶಸ್ತಿ ನೀಡಲಾಯಿತು.

ಕನ್ನಡ ಲೇಖಕರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ
ಮೇಳದಲ್ಲಿ ಕೃಷಿಗೆ ಸಂಬಂಧಿಸಿದ ಗೋಷ್ಠಿಗಳೇ ಹೆಚ್ಚಾಗಿ ಇರುತ್ತವೆ. ಆದರೆ ಈ ಬಾರಿ ನಡೆದ ಮೇಳದಲ್ಲಿ ಕನ್ನಡ ಕೃಷಿ ಗೋಷ್ಠಿ. ಕನ್ನಡದ ಲೇಖಕರಿಗೆ ಡಾ. ಚೆನ್ನವೀರ ಕಣವಿ ಹೆಸರಿನಲ್ಲಿ ಪ್ರಶಸ್ತಿ ನೀಡುವ ಸಂಪ್ರದಾಯವನ್ನು ಶುರು ಮಾಡಲಾಯಿತು. 'ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು ಘೋಷವಾಕ್ಯ' ಹೊರಡಿಸಲಾಗಿದ್ದು, ಇಡೀ ಮೇಳದ ತುಂಬ ನಾಲ್ಕು ದಿನ ಯಂತ್ರೋಪಕರಣಗಳು ಸದ್ದು ಮಾಡಿದವು.

ಗಮನ ಸೆಳೆದ ಕೃಷಿ ಯಂತ್ರೋಪಕರಣಗಳು
ದೊಡ್ಡ ಮಟ್ಟದ ಯಂತ್ರಗಳಿಗಾಗಿಯೇ ಪ್ರತ್ಯೇಕ ಮಳಿಗೆ ಹಾಕಿದ್ದರೆ, ಸಣ್ಣ ರೈತರಿಗಾಗಿ ಎರಡು ಭಾಗವಾಗಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕೂಲಿ ಕಾರ್ಮಿಕರ ಕೊರತೆ ನೀಗಿಸುವ ಹಿನ್ನೆಲೆಯಲ್ಲಿ ರೈತರು ಹಾಗೂ ಕೃಷಿ ಯಂತ್ರೋಪಕರಣ ಸಂಸ್ಥೆಗಳು ಆವಿಷ್ಕಾರ ಮಾಡಿದ ಯಂತ್ರಗಳು ಗಮನ ಸೆಳೆದವು. ಜೊತೆಗೆ ಆದಾಯ ಹೆಚ್ಚಿಸಿಕೊಂಡ ರೈತರು ತಮ್ಮ ತಾಂತ್ರಿಕ ಸಲಹೆಯೊಂದಿಗೆ ಮೇಳದಲ್ಲಿ ಪಾಲ್ಗೊಂಡಿದ್ದು, ಇತರೆ ರೈತರಿಗೆ ಸಲಹೆ ನೀಡಿದರು. ಕೃಷಿ ವಿಶ್ವ ವಿದ್ಯಾಲಯ ಸೇರಿದಂತೆ ಏಳು ಜಿಲ್ಲೆಗಳ ಕೃಷಿ ವಿಜ್ಞಾನ ಕೇಂದ್ರಗಳ ಸಂಶೋಧನೆ, ತಾಂತ್ರಿಕತೆ, ಸಮಗ್ರ ಬೇಸಾಯದ ಮಾಹಿತಿಯನ್ನು ನೀಡಲಾಗಿತ್ತು. ಈ ಮೇಳ ಬರೀ ರೈತರಿಗೆ ಮಾತ್ರವಲ್ಲದೇ ನಗರದ ಜನರಿಗೂ ಅನುಕೂಲ ಆಯಿತು. ಫಲಪುಷ್ಪ ಪ್ರದರ್ಶನ ಮಕ್ಕಳು, ಮಹಿಳೆಯನ್ನು ತನ್ನತ್ತ ಆಕರ್ಷಣೆ ಮಾಡಿತ್ತು. ವಿವಿಧ ಬಗೆಯ ಹೂಗುಚ್ಚ, ತಾರಸಿ ತೋಟ, ಲಂಬ ಕೃಷಿ, ಕೀಟಗಳ ಪ್ರಪಂಚ, ಗಡ್ಡೆ-ಗೆಣಸು ಪ್ರದರ್ಶನ ನಗರದ ಜನತೆಯನ್ನು ಗಮನ ಸೆಳೆಯಿತು.

ಜಾನುವಾರುಗಳ ಪ್ರದರ್ಶನಕ್ಕೆ ನಿರ್ಬಂಧ
ಇದರೊಂದಿಗೆ ಶ್ವಾನ ಪ್ರದರ್ಶನಕ್ಕೂ ಲಕ್ಷಾಂತರ ಜನ ಭೇಟಿ ನೀಡಿದರು. ಆದರೆ ಈ ಬಾರಿ ಚರ್ಮ ರೋಗದ ಕಾರಣದಿಂದ ಜಾನುವಾರುಗಳ ಪ್ರದರ್ಶನ ಇಲ್ಲದೇ ಇರುವುದು ಜಾನುವಾರು ಪ್ರಿಯರಿಗೆ ಸ್ವಲ್ಪ ಮಟ್ಟಿಗೆ ಬೇಸರ ತರಿಸಿದೆ ಎನ್ನಲಾಗಿದೆ. ಮತ್ಸ್ಯ ಮೇಳವೂ ಮೀನು ಪ್ರಿಯರಿಗೆ ನಿರಾಸೆ ಮೂಡಿಸಿದ್ದ, ಒಟ್ಟಾರೆ ಮೇಳದಲ್ಲಿ 660 ಮಳಿಗೆ ಹಾಕಲಾಗಿತ್ತು. ಈ ಪೈಕಿ ಕೃಷಿ, ಕೃಷಿಯೇತರ ವಸ್ತುಗಳ ಮಾರಾಟವೂ ಭರ್ಜರಿಯಾಗಿ ನಡೆಯಿತು. ಘೋಷ ವಾಕ್ಯದಂತೆ ಆದಾಯ ದ್ವಿಗುಣಗೊಳಿಸಲು ಪ್ರಯತ್ನ ಮಾಡಲಾಗಿದೆ.

ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ರೈತರು
ಹಿಂಗಾರು ಹಂಗಾಮಿಗೆ ರೈತರು ಬೀಜಗಳನ್ನು ಖರೀದಿಸಿದ್ದಾರೆ. ಮೊದಲ ದಿನ ಎರಡು ಲಕ್ಷ, ಎರಡನೇ ದಿನ ಏಳು ಲಕ್ಷ, 3ನೇ ದಿನ 6.5 ಲಕ್ಷ, ನಾಲ್ಕನೇ ದಿನ 4.50 ಲಕ್ಷ ಸೇರಿದಂತೆ ಒಟ್ಟು 15-16 ಲಕ್ಷ ಜನರು ಮೇಳಕ್ಕೆ ಭೇಟಿ ನೀಡಿದ್ದು ವಿಶೇಷವಾಗಿದೆ. ಕೃಷಿ ಮೇಳದ ನಾಲ್ಕು ದಿನಗಳು ಸೇರಿ ಒಟ್ಟು ಬೀಜ ಘಟಕದಿಂದ 665.50 ಕ್ವಿಂಟಲ್ ಹಿಂಗಾರು ಬೆಳೆಗಳ ಬೀಜಗಳನ್ನು ಮಾರಾಟ ಮಾಡಲಾಗಿದೆ. ಕೃಷಿ ತಂತ್ರಜ್ಞಾನ ಸಲಹಾ ಕೇಂದ್ರಕ್ಕೆ 2,804 ರೈತರು ಭೇಟಿ ನೀಡಿ ಸಮಸ್ಯೆಗಳನ್ನು ವಿಜ್ಞಾನಿಗಳ ಜೊತೆಗೆ ಚರ್ಚಿಸಿ ಪರಿಹಾರ ಕಂಡುಕೊಂಡಿದ್ದಾರೆ. ರೈತರು ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿಸ್ತರಣಾ ಕಾರ್ಯಕರ್ತರು, ಮಳಿಗೆಗಳ ಮಾಲೀಕರು, ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.












Click it and Unblock the Notifications