ತೋಟಗಾರಿಕೆ ಉತ್ಪನ್ನಗಳಿಗೆ ಉತ್ತಮ ಬೆಲೆ, ರೈತರಿಗೆ ಸಹಕಾರಿ
ಕೊಪ್ಪಳ, ಫೆಬ್ರವರಿ 28; ತೋಟಗಾರಿಕೆ ಹಾಗೂ ಕೃಷಿ ಇಲಾಖೆಯು ಸದಾ ರೈತರ ನೆರವಿಗೆ ಇದ್ದು, ರೈತರಿಗೆ ಉಪಯೋಗವಿರುವ ಸಲಹೆ, ಸೂಚನೆಗಳನ್ನು ಇಲಾಖೆಗಳಿಂದ ಪಡೆಯಬಹುದು ಎಂದು ಕರೆ ನೀಡಲಾಗಿದೆ. ರೈತರ ಶ್ರಮಕ್ಕೆ ಉತ್ತಮ ಆದಾಯ ದೊರೆಯಲು ಅನುಕೂಲ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಸಹ ಕರೆ ನೀಡಲಾಗಿದೆ.
ಕೊಪ್ಪಳ ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ಸಹಯೋಗದಲ್ಲಿ ಕೊಪ್ಪಳದಲ್ಲಿ ಕೊಪ್ಪಳ ಹಾಗೂ ಕಲಬುರಗಿ ವಿಭಾಗದ ಜಿಲ್ಲೆಗಳ ತೋಟಗಾರಿಕೆ ಉತ್ಪನ್ನಗಳ ಬಗ್ಗೆ ತಿಳಿಸಲು ರಫ್ತುದಾರರ/ ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶ-2024 ಆಯೋಜನೆ ಮಾಡಲಾಗಿತ್ತು.

ತೋಟಗಾರಿಕೆ ಇಲಾಖೆಯ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಖರೀದಿದಾರರು, ಮಾರಾಟಗಾರರು, ರೈತರು ಉಪಸ್ಥಿತರಿದ್ದರು. ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಂಸದ ಸಂಗಣ್ಣ ಕರಡಿ, "ನಮ್ಮ ದೇಶದ ಅಭಿವೃದ್ಧಿ ಹಾಗೂ ನಮ್ಮ ಬದುಕು ನಿಂತಿರುವುದು ರೈತರ ಮೇಲೆ. ಅವರಿಂದ ಮಾತ್ರ ನಮ್ಮ ದೇಶದ ಅಭಿವೃದ್ಧಿ ಸಾಧ್ಯ. ಆದ್ದರಿಂದಲೇ ರೈತರನ್ನು ದೇಶದ ಬೆನ್ನೆಲುಬು ಎನ್ನುತ್ತೇವೆ" ಎಂದು ಹೇಳಿದರು.
ರೈತರ ಆದಾಯ ಹೆಚ್ಚಿಸಲು ಸಹಕಾರ: "ತೋಟಗಾರಿಕೆ ಹಾಗೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ, ಸೂಕ್ತ ಔಷಧೋಪಚಾರಗಳನ್ನು ಬಳಸಿಕೊಂಡು ರೈತರು ಉತ್ತಮ ಇಳುವರಿ ಪಡೆಯಬಹುದು. ನಮ್ಮ ಜಿಲ್ಲೆಯ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯು ಸದಾ ರೈತರ ನೆರವಿಗೆ ಇದ್ದು, ರೈತರಿಗೆ ಉಪಯೋಗವಿರುವ ಸಲಹೆ, ಸೂಚನೆಗಳನ್ನು ಇಲಾಖೆಗಳಿಂದ ಪಡೆಯಬಹುದು" ಎಂದರು.
"ಖರೀದಿದಾರರ ಹಾಗೂ ಮಾರಾಟಗಾರರ ಸಮಾವೇಶದಲ್ಲಿ ಭಾಗವಹಿಸಿರುವ ರೈತರು ತಮ್ಮ ತೋಟಗಾರಿಕೆ ಬೆಳೆಗಳ ಸೂಕ್ತ ಮಾರಾಟಕ್ಕೆ ಮಾರಾಟ ತಂತ್ರಗಳು, ಉತ್ತಮ ಮಾರುಕಟ್ಟೆ, ರಫ್ತು ವಿಧಾನ ಮುಂತಾದವುಗಳ ಬಗ್ಗೆ ಚರ್ಚಿಸಿ, ಮಾಹಿತಿ ಪಡೆಯಿರಿ" ಎಂದು ಕರೆ ನೀಡಿದರು.
"ಖರೀದಿದಾರರು ತೋಟಗಾರಿಕೆ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಅಳವಡಿಸಿಕೊಳ್ಳಬಹುದಾದ ವಿಧಾನಗಳು, ಉತ್ಪನ್ನದ ಗುಣಮಟ್ಟ, ಮಾರುಕಟ್ಟೆಯ ಬೇಡಿಕೆ ವಿಸ್ತರಣೆ ಮುಂತಾದವುಗಳ ಕುರಿತು ರೈತರಿಗೆ ಸೂಕ್ತ ಮಾಹಿತಿ ನೀಡಿ. ಜಿಲ್ಲೆಯ ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಿ, ರೈತರ ಶ್ರಮಕ್ಕೆ ಉತ್ತಮ ಆದಾಯ ದೊರೆಯಲು ಅನುಕೂಲ ಕಲ್ಪಿಸಿ" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, "ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಮುಖ್ಯವಾಗಿದೆ. ಜಿಲ್ಲೆಯಲ್ಲಿ ಸದ್ಯ ಶೇ.10 ರಷ್ಟು ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದು, ಅದನ್ನು ಶೇ.30 ರಷ್ಟು ವಿಸ್ತರಿಸಿ, ತೋಟಗಾರಿಕೆ ಬೆಳೆಗಳು, ಉತ್ಪನ್ನಗಳನ್ನು ಜಿಲ್ಲೆಯಿಂದ ಬೇರೆಡೆ ರಫ್ತು ಮಾಡುವುದು ನಮ್ಮ ಉದ್ದೇಶವಾಗಿದೆ" ಎಂದರು.
"ಈ ಕುರಿತು ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಒಟ್ಟು 1.5 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆಯ ಕ್ಷೇತ್ರವನ್ನು ಜಿಲ್ಲೆಯಲ್ಲಿ ವಿಸ್ತರಿಸಬೇಕು. ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಕುರಿತು ಆಸಕ್ತ ರೈತರು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ, ಮಣ್ಣಿನ ಪರೀಕ್ಷೆ ಮಾಡಿಸಿ, ಮಣ್ಣಿನ ಗುಣಕ್ಕೆ ಅನುಗುಣವಾಗಿ ಬೆಳೆಯನ್ನು ಬೆಳೆಯಬೇಕು. ಅದರಂತೆ ತಾವು ಬೆಳೆಯುವ ಬೆಳೆಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವುದು ಕೂಡ ರೈತರ ಜವಾಬ್ದಾರಿಯಾಗಿದೆ" ಎಂದು ಹೇಳಿದರು.
"ರೈತರು ತಮ್ಮ ತೋಟಗಾರಿಕೆ ಬೆಳೆಗಳು, ಉತ್ಪನ್ನಗಳ ಬಗ್ಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು. ಇಂತಹ ಸಮಾವೇಶಗಳು ಕೂಡ ರೈತರಿಗೆ ಸಹಕಾರಿಯಾಗುತ್ತವೆ. ಕನಕಗಿರಿಯಲ್ಲಿ ತೋಟಗಾರಿಕೆ ಟೆಕ್ ಪಾರ್ಕ್ ನಿರ್ಮಿಸಲು ರೂ.100 ಕೋಟಿ ವೆಚ್ಚದ ಪ್ರಾಜೆಕ್ಟ್ ಮಾಡಲು ನಿರ್ಧರಿಸಿದ್ದು, ಅಗತ್ಯ ಪ್ರಮಾಣದ ಭೂಮಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ತೋಟಗಾರಿಕೆ ಉತ್ಪನ್ನಗಳಿಗೆ ಉತ್ತಮ ಬೆಂಬಲ ದೊರೆಯುತ್ತದೆ" ಎಂದು ತಿಳಿಸಿದರು.
ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, "ತೋಟಗಾರಿಕೆ ಬೆಳೆಗಳು ಉತ್ತಮ ಆದಾಯ ನೀಡುವ ಬೆಳೆಗಳಾಗಿದ್ದು, ರೈತರು ತೋಟಗಾರಿಕೆ ಬೆಳೆಗಳ ಬಗ್ಗೆ ಆಸಕ್ತಿ ವಹಿಸಿದರೆ ಇಲಾಖೆಯಿಂದ ಅಗತ್ಯ ಸಲಹೆ ಸೂಚನೆ, ನೆರವು ನೀಡಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ ದಾಳಿಂಬೆಯನ್ನು 4800 ಹೆ., ಮಾವು-4850 ಹೆ., ಪೇರಲ-2450 ಹೆ., ದ್ರಾಕ್ಷಿ-519 ಹೆ. ಪ್ರದೇಶ ಸೇರಿದಂತೆ ವಿವಿಧ ಹಣ್ಣುಗಳನ್ನು ಒಟ್ಟು 16509 ಹೆ. ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ" ಎಂದರು.
"ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಅದರಂತೆ ಇನ್ನೂ ಹೆಚ್ಚಿನ ರೈತರು ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ವಹಿಸಿ, ಬೆಳೆ ಬೆಳೆಯಬೇಕು. ಸೂಕ್ತ ಮಾರುಕಟ್ಟೆಗಾಗಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಇಲಾಖೆಯನ್ನು ಸಂಪರ್ಕಿಸಬಹುದು. ಸಮಾವೇಶದಲ್ಲಿ ಖರೀದಿದಾರು ಭಾಗವಹಿಸಿದ್ದು, ಅವರು ತೋಟಗಾರಿಕೆ ಉತ್ಪನ್ನಗಳ ಬೇಡಿಕೆ, ಗುಣಮಟ್ಟ ಹಾಗೂ ಮಾರುಕಟ್ಟೆಯ ತಾಂತ್ರಿಕತೆ ಬಗ್ಗೆ ಮಾಹಿತಿ ನೀಡುತ್ತಾರೆ" ಎಂದು ತಿಳಿಸಿದರು.












Click it and Unblock the Notifications