ಚಿತ್ರದುರ್ಗದಲ್ಲಿ ಸೊಪ್ಪು ಕಡಲೆ ತಿನ್ನಲು ಹಿಂಡುಹಿಂಡಾಗಿ ಲಗ್ಗೆ ಇಡುತ್ತಿವೆ ಕಡವೆಗಳು
ಚಿತ್ರದುರ್ಗ, ಜನವರಿ 19: ಕೋಟೆನಾಡಿನ ರೈತರ ಪಾಲಿಗೆ ಕಡವೆಗಳು ತಲೆನೋವಾಗಿ ಪರಿಣಮಿಸಿದೆ. ಚಿತ್ರದುರ್ಗದ ಹಿರಿಯೂರಿನಲ್ಲಿ ಸೊಪ್ಪಿನ ಕಡಲೆಯನ್ನು ಹೆಚ್ಚಾಗಿ ಬೆಳೆದಿದ್ದು, ಇದಕ್ಕೆ ಕಡವೆಗಳ ಕಾಟ ಹೆಚ್ಚಾಗಿದೆ. ಪ್ರತಿನಿತ್ಯ ಹೊಲಕ್ಕೆ ದಾಳಿ ಇಡುವ ಹಿಂಡು ಹಿಂಡು ಕಡವೆಗಳು ರೈತರಿಗೆ ಚಿಂತೆ ತಂದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹೂವಿನಹೊಳೆ ಗ್ರಾಮದ ರಾಜೇಂದ್ರ ಎಂಬ ರೈತನ ಸುಮಾರು 20 ಎಕರೆಯಲ್ಲಿ ಬೆಳೆದ ಸೊಪ್ಪಿನ ಕಡಲೆಯನ್ನು ಪ್ರತಿನಿತ್ಯ ಬರುವ ಕಡವೆಗಳು ತಿಂದು ಹಾಕುತ್ತಿವೆ. ಅದೇ ಗ್ರಾಮದ ನೂರಾರು ಎಕರೆ ಜಾಗದಲ್ಲಿ ರೈತರು ಕಡಲೆ ಬೆಳೆದಿದ್ದು, ಕಡವೆಗಳ ಕಾಟದಿಂದ ಆತಂಕದಲ್ಲಿದ್ದಾರೆ. ಇದೇ ಸಮಸ್ಯೆ ಕುರಿತು ರೈತ ರಾಜೇಂದ್ರ ಕಳೆದ ವರ್ಷ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಆದರೆ ನಾಶವಾಗಿರುವ ಬೆಳೆಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದ ಅವರಿಂದ ಯಾವುದೇ ಪರಿಹಾರ ದೊರಕಿಲ್ಲ.

ಸುದ್ದಿಗಾರರ ಜೊತೆ ಮಾತನಾಡಿದ ಹಿರಿಯೂರು ಅರಣ್ಯ ವಲಯ ಅಧಿಕಾರಿ ಶ್ರೀಹರ್ಷ ಅವರು ಮಾತನಾಡಿ, "ಆಂಧ್ರ ಮತ್ತು ಕರ್ನಾಟಕ ಗಡಿ ಭಾಗವಾಗಿರುವುದರಿಂದ ಕಡವೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ರೈತರು ಬೆಳೆ ನಾಶದ ಬಗ್ಗೆ ದಾಖಲಾತಿ ಒದಗಿಸಿ ಕೊಟ್ಟರೆ ಇ-ಆಫ್ ಎಂಬ ಹೊಸ ಯೋಜನೆಯಿಂದ 15ರಿಂದ 30 ದಿನಗಳ ಒಳವೆ ಪರಿಹಾರ ಕೊಡಲಾಗುವುದು" ಎಂದು ಮಾಹಿತಿ ನೀಡಿದರು.












Click it and Unblock the Notifications