ಅತಿಯಾದ ಕೀಟನಾಶಕಗಳ ಬಳಕೆಯಿಂದ ಹಿಪ್ಪುನೇರಳೆ ಇಳುವರಿ ಕುಂಠಿತ, ಚಿಕ್ಕಬಳ್ಳಾಪುರ ಜಿಲ್ಲೆ ರೈತರಲ್ಲಿ ಆತಂಕ
ಚಿಕ್ಕಬಳ್ಳಾಪುರ, ಅಕ್ಟೋಬರ್, 24: 'ಅತಿಯಾದರೆ ಅಮೃತ ಕೂಡ ವಿಷ' ಎಂಬ ಮಾತಿದೆ. ಇದು ನೂರಕ್ಕೆ ನೂರು ಸತ್ಯ. ಬೆಳೆ ಉಳಿಸಿಕೊಳ್ಳಲು ರೈತರು ಸಿಂಪಡಣೆ ಮಾಡುವ ಔಷಧವೇ ಬೆಳೆ ಹಾನಿ ಮಾಡುತ್ತಿದ್ದು, ಇದು ಅನ್ನದಾತರಿಗೆ ಸಂಕಷ್ಟ ತಂದೊಡ್ಡುತ್ತಿದೆ. ಕಳೆನಾಶಕ ಹಾಗೂ ಇತರ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕ ಔಷಧ ಹಿಪ್ಪುನೇರಳೆ ಸೊಪ್ಪನ್ನೇ ವಿಷವಾಗಿಸುತ್ತಿದ್ದು, ಈ ಸೊಪ್ಪು ತಿನ್ನುವ ರೇಷ್ಮೆ ಹುಳುಗಳು ಗೂಡು ಕಟ್ಟದೆ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಗುಣಮಟ್ಟದ ರೇಷ್ಮೆ ಉತ್ಪಾದನೆ ಮತ್ತು ಉತ್ಪಾದಕತೆಯನ್ನೂ ಗಮನದಲ್ಲಿಟ್ಟುಕೊಂಡು ರೇಷ್ಮೆ ಸಂಶೋಧನಾಲಯಗಳು ರೇಷ್ಮೆ ಹುಳುವಿನ ಹಲವಾರು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿವೆ. ಇದರ ಹೊರತಾಗಿಯೂ ಮಳೆ ಕೊರತೆ ಮತ್ತು ಕೀಟನಾಶಕ ಔಷಧಗಳ ಅತಿಯಾದ ಬಳಕೆಯಿಂದಾಗಿ ಹಿಪ್ಪುನೇರಳೆ ಇಳುವರಿ ಕುಂಠಿತವಾಗಿದೆ. ಇದು ರೇಷ್ಮೆ ಬೆಳೆಯ ಮೇಲೆ ನೇರ ಪರಿಣಾಮ ಉಂಟು ಮಾಡಿದೆ.

ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿ ಮಳೆಯಾಶ್ರಿತ ಪ್ರದೇಶ, ಬಯಲು ಸೀಮೆ, ಮಲೆನಾಡು ಹಾಗೂ ಅಧಿಕ ಉಷ್ಣಾಂಶವುಳ್ಳ ಪ್ರದೇಶಗಳಿದ್ದು, ರಾಜ್ಯದ ಎಲ್ಲಾ ಭೌಗೋಳಿಕ ಹಾಗೂ ವಿವಿಧ ಹವಾಮಾನಗಳಿಗೆ ಹೊಂದಿಕೊಂಡು ಉತ್ತಮ ಫಲಿತಾಂಶ ನೀಡುವ ಗಡಸು ತಳಿಗಳನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ತಳಿ ಶಾಸ್ತ್ರಜ್ಞರು ಹಲವಾರು ಬಹುಸಂತತಿ ದ್ವಿತಳಿ/ ಸಂಕರಣ ತಳಿಗಳನ್ನು ಸಹ ಹೊರತಂದಿದ್ದು, ಹೆಚ್ಚಿನ ಮಾಹಿತಿಗಾಗಿ ರೇಷ್ಮೆ ಇಲಾಖೆಯ ಕಚೇರಿಗೆ ಭೇಟಿ ನೀಡಬಹುದಾಗಿದೆ.
ಈ ಬಾರಿ ಮುಂಗಾರು ಕೈಕೊಟ್ಟ ಪರಿಣಾಮವಾಗಿ ಕೃಷಿ ಉತ್ಪನ್ನಗಳ ಉತ್ಪಾದನೆ ಮೇಲೆ ಸಾಕಷ್ಟು ಪ್ರತಿಕೂಲ ಉಂಟು ಮಾಡಿತ್ತು. ಇದರ ಮುಂದುವರಿದ ಭಾಗವಾಗಿ ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಹಿಪ್ಪು ನೇರಳೆ ಸೊಪ್ಪು ಹಾಗೂ ರೇಷ್ಮೆಗೂಡು ಉತ್ಪಾದನೆ ಮೇಲೆ ಪ್ರಭಾವ ಬೀರಿದೆ.
ರೇಷ್ಮೆಗೂಡು ಉತ್ಪಾದನೆಯಲ್ಲಿ ಹಿಪ್ಪು ನೇರಳೆ ಸೊಪ್ಪು ಪ್ರಮುಖ ಕಚ್ಚಾಪದಾರ್ಥವಾಗಿ ಬಳಕೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಿಪ್ಪುನೇರಳೆ ಸೊಪ್ಪಿನ ತೋಟಗಳಲ್ಲಿ ಕೀಟಗಳ ಕಾಟ ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲೂ ಈ ಬಾರಿ ಮುಂಗಾರು ಮಳೆಯಾಗದ ಪರಿಣಾಮವಾಗಿ ಕೀಟಗಳ ಹಾವಳಿಯೂ ಹೆಚ್ಚಾಗಿದೆ.
ಇದು ಬೆಳೆ ಉತ್ಪಾದನೆಯ ಮೇಲೆ ನೇರ ಪರಿಣಾಮ ಉಂಟು ಮಾಡುತ್ತಿದೆ. ಬೆಳೆಗಾರರು ಈ ಕೀಟಗಳ ಹಾವಳಿ ತಪ್ಪಿಸುವ ಸಲುವಾಗಿ ವಿವಿಧ ರೀತಿಯ ರಾಸಾಯನಿಕ ಮಿಶ್ರಿತ ಔಷಧಗಳನ್ನು ಅತಿ ಹೆಚ್ಚು ಸಿಂಪಡಣೆ ಮಾಡುತ್ತಿದ್ದಾರೆ. ರಾಸಾಯನಿಕಗಳ ಅತಿಯಾದ ಬಳಕೆಯು ಇಳುವರಿ ಕುಂಠಿತವಾಗುವಂತೆ ಮಾಡುತ್ತಿದೆ.
ಅತಿಯಾದ ರಾಸಾಯನಿಕ ಬಳಕೆಯಿಂದಾಗಿ ಚಂದ್ರಿಕೆಗೆ ಹಳು ಹಾಕಿ ಸೊಪ್ಪು ಹಾಕಿದರೂ ಹುಳುಗಳು ಗೂಡು ಕಟ್ಟುತ್ತಿಲ್ಲ. ಹಿಪ್ಪುನೇರಳೆ ಸೊಪ್ಪು ತಿಂದ ಬಳಿಕವೂ ಹುಳು ಗೂಡು ಕಟ್ಟದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಇಳುವರಿ ಕಡಿಮೆಯಾಗುತ್ತಿದೆ. ಗುಣಮಟ್ಟದ ರೇಷ್ಮೆಗೂಡು ಉತ್ಪಾದನೆಯೂ ರೈತರಿಗೆ ಸಾಕಷ್ಟು ತಲೆನೋವಾಗಿ ಪರಿಣಮಿಸಿದೆ. ಗುಣಮಟ್ಟದ ಗೂಡು ಇಳುವರಿ ಕಡಿಮೆಯಾಗಿರುವ ಕಾರಣ ರೇಷ್ಮೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಗೂಡು ಮಾರಾಟವಾಗುತ್ತಿದೆ.
ರೇಷ್ಮೆ ಬೆಳೆಗಾರರು ಹೇಳುವಂತೆ ಕಳೆದ ಒಂದು ದಶಕದ ಹಿಂದೆ ಹಿಪ್ಪುನೇರಳೆಯನ್ನು ಯಾವುದೇ ಔಷಧ ಸಿಂಪಡಣೆ ಮಾಡದ ರೀತಿಯಲ್ಲಿ ಬೆಳೆಯಲಾಗುತ್ತಿತ್ತು. ಅಂದು ಕೀಟಬಾಧೆಯೂ ಕಡಿಮೆ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕೀಟಗಳ ಹಾವಳಿ ಅಧಿಕವಾಗುತ್ತಿದೆ. ಇದು ಸಾಕಷ್ಟು ಸವಾಲುಗಳನ್ನು ಎದುರಿಸುವಂತೆ ಮಾಡಿವೆ.
ಅತಿಯಾದ ಕೀಟನಾಶಕಗಳ ಬಳಕೆಯು ಸಾಕಷ್ಟು ದುಷ್ಪರಿಣಾಮಗಳಿಗೆ ಸಾಕ್ಷಿಯಾಗುತ್ತಿದೆ. ಒಂದೆಡೆ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಇಳುವರಿ ಕಡಿಮೆಯಾಗುವಂತೆ ಮಾಡುತ್ತಿದೆ. ಇನ್ನು ಅತಿ ಔಷಧಗಳ ಬಳಕೆಯು ರೈತರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತಿದೆ.
ಇನ್ನು ರಷ್ಠೆಯ ಮೂಲ ತಳಿಯಾಗಿರುವ ಮೈಸೂರು ರೇಷ್ಮೆಗೆ ಕಳೆದ ವರ್ಷ ಗಂಟು ರೋಗದ ಕೀಟ ಬಾಧೆ ಆವರಿಸಿತ್ತು. ಅದು ಇಡೀ ರೇಷ್ಮೆ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿತ್ತು. ಈಗ ಗಂಟು ರೋಗ ಕಡಿಮೆಯಾಗಿದ್ದು, ಬೇರೆ ಕೀಟಗಳ ಬಾಧೆ ಹೆಚ್ಚಳವಾಗಿದೆ.
ಇನ್ನು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಔಷಧಗಳು ಕಂಡುಬರುತ್ತಿವೆ. ರೈತರಿಗೆ ಸರಿಯಾದ ಮಾಹಿತಿ ಇದೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಕೀಟನಾಶಕಗಳ ಬಳಕೆಗೆ ಮುಂದಾಗುತ್ತಿದ್ದಾರೆ. ಇದು ಸಹ ಇಳುವರಿಯ ಮೇಲೆ ನೇರ ಪರಿ ಕಾಮ ಉಂಟುಮಾಡುತ್ತಿದೆ. ಜೊತೆಗೆ, ರೇಷ್ಮೆ ಇಲಾಖೆ ಅಧಿಕಾರಿಗಳು ಸಹ ಯಾವ ಕೀಟ ಹಾವಳಿ ನಿಯಂತ್ರಣ ಸಂಬಂಧ ಮಾರ್ಗಸೂಚಿ ಬಿಡುಗಡೆಗೊಳಿಸಬೇಕೆಂಬುದು ರೈತರ ಆಗ್ರಹವಾಗಿದೆ.
ಹಿಪ್ಪುನೇರಳೆಗೆ ರೋಗಬಾಧೆ
ಹಿಪ್ಪು ನೇರಳೆ ಬೆಳೆದಿದ್ದು, ಸಮರ್ಪಕವಾಗಿ ನಿರ್ವಹಣೆ ಮಾಡಬೇಕೆಂದು ಕೆಲ ತೋಟಗಳ ಪಕ್ಕದಲ್ಲಿ ದ್ರಾಕ್ಷಿ, ಹೂವು ಸೇರಿ ವಿವಿಧ ತರಕಾರಿ ಬೆಳೆದಿರುತ್ತಾರೆ. ಆ ಬೆಳೆಗಳಿಗೆ ಔಷಧ ಸಿಂಪಡಣೆ ಮಾಡುವುದರಿಂದ ಇದು ಗಾಳಿಗೆ ಹಿಪ್ಪು ನೇರಳೆ ತೋಟದ ಮೇಲೆ ಬೀಳುತ್ತದೆ. ಆಗ ಪೀಡೆ, ಏಳೆ ಮುದು ರೋಗ, ಕೆಂಪು ಚುಕ್ಕಿ ರೋಗಗಳು ಹರಡುತ್ತವೆ.
ತೋಟದಲ್ಲಿ ಬೆಳೆಯುವ ಕಳೆಯನ್ನು ಹಿಂದೆ ಕೂಲಿ ಕಾರ್ಮಿಕರಿಂದ ತೆರವು ಮಾಡಿಸಲಾಗುತ್ತಿತ್ತು. ಬದಲಾದ ತಂತ್ರಜ್ಞಾನದಿಂದ ರೈತರು ಯಂತ್ರಗಳಿಗೆ ಮಾರು ಹೋಗಿದ್ದು, ಕಳೆ ನಿಯಂತ್ರಣಕ್ಕೆ ಔಷಧ ಸಿಂಪಡಣೆ ಮಾಡುತ್ತಿದ್ದಾರೆ. ಕಳೆಯ ಅಂಶದ ಔಷಧವು ಸೊಪ್ಪಿಗೆ ಸೇರುತ್ತದೆ. ಈ ರೀತಿ ಕೀಟನಾಶಕ, ಹುಳುಗಳು ಗೂಡು ಕಟ್ಟುತ್ತಿಲ್ಲ ಎಂಬುದು ಕೆಲ ಪ್ರಗತಿಪರ ರೈತರ ಅಭಿಪ್ರಾಯವಾಗಿದೆ.
ಮಳೆ ಕಡಿಮೆಯಾಗಿದೆ ಕೀಟನಾಶಕಗಳ ಅತಿ ಬಳಕೆಯು ಹಿಪ್ಪನೇರಳೆ ಹಾಗೂ ಗೂಡು ಇಳುವರಿ ಮೇಲೆ ಪರಿಣಾಮ ಬೀರುತ್ತಿದೆ. ರೇಷ್ಮೆ ಇಲಾಖೆ ಅಧಿಕಾರಿಗಳು ಈ ಸಮಸ್ಯೆ ಮನಗಂಡು ಕೂಡಲೇ ಮಾರ್ಗಸೂಚಿ ಬಿಡುಗಡೆ ಮಾಡಬೇಕು. ಆ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಗುಡಿಬಂಡೆ ತಾಲೂಕು ರೇಷ್ಮೆ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಪಯ್ಯುರು ವೇಣುಗೋಪಾಲ್ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications