Farmers: ರೈತರ ಕಣ್ಣಲ್ಲಿ ನೀರು ತರಿಸಿದ ವರುಣ: ಬಿತ್ತನೆ ಕಾರ್ಯಕ್ಕೆ ಮಳೆ ಅಡ್ಡಿ!
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಸತತ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರಂತರ ವರ್ಷಧಾರೆ ಸುರಿಯುತ್ತಿರುವುದರಿಂದ ಬಿತ್ತನೆ ಕಾರ್ಯಕ್ಕೆ ಅಡಚಣೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಹೌದು... ರಾಜ್ಯದ ಹಲವೆಡೆ ನಿರಂತರ ಮಳೆ ರೈತರ ಕಣ್ಣಲ್ಲಿ ನೀರು ತರಿಸಿದೆ. ತೊಗರಿ ಕಣಜ ಕಲಬುರಗಿ ಜಿಲ್ಲೆಯಾದ್ಯಂತ ಎರಡು ದಿನದಿಂದ ಮಳೆ ಸುರಿಯುತ್ತಿದೆ. ಇದರಿಂದಾಗಿ ಜಿಲ್ಲೆಯ ಐದು ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗಿರುವ ತೊಗರಿ ಫಸಲು ನೀರಿನಲ್ಲಿ ಕೊಚ್ಚಿಹೋಗಿದೆ. ಹಲವೆಡೆ ತೆಗರಿ ಬೆಳೆ ಕೆಸರಿನಲ್ಲಿ ಮುಳುಗಿ ಹೋಗಿದೆ. ಅಲ್ಲದೆ ಜೋಳ, ಕಡಲೆ ಬಿತ್ತನೆಗೆ ಮುಂದಾಗಿದ್ದ ರೈತರು ಕೃಷಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದು, ಮಳೆ ನಿಲುಗಡೆಗೆ ಕಾಯುತ್ತಿದ್ದಾರೆ.

ಬಾಗಲಕೋಟೆಯಲ್ಲಿ ಬಿತ್ತನೆಗೆ ಅಡ್ಡಿ
ಹಿಂಗಾರು ಜೋಳ ಬಿತ್ತನೆ ಪ್ರದೇಶದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಬಾಗಲಕೋಟೆಯಲ್ಲಿ ಬಿತ್ತನೆಗೆ ಅಡ್ಡಿಯಾಗಿದೆ. ಹಿಂಗಾರು ಹಂಗಾಮಿನಲ್ಲಿ 3.09 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಯ ಗುರಿ ಹೊಂದಲಾಗಿದೆ. ಆದರೆ, ಇಲ್ಲಿಯವರೆಗೆ 60 ಸಾವಿರ ಹೆಕ್ಟೇರ್‌ನಷ್ಟು ಮಾತ್ರ ಬಿತ್ತನೆಯಾಗಿದೆ. ಜೋಳ ಪ್ರಮುಖ ಬೆಳೆಯಾಗಿದ್ದು, 98 ಸಾವಿರ ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 9,400 ಹೆಕ್ಟೇರ್ ಪ್ರದೇಶದಷ್ಟು ಮಾತ್ರ ಬಿತ್ತನೆಯಾಗಿದೆ.
ಹುನಗುಂದ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಜೋರು ಮಳೆಯಾಗುತ್ತಿದೆ. ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನದಿಂದ ಆರಂಭವಾದ ಮಳೆ, ನಾಗೂರು, ಯಡಹಳ್ಳಿ, ಚಿತ್ತವಾಡಗಿ, ವೀರಾಪೂರ, ಬನ್ನಿಹಟ್ಟಿ, ಹೊನ್ನರಹಳ್ಳಿ, ಬೇವಿನಮಟ್ಟಿ, ಹಿರೇಬಾದವಾಡಗಿ, ಚಿಕ್ಕಬಾದವಾಡಗಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಅಬ್ಬರಿಸಿದೆ. ಮಳೆ ಅಬ್ಬರಕ್ಕೆ ಹೊಲಗಳಲ್ಲಿನ ಬದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಕೆಲ ಪ್ರದೇಶಗಳಲ್ಲಿ ಕಳೆದೆರೆಡು ದಿನಗಳಿಂದ ಮಳೆ ಜೋರಾಗಿದ್ದು ಹಿಂಗಾರು ಬೆಳೆಗಳಾದ ಜೋಳ, ಕಡಲೆ ಬಿತ್ತನೆಗೆ ಮಳೆ ಅಡ್ಡಿಯಾಗಿದೆ.

ಧಾರವಾಡ ಮಳೆಗೆ ಹತ್ತಿ ಬೆಳೆ ನಾಶ
ವಾಣಿಜ್ಯ ನಗರಿ ಹುಬ್ಬಳ್ಳಿ ಧಾರವಾಡದಲ್ಲಿ ವರುಣನ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಜಮೀನುಗಳಿಗೆ ನೀರು ನುಗ್ಗಿ, ಕೆರೆಗಳಂತಾಗಿವೆ. ಇದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹತ್ತಿ, ಈರುಳ್ಳಿ, ಮೆಣಸಿನಕಾಯಿ ಬೆಲೆಗಳು ನೀರಿನಲ್ಲಿ ನಾಶವಾಗಿ ಹೋಗಿದೆ. ಮಳೆ ಹೊಡೆತಕ್ಕೆ ಬೆಳೆ ಕೊಚ್ಚಿ ಹೋಗಿವೆ. ಕುಂದಗೋಳ ಹಾಗೂ ನವಲಗುಂದ ತಾಲೂಕಿನಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ.
ಬೆಳಗಾವಿಯಲ್ಲಿ ಧಾರಾಕಾರ ಮಳೆ
ಇನ್ನೂ ಬೆಳಗಾವಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅಥಣಿಯ ಕೊಕಟನೂರು ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಜಲಾವೃತಗೊಂಡಿದೆ. ಇದರಿಂದ ಭಕ್ತರು ಹೊರಗಡೆಯಿಂದಲೇ ದರ್ಶನ ಪಡೆಯುತ್ತಿದ್ದಾರೆ. ಆವರಣದ ಸುತ್ತಲೂ ಮಳೆ ನೀರು ಆವರಿಸಿದ್ದು, ವ್ಯಾಪಾರಕ್ಕೆ ಹಾಕಲಾಗಿದ್ದ ಟೆಮಟ್‌ಗಳು ಕೊಚ್ಚಿಕೊಂಡು ಹೋಗಿವೆ.
ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್
ಕರಾವಳಿಯಲ್ಲಿ ಸಾಧಾರಣ ಮಳೆ ಸುರಿದಿದ್ದು, ಅಕ್ಟೋಬರ್ 17,18 ರಂದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಮೀನುಗಾರರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿಯ ಮಾಣಿ, ಕಲ್ಲಡ್ಕ, ಬಿಸಿ ರೋಡ್-ಗುರುವಾಯ ನಕೆರೆ ಹೆದ್ದಾರಿಯ ಕಾಮಗಾರಿ ಸ್ಥಳಗಳಲ್ಲಿ ಹೊಂಡ, ಗುಂಡಿ ಕಾಣಿಸಿದ್ದು ವಾಹನ ಸಂಚಾರ ದುಸ್ತರವಾಗಿದೆ.












Click it and Unblock the Notifications