Arecanut Health: ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತಾ?
ರಾಜ್ಯದಲ್ಲಿ ಅಡಿಕೆ ಬೆಳೆಗಾರರಿಗೆ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇದೆ. ಒಂದು ಕಡೆ ಅತಿವೃಷ್ಠಿಯಿಂದ ಅಡಿಕೆಗೆ ಹೊಸ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿದ್ದರೆ ಮತ್ತೊಂದು ಕಡೆ ಅಡಿಕೆ ಬೆಲೆ ಕುಸಿತ ಬೆಳೆಗಾರರನ್ನು ನಷ್ಟದ ಸುಳಿಗೆ ದೂಡಿದೆ. ಈ ಬೆನ್ನಲ್ಲೇ ಭೂತಾನ್‌ನಿಂದ ಅಡಿಕೆ ಕಳ್ಳ ಸಾಗಾಣೆ, ಅಡಿಕೆ ಆಮದಿಗೆ ಕೇಂದ್ರ ಸರ್ಕಾರ ಅನುಮತಿ ಕೂಡ ಅಡಿಕೆ ಬೆಳೆಗಾರರಿಗೆ ಮತ್ತಷ್ಟು ಆತಂಕ ತಂದಿದೆ.
ಈ ಬೆನ್ನಲ್ಲೇ ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತೆ ಎನ್ನುವ ವದಂತಿಗಳು ಕೂಡ ಹರಡುತ್ತಿದ್ದು ಅಡಿಕೆ ಬೆಳೆಗಾರರಿಗೆ ಹೊಸ ಆತಂಕ ಶುರುವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಅಡಿಕೆ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂದಿತ್ತು. ಖಾಸಗಿ ಲ್ಯಾಬ್‌ಗಳಲ್ಲಿ ಮಾಡಿದ ಪರೀಕ್ಷೆಯಲ್ಲಿ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ ಎಂದು ವರದಿಗಳು ಬಂದಿದ್ದವು.

ಆದರೆ ಈ ಲ್ಯಾಬ್‌ಗಳು ಸರ್ಕಾರಿ ಸ್ವಾಮ್ಯಕ್ಕೆ ಸೇರಿದ್ದಲ್ಲದ ಕಾರಣ, ವರದಿಗಳ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆಗಳು ಉಂಟಾಗಿದ್ದವು. ಇತ್ತೀಚೆಗೆ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಾಗರಕ್ಕೆ ಆಗಮಿಸಿದ್ದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಈ ವಿಚಾರವನ್ನು ಪ್ರಸ್ತಾಪಿಸಿದರು.
ಅಡಿಕೆ ಸೇವನೆಯಿಂದ ಕ್ಯಾನ್ಸರ್ ಬರುತ್ತಾ?
ಸಮಾವೇಶದಲ್ಲಿ ಮಾತನಾಡಿದ ಅವರು, ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಆಲಿಸಿದ್ದು ಸರಿ ಪಡಿಸಲು ಕೆಲಸ ಮಾಡುವುದಾಗಿ ತಿಳಿಸಿದರು. ಅಡಿಕೆಗೆ ಬರುತ್ತಿರುವ ರೋಗಗಳನ್ನು ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳಲು ತಂಡವನ್ನು ರಚಿಸುವುದಾಗಿ ಕೂಡ ಭರವಸೆ ನೀಡಿದರು.
ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ವದಂತಿಗಳನ್ನು ಹರಡಲಾಗಿದೆ. ಆದರೆ ಅಡಿಕೆಯನ್ನು ಪೂರ್ವಜನರ ಕಾಲದಿಂದಲೂ ಬಳಕೆ ಮಾಡುತ್ತಿದ್ದೇವೆ. ಪೂಜೆಗೂ ಅಡಿಕೆಯನ್ನು ಬಳಕೆ ಮಾಡುತ್ತೇವೆ. ಅಡಿಕೆ ತಿಂದರೆ ಕ್ಯಾನ್ಸರ್ ಬರಲ್ಲ, ಈ ಬಗ್ಗೆ ಸಂಶೋಧನೆ ನಡೆಸಿ ಸರ್ಕಾರವೇ ಮಾಹಿತಿ ನೀಡಲಿದೆ ಎಂದು ಹೇಳಿದರು.
ಕ್ಯಾನ್ಸರ್ ಬರಲ್ಲ ಎಂದ ನಿಟ್ಟೆ ವಿಶ್ವವಿದ್ಯಾನಿಲಯ
ಮೂರು ವರ್ಷಗಳ ಹಿಂದೆ ಅಡಿಕೆಯಿಂದ ಕ್ಯಾನ್ಸರ್ ಬರುತ್ತದೆಯಾ ಎನ್ನುವ ವಿಚಾರದ ಬಗ್ಗೆ ಸಂಶೋಧನೆ ನಡೆಸಲು ಕ್ಯಾಂಪ್ಕೋ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ನಿಟ್ಟೆ ವಿಶ್ವವಿದ್ಯಾನಿಯಲಗಳು ಒಪ್ಪಂದ ಮಾಡಿಕೊಂಡಿದ್ದವು.
ಅಡಿಕೆ ಸೇವನೆಯಿಂದ ಆಗುವ ದುಷ್ಪರಿಣಾಮಗಳು, ಅಡಿಕೆಯ ಸಾರದಿಂದ ಕ್ಯಾನ್ಸರ್ ಕಣಗಳ ಮೇಲೆ ಪರಿಣಾಮ ಸೇರಿದಂತೆ ಹಲವು ವಿಚಾರಗಳ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಸಲು ತೀರ್ಮಾನಿಸಿತ್ತು. ಈಗ ಮೂರು ವಿಭಾಗಗಳ ಸಂಶೋಧನೆ ಮುಗಿದಿದ್ದು ಸಂಶೋಧನಾ ವರದಿಯನ್ನು ಪ್ರಕಟಿಸಲು ನಿರ್ಧರಿಸಿದೆ.
ನಿಟ್ಟೆ ವಿಶ್ವ ವಿದ್ಯಾನಿಲಯದ ವಿಜ್ಞಾನಿ ಪ್ರೊ. ಇಡ್ಯಾ ಕರುಣಾ ಸಾಗರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಡಿಕೆ ಕ್ಯಾನ್ಸರ್ ಕಣಗಳನ್ನು ಪ್ರತಿಬಂಧಿಸುತ್ತದೆ, ಅಡಿಕೆಯಿಂದ ಕ್ಯಾನ್ಸರ್ ಬರುತ್ತದೆ ಎನ್ನುವುದು ಸಂಶೋಧನೆಯಲ್ಲಿ ದೃಢವಾಗಿಲ್ಲ. ಅಡಿಕೆ ಬಳಕೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಸಂಶೋಧನೆ ಅಡಿಕೆ ಬೆಳೆಗಾರರಿಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದು, ಸರ್ಕಾರ ಕೂಡ ಅಧಿಕೃವಾಗಿ ಸಂಶೋಧನೆ ನಡೆಸಿ ಯಾವುದೇ ಹಾನಿಯಿಲ್ಲ ಎಂದು ವರದಿ ಕೊಟ್ಟರೆ ಮತ್ತಷ್ಟು ಗೊಂದಲಗಳು ಬಗೆಹರಿಯಲಿವೆ.












Click it and Unblock the Notifications