ಬಿಸಿಲಿನ ಧಗೆಗೆ ಸಾಯುತ್ತಿವೆ ಕಾಫಿ ಗಿಡಗಳು, ಮುಗಿಲಿನತ್ತ ಮುಖ ಮಾಡಿದ ಕೊಡಗಿನ ಅನ್ನದಾತ
ಮಡಿಕೇರಿ, ಏಪ್ರಿಲ್, 25: ಇದುವರೆಗೆ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗುತ್ತಿತ್ತು. ಆದರೆ ಈ ಬಾರಿ ಅನಾವೃಷ್ಟಿ ಕಾಡಿದ್ದು, ಪರಿಣಾಮ ಬೇಸಿಗೆಯ ಬಿರುಬಿಸಿಲಿಗೆ ಸಿಲುಕಿ ಕಾಫಿ, ಏಲಕ್ಕಿ, ಕರಿಮೆಣಸು ಗಿಡಗಳು ಒಣಗುತ್ತಿವೆ. ಶೀಘ್ರವೇ ಮಳೆ ಬಾರದೆ ಹೋದರೆ ಇಲ್ಲಿನ ರೈತನ ಬದುಕು ಮೂರಾಬಟ್ಟೆ ಆಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ.
ಇಷ್ಟರಲ್ಲೇ ಕೊಡಗಿನಲ್ಲಿ ಮಳೆ ಸುರಿಯಬೇಕಾಗಿತ್ತು. ಆದರೆ ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆ ಬಾರದ ಕಾರಣದಿಂದಾಗಿ ಜಲಮೂಲಗಳು ಬತ್ತಿಹೋಗುತ್ತಿದ್ದು, ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಕೊಡಗಿನಲ್ಲಿ ಜನರು ನದಿ, ಬಾವಿ, ಬೋರ್ ವೆಲ್ ಸೇರಿದಂತೆ ಜಲ ಮೂಲಗಳನ್ನು ನೀರಿಗಾಗಿ ಆಶ್ರಯಿಸಿದ್ದಾರೆ. ಫೆಬ್ರವರಿ, ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಆಗಾಗ್ಗೆ ಮಳೆ ಸುರಿಯುತ್ತಿದ್ದರಿಂದ ಜಲಮೂಲಗಳು ಚೇತರಿಕೆ ಕಾಣುತ್ತಿದ್ದವು. ಆದರೆ ಈ ಬಾರಿ ಅಲ್ಲಲ್ಲಿ ತುಂತುರು ಮಳೆ ಬಿದ್ದಿದೆ ಅಷ್ಟೇ.

ಮಡಿಕೇರಿ ನಗರಕ್ಕೆ ನೀರು ಸರಬರಾಜು ಮಾಡುವ ಗಾಳಿಬೀಡಿನ ಕೂಟುಹೊಳೆಯಲ್ಲಿ ನೀರು ದಿನದಿಂದ ದಿನಕ್ಕೆ ಬತ್ತುತ್ತಿದೆ. ಮಳೆಗಾಲದಲ್ಲಿ ಭಾರಿ ಮಳೆಯ ಕಾರಣ ನೀರು ಸಂಗ್ರಹಾಗಾರ, ಕೆರೆ ಕಟ್ಟೆಗಳಲ್ಲಿ ಹೂಳು ತುಂಬಿದ್ದು, ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಇದರಿಂದಾಗಿ ಬೇಸಿಗೆಯಲ್ಲಿ ನೀರಿಗೆ ತೊಂದರೆ ಅನುಭವಿಸುವಂತಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಬೇಸಿಗೆಯಲ್ಲಿ ಹೆಚ್ಚಿನ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಈ ಬಾರಿ ಜಿಲ್ಲೆಯ ಜನ ನೀರಿನ ಸಮಸ್ಯೆಯನ್ನು ಎದುರಿಸುವಂತಾಗಿದೆ.
ಬಿಸಿಲಿಗೆ ಸಾಯುತ್ತಿರುವ ಕಾಫಿಗಿಡಗಳು
ಒಂದೆಡೆ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದರೆ, ಮತ್ತೊಂದೆಡೆ ಬಿಸಿಲಿನ ತಾಪಕ್ಕೆ ಕಾಫಿ ತೋಟದಲ್ಲಿದ್ದ ಕಾಫಿ ಗಿಡಗಳು ಒಣಗುತ್ತಿವೆ. ಅದರಲ್ಲೂ ನೇರವಾಗಿ ಬಿಸಿಲು ಬೀಳುವ ಪ್ರದೇಶಗಳಲ್ಲಿ ನಿರ್ಮಾಣ ಮಾಡಿದ್ದ ತೋಟಗಳ ಮಾಲೀಕರು ಕಷ್ಟಪಟ್ಟು ಬೆಳೆಸಿದ್ದ ಕಾಫಿ ಗಿಡಗಳು ಒಣಗಿಹೋಗುತ್ತಿರುವುದನ್ನು ನೋಡಿ ಕಣ್ಣೀರು ಸುರಿಸುವಂತಾಗಿದೆ. ಇಡೀ ತೋಟದಲ್ಲಿ ಒಂದು ಗಿಡ ಸತ್ತರೂ ಬೆಳೆಗಾರರು ಪರಿತಪಿಸಬೇಕಾಗುತ್ತದೆ.
ಏಕೆಂದರೆ ಒಂದು ಕಾಫಿ ಗಿಡವನ್ನು ನೆಟ್ಟು ಅದು ಫಸಲು ಬಿಡಬೇಕಾದರೆ ಕನಿಷ್ಟ ಮೂರು ವರ್ಷ ಕಾಯಬೇಕಾಗುತ್ತದೆ. ಅಲ್ಲಿ ತನಕ ಅದಕ್ಕೆ ಗೊಬ್ಬರ ಹಾಕಿ ಆರೈಕೆ ಮಾಡುವುದು ಸುಲಭದ ಕೆಲಸವಲ್ಲ. ಒಮ್ಮೆ ನೆಟ್ಟ ರೊಬಸ್ಟಾ ಗಿಡಗಳು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋಗುತ್ತದೆ.
ಅದರ ಚಿಗುರು ತೆಗೆದು, ಬೇಕಾದ ರೆಂಬೆಗಳನ್ನು ಉಳಿಸಿ ಉಳಿದವುಗಳನ್ನು ತೆಗೆದು, ತೋಟದೊಳಗೆ ಬೆಳೆಯುವ ಕಳೆಗಿಡಗಳನ್ನು ಕಡಿದು, ಗೊಬ್ಬರ ಹಾಕಿ ನಿರ್ವಹಣೆ ಮಾಡಬೇಕಾಗುತ್ತದೆ. ಹೀಗಿರುವಾಗ ಇದೀಗ ದಶಕಗಳ ಕಾಲ ಬೆಳೆಸಿದ ಗಿಡಗಳು ಸತ್ತು ಹೋದರೆ ಅದರ ನಷ್ಟ ತುಂಬುವುದು ಸುಲಭಲ್ಲ.

ಕಣ್ಣೀರು ಹಾಕುತ್ತಿರುವ ಕಾಫಿ ಬೆಳೆಗಾರ
ಕಳೆದ ಭಾರಿ ಮಳೆಯ ಕಾರಣ ಪ್ರವಾಹ ಬಂದು ನೀರು ಕಾಫಿತೋಟಗಳಿಗೆ ನುಗ್ಗಿದ ಪರಿಣಾಮ ನದಿ ತಟದ ಕಾಫಿ ಮತ್ತು ಅಡಿಕೆ ಗಿಡಗಳು ನಾಶವಾಗಿದ್ದವು. ಇದೀಗ ಬೇಸಿಗೆಯಲ್ಲಿ ಮಳೆ ಬಾರದ್ದರಿಂದ ಕಾಫಿ ಗಿಡಗಳು ಒಣಗಿ ಸಾಯುತ್ತಿವೆ. ಇವುಗಳಿಗೆ ನೀರು ಹಾಯಿಸಿ ಬದುಕಿಸಿಕೊಳ್ಳುವಂತೆಯೂ ಇಲ್ಲ. ಮಳೆ ಬಂದರೆ ಮಾತ್ರ ಗಿಡಗಳು ಬದುಕಿ ಉಳಿಯಲು ಸಾಧ್ಯವಾಗಲಿದೆ.
ಹಾಗೆ ನೋಡಿದರೆ ಈ ವೇಳೆಗೆ ಮಳೆ ಬಂದು ಭೂಮಿ ತಂಪಾಗುತ್ತಿತ್ತು. ಆದರೆ ಈ ಬಾರಿ ಏಪ್ರಿಲ್ ತಿಂಗಳು ಮುಗಿಯುತ್ತಾ ಬಂದರೂ ಮಳೆಯ ಸುಳಿವೇ ಇಲ್ಲದಂತಾಗಿದೆ. ಜಿಲ್ಲೆಯ ಕೆಲವೆಡೆ ಮಳೆ ಸುರಿದಿದೆ. ಆದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಮಡಿಕೇರಿ ತಾಲೂಕಿಗಿಂತ ವೀರಾಜಪೇಟೆ, ಸೋಮವಾರಪೇಟೆ, ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಬಿಸಿಲಿನ ಪ್ರಖರತೆ ಜಾಸ್ತಿಯಿದ್ದು, ಇದರಿಂದ ಕಾಫಿಗಿಡಗಳು ಸಾವನ್ನಪ್ಪಿವೆ.
ಬಿಸಿಲಿನ ಧಗೆಗೆ ಏಲಕ್ಕಿ ಗಿಡಗಳು ನಾಶ
ಜಿಲ್ಲೆಯ ಕಾಫಿ ತೋಟಗಳಲ್ಲಿ ಕಾಫಿ ಗಿಡಗಳು ಒಣಗಿ ನಿಂತ ದೃಶ್ಯಗಳು ಕಾಣಿಸುತ್ತಿವೆ. ಸೋಮವಾರಪೇಟೆ ವ್ಯಾಪ್ತಿಯ ಶಾಂತಳ್ಳಿ, ಕುಂದಳ್ಳಿ ಸೇರಿದಂತೆ ಈ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಸುರಿಯುವ ಕಾರಣ ಇವತ್ತಿಗೂ ಕೆಲವರು ಏಲಕ್ಕಿಯನ್ನು ಬೆಳೆಯುತ್ತಿದ್ದಾರೆ. ಈ ಗಿಡಗಳು ಮಳೆಯನ್ನು ತಡೆದುಕೊಳ್ಳುತ್ತವೆಯಾದರೂ ಬಿಸಿಲನ್ನು ಸಹಿಸುವುದಿಲ್ಲ. ಆದರೆ ಈ ಬಾರಿಯ ಬಿಸಿಲಿಗೆ ಗಿಡಗಳು ಸಂಪೂರ್ಣವಾಗಿ ನೆಲಕಚ್ಚಿವೆ.
ಹಿಂದೆ ಕೊಡಗಿನಲ್ಲಿ ಏಲಕ್ಕಿ ಯಥೇಚ್ಛವಾಗಿ ಬೆಳೆಯುತ್ತಿತ್ತಾದರೂ ಮಳೆ ಕಡಿಮೆಯಾದ ಪರಿಣಾಮ ಮತ್ತು ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಗಿಡಗಳು ಸಾಯಲಾರಂಭಿಸಿದವು. ಜೊತೆಗೆ ಏಲಕ್ಕಿಗೆ ತಗಲುತ್ತಿದ್ದ ರೋಗದಿಂದ ಕಾಪಾಡುವುದು ಕಷ್ಟವಾಗುತ್ತಿತ್ತು. ಹಾಗಾಗಿ ಬಹುತೇಕ ಬೆಳೆಗಾರರು ಏಲಕ್ಕಿ ಬದಲಿಗೆ ಕಾಫಿ ಬೆಳೆಯಲು ಆರಂಭಿಸಿದರು. ಆದರೆ ಕೊಡಗಿನ ತಲಕಾವೇರಿ ಮತ್ತು ಶಾಂತಳ್ಳಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿಯುವ ಕಾರಣ ಅಲ್ಲಿ ಕಾಫಿ ಬೆಳೆದು ಫಸಲು ಪಡೆಯುವುದು ಕಷ್ಟವಾಗಿದೆ.
ಹೀಗಾಗಿ ಅಲ್ಲಿನ ವಾತಾವರಣಕ್ಕೆ ಏಲಕ್ಕಿ ಹೊಂದಿಕೆ ಆಗುತ್ತಿದ್ದು ಅದನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಆದರೆ ಈ ಬಾರಿಯ ಬಿಸಿಲು ಅದನ್ನು ನಾಶ ಮಾಡಿದೆ.
ಮುಗಿಲತ್ತ ಮುಖ ಮಾಡಿದ ಅನ್ನದಾತ
ಇನ್ನು ದಕ್ಷಿಣ ಕೊಡಗಿನ ಕಾಫಿ ಬೆಳೆಯುವ ಪ್ರದೇಶಗಳಾದ ಶ್ರೀ ಮಂಗಲ, ಪೂಕೋಳ, ಪರಕಟಗೇರಿ, ನೆಮ್ಮಲೆ, ಕುರ್ಚಿ, ಬೀರುಗ, ಟಿ.ಶೆಟ್ಟಿಗೇರಿ, ಹರಿಹರ ಬಾಡಗರಗೇರಿ, ತೆರಾಲು, ಬಿರುನಾಣಿ, ನಾಲ್ಕೇರಿ, ಮಂಚಳ್ಳಿ ಪೂಜೆಕಲ್, ಕುಟ್ಟ, ಹೈಸೊಡ್ಲೂರು, ಬೆಳ್ಳೂರು, ಕುಮಟೂರು ಮೊದಲಾದ ಪ್ರದೇಶಗಳಲ್ಲಿ ಕಾಫಿ ಗಿಡಗಳು ಒಣಗಿ ನಿಂತಿವೆ.
ಇದೇ ರೀತಿ ಬಿಸಿಲು ಮುಂದುವರೆದರೆ ಕೊಡಗಿನ ತೋಟದ ಮಾಲೀಕರು ಕಾಫಿ ಗಿಡಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಲಿದೆ. ವರುಣ ಕೃಪೆ ತೋರಿದರಷ್ಟೇ ಕೊಡಗಿನ ಜನ ನೆಮ್ಮದಿಯುಸಿರು ಬಿಡಲು ಸಾಧ್ಯವಾಗಲಿದೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications