"ಇಡೀ ದೇಶಕ್ಕೆ ಅನ್ನ ನೀಡುವ ರೈತರನ್ನೇ ಉಪವಾಸಗೆಡವಿದ್ದೀರಲ್ಲಾ..."
ನವದೆಹಲಿ, ಡಿಸೆಂಬರ್ 23: ದೆಹಲಿಯಲ್ಲಿ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ರೈತರ ದಿನವಾದ ಬುಧವಾರ, ದೆಹಲಿ ಗಡಿ ಪ್ರದೇಶ ಸಿಂಘುವಿನಲ್ಲಿ ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿ, "ಈ ಹೋರಾಟದಲ್ಲಿ ತೃಣಮೂಲ ಕಾಂಗ್ರೆಸ್ ನಿಮ್ಮ ಪರವಾಗಿ ನಿಲ್ಲಲಿದೆ" ಎಂದು ಬೆಂಬಲಿಸಿದ್ದಾರೆ.
ಹೋರಾಟನಿರತ ರೈತರ ಬಳಿ ಬುಧವಾರ ದೂರವಾಣಿ ಮೂಲಕ ಮಾತನಾಡಿರುವ ಮಮತಾ ಬ್ಯಾನರ್ಜಿ ರೈತರಿಗೆ ಆಶ್ವಾಸನೆ ನೀಡಿದ್ದಾರೆ. ತೃಣಮೂಲ ಕಾಂಗ್ರೆಸ್ ನ ಐದು ಸಂಸದರು ಸಿಂಘು ಗಡಿಯಲ್ಲಿನ ರೈತರನ್ನು ಭೇಟಿಯಾಗಿ ಮಾತನಾಡಿದ್ದಾರೆ. ಮಮತಾ ಬ್ಯಾನರ್ಜಿ ನಿರ್ದೇಶನದಂತೆ, ತೃಣಮೂಲ ಕಾಂಗ್ರೆಸ್ ಪರವಾಗಿ ಡೆರೆಕ್ ಓಬ್ರಿಯಾನ್, ಸತಾಬ್ದಿ ರಾಯ್, ಪ್ರಸೂನ್ ಬ್ಯಾನರ್ಜಿ, ಪ್ರತಿಮಾ ಮೊಂಡಲ್ ಹಾಗೂ ಮೊಹಮದ್ ನದಿಮುಲ್ ಹಾಕ್ ಅವರನ್ನೊಳಗೊಂಡ ಐದು ಜನರ ತಂಡ ಉಪವಾಸ ಧರಣಿ ಕೈಗೊಂಡಿರುವ ರೈತರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ.
ಸಿಎಂ ಮಮತಾ ಬ್ಯಾನರ್ಜಿ ಅವರೊಂದಿಗೆ ರೈತರ ತಂಡವೊಂದು ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಈ ಹೋರಾಟಕ್ಕೆ ಮಮತಾ ಬ್ಯಾನರ್ಜಿ ಬೆಂಬಲ ಸೂಚಿಸಿರುವುದಾಗಿ ತಿಳಿಸಿದ್ದಾರೆ. "ಈ ಕಾಯ್ದೆಗಳ ರದ್ದತಿ ಕುರಿತ ಬೇಡಿಕೆಯನ್ನು ತೃಣಮೂಲ ಕಾಂಗ್ರೆಸ್ ಬೆಂಬಲಿಸಿದೆ. ಇಡೀ ದೇಶಕ್ಕೆ ಅನ್ನ ನೀಡುತ್ತಿರುವ ರೈತರನ್ನೇ ಪ್ರತಿಭಟನೆಯಲ್ಲಿ ಉಪವಾಸ ಇರಿಸಿರುವುದು ದುರದೃಷ್ಟಕರ. ಎಂದಿಗೂ ನಿಮ್ಮ ಜೊತೆ ಇರುತ್ತೇವೆ" ಎಂಬ ಭರವಸೆ ನೀಡಿರುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.

ಇದೇ ಸಂದರ್ಭ, ಧರಣಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಬೇಕೆಂದು ರೈತರು ಮನವಿ ಮಾಡಿರುವುದಾಗಿ ತಿಳಿದುಬಂದಿದೆ.












Click it and Unblock the Notifications