ಹಿಪ್ಪುನೇರಳೆ ತೋಟಕ್ಕೆ ಅಧಿಕಾರಿಗಳ ಭೇಟಿ; ರೇಷ್ಮೆ ಬೆಳೆಗಾರರಿಗೆ ಸಲಹೆ
ಕೊಪ್ಪಳ, ಡಿಸೆಂಬರ್ 11; ಪ್ರಸಕ್ತ ವರ್ಷ ಮಳೆ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ವಿವಿಧ ಬೆಳೆಗಳಲ್ಲಿ ಹಲವು ರೋಗಬಾಧೆ ಕಾಣಿಸಿಕೊಂಡಿದೆ. ಇದೇ ಮಾದರಿಯಲ್ಲಿ ರೇಷ್ಮೆ ಹುಳುಗಳು ಜೀವಿತಾವಧಿ ವಿಸ್ತರಣೆಗೊಂಡು ಗೂಡು ಕಟ್ಟದೆ ಸಾಯುತ್ತಿರುವುದನ್ನು ಗಮನಿಸಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಪ್ರಸ್ತುತ ರೇಷ್ಮೆ ಹುಳುಗಳು ಜೀವಿತಾವಧಿಯನ್ನು ಹೆಚ್ಚಿಸಿಕೊಂಡು ಗೂಡು ಕಟ್ಟದೇ ಸಾಯುತ್ತಿರುವುದನ್ನು ಇಲಾಖಾ ಅಧಿಕಾರಿಗಳು/ ಸಿಬ್ಬಂದಿ ರೇಷ್ಮೆ ಗುರುತಿಸಿದ್ದಾರೆ. ಅಲ್ಲದೇ ಬೆಳೆಗಾರರ ಹಿಪ್ಪುನೇರಳೆ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕ್ರಿಮಿನಾಶಕ ಬಳಕೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಮಳೆ ಕೊರತೆ, ಬಿಸಿಲಿನ ಪ್ರಮಾಣ ಏರಿಳಿತವಾದ ಕಾರಣ ರೇಷ್ಮೆ ಹುಳುಗಳ ಮೇಲೆ ಪರಿಣಾಮ ಬೀರುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಹಿಪ್ಪುನೇರಳೆ ತೋಟದ ಅಕ್ಕಪಕ್ಕದ ಹೊಲಗಳಲ್ಲಿನ ಬೇರೆ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಅಥವಾ ಗೊಬ್ಬರ/ ಪೋಷಕಾಂಶಗಳ ಕಣಗಳು ಗಾಳಿಯಲ್ಲಿ ತೇಲಾಡುತ್ತಾ, ಹಿಪ್ಪುನೇರಳೆ ಬೆಳೆ ಮೇಲೆ ಕುಳಿತು, ಇದನ್ನು ರೇಷ್ಮೆ ಹುಳುಗಳು ತಿನ್ನುವುದರಿಂದ ಹುಳುಗಳ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತಿರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ.
ರೈತರಿಗೆ ಸಲಹೆಗಳು; ಈ ಸಮಸ್ಯೆಯು ಕಲ್ಯಾಣ ಕರ್ನಾಟಕ ಭಾಗದ ಇತರೆ ಜಿಲ್ಲೆಗಳಲ್ಲಿಯೂ ಅಧಿಕವಾಗಿ ಕಾಣಿಸಿಕೊಂಡಿದೆ. ರಾಜ್ಯದ ರೇಷ್ಮೆ ಸಂಶೋಧನಾ ಅಭಿವೃದ್ಧಿ ಸಂಸ್ಥೆ, ಕೇಂದ್ರ ರೇಷ್ಮೆ ಸಂಸ್ಥೆಗಳ ವಿಜ್ಞಾನಿಗಳ ತಂಡಗಳು ಬೇರೆ ಬೇರೆ ತೋಟಗಳಿಗೆ ಭೇಟಿ ನೀಡಿ ಹುಳುಗಳ ಜೀವಿತಾವಧಿ ವಿಸ್ತರಣೆಗೊಂಡು ಗೂಡು ಕಟ್ಟದೇ ಸಾಯುತ್ತಿರುವ ಕುರಿತು ಅಧ್ಯಯನ ನಡೆಸಿವೆ.
ಹಿಪ್ಪುನೇರಳೆಯಲ್ಲಿ ಪೌಷ್ಠಿಕಾಂಶ ಕೊರತೆ, ಕೀಟಗಳ ನಿರ್ವಹಣೆ, ಜೈವಿಕ ನಿಯಂತ್ರಣಗಳು, ಎಲೆ ಶಿಲೀಂಧ್ರ ರೋಗ, ದುಂಡಾಣು ರೋಗ, ಬೇರು ಕೊಳೆ ರೋಗ, ಮಣ್ಣಿನಿಂದ ಹರಡುವ ರೋಗಗಳ ನಿಯಂತ್ರಣ, ಹಿಪ್ಪುನೇರಳೆ ಕೀಟಗಳ ನಿರ್ವಹಣೆ, ಹಿಪ್ಪುನೇರಳೆ ರೋಗಗಳ ನಿರ್ವಹಣೆ, ರೇಷ್ಮೆ ಹುಳು ಸಾಕಾಣಿಕೆ ಮನೆ/ ಶೆಡ್/ ಹಾಸಿಗೆ ಸೋಂಕು ನಿವಾರಕಗಳ ಬಳಕೆ ಕುರಿತು ಸಿ.ಎಸ್.ಆರ್.ಟಿ.ಐ., ಕೆ.ಎಸ್.ಎಸ್.ಆರ್.ಡಿ.ಐ., ಮತ್ತು ಎ.ಪಿ.ಎಸ್.ಎಸ್.ಆರ್.ಡಿ.ಐ. ಇಲಾಖೆಗಳಿಂದ ಶಿಫಾರಸ್ಸು ಮಾಡಿದ ಸೋಂಕು ನಿವಾರಕ, ಸಸ್ಯ ಸಂವರ್ಧಕ ಹಾಗೂ ಹಾಸಿಗೆ ಸೋಂಕು ನಿವಾರಕಗಳನ್ನೇ ಮಾತ್ರ ರೇಷ್ಮೆ ಬೆಳೆಗಾರರು ಬಳಸಬೇಕು ಎಂದು ಕರೆ ನೀಡಲಾಗಿದೆ.
ಮಾರುಕಟ್ಟೆಗಳಲ್ಲಿ ಸಿಗುವ ಇತರೆ ಯಾವುದೇ ನಕಲಿ ಉತ್ಪನ್ನಗಳನ್ನು ಬಳಸಬಾರದು ಎಂದು ಮನವಿ ಮಾಡಲಾಗಿದೆ. ರೇಷ್ಮೆ ಹುಳುಗಳು ಗೂಡು ಕಟ್ಟುತ್ತಿಲ್ಲದ ಕುರಿತು/ ಇತರೆ ಸಮಸ್ಯೆಗಳ ಕುರಿತು ಹೆಚ್ಚಿನ ಮಾಹಿತಿ ಸಲಹೆ ಸೂಚನೆಗಳನ್ನು ಹತ್ತಿರದ ರೇಷ್ಮೆ ಇಲಾಖೆಯ ಕಾರ್ಯಾಲಯಕ್ಕೆ ಭೇಟಿ ನೀಡಿ ಅಥವಾ ಇಲಾಖೆಯ ಅಧಿಕಾರಿಗಳು/ ಸಿಬ್ಬಂದಿಗಳನ್ನು ಸಂಪರ್ಕಿಸಿ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.












Click it and Unblock the Notifications