Chikkaballapur: ಭತ್ತದ ಕೊಯ್ಲು ಪ್ರಾರಂಭ: ಕೂಲಿ ಆಳುಗಳ ಕೊರತೆ- ಯಂತ್ರದ ಬಾಡಿಗೆ ಕೇಳಿ ರೈತ ಕಂಗಾಲು!
ಚಿಕ್ಕಬಳ್ಳಾಪುರ ನವೆಂಬರ್ 30: ಕಳೆದ ಹಲವು ದಿನಗಳಿಂದ ಮೋಡ ಮಿಶ್ರಿತ ಶೀತಗಾಳಿ ಬೀಸುತ್ತಿದಂತೆಯೇ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಆಳುಗಳ ಕೊರತೆ ಉಂಟಾಗಿದೆ. ಮಳೆ ಬರುವ ಭೀತಿಯಲ್ಲಿ ತ್ವರಿತವಾಗಿ ಭತ್ತದ ಬೆಳೆ ಕಟಾವು ಮಾಡಿ ಕಾಳು ಸಂರಕ್ಷಣೆ ಮಾಡಲು ಮುಂದಾಗಿರುವ ರೈತರು ಆಳುಗಳನ್ನು ನೆಚ್ಚಿ ಕೂರದೇ ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಇದರ ಪರಿಣಾಮ ಯಂತ್ರಗಳಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ.
ತಾಲೂಕಿನ ಎಲ್ಲೆಡೆ ಭತ್ತದ ಬೆಳೆಯ ಕಟಾವು ಆರಂಭವಾಗಿದ್ದು, ಕಟಾವು ಮಾಡಲು ಕೂಲಿ ಕಾರ್ಮಿಕರ ಸಮಸ್ಯೆ ಉದ್ಭವಿಸಿದೆ. ಕೂಲಿ ದರವೂ ಹೆಚ್ಚಾಗಿದ್ದು ರೈತರು ಆತಂಕ ಪಡುವಂತಾಗಿದೆ. ಮತ್ತೊಂದೆಡೆ ಮೋಡ ಮುಸುಕಿದ ವಾತಾವರಣದಿಂದ ಮಳೆ ಬರುವ ಆತಂಕ ನಿರ್ಮಾಣವಾಗಿದ್ದು, ಸಂಪೂರ್ಣ ಒಣಗದ ಭತ್ತದ ಬೆಳೆಯನ್ನು ಕಟಾವು ಮಾಡಲು ರೈತರು ಮುಂದಾಗಿದ್ದಾರೆ.

ಆಧುನಿಕ ಯಂತ್ರದಿಂದ ಕಟಾವಿಗೆ ತಗಲುತ್ತಿದ್ದ ವೆಚ್ಚದಲ್ಲಿ ಅಧರ್ದಷ್ಟು ಹಣ, ಸಮಯ ಎರಡೂ ಉಳಿತಾಯವಾಗುತ್ತಿದೆ. ಜತೆಗೆ ಕಾರ್ಮಿಕರ ಮರ್ಜಿ ಕಾಯುವ ಪ್ರಮೇಯವೂ ತಪ್ಪುತ್ತಿದೆ. ಕಟಾವಾದ ಭತ್ತವನ್ನು 10 ರಿಂದ 12 ಕ್ವಿಂಟಲ್‌ವರೆಗೆ ತನ್ನೊಳಗೆಯೇ ಶೇಖರಿಸಿಟ್ಟು ಕೊಳ್ಳುತ್ತಿರುವ ಯಂತ್ರಗಳು ಒಮ್ಮೆಲೇ ಭತ್ತವನ್ನು ಹೊರಹಾಕುತ್ತವೆ. ಇದರಿಂದಾಗಿ ಕಟಾವಾದ ಕೆಲವೇ ಗಂಟೆಗಳಲ್ಲಿ ಭತ್ತವನ್ನು ಮನೆಗೆ ತೆಗೆದುಕೊಂಡು ಹೋಗಲು ಅನುಕೂಲವಾಗಿದೆ.
ಗಂಟೆಗೆ 4ಸಾವಿರ ಬೇಡಿಕೆ: ಭತ್ತ ಕಟಾವಿಗೆ ಯಂತ್ರದ ಮಾಲೀಕರು ಒಂದು ತಾಸಿಗೆ 4 ಸಾವಿರ ರೂ. ಬಾಡಿಗೆ ನಿಗದಿ ಪಡಿಸಿದ್ದಾರೆ. ಕೂಲಿ ಆಳುಗಳ ಕೊರತೆ ಹಾಗೂ ಹೆಚ್ಚಿನ ಕೂಲಿ ಬೇಡಿಕೆ ಹಿನ್ನಲೆಯಲ್ಲಿ ರೈತರು ಅನಿವಾರ್ಯ ಪರಿಸ್ಥಿತಿಗೆ ಹೊಂದಿಕೊಂಡು 15 ದಿನಗಳ ಮುಂಚಿತವಾಗಿ ಮುಂಗಡವಾಗಿ ಹಣ ನೀಡಿ ತಮ್ಮ ಬೆಳೆ ಕಟಾವು ಮಾಡುವಂತೆ ದುಂಬಾಲು ಬೀಳುವಂತಾಗಿದೆ.

ಸಭೆ ಕರೆಯಲು ಒತ್ತಾಯ:
ಭತ್ತ ಕಟಾವು ಯಂತ್ರಕ್ಕೆ ಬೇಡಿಕೆ ಹೆಚ್ಚಿರುವುದರಿಂದ ತಾಲೂಕಾಡಳಿತ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು, ಖಾಸಗಿ ಯಂತ್ರಗಳ ಮಾಲೀಕರ ಸಭೆ ಕರೆದು ದರ ನಿಗ ಪಡಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ಇದೀಗ ಯಂತ್ರಗಳು ರೈತರಿಗೆ ಅತ್ಯವಶ್ಯವಾಗಿದ್ದು, ತುರ್ತು ಖಾಸಗಿ ಯಂತ್ರಗಳ ಮಾಲೀಕರ ಸಭೆ ಕರೆಯಬೇಕು ಎಂದು ರೈತ ಸಂಘಟನೆ ಮುಖಂಡ ಎಚ್. ಪಿ. ರಮಾನಾಥ್ ಆಗ್ರಹಿಸಿದ್ದಾರೆ.
ಕೆಲವೇ ಗಂಟೆಗಳ ಸುಗ್ಗಿ...!
ಮೊದಲೊಂದು ಕಾಲವಿತ್ತು. ಕಟಾವಿಗೆ, ಬಣವೆ ಒಟ್ಟಲು, ತುಳಿಸಲು ಹೀಗೆ ವಾರಪೂರ್ತಿ ಭತ್ತದ ಕಟಾವಿನಲ್ಲಿ ತೊಡಗುತ್ತಿದ್ದ ರೈತರು ಇವೆಲ್ಲ ಕಾರ್ಯಗಳಿಗೆ ಕಾರ್ಮಿಕರನ್ನು ಹೊಂದಿಸುವಲ್ಲಿ ಹೈರಾಣಾಗುತ್ತಿದ್ದರು. ಕಟಾವಿಗೆ ಇಷ್ಟೇ ಸಂಖ್ಯೆಯ ಕಾರ್ಮಿಕರು ಬಣವೆ ಒಟ್ಟಲು ಮತ್ತು ತುಳಿಸಲು ಬೇಕಿದ್ದರು. ಆದರೆ ಬದಲಾದ ಕಾಲ ಘಟ್ಟದಲ್ಲಿ ಇಂದು ಆಧುನಿಕ ಯಂತ್ರದಿಂದ ಕಟಾವಿಗೆ ತಗಲುತ್ತಿದ್ದ ವೆಚ್ಚದಲ್ಲಿ ಅಧರ್ದಷ್ಟು ಹಣ, ಸಮಯ ಎರಡೂ ಉಳಿತಾಯವಾಗುತ್ತಿದೆ.
ಆಧುನಿಕ ಯಂತ್ರಗಳ ಮೊರೆ ಹೋಗಿರುವುದರಿಂದ ರೈತನಿಗೆ ತಲೆನೋವೆಲ್ಲ ತಪ್ಪಿದ್ದು, ಯಾವುದೇ ಸಮಸ್ಯೆಗಳಿಲ್ಲದೇ ನಿರಾಯಾಸವಾಗಿ ಕಟಾವು ನಡೆಯುತ್ತಿದೆ. ಕಟಾವಿಗೆ ಪೂರ್ವಭಾವಿಯಾಗಿ ಕಣ ಮಾಡುವುದು, ಕಳ್ಳಕಾಕರ ಉಪಟಳದಿಂದ ಚಳಿಗಾಲದ ಈ ಸಮಯದಲ್ಲೂ ಹಗಲಿರುಳೆನ್ನದೇ ಕಣ ಕಾಯುವ ಸಮಸ್ಯೆ ಇದೀಗ ಎದುರಾಗದೇ ಕೃಷಿಯನ್ನು ಸಲೀಸಾಗಿ ಪೂರ್ಣ ಗೊಳಿಸುತ್ತಿರುವದರಿಂದ ರೈತನಿಗೆ ನೆಮ್ಮದಿ ತಂದಿದೆ.
ಕಾರ್ಮಿಕರ ಮರ್ಜಿಗೆ ಕಾಯುವ ಪ್ರಮೇಯವೂ ತಪ್ಪುತ್ತಿದೆ. ಕಟಾವಾದ ಭತ್ತವನ್ನು 10 ರಿಂದ 12 ಕ್ವಿಂಟಲ್‌ವರೆಗೆ ತನ್ನೊಳಗೆಯೇ ಶೇಖರಿಸಿಟ್ಟು ಕೊಳ್ಳುತ್ತಿರುವ ಯಂತ್ರಗಳು ಒಮ್ಮೆಲೇ ಭತ್ತವನ್ನು ಹೊರಹಾಕುತ್ತವೆ. ಇದರಿಂದಾಗಿ ಕಟಾವಾದ ಕೆಲವೇ ಗಂಟೆಗಳಲ್ಲಿ ಭತ್ತವನ್ನು ಮನೆಗೆ ತೆಗೆದುಕೊಂಡು ಹೋಗಲು ಅನುಕೂಲವಾಗಿದೆ.
ಯಂತ್ರಗಳ ಬಳಕೆ ಹೆಚ್ಚು- ಕಳೆದ ಹಲವು ವರ್ಷಗಳ ಹಿಂದೆ ಯಂತ್ರಗಳಿಂದ ಕಟಾವು ಕಾಣದಿರುವ ತಾಲೂಕಿನ ಕೃಷಿ ಭೂಮಿಗಳಲ್ಲಿ ಈಗ ಬಹುತೇಕ ಯಂತ್ರಗಳ ಸದ್ದು ಹೆಚ್ಚಾಗಿದೆ. ಕೂಲಿಕಾರರು ಸಿಗದ ಈ ಸಮಯದಲ್ಲಿ ಕೂಲಿಯಷ್ಟೇ ಹಣ ಪಡೆಯುವ ಯಂತ್ರಗಳನ್ನು ರಾಗಿ ಹಾಗೂ ಭತ್ತದ ಗದ್ದೆಗೆ ಇಳಿಸಿ ಕಟಾವು ಮಾಡುತ್ತಿರುವುದು ಕಂಡು ಬರುತ್ತಿದೆ. ರೈತರಿಗೆ ಹೆಚ್ಚೇನೂ ಕೆಲಸ ಉಳಿಸಿದ ಯಂತ್ರಗಳು ಒಕ್ಕಲು ಮಾಡುವ ತಲೆನೋವನ್ನು ದೂರ ಮಾಡಿದೆ.
ಭತ್ತ ಕಟಾವು ಯಂತ್ರಕ್ಕೆ ಬೇಡಿಕೆ ಹೆಚ್ಚಿರುವುದರಿಂದ ತಾಲೂಕು ಆಡಳಿತ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು, ಖಾಸಗಿ ಯಂತ್ರಗಳ ಮಾಲೀಕರ ಸಭೆ ಕರೆದು ದರ ನಿಗದಿ ಪಡಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ಆಧುನಿಕತೆಯ ಸ್ಪರ್ಶ ಸಿಕ್ಕರೆ ಸಾಕಷ್ಟು ಬದಲಾವಣೆಯನ್ನು ಕಾಣುವ ಜತೆಗೆ ಉಳಿತಾಯ ಸಾಧಿಸ ಬಹುದಾಗಿದೆ ಎಂಬ ಮಾತು ಭತ್ತ ಕಟಾವಿನ ಯಂತ್ರಗಳಿಂದ ಸಾಬೀತಾದಂತಾಗಿದೆ.












Click it and Unblock the Notifications