'ಸೆಲ್ಫಿ ವಿತ್ ಸನ್ ಫ್ಲವರ್': ಗುಂಡ್ಲುಪೇಟೆಯಲ್ಲಿ ಸೂರ್ಯಕಾಂತಿ ಜಮೀನಿಗೆ ಪ್ರವಾಸಿಗರ ಲಗ್ಗೆ
ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸೂರ್ಯಕಾಂತಿ ಫಸಲು ನಳನಳಿಸುತ್ತಿದ್ದು ಹೂವಿನ ಚಂದಕ್ಕೆ ಪ್ರವಾಸಿಗರು ಮಾರು ಹೋಗಿ ಸೆಲ್ಫಿ ಸುರಿಮಳೆ ಸುರಿಸುತ್ತಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹಂಗಳ ಮತ್ತು ಭೀಮನಭೀಡು, ಕಣ್ಣೇಗಾಲ ಹಾದು ಹೋಗುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೇರಳ, ತಮಿಳುನಾಡಿನ ಪ್ರವಾಸಿಗರರ ಸೂರ್ಯಕಾಂತಿ ಜಮೀನಿನಲ್ಲಿ ಸೆಲ್ಫಿಗಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬರುತ್ತಿರುವ ಪ್ರವಾಸಿಗರ ದಂಡು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸೊಂಪಾಗಿ ಬೆಳೆದ ಹೂವನ್ನು ನೋಡಿ ಸೂರ್ಯಕಾಂತಿ ಜಮೀನುಗಳಿಗೆ ಲಗ್ಗೆ ಇಟ್ಟು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಶಿಂಡನಪುರ, ಬೇಗೂರು, ರಾಘವಾಪುರ, ಮಾಡ್ರಹಳ್ಳಿ, ಹಂಗಳ ಗ್ರಾಮಗಳ ರಸ್ತೆಬದಿ ಜಮೀನುಗಳಲ್ಲಿ ಬೆಳೆದಿರುವ ಸೂರ್ಯಕಾಂತಿ ಫಸಲು ನಳನಳಿಸುತ್ತಿದೆ. ಹೀಗಾಗಿ, ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಜಮೀನನ್ನೇ ಕಾಣದ ಸಿಟಿ ಮಕ್ಕಳು ಆಟ ಆಡುತ್ತಾ, ಹೂವು ನೋಡುತ್ತಾ ಕಾಲ ಕಳೆಯುತ್ತಿದ್ದಾರೆ.

ಪ್ರವಾಸಿಗರ ಖುಷಿ ನೋಡಿ ರೈತರ ಹರ್ಷ
ಪ್ರವಾಸಿಗರ ಸೆಲ್ಫಿ ಸಂಭ್ರಮಕ್ಕೆ ಕೆಲ ಜಮೀನು ಮಾಲೀಕರು ಕಿರಿಕಿರಿ ಅನುಭವಿಸಿದರೇ ಮತ್ತೆ ಕೆಲವರು ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ, ಗಿಡಗಳನ್ನು ತುಳಿದು ಹಾಳು ಮಾಡಬೇಡಿ. ಹೂವುಗಳನ್ನು ಕೀಳಬೇಡಿ ಎಂದಷ್ಟೇ ಕಿವಿಮಾತು ಹೇಳುತ್ತಾರೆ, ಕೆಲವರು ಸೆಲ್ಫಿಗೆ ದುಡ್ಡನ್ನೂ ಪಡೆಯುತ್ತಾರೆ. ಸಿಟಿ ಮಂದಿಗೆ ಜಮೀನುಗಳೆಂದರೆ ಅಚ್ಚರಿ. ನಾನು ಯಾವುದೇ ಶುಲ್ಕ ಏನು ಪಡೆಯುತ್ತಿಲ್ಲ. ಜನರು ಖುಷಿ ಪಟ್ಟರೇ ಸಾಕು. ಆದಷ್ಟು ಎಲ್ಲರೂ ಕೃಷಿಕರಾಗಬೇಕೆಂಬುದೇ ನನ್ನ ಬಯಕೆ ಎಂದು ಹಂಗಳದ ನಿವೃತ್ತ ಶಿಕ್ಷಕರು ಹೇಳಿದರು.

ಸೂರ್ಯಕಾಂತಿ ಚೆಲುವಿಗೆ ಪ್ರವಾಸಿಗರು ಫಿದಾ
ಸೂರ್ಯನ ಕಿರಣಗಳತ್ತ ಮೋರೆ ತಿರುಗಿಸಿ ನಗು ಬೀರುವ ಸೂರ್ಯಕಾಂತಿ ಚೆಲುವಿಗೆ ಪ್ರವಾಸಿಗರು ಫಿದಾ ಆಗಿದ್ದಾರೆ. ಈ ಕುರಿತು ಹುಬ್ಬಳ್ಳಿಯ ಪ್ರವಾಸಿಗರಾದ ಕಲ್ಲೇಶ್ ಪ್ರತಿಕ್ರಿಯಿಸಿ, ವೀಕೆಂಡ್ ಟ್ರಿಪ್‌ಗಾಗಿ ಬಂಡೀಪುರಕ್ಕೆ ಹೋಗುತ್ತಿದ್ದೆವು. ಈ ಜಮೀನಿನಲ್ಲಿ ಸೂರ್ಯಕಾಂತಿಯ ಚೆಲುವು ನೋಡಿ ಮುಂದೆ ಹಾಗೆ ಹೋಗಲು ಮನಸ್ಸು ಬರಲಿಲ್ಲ, ಒಂದೆರಡು ಫೋಟೋ ತೆಗೆದುಕೊಳ್ಳೋಣ ಎಂದು ಇಲ್ಲಿಗೆ ಬಂದೆವು. ಪೋಟೋಗಳನ್ನು ತೆಗೆದು ಸೋಷಿಯಲ್ ಮೀಡಿಯಾ, ಸ್ನೇಹಿತರಿಗೆ ಹಂಚಿಕೊಂಡು ಖುಷಿ ಪಡುತ್ತಿದ್ದೇವೆ. ನಮ್ಮ ಮಕ್ಕಳಂತೂ ಜಮೀನು ಕಂಡು ಹಿಂತಿರುಗಲು ಒಪ್ಪುತ್ತಿಲ್ಲ. ನಮಗಂತೂ ಈ ಫೋಟೋ ಸಂಭ್ರಮ ಸಾಕಷ್ಟು ಮುದ ನೀಡಿತು ಎಂದರು.

ಪ್ರವಾಸಿ ತಾಣತಾಣವಾಗಿ ಮಾರ್ಪಟ್ಟಿದೆ
ವೀಕೆಂಡ್‌ಗಳಲ್ಲಿ ನಗರಗಳಿಂದ ಕುಟುಂಬ ಸಮೇತ ಪ್ರವಾಸ ಬರುವ ನೂರಾರು ಮಂದಿ ಮಾರ್ಗ ಮಧ್ಯೆ ಸುಂದರವಾಗಿ ಬೆಳೆದಿರುವ ಸೂರ್ಯಕಾಂತಿ ಜಮೀನಿನ ಬಳಿ ವಾಹನ ನಿಲ್ಲಿಸಿ ಸೆಲ್ಫಿ, ಫೋಟೋ ತೆಗೆಸಿಕೊಳ್ಳಲಾರಂಭಿಸಿದ್ದಾರೆ. ಹಾಗಾಗಿ ಈ ಸೂರ್ಯಕಾಂತಿ ತೋಟ ಒಂಥರಾ ಪ್ರವಾಸಿ ತಾಣತಾಣವಾಗಿ ಮಾರ್ಪಟ್ಟಿದೆ. ನಿತ್ಯವೂ ಜನರಿಂದ ಗಿಜಿಗಿಜಿ ಎನ್ನುತ್ತಿದ್ದು, ಸೆಲ್ಫಿ ಕ್ಲಿಕ್ ಸದ್ದು ಜೋರಾಗಿದೆ. ಕೆಲವು ಪ್ರವಾಸಿಗರು ರೈತರ ಶ್ರಮವನ್ನು ಮೆಚ್ಚಿ ಸ್ವಯಂ ಪ್ರೇರಣೆಯಿಂದ ರೈತರಿಗೆ ಹಣ ಕೊಟ್ಟು ಫೋಟೋ ತೆಗೆಸಿಕೊಂಡು ಹೋಗುತ್ತಿದ್ದಾರೆ.

ಹೊರ ರಾಜ್ಯದ ಪ್ರವಾಸಿಗರಿಗೆ ಇದು ವಿಶೇಷ
ಸಾಮಾನ್ಯವಾಗಿ ಸೂರ್ಯಕಾಂತಿ ಬಿತ್ತನೆಯನ್ನು ಗುಂಡ್ಲುಪೇಟೆಯಲ್ಲಿ ಹೆಚ್ಚಾಗಿ ಬೆಳೆಯುವುದರಿಂದ ನೆರೆ ರಾಜ್ಯದ ಪ್ರವಾಸಿಗರಿಗೆ ಇದು ವಿಶೇಷವಾಗಿದೆ. ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಸೂರ್ಯಕಾಂತಿ ಬೆಳೆ ಹೆಚ್ಚಾಗಿ ಬೆಳೆಯುವುದಿಲ್ಲ ಈ ನಿಟ್ಟಿನಲ್ಲಿ ರೈತರ ಜಮೀನುಗಳು ಪ್ರವಾಸಿಗರ ಆಕರ್ಷಣೆ ಕೇಂದ್ರಬಿಂದುವಾಗಿ ಮಾರ್ಪಟ್ಟಿವೆ.












Click it and Unblock the Notifications