ಗುಂಡ್ಲುಪೇಟೆ: ಗ್ರಾಹಕರಿಗೆ ಪಂಗನಾಮ ಹಾಕಿದ ಬ್ಯಾಂಕ್ ಅಟೆಂಡರ್
ಚಾಮರಾಜನಗರ, ಅಕ್ಟೋಬರ್ 06 : ಬ್ಯಾಂಕ್ ಜವಾನನೊಬ್ಬ ಗ್ರಾಹಕರಿಗೆ ಪಂಗನಾಮ ಹಾಕಿ ಹಣ ದೋಚಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ನಡೆದಿದೆ.
ವಂಚನೆ ಮಾಡಿರುವುದು ಗ್ರಾಹಕರಿಗೆ ತಿಳಿಯುತ್ತಿದ್ದಂತೆಯೇ ಜವಾನ ಕುಮಾರ್ ಎಂಬಾತ ನಾಪತ್ತೆಯಾಗಿದ್ದಾನೆ. ಈತ ಸ್ಥಳೀಯ ನಿವಾಸಿಯಾಗಿದ್ದು, ಬ್ಯಾಂಕ್ ಅಧಿಕಾರಿಗಳು ಹಾಗೂ ಗ್ರಾಹಕರ ವಿಶ್ವಾಸಗಳಿಸಿದ್ದನು. ಇದನ್ನೇ ಬಂಡವಾಳವಾಗಿಟ್ಟುಕೊಂಡು ಗ್ರಾಹಕರು ಚಿನ್ನಾಭರಣಗಳ ಗಿರವಿ, ವಾಹನ ಹಾಗೂ ಅಂಗಡಿಗಳ ಮೇಲೆ ಸಾಲ ಸೇರಿದಂತೆ ಯಾವುದೇ ವ್ಯವಹಾರಕ್ಕೆ ತನ್ನ ಬಳಿಗೆ ಬಂದಾಗ ಯಾರಿಗೂ ಗೊತ್ತಾಗದಂತೆ ಪಂಗನಾಮ ಹಾಕಿಬಿಡುತ್ತಿದ್ದನು.

ಬ್ಯಾಂಕ್ ನಲ್ಲಿ ಚಿನ್ನಾಭರಣ ಗಿರವಿಯಿಡಲು ಬಂದರೆ ಅವರಿಗೆ ಹಣ ನೀಡಿ ಕಳುಹಿಸಿ ಆ ಚಿನ್ನಾಭರಣವನ್ನು ಬ್ಯಾಂಕ್ ನಲ್ಲಿಡದೆ ಬೇರೆ ಖಾಸಗಿ ಸಂಸ್ಥೆಗಳಲ್ಲಿ ಮತ್ತು ಅಂಗಡಿಗಳಲ್ಲಿ ಗಿರವಿಯಿಟ್ಟು ಹೆಚ್ಚಿನ ಹಣ ಪಡೆದು ಬಳಸಿಕೊಳ್ಳುತ್ತಿದ್ದನು.
ಈತನ ಖತರ್ನಾಕ್ ಬುದ್ದಿ ತಿಳಿಯದ ಬ್ಯಾಂಕ್ ಅಧಿಕಾರಿಗಳು ನಂಬಿಕೆಯಿಂದ ಬ್ಯಾಂಕಿನ ಸ್ಟ್ರಾಂಗ್ ರೂಂನ ಕೀ ಕೊಟ್ಟು ಹೋಗುತ್ತಿದ್ದರು ಎನ್ನಲಾಗಿದೆ. ಬ್ಯಾಂಕಿನ ಖಾತೆಯಲ್ಲಿನ ಹಣದ ಬಗ್ಗೆ ಎಂಟ್ರಿ ಮಾಡಲು ಕೈಬರವಣಿಗೆಯನ್ನೇ ಅವಲಂಬಿಸಿದ್ದು, ಇದನ್ನು ಬಳಸಿಕೊಂಡು ವಂಚಿಸುತ್ತಿದ್ದನು.
ಸೆಪ್ಟಂಬರ್ 20ರಂದು ಗಿರವಿಟ್ಟಿದ್ದ ಚಿನ್ನ ಬಿಡಿಸಿಕೊಳ್ಳಲು ಬ್ಯಾಂಕಿಗೆ ಬಂದ ಗ್ರಾಹಕರೊಬ್ಬರು ಅಧಿಕಾರಿಯ ಭೇಟಿಯಾದಾಗ ಗಿರವಿಯಿಟ್ಟ ಚಿನ್ನ ಬ್ಯಾಂಕಿನಲ್ಲಿ ಇಲ್ಲದಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಗ್ರಾಹಕರಿಂದ ದೂರು ಸ್ವೀಕರಿಸಿದ ವ್ಯವಸ್ಥಾಪಕಿ ಅಶ್ವಿನಿ ಅರುಣ್ ವಿಚಾರಣೆ ನಡೆಸಿದಾಗ ಇಂಥ ಹಲವು ಹಗರಣಗಳು ನಡೆದಿರುವುದು ಪತ್ತೆಯಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತನ್ನ ವಂಚನೆಯ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಜವಾನ ಕುಮಾರ್ ನಾಪತ್ತೆಯಾಗಿದ್ದಾನೆ.
ರಿಜಿನಲ್ ಮ್ಯಾನೇಜರ್ ಕೃಷ್ಣಕುಮಾರ್ ಖುದ್ದಾಗಿ ಬ್ಯಾಂಕಿಗೆ ಆಗಮಿಸಿ ಸಾರ್ವಜನಿಕರಿಂದ ದೂರು ಸ್ವೀಕರಿಸಿದರು. ಹಾಗೂ ವಂಚನೆಗೊಳಗಾದವರು ಲಿಖಿತವಾಗಿ ದೂರು ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಜವಾನ ಕುಮಾರ್ ಒಟ್ಟಾರೆ ಈತ ಸುಮಾರು 30 ರಿಂದ 40 ಲಕ್ಷ ರೂಪಾಯಿ ವಂಚಿಸಿರಬಹುದೆಂದು ಅಂದಾಜಿಸಲಾಗಿದೆ. ಸದ್ಯ ನಾಪತ್ತೆಯಾಗಿರುವ ಕುಮಾರ್ ನಿಗೆ ಹುಡುಕಾಟ ಕಾರ್ಯ ನಡೆದಿದೆ.












Click it and Unblock the Notifications