ಕೊಪ್ಪಳ; ಕೇಂದ್ರ ತಂಡದಿಂದ ಸಾಮಾನ್ಯ ಬರದ ಜತೆಗೆ ಹಸಿರು ಬರದ ಅವಲೋಕನ

ಕೊಪ್ಪಳ, ಅಕ್ಟೋಬರ್ 08; ಕರ್ನಾಟಕ ಸರ್ಕಾರ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ರಾಜ್ಯದ ಬರ ಪರಿಸ್ಥಿತಿ ಅಧ್ಯಯನ ಮಾಡಲು ಕೇಂದ್ರದ ತಂಡ ಸಹ ರಾಜ್ಯಕ್ಕೆ ಆಗಮಿಸಿದೆ.

ಕೇಂದ್ರ ಬರ ಅಧ್ಯಯನ ತಂಡ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿತು. ಜಿಲ್ಲೆಯಲ್ಲಿ ಸಾಮಾನ್ಯ ಬರದ ಪರಿಸ್ಥಿತಿಯ ಜತೆಗೆ ಹಸಿರು ಬರದ ದುಸ್ಥಿತಿಯನ್ನು ಸಹ ತಿಳಿಸಲು ತಂಡದ ಅಧಿಕಾರಿಗಳನ್ನು ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ ವಿವಿಧ ಹೋಬಳಿಯ ರೈತರ ಜಮೀನುಗಳಿಗೆ ಕರೆದುಕೊಂಡು ಹೋಗಲಾಗಿತ್ತು.

green-drought-central-team-visit

ಹಸಿರು ಬೆಳೆಯ ಕೆಲವು ಪ್ರದೇಶಕ್ಕೆ ಕರೆದೊಯ್ದು ಬೆಳೆ ಹಸಿರಾಗಿ ಕಂಡರೂ ಇಳುವರಿಯಲ್ಲಿ ಭಾರೀ ಕುಸಿತ ಆಗಿರುವುದನ್ನು ಕೇಂದ್ರದ ಅಧ್ಯಯನ ತಂಡದ ಅಧಿಕಾರಿಗಳ ಗಮನಕ್ಕೆ ತರಲಾಯಿತು. ತಂಡ ರೈತರು, ಜಿಲ್ಲೆಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು.

ರೈತರ ಹೊಲಗಳಿಗೆ ಭೇಟಿ; ಕೇಂದ್ರ ಕುಡಿಯುವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ. ರಾಜಶೇಖರ್ ನೇತೃತ್ವದ ತಂಡದಲ್ಲಿ ಪಶುಸಂಗೋಪನೆ ಇಲಾಖೆಯ ನಿರ್ದೇಶಕ ಆರ್. ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯಕ ಆಯುಕ್ತ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಕರೀಗೌಡ ಇದ್ದರು.

ತಂಡವು ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನಿಂದ ಯಲಬುರ್ಗಾ ತಾಲೂಕಿನ ಯಲಬುರ್ಗಾ ಹೋಬಳಿಯ ಬಂಡಿ ಕ್ರಾಸ್ ಪ್ರವೇಶ ಮೂಲಕ ಬರ ಅಧ್ಯಯನ ಆರಂಭಿಸಿತು. ತಂಡ ಮೊದಲಿಗೆ ಯಲಬುರ್ಗಾ ಹೋಬಳಿಯ ಬಂಡಿ ಗ್ರಾಮದ ರೈತ ಮಹಿಳೆಯ ಹೊಲಕ್ಕೆ ಭೇಟಿ ನೀಡಿತು.

"ಮೂರು ತಿಂಗಳಾಯ್ತು ಬಿತ್ತಿ, ಮಳೆ ಇಲ್ಲದೆ ಬೆಳೆ ಹಾಳಾಯ್ತು" ಎಂದು ಯಲಬುರ್ಗಾ ಹೋಬಳಿಯ ಬಂಡಿ ಗ್ರಾಮದ ಶರಣಮ್ಮ ರೊಟ್ಟಿ ತಂಡದ ಎದುರು ಗೋಳಿಟ್ಟರು. ಕಳೆದ ವರ್ಷ ಇದೆ ಸಜ್ಚಿ ಬೆಳೆಯು ಸರಿಯಾಗಿ ಬಂದಿತ್ತು ಎಂದು ಹಿಂದಿನ ವರ್ಷದ ಸಜ್ಜೆ ತೆನೆಗಳನ್ನು ರೈತ ಮಹಿಳೆಯು ಅಧಿಕಾರಿಗಳಿಗೆ ತೋರಿಸಿದರು. ಬೆಳೆ ಹಾಳಾಗಿದ್ದರಿಂದ ಜೀವನ ಹೇಗೆ ನಡೆಸುತ್ತೀರಿ?, ನಿಮಗೆ ಎಷ್ಟು ಜನ ಮಕ್ಕಳು?, ಬೆಳೆ ವಿಮೆ ಮಾಡಿಸಿದ್ದೀರಾ? ಎಂದು ತಂಡದ ಅಧಿಕಾರಿಗಳು ಶರಣಮ್ಮ ಅವರೊಂದಿಗೆ ಮಾತನಾಡಿ ಮಾಹಿತಿ ಪಡೆದರು.

ಬಂಡಿ ಗ್ರಾಮದಲ್ಲಿನ ಮತ್ತೊಬ್ಬ ರೈತ ಚಂದ್ರಶೇಖರ ಬಡಿಗೇರ ಅವರ ಎರಡೂವರೆ ಎಕರೆ ಹೊಲದಲ್ಲಿ ಬೆಳೆದ ಸಜ್ಜೆ ಬೆಳೆಯ ವೀಕ್ಷಣೆ ನಡೆಸಿದ ತಂಡ ಮಾಹಿತಿ ಪಡೆಯಿತು. ಅಲ್ಲಿಂದ ಡೊಣ್ಣೆಗುಡ್ಡ ಗ್ರಾಮಕ್ಕೆ ತೆರಳಿ ರೈತ ಮಹಿಳೆ ರೇಣುಕಾ ಡೊಣ್ಣೆಗುಡ್ಡ ಅವರ ಏಳು ಎಕರೆಯಲ್ಲಿನ ಮೆಕ್ಕೆಜೋಳದ ಬೆಳೆ ವೀಕ್ಷಣೆ ನಡೆಸಿದರು.

ಹನುಮಪ್ಪ ಸೆಡ್ಡಿಬಟ್ಟಲದ ಅವರ ಹೊಲಕ್ಕೆ ಭೇಟಿ ನೀಡಿ ಮೆಕ್ಕೆಜೋಳ ಬೆಳೆಯ ವೀಕ್ಷಣೆ ನಡೆಸಿದರು. "ನಮ್ಮ ಎರಡು ಎಕರೆ ಹೊಲದಲ್ಲಿನ ಮೆಕ್ಕೆಜೋಳ ಬೆಳೆಯು ಮಳೆ ಇಲ್ಲದೇ ಹಾಳಾಗಿದೆ. ಪರಿಹಾರ ಸಿಗದೇ ಇದ್ದರೆ ಸಾವೇ ಗತಿ" ಎಂದು ಬೆನಕನಾಳ ಗ್ರಾಮದ ರೈತ ಮಲ್ಲಪ್ಪ ಬಿಂಗಿಕೊಪ್ಪದ ಅವರು ತಂಡದ ಎದುರು ತಮ್ಮ ಅಳಲನ್ನು ತೋಡಿಕೊಂಡರು.

ಈರಪ್ಪ ಗಡಾದ ತಮ್ಮ ದುಸ್ಥಿತಿಯನ್ನು ಅಧಿಕಾರಿಗಳಿಗೆ ತಿಳಿಸಿದರು. ಬಳಿಕ ತಂಡವು ಹನುಮನಾಳ ಹೋಬಳಿಯ ಬಾದಿಮನಾಳ ಗ್ರಾಮದ ಕೆರೆಯ ಪ್ರದೇಶಕ್ಕೆ ತೆರಳಿ ವೀಕ್ಷಣೆ ನಡೆಸಿತು. ಅಲ್ಲಿಂದ ಚಳಗೇರಾ ಗ್ರಾಮಕ್ಕೆ ತೆರಳಿ ಗ್ರಾಮದ ರೈತ ಶರಣಪ್ಪ ಬಾರಕೇರ ಅವರ ತೋಟಗಾರಿಕಾ ಬೆಳೆ ಹಾನಿಯಾಗಿದ್ದನ್ನು ಪರಿಶೀಲಿಸಿತು.

ಕೊಪ್ಪಳ ಜಿಲ್ಲೆಯಿಂದ ಕೇಂದ್ರ ಸರ್ಕಾರಕ್ಕೆ ಸಾಮಾನ್ಯ ಬರದ ವರದಿ ಜತೆಗೆ ಹಸಿರು ಬರದ ವರದಿಯನ್ನು ಸಹ ಕಳುಹಿಸಲಾಗಿದೆ. ಕೆಲವು ಕಡೆಗಳಲ್ಲಿ ಬೆಳೆ ಹಸಿರಾಗಿ ಕಾಣಿಸುತ್ತದೆ ರೈತರಿಗೆ ಕಡಿಮೆ ಇಳುವರಿ ಬಂದು ನಷ್ಟ ಅನುಭವಿಸಿದ್ದಾರೆ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳು ಕೇಂದ್ರ ತಂಡಕ್ಕೆ ವಿವರಣೆ ನೀಡಿದರು.

ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, "ಬರ ಇದ್ದಾಗಲೂ ಬೆಳೆಗಳು ಹಸಿರಾಗಿರುತ್ತವೆ. ಬೆಳೆಗಳು ಹಸಿರಾಗಿದ್ದಾಗ್ಯು ಇಳುವರಿಯಲ್ಲಿ ಕುಂಠಿತವಾಗುತ್ತದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಕೊಳವೆಬಾವಿಯ ನೀರಾವರಿ ಪ್ರದೇಶ, ಹಸಿರು ಬೆಳೆ ಪ್ರದೇಶ ಇದ್ದಾಗ್ಯೂ ಮಳೆಯಾಗದೇ ಕುಷ್ಟಗಿ ತಾಲೂಕಿನ ಬಹುತೇಕ ಪ್ರದೇಶದಲ್ಲಿನ ಹಸಿರು ಬೆಳೆಯಿಂದ ಅತೀ ಕಡಿಮೆ ಇಳುವರಿ ಬಂದು ರೈತರಿಗೆ ಸಾಕಷ್ಟು ಹಾನಿಯಾಗಿದೆ" ಎಂದರು.

"ಹಸಿರು ಬರ ಎಂಬುದರ ಬಗ್ಗೆ ಮನವರಿಕೆ ಮಾಡಲು, ಅತಿ ಕಡಿಮೆ ಮಳೆ ಬಿದ್ದ ಯಲಬುರ್ಗಾ, ಕುಷ್ಟಗಿ ತಾಲೂಕುಗಳಿಗೆ ಸಹ ಬರ ಅಧ್ಯಯನ ತಂಡವನ್ನು ಕರೆಯಿಸಿ, ತಂಡದಲ್ಲಿನ ಅಧಿಕಾರಿಗಳಿಗೆ ಇಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಲಾಗಿದೆ" ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+