Get Updates
Get notified of breaking news, exclusive insights, and must-see stories!

ಏಲಕ್ಕಿಯನ್ನು ಕಾಡಿದ ಕಟ್ಟೆ ರೋಗ : ವಿನಾಶದತ್ತ ಶ್ರೀಮಂತ ಬೆಳೆ

ಮಡಿಕೇರಿ, ಡಿಸೆಂಬರ್‌ 16: ಒಂದು ಕಾಲದಲ್ಲಿ ಕೊಡಗಿನ ಮನೆಗಳಲ್ಲಿ ಏಲಕ್ಕಿ ಇದ್ದರೆ ಆತನನ್ನು ಶ್ರೀಮಂತನೆಂದೇ ಕರೆಯಲಾಗುತ್ತಿತ್ತು. ಈ ವೇಳೆಗೆಲ್ಲ ಕೊಡಗಿಗೆ ಹೋದರೆ ಏಲಕ್ಕಿಯ ಘಮಲು ಮೂಗಿಗೆ ಬಡಿಯುತ್ತಿತ್ತು. ಬೆಳೆಗಾರರ ಮೊಗದಲ್ಲಿ ಮಂದಹಾಸ ಲಾಸ್ಯವಾಡುತ್ತಿತ್ತು. ಮೂರು ದಶಕಗಳ ಹಿಂದೆಯೇ ಕೆಜಿ ಏಲಕ್ಕಿ ಬೆಲೆ ಸಾವಿರ ರೂಪಾಯಿ ಇತ್ತು ಎಂದರೆ ಅವತ್ತು ಏಲಕ್ಕಿ ಬೆಳೆಗಾರನ ಆರ್ಥಿಕ ಸ್ಥಿತಿ ಸುಖಮಯವಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಅಂದಿನ ವಾತಾವರಣದಲ್ಲಿ ಏಲಕ್ಕಿ ಬೆಳೆ ಕೊಡಗಿನ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತಿತ್ತು. ಇಳುವರಿ ಕೂಡ ಉತ್ತಮವಾಗಿತ್ತು. ಹೀಗಾಗಿ ದಟ್ಟ ಕಾಡುಗಳ ನಡುವೆ ಏಲಕ್ಕಿಯನ್ನು ಬೆಳೆಯಲಾಗುತ್ತಿತ್ತು. ಅದಕ್ಕೆ ಯಾವುದೇ ರೀತಿಯ ಗೊಬ್ಬರ ಹಾಕದೆ ನೈಸರ್ಗಿಕವಾಗಿಯೇ ಬೆಳೆಯಲಾಗುತ್ತಿತ್ತು. ಹೀಗಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಬೆಳೆಯಾಗಿತ್ತು. ಎಲ್ಲವೂ ನೆಮ್ಮದಿಯಾಗಿದ್ದ ಕಾಲದಲ್ಲಿ ಕಟ್ಟೆ ರೋಗ ಏಲಕ್ಕಿಯನ್ನು ಕಾಡಲು ಆರಂಭಿಸಿತು. ಪರಿಣಾಮ ಇಡೀ ಏಲಕ್ಕಿ ಬೆಳೆಯೇ ಕೊಡಗಿನಲ್ಲಿ ನಾಶವಾಗಿ ಹೋಯಿತು.

ಈಗ ಕೊಡಗಿಗೊಂದು ಸುತ್ತುಹೊಡೆದರೆ ಹಿಂದೆ ಏಲಕ್ಕಿ ತೋಟಗಳಾಗಿದ್ದ ಪ್ರದೇಶಗಳು ಕಾಫಿ ತೋಟವಾಗಿ ಮಾರ್ಪಟ್ಟಿರುವುದು ಕಾಣಸಿಗುತ್ತವೆ. ಕೆಲವೇ ಕೆಲವು ಸ್ಥಳಗಳಲ್ಲಿ ಮಾತ್ರ ಏಲಕ್ಕಿ ಕಂಡು ಬರುತ್ತಿದೆಯಾದರೂ ಶೇ. 10ರಷ್ಟು ಭಾಗವೂ ಏಲಕ್ಕಿ ತೋಟ ಇಲ್ಲದಿರುವುದು ಮಾತ್ರ ದುರಂತ. ಇದಕ್ಕೆಲ್ಲ ಕಾರಣ ಕಾಡಿದ ಕಟ್ಟೆರೋಗ, ಕುಸಿದ ಬೆಲೆ, ವಾತಾವರಣದ ಏರುಪೇರು ಹೀಗೆ ಹತ್ತಾರು ಸಮಸ್ಯೆಗಳು ಬೆಳೆಗಾರರನ್ನು ಕಾಡಿದ್ದರಿಂದ ಏಲಕ್ಕಿ ಬೆಳೆಯ ಸಹವಾಸವೇ ಬೇಡವೆಂದು ಕೈಚೆಲ್ಲಿ ಕುಳಿತು ಬಿಡುವಂತಾಯಿತು.

ಕಟ್ಟೆ ರೋಗ ಬರಲು ಕಾರಣವೇನು..?

ಕಟ್ಟೆ ರೋಗ ಬರಲು ಕಾರಣವೇನು..?

ಕೃಷಿ ಸಂಶೋಧನಾ ಕೇಂದ್ರದ ಮಾಹಿತಿ ಪ್ರಕಾರ ಕಟ್ಟೆ ರೋಗ ಎಂಬುದು ಒಂದು ನಂಜು ರೋಗವಾಗಿದ್ದು, ಇದು ಪೆಂಟಲೋನಿಯಾ ನೈಗ್ರೋನೆರ್ವೋಸಾ ಎಂಬ ಒಂದು ಜಾತಿಯ ಗಿಡಹೇನು(ಕೀಟ)ವಿನಿಂದ ಬರುತ್ತದೆ. ಆಂಗ್ಲ ಭಾಷೆಯಲ್ಲಿ ಮೊಸಾಯಿಕ್ ಅಥವಾ ಮಾರ್ಬಲ್ ಎಂದು ಕರೆಯಲಾಗುತ್ತಿದೆ. ಸಾಮಾನ್ಯವಾಗಿ ಕಟ್ಟೆ ರೋಗವು ರೋಗಗ್ರಸ್ತ ತೋಟಗಳಿಂದ ಸಸಿಗಳನ್ನು ಆಯ್ಕೆ ಮಾಡಿ ನೆಡುವುದರಿಂದ ಶೀಘ್ರ ಪ್ರಮಾಣದಲ್ಲಿ ಹರಡುತ್ತದೆ ಎಂದು ಹೇಳಲಾಗುತ್ತಿದೆ.

ಕಟ್ಟೆ ರೋಗ ಹರಡುವ ಲಕ್ಷಣವೇನು..?

ಕಟ್ಟೆ ರೋಗ ಹರಡುವ ಲಕ್ಷಣವೇನು..?

ಒಂದು ಮೂಲದ ಪ್ರಕಾರ ಈ ರೋಗವು ಬೀಜ ಅಥವಾ ಮಣ್ಣಿನ ಮೂಲಕ ಹರಡುವುದಿಲ್ಲವಂತೆ ಕಟ್ಟೆ ರೋಗಕ್ಕೆ ತುತ್ತಾದ ಗಿಡವನ್ನು ನಾವು ಸುಲಭವಾಗಿ ಗುರುತಿಸಬಹುದಾಗಿದೆ. ಗಿಡದ ಎಳೆಯ ಎಲೆಯ ಮೇಲೆ ಕದರಿನ ಆಕಾರದ ಎರಡರಿಂದ ಐದು ಮಿಲಿ ಮೀಟರ್ ಉದ್ದನೆಯ ತೆಳುವಾದ ಹಸಿರು ಭಾಗ ಬಿಳಿಯ ಕೊಂಡ ಮಚ್ಚೆಗಳು ಕಾಣಸಿಗುತ್ತದೆ. ಇದು ರೋಗದ ಆರಂಭದ ಲಕ್ಷಣವಾಗಿರುತ್ತವೆ. ಆ ನಂತರ ಮಚ್ಚೆಗಳು ಮಧ್ಯೆ ಎಡೆಯಿರುವ ವಿವರ್ಣವಾದ ಹಸಿರು ಬಣ್ಣದ ನರದಿಂದ ಆರಂಭವಾಗಿ ಎಲೆಯ ಅಂಚಿನೆಡೆಗೆ ಎಲೆಯಲ್ಲಿನ ಇತರ ನರಗಳಿಗೆ ಸಮಾನಾಂತರವಾಗಿ ಇರುತ್ತವೆ. ನಂತರ ಮೂಡಿ ಬರುವ ಹೊಸ ಎಲೆಗಳ ಮೇಲೆ ವಿಶಿಷ್ಟವಾದ ಮಚ್ಚೆಗಳನ್ನೊಳಗೊಂಡ ಹಸಿರು ಅಂಗಾಂಶದ ಪಟ್ಟಿಗಳು ಕಂಡು ಬರುತ್ತದೆ.

ಮಿಥ್ಯಕಾಂಡದ ಮೇಲೆ ಬಣ್ಣ ಬಣ್ಣದ ಚುಕ್ಕೆಗಳು

ಮಿಥ್ಯಕಾಂಡದ ಮೇಲೆ ಬಣ್ಣ ಬಣ್ಣದ ಚುಕ್ಕೆಗಳು

ಹಲವು ಸಂದರ್ಭಗಳಲ್ಲಿ ಎಲೆಯ ಕವಚದ ಮೇಲೆ ಹಾಗೂ ಎಲೆಯ ಮಿಥ್ಯಕಾಂಡದ ಮೇಲೆ ಬಣ್ಣ ಬಣ್ಣದ ವಿನ್ಯಾಸಗಳನ್ನೊಳಗೊಂಡ ಚುಕ್ಕೆಗಳು ಸಹ ಕಾಣಸಿಗುತ್ತವೆ. ಎಲೆಗಳು ಬೆಳೆದಂತೆಲ್ಲಾ ರೋಗವು ಸಹ ಹರಡತೊಡಗಿ ಗಿಡದ ಬುಡದಿಂದ ಹೊರ ಬರುವ ಹೊಸ ತಾಳುಗಳಿಗೂ ವ್ಯಾಪಿಸುತ್ತದೆ. ಪೂರ್ತಿಯಾಗಿ ಬೆಳೆದ ಗಿಡಗಳಿಗಿಂತ ಎಳೆಯ ಗಿಡಗಳಲ್ಲಿ ರೋಗದ ಲಕ್ಷಣಗಳು ಚೆನ್ನಾಗಿ ಕಂಡು ಬರುತ್ತವೆ. ಸಂಪೂರ್ಣವಾಗಿ ರೋಗ ತಗುಲಿದ ಗಿಡಗಳು ಬೆಳವಣಿಗೆಯಲ್ಲಿ ಕುಂಠಿತಗೊಂಡು ಗಾತ್ರದಲ್ಲಿ ಚಿಕ್ಕದಾಗಿ, ತೆಳ್ಳನೆಯ ಕೃಶವಾದ ತಾಳುಗಳನ್ನು ಹೊಂದಿ ಚಿಕ್ಕದಾದ ಕೊತ್ತುಗಳನ್ನು (ಪುಷ್ಪ ಗೊಂಚಲು) ಬಿಡುತ್ತವೆ. ಗಿಡ ನೆಟ್ಟ ವರ್ಷದಲ್ಲಿಯೇ ರೋಗ ತಗುಲಿದ್ದೇ ಆದರೆ ಪೂರ್ಣ ಪ್ರಮಾಣದ ಬೆಳೆ ನಷ್ಟವಾಗುತ್ತದೆ. ಫಸಲು ನೀಡುವ ಗಿಡಕ್ಕೆ ತಗಲಿದರೆ ಇಳುವರಿಯಲ್ಲಿ ಇಳಿಮುಖವಾಗಿ ನಷ್ಟವಾಗುತ್ತದೆ. ರೋಗಕ್ಕೆ ಬಲಿಯಾದ ಗಿಡಗಳು ಬಹು ಬೇಗನೇ ಸಾಯುವುದಿಲ್ಲವಾದುದರಿಂದ ರೋಗವನ್ನು ಮತ್ತೊಂದು ಗಿಡಕ್ಕೆ ಹರಡಲು ಸಹಾಯ ಮಾಡಿದಂತಾಗುತ್ತದೆ.

ಕಟ್ಟೆ ರೋಗವನ್ನು ಹೇಗೆ ನಿಯಂತ್ರಿಸಬೇಕು..?

ಕಟ್ಟೆ ರೋಗವನ್ನು ಹೇಗೆ ನಿಯಂತ್ರಿಸಬೇಕು..?

ಏಲಕ್ಕಿ ತೋಟಗಳಲ್ಲಿ ಕಂಡು ಬರುವ ಕಟ್ಟೆ ರೋಗವನ್ನು ನಿಂತ್ರಿಸುವಲ್ಲಿ ಬಹಳಷ್ಟು ಅಧ್ಯಯನ ನಡೆದಿದ್ದು ಆ ಪ್ರಕಾರ ಹೇಳುವುದಾದರೆ ರೋಗಕ್ಕೆ ಬಲಿಯಾದ ಗಿಡಗಳನ್ನು ಕ್ರಮಬದ್ಧವಾಗಿ ಕಿತ್ತು ನಾಶ ಮಾಡಬೇಕು. ಹೀಗೆ ಮಾಡುವುದರಿಂದ ರೋಗವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಇಡಬಹುದು. ತೋಟದಲ್ಲಿನ ಖಾಲಿ ಸ್ಥಳಗಳಲ್ಲಿ ಮಳೆಗಾಲದಲ್ಲಿ ಗಿಡಗಳನ್ನು ನೆಡುವುದರಿಂದ ರೋಗವನ್ನು ಹತೋಟಿ ಮಾಡಬಹುದು. ರೋಗಗ್ರಸ್ಥ ತೋಟಗಳಿಂದ ಸಸಿಗಳನ್ನು ನಾಟಿಗೆ ಉಪಯೋಗಿಸಬಾರದು. ಆರೋಗ್ಯವಂತ ಗಿಡಗಳಿಗೆ ಐದು ಮಿಲಿ ಮೀಟರ್ ಪಾಸ್ಪೋ ಮಿಡಾನ್ ಅಥವಾ ಹದಿನಾರು ಮಿಲಿ ಮೀಟರ್ ಡೈಮೀಥೋಯೆಟ್ ಔಷಧಿಯನ್ನು ಹತ್ತು ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು.

ಮನ್ನೆಚ್ಚರಿಕೆ ಕ್ರಮಕೈಗೊಂಡರೂ ಕೈಗೆ ಬಾರದ ಏಲಕ್ಕಿ ಬೆಳೆ

ಮನ್ನೆಚ್ಚರಿಕೆ ಕ್ರಮಕೈಗೊಂಡರೂ ಕೈಗೆ ಬಾರದ ಏಲಕ್ಕಿ ಬೆಳೆ

ರೋಗ ಬಾಧಿತ ಗಿಡಗಳನ್ನು ಕೀಳುವಾಗ ಬುಡದಲ್ಲಿ ಬಿಗಿಯಾಗಿ ಹಿಡಿದು ನೆಲದಿಂದ ಹೊರಗೆ ಕೀಳುವುದರಿಂದ ಎಲೆ ಕವಚಗಳ ನಡುವೆ ಇರುವ ರೋಗ ಹರಡುವ ಪೆಂಟಲೋನಿಯಾ ನೈಗ್ರೋನರ್ವೋಸಾ ಎಂಬ ಜಾತಿಯ ಗಿಡ ಹೇನುಗಳನ್ನು ಕೊಲ್ಲಬಹುದು. ಈ ರೀತಿ ಕಿತ್ತ ಗಿಡಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ತೋಟದಿಂದ ಹೊರಗಡೆ ತೆಗೆದುಕೊಂಡು ಹೋಗಿ ಅವುಗಳನ್ನು ಸುಟ್ಟು ನಾಶ ಮಾಡಬೇಕು. ಅಮೋಮಮ್ ಕನ್ನಾಕಾರ್ಪಮ್, ಅಮೋಮಮ್ ಇನ್ ಪೋಲು ಕ್ರೆಟಮ್, ಅಮೋಮಮ್ ಮೈಕ್ರೋಸ್ಟೆಪನಮ್ ಅಲ್ಛಿನೀಯಾ ನುಟಿನ್ಸ್ ಮತ್ತು ಕುರ್ಕುಮಾನೈಲ್ಗೇರ್ರೆನ್ನಿಸ್ ಈ ಗಿಡಗಳು ರೋಗಕ್ಕೆ ಆಶ್ರಯ ನೀಡುತ್ತದೆ ಎಂದು ಹೇಳಲಾಗಿದ್ದು, ಈ ಗಿಡಗಳನ್ನು ಗುರುತಿಸಿ ನಾಶಪಡಿಸುವುದರಿಂದ ಕಟ್ಟೆ ರೋಗವನ್ನು ಒಂದಷ್ಟು ನಿಯಂತ್ರಿಸಬಹುದಾಗಿದೆ ಎಂದು ಹೇಳಲಾಗಿದೆ. ಆದರೆ ಕೊಡಗಿನ ಮಟ್ಟಿಗೆ ಬಹಳಷ್ಟು ಮಂದಿ ಎಲ್ಲ ಕ್ರಮಗಳನ್ನು ಕೈಗೊಂಡ ಬಳಿಕವೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳುತ್ತಾರೆ.

ಇದರಿಂದಾಗಿ ರೋಗವನ್ನು ಸಂಪೂರ್ಣ ಹತೋಟಿಗೆ ತರುವುದು ಸಾಧ್ಯವಾಗದ ಕಾರಣ ಇದರೊಂದಿಗೆ ಹೆಣಗಾಡಿ ಸುಸ್ತಾದ ಬೆಳೆಗಾರ ಏಲಕ್ಕಿ ತೋಟವನ್ನು ಕಾಫಿತೋಟವನ್ನಾಗಿ ಮಾರ್ಪಾಡು ಮಾಡಿರುವುದು ಈಗಿನ ಬೆಳವಣಿಗೆಯಾಗಿದೆ. ಅಳಿದುಳಿದ ಕಡೆಗಳಲ್ಲಿ ಏಲಕ್ಕಿ ಕಂಡು ಬರುತ್ತಿದೆಯಾದರೂ ಮೊದಲಿನಂತೆ ಅದನ್ನು ನಂಬಿ ಬದುಕುವುದು ಕಷ್ಟವಾಗಿದೆ. ಹಳೆಯ ಆ ವೈಭವಗಳನ್ನು ನೆನಪಿಸಿಕೊಳ್ಳುವ ಬೆಳೆಗಾರರ ಮೊಗದಲ್ಲಿ ವಿಷಾದವಂತು ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+