ಸ್ಮಾರ್ಟ್ ಕೃಷಿ ಕ್ಷೇತ್ರದಲ್ಲಿ ನಾವೀನ್ಯತೆಗಾಗಿ BEL ಜೊತೆ ತೋಟಗಾರಿಕೆ ಸಂಶೋಧನಾ ಸಂಸ್ಥೆ ಒಪ್ಪಂದ, ವಿಶೇಷತೆ?
ಬೆಂಗಳೂರು, ಜೂನ್ 11: ಸ್ಮಾರ್ಟ್ ಕೃಷಿ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ಸಲುವಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ (ICAR-IIHR) ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಒಡಂಬಡಿಕೆ ಮಾಡಿಕೊಂಡಿವೆ.
ಈ ಎರಡು ಸಂಸ್ಥೆಗಳ ನಡುವೆ ಇತ್ತೀಚೆಗಷ್ಟೇ ICAR-IIHR ಕಚೇರಿ ಇರುವ ಬೆಂಗಳೂರಿನ ಹೆಸರಘಟ್ಟ ನಡೆದ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಅಧಿಕೃತ ಮುದ್ರೆ ಬಿತ್ತು. ತೋಟಗಾರಿಕೆ ಬೆಳೆ ಮತ್ತು ಈ ವಲಯದಲ್ಲಿನ ಸಂಶೋಧನೆಯ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸುವ ಗುರಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಐಐಎಚ್‌ಆರ್ ಮಾಹಿತಿ ನೀಡಿದೆ.

ICAR-IIHR ನ ನಿರ್ದೇಶಕ ಪ್ರೊ. ಸಂಜಯ್ ಕುಮಾರ್ ಸಿಂಗ್ ಮತ್ತು BEL ನ ನಿರ್ದೇಶಕ (R&D) ಶ್ರೀ ಮನೋಜ್ ಜೈನ್ ಅವರ ನೇತೃತ್ವದಲ್ಲಿ ಮಹತ್ವದ ಪಾಲುದಾರಿಕೆಗೆ ಸಹಿ ಹಾಕಲಾಯಿತು.
ಎರಡು ಸಂಸ್ಥೆಗಳ ಸಹಯೋಗದ ಕುರಿತು ಪ್ರತಿಕ್ರಿಯಿಸಿದ ಪ್ರೊ. ಸಂಜಯ್ ಕುಮಾರ್ ಸಿಂಗ್ ಅವರು, ಐಸಿಎಆರ್ ಮತ್ತು ಐಐಎಚ್‌ಆರ್ ಜೊತೆ ಬಿಇಎಲ್ ನಡುವಿನ ಪಾಲುದಾರಿಕೆಯು ಸ್ಮಾರ್ಟ್ ಕೃಷಿಗೆ ಒಂದು ನಿರ್ಣಾಯಕ ಹೆಜ್ಜೆಯಾಗಿದೆ ಎಂದರು.
ಸ್ಮಾರ್ಟ್ ಕೃಷಿ ಪರಿಹಾರಗಳ ಅಭಿವೃದ್ಧಿ
ತೋಟಗಾರಿಕೆ ಕೃಷಿಯಲ್ಲಿ ಮಹತ್ವದ ಪ್ರಗತಿ ಇದರಿಂದ ಸಾಧ್ಯವಾಗಲಿದೆ. ಈ ಮೂಲಕ ಉತ್ಪಾದಕತೆ, ಸಮರ್ಥನೀಯತೆ ಮತ್ತು ಸಂಪನ್ಮೂಲವನ್ನು ಹೆಚ್ಚಿಸುವ ಸ್ಮಾರ್ಟ್ ಕೃಷಿ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಪ್ರಮಾಣಿಕ ಪ್ರಯತ್ನ ಮಾಡಲಿದ್ದೇವೆ. ಈ ಮೂಲಕ ಕೃಷಿಯಲ್ಲಿ ದಕ್ಷತೆ ಮೆರೆಯಲಿದ್ದೇವೆ ಎಂದು ತಿಳಿಸಿದರು.

ಬಿಎಎಲ್ ಮನೋಜ್ ಜೈನ್ ಮಾತನಾಡಿ, ಪ್ರಮುಖ ರಕ್ಷಣಾ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿ ಬಿಇಎಲ್ ತಾಂತ್ರಿಕ ಪ್ರಗತಿಯ ಹೊಸ ಗಡಿಗಳನ್ನು ಅನ್ವೇಷಿಸಲು ಬದ್ಧವಾಗಿದೆ. ಈ ಸಹಯೋಗವು ಸೆನ್ಸಾರ್ ತಂತ್ರಜ್ಞಾನದಲ್ಲಿನ ನಮ್ಮ ಪರಿಣತಿಯನ್ನು ಕೃಷಿ ಕ್ಷೇತ್ರಕ್ಕೆ ಅನ್ವಯಿಸಲು ನಮಗೆ ಅನುಮತಿ ದೊರೆತಿದೆ. ಕೃಷಿ-ತೋಟಗಾರಿಕೆಯಲ್ಲಿ ಸ್ಮಾರ್ಟ್ ಅಭಿವೃದ್ಧಿಗೆ ಮತ್ತು ಸಮರ್ಥ ಕೃಷಿ ಪದ್ಧತಿಗಳು ಕೊಡುಗೆ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಹಾರ ಉತ್ಪಾದನೆ ಏರಿಕೆ, ರೈತರಿಗೆ ಪ್ರಯೋಜನ
ICAR-IIHR ಮತ್ತು BEL ನಡುವಿನ ಸಹಯೋಗವು ನಿಖರವಾದ ಕೃಷಿಯನ್ನು ಸಕ್ರಿಯಗೊಳಿಸುವ ಸಂವೇದಕ ಆಧಾರಿತ ವ್ಯವಸ್ಥೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ. ಅತ್ಯಾಧುನಿಕ ಸಂವೇದಕಗಳು ಮತ್ತು ಡೇಟಾ ವಿಶ್ಲೇಷಣೆಗಳನ್ನು ಬಳಸಿಕೊಳ್ಳುವ ಮೂಲಕ, ಯೋಜನೆಯು ಸಂಪನ್ಮೂಲ ಬಳಕೆಯನ್ನು ಅತ್ಯುತ್ತಮವಾಗಿಸಲು, ಬೆಳೆ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಮತ್ತು ಒಟ್ಟಾರೆ ಕೃಷಿ ನಿರ್ವಹಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಅವರು ವಿವರಿಸಿದರು.
ICAR-IIHR ಮತ್ತು BEL ಎರಡೂ ಈ ಸಹಯೋಗದ ಭವಿಷ್ಯದ ಫಲಿತಾಂಶಗಳು ನಾಡಿನ ಮತ್ತು ದೇಶದ ರೈತರಿಗೆ ಹೆಚ್ಚು ಪ್ರಯೋಜನ ನೀಡಲಿವೆ. ಆಹಾರ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಕೃಷಿ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಎರಡು ಮಹತ್ವದ ಸಂಸ್ಥೆಗಳ ಸಹಿ ಸಮಾರಂಭದಲ್ಲಿ ಎರಡೂ ಸಂಸ್ಥೆಗಳ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ್ದರು. ICAR-IIHR ನ ಪ್ರಧಾನ ವಿಜ್ಞಾನಿ ಡಾ. ಜಿ. ಸೆಂಥಿಲ್‌ಕುಮಾರನ್ ಮತ್ತು ಬಿಇಎಲ್‌ನ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕರಾದ ರವಿ ಕುಮಾರ್ ಅವರು ಒಪ್ಪಂದ ಔಪಚಾರಿಕಗೊಳಿಸಿದರು.












Click it and Unblock the Notifications