Krishi Mela-2022 : ಜಿಕೆವಿಕೆ: ನವೆಂಬರ್ ತಿಂಗಳ ಮೊದಲ ವಾರ 'ಕೃಷಿ ಮೇಳ-2022'
ಬೆಂಗಳೂರು, ಸೆಪ್ಟಂಬರ್ 14: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವತಿಯಿಂದ ಮುಂದಿನ ನವೆಂಬರ್ ತಿಂಗಳ ಮೊದಲ ವಾರ 'ಕೃಷಿ ಮೇಳ-2022' ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನವೆಂಬರ್ 3ರಿಂದ 6ರವರೆಗೆ ಒಟ್ಟು ನಾಲ್ಕು ದಿನ 'ಕೃಷಿ ಮೇಳ-2022' ಮತ್ತು ಕೃಷಿ ವಸ್ತು ಪ್ರದರ್ಶನ ನಡೆಯಲಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಬೃಹತ್ ಮತ್ತು ಸಣ್ಣ ಗಾತ್ರ ಕೃಷಿ ಯಂತ್ರೋಪಕರಣ ತಯಾರಕರು, ಸರ್ಕಾರಿ, ಅರೇ ಸರ್ಕಾರಿ ಸಂಸ್ಥೆಗಳು, ಅಲ್ಲದೇ ಸರ್ಕಾರೇತರ ಸಂಸ್ಥೆಗಳು ಭಾಗವಹಿಸಲಿವೆ.
ಈ ಕೃಷಿ ಮೇಳದಲ್ಲಿ ಆಸಕ್ತಿಯುಳ್ಳ ಸಂಸ್ಥೆಗಳು ಹಾಗೂ ಉದ್ದಿಮೆದಾರರು ಭಾಗವಹಿಸಲು ಮಳಿಗೆಗಳನ್ನು ಅಕ್ಟೋಬರ್ 22ರೊಳಗೆ ಕಾಯ್ದಿರಲು ಅವಕಾಶ ನೀಡಲಾಗಿದೆ. ಕೃಷಿ ಮೇಳದಲ್ಲಿ ಈ ವರ್ಷ 12ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ರೈತರು, ಕೃಷಿ ಆಸಕ್ತರು ಭಾಗವಹಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಡಾ. ಬಿ. ಕೃಷ್ಣಮೂರ್ತಿ, ಸಹ ವಿಸ್ತರಣಾ ನಿರ್ದೇಶಕರು, ಮೊಬೈಲ್ ಸಂಖ್ಯೆ, 94499 86817, ಡಾ. ವಿ. ಪಳನಿಮುತ್ತು ವಿಶೇಷ ಅಧಿಕಾರಿಗಳು ಕೃಷಿ ಮಹಾವಿದ್ಯಾಲಯ, ಮೊ. 99452 54640, ಡಾ.ಓ. ಆರ್. ನಟರಾಜು ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಪ್ರಾಣಿಶಾಸ್ತ್ರ, ಮೊ. 94484 43279 ಸಂಖ್ಯೆ ಕರೆ ಮಾಡುವಂತೆ ಕೃಷಿ ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಮೇಳಕ್ಕೆ 12ಲಕ್ಷ ಮಂದಿ ಆಗಮನ ನಿರೀಕ್ಷೆ
ಕೃಷಿ ಮೇಳದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ವಿನೂತನ ತಂತ್ರಜ್ಞಾನ ಬಳಸಿಕೊಳ್ಳುವುದು ಹೇಗೆ, ಆ ಕುರಿತು ಮಾಹಿತಿ ಒದಗಿಸಲಿದೆ. ಆಹಾರ ಧಾನ್ಯ, ತರಕಾರಿ ಸೇರಿದಂತೆ ನೂತನ ಕೃಷಿ ಉತ್ಪನ್ನ, ತಳಿಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ಸಾವಯವ ಕೃಷಿ, ಬೆಳೆ ಪದ್ಧತಿ, ನೂತನ ಬೆಳೆ ಪದ್ಧತಿ, ಮಾರುಕಟ್ಟೆ ಸೇರಿದಂತೆ ಪ್ರಾತ್ಯಕ್ಷಿಕೆಗಳು ಜರುಗಲಿವೆ.
ಅಲ್ಲದೇ ಮೇಳದಲ್ಲಿ ತಜ್ಞರು, ಕೃಷಿ ವಿಶ್ವವಿದ್ಯಾಲಯ ಅಧಿಕಾರಿಗಳು ಪಾಲ್ಗೊಂಡು ರೈತರಿಗೆ ಕೃಷಿ ಬೆಳೆಗಳು, ಆದಾಯ, ಕೃಷಿಯಲ್ಲಿನ ಸಮಸ್ಯೆ, ಸವಾಲುಗಳ ಬಗ್ಗೆ ಸಲಹೆ ಮತ್ತು ಸೂಕ್ತ ಮಾಹಿತಿ ನೀಡಲಿದ್ದಾರೆ. ಕಳೆದ ಬಾರಿ 2021ರಲ್ಲಿ ನವೆಂಬರ್ 11ರಿಂದ ನಾಲ್ಕು ದಿನ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ ಜರುಗಿತ್ತು. ಆ ನಾಲ್ಕುದಿನ ಕೃಷಿ ಮಳಕ್ಕೆ ರಾಜ್ಯಾದ್ಯಂತ ಸುಮಾರು ಎಂಟು ಲಕ್ಷ ರೈತರು ಆಗಮಿಸಿ ಅಗತ್ಯ ಮಾಹಿತಿ ಪಡೆದುಕೊಂಡಿದ್ದರು. ಈ ಭಾರಿ 12ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications