ಬಂಟ್ವಾಳ: ತುಂಬೆ ಡ್ಯಾಂ ಅಣೆಕಟ್ಟಿನ ಎತ್ತರ ಏರಿಕೆ: ನದಿಯಲ್ಲಿ ಮುಳುಗುತ್ತಿದೆ ಕೃಷಿಕನ ಬಾಳು
ಮಂಗಳೂರು, ಜನವರಿ, 13: ರಾಜ್ಯದ ಬೃಹತ್ ನಗರ ಪಾಲಿಕೆಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆಯೂ ಒಂದಾಗಿದೆ. ಸುಮಾರು 6 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ಮಹಾನಗರ ಪಾಲಿಕೆಯ ಬಹುತೇಕ ಮನೆಗಳಿಗೆ ನೀರು ಪೂರೈಕೆಯಾಗುವುದು ಬಂಟ್ವಾಳ ತಾಲೂಕಿನ ತುಂಬೆಯಲ್ಲಿರುವ ಡ್ಯಾಂನಿಂದ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಾದಂತೆಲ್ಲ ಈ ತುಂಬೆ ಡ್ಯಾಂನ ಎತ್ತರವನ್ನು ಏರಿಸುತ್ತಲೇ ಬಂದಿದ್ದಾರೆ. ನೇತ್ರಾವತಿ ನದಿಗೆ ತುಂಬೆಯಲ್ಲಿ ನಿರ್ಮಿಸಲಾಗಿರುವ ಈವೆಂಟೆಡ್ ಡ್ಯಾಂನಿಂದ ನಿರಂತರವಾಗಿ ಮಂಗಳೂರಿಗೆ ನೀರಿನ ಸರಬರಾಜು ಮಾಡಲಾಗುತ್ತಿದೆ. ಈ ಹಿಂದೆ 7 ಮೀಟರ್ ಎತ್ತರ ಹೊಂದಿದ್ದ ಈ ಡ್ಯಾಂ ಅನ್ನು ಇದೀಗ ಮತ್ತೆ 5 ಮೀಟರ್ ಏರಿಸಲಾಗಿದೆ.
ಡ್ಯಾಂನ ಮಟ್ಟ ಏರಿಕೆಯಿಂದ ಆಪತ್ತು
ನೀರಿನ ಅಭಾವ ಕಂಡುಬಂದ ಹಿನ್ನೆಲೆಯಲ್ಲಿ ಡ್ಯಾಂ ನ ಮಟ್ಟವನ್ನು ಏರಿಸಲಾಗಿತ್ತು. ಡ್ಯಾಂನ ಎತ್ತರವನ್ನು ಏರಿಸಿದ ಸಮಯದಲ್ಲಿ ಅಲ್ಲಿನ ಸುತ್ತಮುತ್ತಲಿನ ಕೃಷಿ ಪ್ರದೇಶಗಳು ಮುಳುಗಡೆಯಾಗುವ ಹಿನ್ನೆಲೆಯಲ್ಲಿ ಬಾಧಿತ ಕುಟುಂಬಳಿಗೆ ತಕ್ಕಮಟ್ಟಿನ ಪರಿಹಾರವನ್ನೂ ನೀಡಲಾಗಿತ್ತು. ಆದರೆ ಇದೀಗ ತುಂಬೆ ಡ್ಯಾಂ ಸ್ಥಳೀಯ ಕಳ್ಳಿಗೆ ಭಾಗದ ಕೃಷಿಕರಿಗೆ ಮಾರಕವಾಗಿ ಪರಿಣಮಿಸಿದೆ. ಭರ್ತಿಯಾದ ಕೂಡಲೇ ಹೆಚ್ಚುವರಿ ನೀರನ್ನು ಡ್ಯಾಂ ನಿಂದ ಹೊರ ಬಿಡಲಾಗುತ್ತಿದ್ದು, ರಭಸವಾಗಿ ಹರಿಯುವ ಈ ನೀರು ನದಿಯ ಪಕ್ಕದಲ್ಲೇ ಇರುವ ಕೃಷಿಭೂಮಿಗಳನ್ನು ನುಂಗುತ್ತಿದೆ. ಇದರಿಂದಾಗಿ ಡ್ಯಾಂ ನ ಎರಡೂ ಭಾಗದ ಸುಮಾರು ಏಳು ಹೆಕ್ಟೇರ್‌ನಷ್ಟು ಕೃಷಿ ಭೂಮಿ ಜಲಾವೃತವಾಗಿದೆ.
ಕ್ಯಾರೆ ಅನ್ನದ ಜನಪ್ರತಿನಿಧಿಗಳು
ಮಳೆಗಾಲದಲ್ಲಿ ಈ ರಭಸ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ಕೃಷಿ ಭೂಮಿ ನದಿ ಪಾಲಾಗುತ್ತಿದೆ. ಕೃಷಿಕರ ಸಮಸ್ಯೆಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಭರವಸೆ ನೀಡಿದ ಅಧಿಕಾರಿಗಳು ಮತ್ತೆ ಇತ್ತ ಮುಖವನ್ನೇ ಮಾಡಿಲ್ಲ ಎಂದು ಸಂತ್ರಸ್ತ ಕೃಷಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಡ್ಯಾಂನ ಎತ್ತರವನ್ನು ಏರಿಸುವ ಸಂದರ್ಭದಲ್ಲೇ ಎರಡೂ ಕಡೆಯ ಕೃಷಿ ಭೂಮಿಗೆ ತಡೆಗೋಡೆ ನಿರ್ಮಿಸಿಕೊಡುವ ಭರವಸೆಯನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಲವು ಬಾರಿ ನೀಡಿದ್ದರು. ಭರವಸೆ ನೀಡಿ 4 ವರ್ಷಗಳು ಕಳೆದರೂ ಈವರೆಗೂ ಈ ಭಾಗದ ಕೃಷಿಕರ ಸಮಸ್ಯೆಗೆ ಸ್ಪಂದನೆ ದೊರೆತಿಲ್ಲ. ಈ ವಿಚಾರವನ್ನು ಹಲವು ಬಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನದಿ ಪಾಲಾಗುತ್ತಿರುವ ತೆಂಗಿನ ತೋಟಗಳು
ಇನ್ನು ನಮಗೆ ಕೃಷಿ ಭೂಮಿಯನ್ನು ಹೇಗೆ ಉಳಿಸುವುದು ಅನ್ನುವುದೇ ತೋಚುತ್ತಿಲ್ಲ. ನಮ್ಮಂತಹವರಿಗೆ ನೇತ್ರಾವತಿ ನದಿಗೆ ಹಾರೋದೊಂದೇ ದಾರಿ ಇರುವುದು ಅಂತಾ ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಕಳ್ಳಿಗೆ ಭಾಗದ ಕೃಷಿಕರ ಜೀವನಾಧಾರವಾಗಿರುವ ಅಡಿಕೆ, ತೆಂಗಿನ ಗಿಡಗಳು ಒಂದೊಂದಾಗಿ ನದಿ ಪಾಲಾಗುತ್ತಿದೆ. ಹೀಗೆ ಕೃಷಿ ನಾಶವಾಗುತ್ತಿದ್ದು, ಜನರಿಗೆ ದಿಕ್ಕೇ ತೋಚದಂತಾಗಿದೆ.












Click it and Unblock the Notifications