ದಿಢೀರ್ ಪಾತಳಕ್ಕೆ ಕುಸಿದ ಬಾಳೆ ಬೆಲೆ; ರೈತರಿಗೆ ತೀವ್ರ ಸಂಕಷ್ಟ ತಂದಿಟ್ಟ ಮಧ್ಯವರ್ತಿಗಳ ಆಟ
ಚಾಮರಾಜನಗರ, ನವೆಂಬರ್, 25: ಬಾಳೆ ಬೆಳೆದ ರೈತನ ಬದುಕು ಬಂಗಾರ ಎನ್ನುವಂತಿದ್ದ ಸ್ಥಿತಿ ಈಗ ಬದಲಾಗಿದೆ. ಬಾಳೆಗೆ ಬೇಡಿಕೆ ಮತ್ತು ದರ ದಿಢೀರ್ ಕುಸಿದಿರುವುದರಿಂದ ಬಾಳೆಯನ್ನು ಕೊಳ್ಳುವವರಿಲ್ಲದೆ, ಜಮೀನಿನಲ್ಲಿ ಹಣ್ಣಾಗುವ ಸ್ಥಿತಿ ತಲುಪುತ್ತಿದೆ. ಇದರಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾದರೆ ಎಷ್ಟು ಕುಸಿತವಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮೂರು-ನಾಲ್ಕು ತಿಂಗಳ ಹಿಂದೆ ಬಾಳೆಗಿದ್ದ ದರ ಈಗಿಲ್ಲ. ಪಚ್ಚೆ ಬಾಳೆ ಮತ್ತು ಏಲಕ್ಕಿ ಬಾಳೆಯ ಬೆಲೆ ದಿಢೀರ್ ಕುಸಿತ ಕಂಡಿರುವುದು ಬೆಳೆಗಾರರನ್ನು ದಿಕ್ಕು ತೋಚದಂತೆ ಮಾಡಿದೆ. ರೈತರ ಬಳಿ ಕೆ.ಜಿ. ಪಚ್ಚೆ ಬಾಳೆಯನ್ನು 10ರಿಂದ 15ಕ್ಕೆ ಕುಸಿದಿದ್ದು, ಖರೀದಿಸುವವರು ಇಲ್ಲದಂತಾಗಿದೆ.

ಈ ಬಾರಿ ಹೆಚ್ಚು ಬಾಳೆ ಬೆಳೆದಿರುವುದು ಹಾಗೂ ನೆರೆಯ ರಾಜ್ಯಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಬಾಳೆ ಮಾರುಕಟ್ಟೆಗೆ ಪ್ರವೇಶ ಮಾಡುತ್ತಿದೆ. ಇದು ದರ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಸ್ಥಳೀಯವಾಗಿ ಮಾತ್ರ ಅಲ್ಲದೆ, ಬೇರೆ ಜಿಲ್ಲೆಗಳ ಮಾರುಕಟ್ಟೆಯಲ್ಲಿಯೂ ಬಾಳೆಗೆ ಬೆಲೆ ಸಿಗುತ್ತಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು 3,500 ಹೆಕ್ಟೇರ್ ಪ್ರದೇಶದಲ್ಲಿ ಬಾಳೆಯನ್ನು ಬೆಳೆದಿದ್ದಾರೆ.
ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಕಾಣುವ ಬೆಳೆಗಳಲ್ಲಿ ಒಂದಾಗಿದ್ದ ಬಾಳೆ ಇದೀಗ ದಿಢೀರ್ ಬೆಲೆ ಕುಸಿತದಿಂದ ಬೆಳೆಗೆ ಬೆಲೆ ಇಲ್ಲವಾಗಿದ್ದು, ಖರೀದಿದಾರರು ಆಸಕ್ತಿ ತೋರುತ್ತಿಲ್ಲ. ದೀಪಾವಳಿ, ದಸರಾ ಸಂದರ್ಭದಲ್ಲಿ ಏಲಕ್ಕಿ ಬಾಳೆ ಕೆ.ಜಿ.ಗೆ 60-80 ರೂಪಾಯಿ ತನಕವೂ ಇತ್ತು. ಇದೀಗ ತೀವ್ರ ಕುಸಿತ ಕಂಡಿದ್ದು, ಕೆಜಿ ಗೆ 15 ರೂಪಾಯಿ ನಷ್ಟ ಆಗಿದೆ.
ಮಧ್ಯವರ್ತಿಗೆ ಹೆಚ್ಚಿನ ಲಾಭ: ತಮಿಳುನಾಡು ಮತ್ತು ಕೇರಳದತ್ತ ಜಿಲ್ಲೆಯ ಬಾಳೆ ರಫ್ತಾಗುತ್ತಿತ್ತು. ಇದೀಗ ಅಲ್ಲಿಂದಲೂ ಹೆಚ್ಚಿನ ಖರೀದಿದಾರರು ಬರದೇ ಹಾಪ್ ಕಾಮ್ಸ್‌ನಲ್ಲಿ ನಷ್ಟದ ಬೆಲೆಗೆ ಮಾರಲಾಗದೇ ರೈತರಿಗೆ ಸಂಕಷ್ಟ ತಂದಿದೆ. ರೈತರಿಂದ ನೇರವಾಗಿ ಖರೀದಿಸುವ ವ್ಯಾಪಾರಸ್ಥರು ತಮ್ಮ ಬಾಳೆ ಮಂಡಿಗಳಲ್ಲಿ ಕೆ.ಜಿ.ಗೆ 60ರಿಂದ 70 ರೂಪಾಯಿ ಮಾರಾಟ ಮಾಡುತ್ತಿದ್ದಾರೆ.
ತಳ್ಳುವ ಗಾಡಿ ವ್ಯಾಪಾರಸ್ಥರು, ಅಂಗಡಿಗಳಲ್ಲಿಯೂ ಇದೇ ದರದಲ್ಲಿ ಮಾರಾಟ ಆಗುತ್ತಿದೆ. ಒಂದು ಕೆ.ಜಿ ಬಾಳೆಗೆ ಕನಿಷ್ಟ 30ರಿಂದ 40 ರೂಪಾಯಿವರೆಗೆ ಲಾಭ ಪಡೆಯುತ್ತಿದ್ದಾರೆ. ವರ್ಷವಿಡೀ ಬಾಳೆ ಬೆಳೆದ ರೈತ ನಷ್ಟದಲ್ಲೇ ಬದುಕು ಸವೆಸುವ ಸ್ಥಿತಿ ನಿರ್ಮಾಣವಾಗಿದೆ.
ರೈತಗೆ ಆರ್ಥಿಕ ಸಂಕಷ್ಟ: ಒಂದು ಬಾಳೆ ಗೊನೆ ಬಿಡಲು 12 ತಿಂಗಳು ಬೇಕು. ಆದರೆ ಬೆಳೆದ ಬೆಳೆಗೆ ಬೆಲೆ ಕುಸಿತದಿಂದ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಮಾಡಿದ ಖರ್ಚು ಸಹ ಬಾರದಂತಾಗಿದೆ ಎಂದು ಎಂಬುದು ರೈತರ ನೋವು. ಈ ಕುರಿತು ರೈತ ಮುಖಂಡ ಬಾಗ್ಯರಾಜ್ ಮಾತನಾಡಿದ್ದಾರೆ.
"ಮಧ್ಯವರ್ತಿಗಳ ಹಾವಳಿ, ಸರ್ಕಾರದಿಂದ ತಜ್ಞರ ಸಮಿತಿ ಇಲ್ಲದ ಪರಿಣಾಮ ಏಲಕ್ಕಿ ಬಾಳೆ ಬೆಳೆದವರು ಸಂಕಟಕ್ಕೆ ಒಳಗಾಗಿದ್ದಾರೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಏಕಾಏಕಿ ಬೆಲೆ ಏರಿಳಿತಕ್ಕೆ ಕಾರಣ ಕಂಡುಕೊಳ್ಳಬೇಕು. ಸ್ಥಿರ ಬೆಲೆ ಕಾಯ್ದುಕೊಳ್ಳುವಂತೆ ಕ್ರಮವಹಿಸಬೇಕು. ನಂಜನಗೂಡು ರಸಬಾಳೆಗೆ ಪ್ರೋತ್ಸಾಹ ಸಿಗದೇ ಕಣ್ಮರೆಯಾದಂತೆ, ಏಲಕ್ಕಿ ಬಾಳೆಗೂ ಅದೇ ಸ್ಥಿತಿ ಬರಲಿದೆ. ಆಡಳಿತ ನಡೆಸುವವರು ಮಾನದಂಡದ ಮೂಲಕ ಬೆಲೆ ನಿಗದಿ ಮಾಡಬೇಕು. ಹಾಪ್ ಕಾಮ್ಸ್‌ಗಳಿಗೆ ಮಾರ್ಗದರ್ಶನ ನೀಡಬೇಕು," ಎಂದು ಒತ್ತಾಯಿಸಿದರು.












Click it and Unblock the Notifications