ರೈತರೇ ಗಮನಿಸಿ ಬಿದಿರು ಕೃಷಿಗೆ ಎಷ್ಟು ಸಿಗಲಿದೆ ಸಹಾಯಧನ?
ಬೆಂಗಳೂರು, ಜನವರಿ 12: ಇತ್ತೀಚಿನ ದಿನಗಳಲ್ಲಿ ಬಿದಿರಿನ ಕೃಷಿ, ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹಲವಾರು ರೈತರು ಬಿದಿರಿನ ಕೃಷಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಕುರಿತು ಮಾಹಿತಿಯನ್ನು ಸಹ ಸಂಗ್ರಹ ಮಾಡುತ್ತಿದ್ದಾರೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿನಲ್ಲಿ 'ಕಲ್ಟಿವೇಷನ್ ಆಫ್ ಬಂಬೂ' ಕಾರ್ಯಕ್ರಮದಡಿ ಬಿದಿರಿನ ಕೃಷಿ ಮಾಡಲು ಸಹಾಯಧನವನ್ನು ನೀಡಲಾಗುತ್ತದೆ. ಇದಕ್ಕಾಗಿ ಅರ್ಹರಿಂದ ಅರ್ಜಿಗಳನ್ನು ಸಹ ಆಹ್ವಾನಿಸಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಗುರಿ ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜನಂಗದ ಫಲಾನುಭವಿಗಳ ಜಮೀನಿನಲ್ಲಿ ಬಿದಿರನ್ನು ಬೆಳೆಸಿ ಪೋಷಿಸುವ ಬಗ್ಗೆ ಮೂರು ವರ್ಷಗಳ ಅವಧಿಗೆ ರೂ. 60 ಸಾವಿರ ದರ ನಿಗದಿ ಪಡಿಸಲಾಗಿದೆ. ಶೇ.90ರಷ್ಟು ಭಾಗ ರೂ. 54 ಸಾವಿರ ಹಾಗು ಶೇ.10 ಭಾಗ ರೂ. 6000 ಗಳನ್ನು ನಿಗದಿಪಡಿಸಲಾಗಿದೆ.
ಆಸಕ್ತ ರೈತರು ಪರಿಶಿಷ್ಟ ವರ್ಗದ ಅರ್ಹ ಫಲಾನುಭವಿಗಳು ಅರ್ಜಿಗಳನ್ನು ಆಯಾ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಆಯಾ ತಾಲ್ಲೂಕು ಕಚೇರಿಗಳಿಗೆ ಅರ್ಜಿ ಸಲ್ಲಿಸಬೇಕು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಎನ್‍ಎಫ್‍ಎಪಿ ಬಂಬೂ ಮಿಷನ್ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಪರಿಶಿಷ್ಟ ಪಂಗಡದ ರೈತರು ಬಿದಿರು ಕೃಷಿ ಮಾಡಲು ಪ್ರತಿ ಎಕರೆಗೆ ಪ್ರತಿ ವರ್ಷ 18,000 ರೂ. ಗಳಂತೆ 3 ವರ್ಷಗಳ ಕಾಲಾವಧಿಗೆ ಸಹಾಯಧನ ಒದಗಿಸುತ್ತದೆ.
ಪರಿಶಿಷ್ಟ ಪಂಗಡದ ರೈತರು ಜಮೀನು ಹೊಂದಿರುವ ಕುರಿತು ಆರ್.ಟಿ.ಸಿ/ ಅರಣ್ಯ ಹಕ್ಕು ಅಧಿನಿಯಮದಡಿ ಪಡೆದಿರುವ ಹಕ್ಕು ಪತ್ರ ಹೊಂದಿರಬೇಕು. ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ಅರ್ಹ ರೈತರು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಬೇಕು.
ಬಿದಿರು ಕೃಷಿ ಕುರಿತು; ಬಿದಿರು ಒಂದು ಬಹುಪಯೋಗಿ ಸಸ್ಯ ಗುಂಪಿಗೆ ಸೇರಿದೆ. ಇದು ರೈತರಿಗೆ ಉತ್ತಮ ಆದಾಯದ ಮೂಲವಾಗಿದೆ. ಆದ್ದರಿಂದ ರಾಷ್ಟ್ರೀಯ ಬಾಂಬೂ ಮಿಷನ್ ಯೋಜನೆಯಡಿ ಬಿದಿರನ್ನು ಕೃಷಿ ಅರಣ್ಯದಲ್ಲಿ ಬೆಳೆಸಲು ಕಾರ್ಯಕ್ರಮ ರೂಪಿಸಲಾಗಿದೆ. ಸಾಮಾಜಿಕ ಅರಣ್ಯ ವಿಭಾಗದಿಂದ ಬಿದಿರು ಸಸಿಗಳನ್ನು ಉಚಿತವಾಗಿ ಸಹ ವಿತರಿಸಲಾಗುತ್ತದೆ.
ಬಿದಿರು ಪರಿಸರ, ಆರ್ಥಿಕ ಮತ್ತು ಜೀವನ ಭದ್ರತೆ ಒದಗಿಸಲು ಸಕ್ಷಮವಾಗಿದೆ. ಬಿದಿರಿನ ಉತ್ಪನ್ನಗಳನ್ನು ಕಟ್ಟಡ ಕಟ್ಟಲು, ಪೀಠೋಪಕರಣಗಳಿಗೆ, ಕೈಗಾರಿಕೆಗಳಿಗೆ ಉಪಯೋಗಿಸಲಾಗುತ್ತಿದೆ. ಅಲ್ಲದೇ ಪೇಪರ್ ತಯಾರಿಕೆ, ಟೆಕ್ಸ್‌ಟೈಲ್ ಉದ್ಯಮ, ಆಹಾರೋದ್ಯಮ ಮತ್ತು ಇಂಧನ ತಯಾರಿಕೆಗೆ ಬಳಸಲಾಗುತ್ತಿದೆ.
ಭಾರತದ ಬಿದಿರು ಉದ್ಯಮದ ಮೌಲ್ಯ ವಾರ್ಷಿಕವಾಗಿ ರೂ. 28,005 ಕೋಟಿಗಳಾಷ್ಟಗಿದೆ. ಆದರೆ ಬಿದಿರಿನ ಉತ್ಪಾದನೆ ಅಷ್ಟಾಗಿ ಆಗುತ್ತಿಲ್ಲ. ಇದರಿಂದಾಗಿ ಭಾರತವು ಸುಮಾರು ರೂ. 213.65 ಕೋಟಿ ಮೌಲ್ಯದ ಬಿದಿರಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತವು ಬಿದಿರಿನ ಉತ್ಪನ್ನವನ್ನು ಆಮದು ಮಾಡಿಕೊಳ್ಳುತ್ತಿರುವ ಪ್ರಮುಖ ರಾಷ್ಟ್ರವಾಗಿದ್ದು, ಬಿದಿರಿನ ಉದ್ಯಮವನ್ನು ಬೆಳೆಸಲು ಭಾರತದಲ್ಲಿ ವಿಫುಲ ಅವಕಾಶವಿದೆ.
ಆದ್ದರಿಂದ ಬಿದಿರಿನ ಕ್ಷೇತ್ರವನ್ನು ಹೆಚ್ಚಿಸುವುದು ಇಂದಿನ ಅವಶ್ಯಕತೆ ಆಗಿದೆ. ಕೃಷಿ ಅರಣ್ಯದಲ್ಲಿ ಬಿದಿರನ್ನು ಬೆಳೆಸುವುದರಿಂದ ರೈತರಿಗೆ ಆರ್ಥಿಕ ಲಾಭವಾಗುವುದರ ಜೊತೆಗೆ, ಅವರ ಆದಾಯವನ್ನು ದ್ವಿಗುಣಗೊಳಿಸಬಹುದಾಗಿದೆ. ಬಿದಿರನ್ನು ಆಧರಿಸಿ ಸಣ್ಣ ಕೈಗಾರಿಕೆಗಳು, ಕುಶಲಕರ್ಮಿಗಳಿಗೆ ನಿರಂತರ ಉದ್ಯೋಗ ಸೃಷ್ಟಿಯಾಗಿ ಅವರಿಗೆ ಜೀವನ ಭದ್ರತೆ ಸಿಗಲಿದೆ.
ಆದ್ದರಿಂದ ಉತ್ತಮ ಗುಣಮಟ್ಟದ ಸಸಿಗಳನ್ನು ಬೆಳೆಸಿ ರೈತರಿಗೆ ಪೂರೈಸಿದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬಿದಿರು ಬೆಳೆಸಿ ತಮ್ಮ ಆದಾಯ ಹೆಚ್ಚಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಬಾಂಬೂ ಮಿಷನ್ ಯೋಜನೆಯಡಿ ಬಿದಿರನ್ನು ಕೃಷಿ ಅರಣ್ಯದಲ್ಲಿ ಬೆಳೆಸಲು ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ.












Click it and Unblock the Notifications