ದಾವಣಗೆರೆ: ಏರಿಕೆಯತ್ತ ಸಾಗುತ್ತಿದೆ ಅಡಿಕೆ ಧಾರಣೆ - ಅಂಕಿಅಂಶಗಳ ವಿವರ ತಿಳಿಯಿರಿ
ದಾವಣಗೆರೆ, ಡಿಸೆಂಬರ್, 22: ಜಿಲ್ಲೆಯ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯು ಕಳೆದ ಹದಿನೈದು ದಿನಗಳಿಂದ ಏರು ಮುಖದಲ್ಲಿ ಸಾಗುತ್ತಿದ್ದು, ಶುಕ್ರವಾರವೂ (ಡಿಸೆಂಬರ್ 22) ಕೂಡ ಹೆಚ್ಚಳ ಕಂಡಿದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಹಾಗಾದರೆ ಅಂಕಿಅಂಶಗಳನ್ನು ಮಾಹಿತಿಯನ್ನು ಇಲ್ಲಿ ಗಮನಿಸಿ.
ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯಲ್ಲಿ ಅಡಿಕೆ ಬೆಳೆಯು ಪ್ರಮುಖ ವಾಣಿಜ್ಯ ಬೆಳೆ ಆಗಿದೆ. ಶುಕ್ರವಾರವು ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆಯಲ್ಲಿ 300 ರೂಪಾಯಿ ಏರಿಕೆ ಕಂಡಿದೆ. ಇದು ಅಡಿಕೆ ಬೆಳೆಗಾರರಿಗೆ ಪ್ರತಿ ಕ್ವಿಂಟಲ್‌ಗೆ 50 ಸಾವಿರ ರೂಪಾಯಿ ಗಡಿ ದಾಟುವ ಆಶಾಭಾವ ಮೂಡಿಸಿದಂತಾಗಿದೆ.
ಹೊಸ ವರ್ಷಾಚರಣೆಗೆ ಇನ್ನು ಕೇಲವ 9 ದಿನಗಳು ಮಾತ್ರ ಬಾಕಿ ಉಳಿದಿವೆ. ಅಡಿಕೆ ಧಾರಣೆಯು 48 ಸಾವಿರ ರೂಪಾಯಿಗಿಂತ ಹೆಚ್ಚಾಗಿದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆ. ಕಳೆದ ಕೆಲವು ತಿಂಗಳಿಂದಲೂ ಹಾವು - ಏಣಿ ಆಟ ಆಡುತ್ತಿದ್ದ ಅಡಿಕೆ ದರ ಈಗ ಸ್ಥಿರವಾಗಿದ್ದು, ಇದು ರೈತರಿಗೆ ಸ್ವಲ್ಪ ಖುಷಿ ತಂದಿದೆ.

ಅಡಿಕೆ ಬೆಳೆಯ ಕೊಯ್ಲು ಶೇಕಡಾ 90ರಷ್ಟು ಮುಗಿದಿದ್ದು, ಇನ್ನು ಕೇವಲ ಶೇಕಡಾ 10ರಷ್ಟು ಉಳಿದಿದೆ. ಈ ಕಾರಣಕ್ಕಾಗಿಯೇ ರೈತರು ಅಡಿಕೆ ಧಾರಣೆ ಸ್ಥಿರ ಆಗಿರುವುದರಿಂದ ಇನ್ನೂ ಉತ್ತಮ ಧಾರಣೆ ಸಿಗಬಹುದು ಎಂಬ ವಿಶ್ವಾಸ ಹೊಂದಿದ್ದಾರೆ. ಅಡಿಕೆ ಬೆಳೆಯು ಕಡಿಮೆ ಆಗಿದ್ದರೂ ಈ ವರ್ಷ ಧಾರಣೆಯು ಹೆಚ್ಚಾದರೆ ಸ್ವಲ್ಪವಾದರೂ ಹಣ ಸಿಗುತ್ತದೆ. ಮತ್ತೆ ಕುಸಿತ ಕಂಡರೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.
ಮತ್ತೆ ಅಡಿಕೆಗೆ ಬಂಪರ್ ಬೆಲೆ ಬರುತ್ತಿದ್ದು, ಕಳೆದ ಹದಿನೈದು ದಿನಗಳಿಂದಲೂ ಏರಿಕೆ ಆಗುತ್ತಲೇ ಸಾಗುತ್ತಿದೆ. ಏರುತ್ತಿರುವುದು ಕಡಿಮೆಯಾದರೂ, ಧಾರಣೆ ಕುಸಿತವಾಗಿಲ್ಲ ಎಂಬುದು ಸಮಾಧಾನ ತಂದಿದೆ. ಶುಕ್ರವಾರ (ಡಿಸೆಂಬರ್ 22) ರಾಶಿ ಅಡಿಕೆ ಪ್ರತಿ ಕ್ವಿಂಟಲ್‌ಗೆ ಗರಿಷ್ಠ 48,900 ರೂಪಾಯಿ ಆಗಿದ್ದು, ಕನಿಷ್ಠ ಬೆಲೆ 46,352 ರೂಪಾಯಿ ದಾಖಲಿಸಿದೆ. ಇದೇ ರೀತಿ ದಿನದಿಂದ ದಿನಕ್ಕೆ ಹೆಚ್ಚಳವಾದರೆ ಪ್ರತಿ ಕ್ವಿಂಟಲ್ ಇನ್ನು ಕೆಲವೇ ದಿನಗಳಲ್ಲಿ 50 ಸಾವಿರ ರೂಪಾಯಿ ದಾಟುವ ಸಾಧ್ಯತೆ ಹೆಚ್ಚಿದೆ.
ಚನ್ನಗಿರಿ ಮಾರುಕಟ್ಟೆಯು ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಒಂದು. ಇಂದಿನ ವಹಿವಾಟಿನಲ್ಲಿ ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕ್ವಿಂಟಲ್‌ಗೆ 46,352 ರೂಪಾಯಿ, ಗರಿಷ್ಠ ಬೆಲೆ 48,700 ರೂಪಾಯಿ ಹಾಗೂ ಸರಾಸರಿ 48,306 ರೂಪಾಯಿಗೆ ವಹಿವಾಟು ನಡೆಸಿದೆ. ಇನ್ನು ಬೆಟ್ಟೆ ಅಡಿಕೆ ಗರಿಷ್ಠ 37,899 ರೂಪಾಯಿಗೆ ವಹಿವಾಟು ಮುಕ್ತಾಯಗೊಂಡಿದೆ.
ಸ್ವಲ್ಪ ದಿನಗಳ ಕಾಲ ಅಡಿಕೆಯನ್ನು ಮನೆಯಲ್ಲಿಟ್ಟುಕೊಂಡು ನಾಲ್ಕೈದು ತಿಂಗಳ ಬಳಿಕ ಮಾರುಕಟ್ಟೆಗೆ ಅಡಿಕೆ ಬಿಟ್ಟರೆ ಹೆಚ್ಚಿನ ಲಾಭ ಪಡೆಯಬಹುದು ಎಂಬ ಲೆಕ್ಕಾಚಾರ ಇದ್ದರೂ, ಮತ್ತೆ ಅಡಿಕೆ ಧಾರಣೆಯಲ್ಲಿ ಕುಸಿತವಾದರೆ ಎಂಬ ಭಯವೂ ಕಾಡಲಾರಂಭಿಸಿದೆ. ಈ ವರ್ಷದಲ್ಲಿ ಅಡಿಕೆ ಧಾರಣೆ ಸಾಕಷ್ಟು ಏರಿಳಿಕೆ ಆದರೂ ವರ್ಷದ ಕೊನೆಯಲ್ಲಿ ಧಾರಣೆ ಸ್ಥಿರವಾಗಿರುವುದು ನೆಮ್ಮದಿಗೆ ಕಾರಣವಾಗಿದೆ.
ಜೂನ್‌ನಲ್ಲಿ 50 ಸಾವಿರ ರೂಪಾಯಿ ದಾಟಿದ್ದ ಅಡಿಕೆ ಧಾರಣೆಯು ಜುಲೈ ತಿಂಗಳಿನಲ್ಲಿ 57 ಸಾವಿರ ರೂಪಾಯಿ ಮುಟ್ಟಿತ್ತು. ಆ ನಂತರ ದಿಢೀರನೇ ಕುಸಿತ ಕಂಡು 46 ಸಾವಿರ ರೂಪಾಯಿಗೆ ಕುಸಿದಿತ್ತು. ಆದರೆ ಡಿಸೆಂಬರ್ ತಿಂಗಳ ಕೊನೆ ವಾರದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, 49 ಸಾವಿರ ರೂಪಾಯಿ ದಾಟುವ ಸಾಧ್ಯತೆಯೂ ಇದೆ.
ಈ ವರ್ಷ ಮುಂಗಾರು ಮಳೆ ಕೈಕೊಟ್ಟಿತ್ತು. ಜುಲೈ ತಿಂಗಳಿನಲ್ಲಿ ಮಳೆ ಬಂದದ್ದು ಬಿಟ್ಟರೆ ಉಳಿದ ತಿಂಗಳಿನಲ್ಲಿ ಮಳೆ ಆಗಿದ್ದು ಕಡಿಮೆ. ಈ ಕಾರಣಕ್ಕಾಗಿಯೇ ಫಸಲು ಕಡಿಮೆ ಬಂದಿದೆ. ಜನವರಿ 15ರಿಂದ ಬೇಸಿಗೆ ಶುರುವಾಗಲಿದ್ದು, ಅಡಿಕೆ ಗಿಡಗಳನ್ನು
ಉಳಿಸಿಕೊಳ್ಳುವುದು ಬೆಳೆಗಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
2024ರಲ್ಲಿ ಮುಂಗಾರು ಮಳೆ ಅಂದುಕೊಂಡಂತೆ ಬಂದರೆ ಅಡಿಕೆ ಗಿಡಗಳು ಉಳಿಯುತ್ತವೆ. ಇಲ್ಲದಿದ್ದರೆ, ಅಡಿಕೆ ಗಿಡಗಳಿಗೆ ನೀರು ಪೂರೈಸಲು ಲಕ್ಷಾಂತರ ರೂಪಾಯಿಯನ್ನು ಅಡಿಕೆ ಬೆಳೆಗಾರರು ವ್ಯಯಿಸಬೇಕಾಗುತ್ತದೆ.












Click it and Unblock the Notifications