ಕೃಷಿ ವಿವಿಗಳು ಕೃಷಿಕರ ವಿಶ್ವವಿದ್ಯಾಲಯವಾಗಬೇಕು
ಶಿವಮೊಗ್ಗ, ಸೆಪ್ಟೆಂಬರ್ 25; "ಕೃಷಿ ವಿಶ್ವವಿದ್ಯಾಲಯಗಳು ಕೃಷಿಕರ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು. ರೈತರ ಇಳುವರಿ ಹೆಚ್ಚಿಸಬೇಕು, ಈ ನಿಟ್ಟಿನಲ್ಲಿ ಸಂಶೋಧನೆ, ಪ್ರಯೋಗಗಳನ್ನು ಕೈಗೊಂಡಲ್ಲಿ ರೈತರು ಸಹ ಕೈ ಜೋಡಿಸುತ್ತಾರೆ" ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಇರುವಕ್ಕಿ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ 11ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಕಾಗೋಡು ತಿಮ್ಮಪ್ಪ ಮಾತನಾಡಿದರು.

"ರೈತರು ಭೂಮಿಯನ್ನು ಉಳುಮೆ ಮಾಡುತ್ತಿದ್ದಾರೆ. ಯಾವ ಭೂಮಿಯಲ್ಲಿ ಎಂತಹ ಬೆಳೆಯನ್ನು ಬೆಳೆಯಬೇಕೆಂಬ ಪರಿಜ್ಞಾನ, ಮಾಹಿತಿ ನೀಡಲು ಪಂಚಾಯಿತಿವಾರು ಕನಿಷ್ಟ 50 ಜನರಿಗೆ ಕಾರ್ಯಾಗಾರಗಳನ್ನು ವಿಶ್ವ ವಿದ್ಯಾಲಯ ಕೈಗೊಳ್ಳಬೇಕು" ಎಂದು ಅವರು ಸಲಹೆ ನೀಡಿದರು.
ಸಚಿವರನ್ನು ಭೇಟಿ ಮಾಡುತ್ತೇನೆ; ಕಾಗೋಡು ತಿಮ್ಮಪ್ಪ ಮಾತನಾಡಿ, "ಈ ವಿಶ್ವವಿದ್ಯಾಲಯಕ್ಕಾಗಿ ದುಡಿದ, ದುಡಿಯುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಅಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳ ಶ್ರಮದಿಂದ ಇನ್ನೂ ಚೆನ್ನಾಗಿ ವಿವಿ ಬೆಳೆಯಬೇಕು" ಎಂದರು.
"ಬೋಧಕ ಬೋಧಕೇತರ ವರ್ಗದವರು ಇಲ್ಲಿಯೇ ವಾಸ್ತವ್ಯ ಹೂಡುವಂತೆ ಆದರೆ ವಿವಿ ಕುರಿತಾದ ಆಸಕ್ತಿ , ಒಲವು ಹೆಚ್ಚುತ್ತದೆ. ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು, ಕೃಷಿ ಸಚಿವರನ್ನು ಭೇಟಿಯಾಗಿ ವಸತಿ ಗೃಹಗಳನ್ನು ನೀಡಲು ಮನವಿ ಮಾಡುತ್ತೇನೆ" ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
"ನಾನೂ ಕೃಷಿಕನಾಗಿದ್ದೆ. ನನಗೆ ಎಲ್ಲ ರೀತಿಯ ಕೃಷಿ ಚಟುವಟಿಕೆಗಳ ಜ್ಞಾನ ಇದೆ. ವಿವಿ ಆಯೋಜಿಸುವ ಕೃಷಿ ಮೇಳಗಳಲ್ಲಿ ರೈತರು ಪಾಲ್ಗೊಂಡು ವೈಜ್ಞಾನಿಕ ಕೃಷಿ ಪದ್ಧತಿ, ಹೊಸ ಸಂಶೋಧನೆಗಳ ಕುರಿತು ತಿಳಿದುಕೊಂಡು ಅಳವಡಿಸಿಕೊಳ್ಳಬೇಕು" ಎಂದು ಕಾಗೋಡು ತಿಮ್ಮಪ್ಪ ಕರೆ ನೀಡಿದರು.
ಸಮಾರಂಭದಲ್ಲಿ ಮಾತನಾಡಿದ ಪ್ರಗತಿಪರ ರೈತ ದೊಡ್ಡಗೌಡ ಸಿ. ಪಾಟೀಲ್, "7 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈ ವಿಶ್ವವಿದ್ಯಾನಿಲಯ ವೈವಿಧ್ಯತೆ ಹೊಂದಿದೆ. ವಿವಿ ಗೆ ಮೊದಲ ಹಂತದಲ್ಲಿ ರೂ. 150 ಮತ್ತು ನಂತರ ರೂ.38 ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿದೆ. ವಿವಿ ಅಭಿವೃದ್ದಿಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ" ಎಂದರು.
"ಬರಗಾಲದಿಂದ ರೈತರು ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ರೈತರಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ವಿಶ್ವವಿದ್ಯಾಲದ ಮೇಲಿದೆ. ಬೆಳೆ, ರೋಗ ನಿರ್ವಹಣೆ ಕುರಿತು ರೈತರಿಗೆ ತಿಳಿಸಬೇಕು. ರೈತರ ಜೀವನ ಹಸನು ಮಾಡಲು ಪ್ರಯತ್ನಿಸಬೇಕು" ಎಂದು ಸಲಹೆ ನೀಡಿದರು.
"ವಿಶ್ವವಿದ್ಯಾಲಯದಲ್ಲಿ ರೈತರ ಮಕ್ಕಳಿಗೆ ಶೇ.50 ಮೀಸಲಾತಿ ಇದೆ. ಇಂಜಿನಿಯರಿಂಗ್‌ಗಿಂತ ಕೃಷಿ ವಿಜ್ಞಾನಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ಬೆಳೆಯಬೇಕು" ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಸಿ ಜಗದೀಶ ಮಾತನಾಡಿ, "ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 6 ಹೊಸದಾಗಿ ಸ್ನಾತಕೋತ್ತರಅಧ್ಯಯನ ಕೇಂದ್ರಗಳನ್ನು ಇಲ್ಲಿಆರಂಭಿಸಲಾಗುವುದು ಹಾಗೂ ವಿಶ್ವವಿದ್ಯಾಲಯದ ಸಾಧನೆಗಳ ಬಗ್ಗೆ ತಿಳಿಸಿ, ಮುಂಬರುವ ದಿನಗಳಲ್ಲಿ ಈ ಆವರಣ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು" ಎಂದರು.
ಈ ಕಾರ್ಯಕ್ರಮದಲ್ಲಿ ವಿಶಿಷ್ಟ ಸಾಧನೆ ಮಾಡಿದ ಅತ್ಯುತ್ತಮ ಶಿಕ್ಷಕರು, ವಿಜ್ಞಾನಿಗಳು, ಸಿಬ್ಬಂದಿಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ನಿವೃತ್ತರಾದ ಶಿಕ್ಷಕ, ಸಿಬ್ಬಂದಿ ವರ್ಗವನ್ನು ಗೌರವಿಸಲಾಯಿತು.












Click it and Unblock the Notifications