ಭಾರೀ ಮಳೆ ಎಫೆಕ್ಟ್: ಅಡಿಕೆ ಬೆಳೆಗಾರರಿಗೆ ಹೆಚ್ಚಾಯ್ತು ನಷ್ಟ!
ದಾವಣಗೆರೆ, ನವೆಂಬರ್ 21: ಈ ವರ್ಷ ವರುಣನ ಆರ್ಭಟಕ್ಕೆ ರೈತಾಪಿ ವರ್ಗ ಹೈರಾಣಾಗಿದೆ. ಮೆಕ್ಕೆಜೋಳ, ಭತ್ತ, ತರಕಾರಿ, ರಾಗಿ ಸೇರಿದಂತೆ ಎಲ್ಲಾ ಬೆಳೆಗಳು ನೀರುಪಾಲಾಗಿವೆ. ಅಡಿಕೆ ಬೆಳೆಗಾರರೂ ಸಹ ನಷ್ಟ ಅನುಭವಿಸಿದ್ದಾರೆ. ಮಾತ್ರವಲ್ಲ ಶೇಕಡಾ 25 ರಷ್ಟು ಅಡಿಕೆ ಹಾಳಾಗಿದ್ದರೆ, ತೂಕ ಬಂದರೂ ಇಳುವರಿ ಕಡಿಮೆಯಾಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಅಡಿಕೆ ನಾಡು ಅಂತಾನೇ ಪ್ರಸಿದ್ಧಿ. ಮಧ್ಯ ಕರ್ನಾಟಕ, ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅಡಿಕೆ ಬೆಳೆಯಲಾಗುತ್ತದೆ. ಮುಂಗಾರು, ಹಿಂಗಾರು ಮಳೆ ಭಾರೀ ಪ್ರಮಾಣದಲ್ಲಿ ಸುರಿದ ಪರಿಣಾಮ ಕೆಲವೆಡೆ ಫಸಲು ನೀಡುತ್ತಿದ್ದ ಮರಗಳು ಧರಶಾಯಿಗಳಾಗಿವೆ. ಅಡಿಕೆ ಹಿಂಗಾರು ಹೊಡೆಯುವ ವೇಳೆ ಧಾರಾಕಾರ ಮಳೆ ಬಂದ ಕಾರಣ ಹರಳುಗಳು ಉದುರಿ ಹೋಗಿವೆ. ಇದರಿಂದ ಫಸಲು ಹೆಚ್ಚು ಬಂದಿಲ್ಲ.
ಒಂದು ಎಕರೆಗೆ ಕನಿಷ್ಠ ಎಂದರೂ ಏಳರಿಂದ ಎಂಟು ಕ್ವಿಂಟಾಲ್ ಒಣ ಅಡಿಕೆ ಫಸಲು ಬರುತಿತ್ತು. ಆದ್ರೆ, ಈ ಬಾರಿ ಎರಡು ಕ್ವಿಂಟಲ್ ಅಡಿಕೆ ಕಡಿಮೆ ಬಂದಿದೆ. ಶೇಕಡಾ 35ರಿಂದ 40ರಷ್ಟು ನಷ್ಟ ಅನುಭವಿಸುವಂತಾಗಿದೆ. ಇದರಿಂದಾಗಿ ಏನಿಲ್ಲಾ ಅಂದರೂ ಎಕರೆಗೆ ಒಂದು ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಫಸಲು ಕಡಿಮೆ ಬಂದ ಕಾರಣ ಲಾಭವಿಲ್ಲ
ಅಡಿಕೆ ಧಾರಣೆ ಚೆನ್ನಾಗಿದೆ. ಸುಮಾರು 47 ಸಾವಿರ ರೂಪಾಯಿಯಿಂದ 52 ಸಾವಿರ ರೂಪಾಯಿವರೆಗೆ ಪ್ರತಿ ಕ್ವಿಂಟಾಲ್‌ಗೆ ಧಾರಣೆ ಇದೆ. ಅಡಿಕೆ ಬೆಳೆಗಾರರು ಉತ್ತಮ ಧಾರಣೆ ಇದ್ದರೂ ಫಸಲು ಕಡಿಮೆ ಬಂದ ಕಾರಣ ಈ ವರ್ಷ ಹೆಚ್ಚಿನ ಲಾಭ ಸಿಕ್ಕಿಲ್ಲ. ಇನ್ನು ಗೊಬ್ಬರ, ಮಳೆ ನೀರು ತೋಟಕ್ಕೆ ನುಗ್ಗಿದ ಕಾರಣ ನೀರಿನಲ್ಲೇ ಅಡಿಕೆ ಕೊಯ್ಲು ತೆಗೆದಿದ್ದಾರೆ. ಇದಕ್ಕೂ ಹೆಚ್ಚಿನ ಹಣ ಖರ್ಚಾಗಿದೆ.
ಇನ್ನು ಅಡಿಕೆಯನ್ನು ಮೂರರಿಂದ ನಾಲ್ಕು ಹಂತಗಳಲ್ಲಿ ಕೊಯ್ಲು ತೆಗೆಯಲಾಗುತ್ತದೆ. ಈ ಬಾರಿ ಮಳೆ ಸುರಿದ ಕಾರಣ ನೋಡಲು ಅಡಿಕೆ ಚೆನ್ನಾಗಿದ್ದರೂ ಕಾಯಿ ಮಾತ್ರ ತೂಕ ಬಂದಿಲ್ಲ. ಇದರಿಂದಾಗಿ ರೈತರು ನಷ್ಟ ಅನುಭವಿಸಿದ್ದಾರೆ.
ಜಮೀನು ಹೆಚ್ಚಿದ್ದವರಿಗೆ ಲಾಭ
ಕಳೆದ ವರ್ಷ ಅಡಿಕೆ ಬೆಳೆ ಹೆಚ್ಚಿನ ಲಾಭ ಬಂದಿರಲಿಲ್ಲ. ಈ ವರ್ಷ ಫಸಲು ಕಡಿಮೆ ಬಂದಿದೆ. ತೋಟಕ್ಕೆ ಗೊಬ್ಬರ, ಟ್ರ್ಯಾಕ್ಟರ್, ಸ್ವಚ್ಛತೆ, ಅಡಿಕೆ ಕೊಯ್ಲು, ಕಾರ್ಮಿಕರಿಗೆ ವೇತನ ಸೇರಿದಂತೆ ಸಾಕಷ್ಟು ಖರ್ಚು ಆಗಿದೆ. ಹಾಗಾಗಿ ನಷ್ಟ ಅನುಭವಿಸಿದ್ದೇವೆ. ಅಡಿಕೆ ಬೆಳೆಗಾರರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಹೆಚ್ಚು ಎಕರೆ ತೋಟ ಇದ್ದವರು ಸ್ವಲ್ಪ ಮಟ್ಟಿಗೆ ಲಾಭ ಬಂದಿರಬಹುದು. ಕಡಿಮೆ ಎಕರೆ ಇದ್ದವರು ನಷ್ಟ ಅನುಭವಿಸಿದ್ದೇವೆ. ನಮ್ಮ ಕಷ್ಟ ಯಾರಿಗೆ ಹೇಳೋದು ಎನ್ನುತ್ತಾರೆ ಅಡಿಕೆ ಬೆಳೆಗಾರರು.

ಈ ಬಾರಿ ಅಡಿಕೆ ಫಸಲು ಕಡಿಮೆ ಬಂದಿದೆ. ಮಂಡಿಗೆ ಬರುವ ಅಡಿಕೆ ನೋಡಲು ಉತ್ತಮ ಫಸಲು ಬಂದ ರೀತಿ ಕಾಣುತ್ತದೆ. ಆದ್ರೆ, ತೂಕ ಮಾಡಿದಾಗ ಕಡಿಮೆ ಬರುತ್ತಿದೆ. ಮಳೆ ಹೆಚ್ಚು ಸುರಿದ ಪರಿಣಾಮ ಇಳುವರಿ ಕುಂಠಿತವಾಗಿದೆ. ಈ ಬಾರಿ ಸ್ವಲ್ಪ ಮಟ್ಟಿಗೆ ಧಾರಣೆ ಉತ್ತಮವಾಗಿದೆ. ರೈತರು ಇನ್ನು ಹೆಚ್ಚು ದರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಎನ್ನುತ್ತಾರೆ ಅಡಿಕೆ ಮಂಡಿ ವರ್ತಕರು.
ಒಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ವರುಣ ಅವಕೃಪೆ ತೋರಿದ್ದಾನೆ. ಪ್ರತಿ ಕ್ವಿಂಟಲ್ ಗೆ 50 ಸಾವಿರ ರೂಪಾಯಿ ದಾಟಿದರೆ ಸ್ವಲ್ಪ ಮಟ್ಟಿಗೆ ಲಾಭ ಆಗಬಹುದು ಎಂಬ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.












Click it and Unblock the Notifications