ರಾಯಚೂರು: ಕೇವಲ ಒಂದು ಹೆಕ್ಟೇರ್ ಹೂವಿನ ಕೃಷಿಯಲ್ಲಿ ತಿಂಗಳಿಗೆ ₹42,000 ಗಳಿಸುವ ರೈತ ಮಹಿಳೆ, ದಿನದ ಆದಾಯ ಎಷ್ಟು ಗೊತ್ತಾ?
ರಾಯಚೂರು, ಅಕ್ಟೋಬರ್, 26: ಮಸ್ಕಿ ತಾಲ್ಲೂಕಿನ ನೆಲಕೊಳ ಗ್ರಾಮದ ರೈತ ಮಹಿಳೆ ನೂರ್‌ಬೀ ಮಹ್ಮದ್ ಜಾಫರ್ ಅವರು ಎಂಟು ವರ್ಷಗಳಿಂದ ಹೂವಿನ ಕೃಷಿಯಲ್ಲಿ ತೊಡಗಿದ್ದು, ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಸ್ವ-ಸಹಾಯ ಗುಂಪಿನಲ್ಲಿ ₹1 ಲಕ್ಷ ಸಾಲ ಪಡೆದು ಹೂವಿನ ಕೃಷಿ ಆರಂಭಿಸಿದ ನೂರ್‌ಬೀ ಒಂದು ಎಕರೆ ಜಮೀನಿನಲ್ಲಿ ಕನಕಾಂಬರ, ದುಂಡು ಮಲ್ಲಿಗೆ ಮತ್ತು ಸುಗಂಧ ರಾಜ ಬೆಳೆದು ಆದಾಯ ಗಳಿಸುತ್ತಿದ್ದಾರೆ. ಜಮೀನಿನಲ್ಲಿ ಒಂದು ಕೊಳವೆಬಾವಿ ಇದೆ. ಗುಜರಿಯಿಂದ ಖರೀದಿಸಿ ತಂದ ಹಳೇ ಪೈಪ್‌ಗಳಿಂದ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದರು. ಪತಿ ಮಹ್ಮದ್ ಜಾಫರ್ ಸಹ ನೂರ್‌ಬೀಗೆ ಸಾಥ್ ನೀಡಿದ್ದಾರೆ.

ಬೇರು ಕೊಳೆ ರೋಗ ಬಾಧೆ ಹಿನ್ನೆಲೆಯಲ್ಲಿ ದುಂಡು ಮಲ್ಲಿಗೆಯನ್ನು ತೆಗೆದು ಹಾಕಿದ್ದು, ಪ್ರಸ್ತುತ ಪತ್ರಿನಿತ್ಯ 4 ಕೆ.ಜಿ. ಕನಕಾಂಬರ ಮತ್ತು 15 ಕೆ.ಜಿ. ಸುಗಂಧರಾಜ ಸಿಗುತ್ತಿದೆ. ಕನಕಾಂಬರ 1.ಕೆ.ಜಿ. ₹250 ಮತ್ತು ಸುಗಂಧರಾಜ 1ಕೆ.ಜಿ. ಗೆ ₹70 ರಂತೆ ಸಗಟು ವ್ಯಾಪಾರಿಗಳು ಜಮೀನಿಗೆ ಬಂದು ಖರೀದಿಸುತ್ತಾರೆ.
ತೋಟಗಾರಿಕೆ ಇಲಾಖೆಯಿಂದ ಇದುವರೆಗೂ ಯಾವುದೇ ಸಹಾಯಧನ ಪಡೆದಿಲ್ಲ. ಹನಿ ನೀರಾವರಿ ಪದ್ಧತಿ ಅಳವಡಿಸಬೇಕಿದೆ. ಅಧಿಕಾರಿಗಳು ಸ್ಪಂದಿಸಿದರೆ ಅನುಕೂಲವಾಗುತ್ತದೆ ಎಂದು ನೆಲಕೊಳದ ಮಹ್ಮದ್ ಜಾಫರ್ ಹೇಳಿದ್ದಾರೆ.
ಇಬ್ಬರು ಮಹಿಳಾ ಕೂಲಿಕಾರರ ಸಹಾಯದೊಂದಿಗೆ ನೂರ್ ಬೀ ಬೆಳಗ್ಗೆ 10 ಗಂಟೆಗೆ ಹೂ ಬಿಡಿಸಿ ಖರೀದಿದಾರರಿಗೆ ಪೂರೈಸುತ್ತಾರೆ. ಕಟ್ಟಡ ಕಾರ್ಮಿಕ ಪತಿ ಮಹ್ಮದ್ ಜಾಫರ್ ಅವರೂ ಹೂ ಬಿಡಿಸಲು ಸಹಾಯ ಮಾಡುತ್ತಾರೆ. ಕೂಲಿಕಾರರ ಖರ್ಚು ತೆಗೆದು ನಿತ್ಯ ₹1400 ಉಳಿತಾಯವಾಗುತ್ತಿದೆ.
ಒಂದು ಕುಟುಂಬ ಸ್ವಾವಲಂಬಿಯಾಗಿ ಜೀವನ ನಡೆಸಲು ಬೇಕಾದಷ್ಟು ಆದಾಯ ಬರುತ್ತದೆ. ಬೇರೆಯವರ ಜಮೀನಿಗೆ ಹೋಗಿ ಕೂಲಿ ಕೆಲಸ ಮಾಡುವ ಬದಲಿಗೆ ನಮ್ಮ ಜಮೀನಿನಲ್ಲಿ ನಾವು ದುಡಿಯುತ್ತೇವೆ ನೂರ್‌ಬಿ ಹೇಳಿದ್ದಾರೆ. ಇನ್ನು ಬೆಂಗಳೂರಿನ ಐಐಎಚ್‌ಆರ್ (ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಹಾರ್ಟಿಕಲ್ಚರ್) ಮತ್ತು ಬಾಗಲಕೋಟಿಯ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ವಿಜ್ಞಾನಿಗಳಿಂದ ಮಾಹಿತಿ ಪಡೆದಿದ್ದಾಗಿ ಮಹ್ಮದ್ ಜಾಫರ್ ಹೇಳಿದರು.
ರಾಯಚೂರು ಜಿಲ್ಲೆಯಲ್ಲಿ ಕೆಲವೇ ರೈತರು ಸುಗಂಧ ರಾಜ ಬೆಳೆಯುತ್ತಿದ್ದು, ಅವರಲ್ಲಿ ನೂರ್‌ಬೀ ಮೊದಲಿಗರು. ಮೂರು ವರ್ಷ ಸತತ ಹೂವು ನೀಡುವ ಸುಗಂಧರಾಜ ಗಿಡವನ್ನು ಮೂರು ವರ್ಷಗಳ ನಂತರ ತೆಗೆದು ಹೊಸದಾಗಿ ನಾಟಿ ಮಾಡಲಾಗುತ್ತದೆ. ಆಗ ಗಿಡದ ಬೇರುಗಳನ್ನು 50 ಕೆ.ಜಿ.ಗೆ ₹2 ಸಾವಿರದಂತೆ ಮಾರಾಟ ಮಾಡಿ ಆದಾಯ ಗಳಿಸುವುದಾಗಿ ನೂರ್ ಬೀ ಹೇಳಿದರು.












Click it and Unblock the Notifications