keyboard_backspace

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುರಿತು ನೀವರಿಯದ ವಿಚಾರಗಳಿವು!

Google Oneindia Kannada News

ಬೆಂಗಳೂರು, ಜೂನ್ 01: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ (ಜೂನ್ 1ಕ್ಕೆ) 25 ವರ್ಷಗಳು ಸಂದಿವೆ. ದಕ್ಷಿಣ ಭಾರತದವರಿಗೆ, ಅದರಲ್ಲೂ ಕರ್ನಾಟಕದ ರಾಜಕಾರಣಿಗಳಿಗೆ ಪ್ರಧಾನಿ ಹುದ್ದೆ ಎಂಬುದು ದೂರದ ಬೆಟ್ಟವಿದ್ದಂತೆ ಎಂಬ ಮಾತನ್ನು ಸುಳ್ಳು ಮಾಡಿದ್ದು ಎಚ್ ಡಿ ದೇವೇಗೌಡ ಅವರು. ರಾಜಕೀಯ ಪ್ರಬುದ್ಧತೆಯಿಂದ ಆ ಅತ್ಯುನ್ನತ ಹುದ್ದೆ ತಮ್ಮನ್ನು ಹುಡುಕಿಕೊಂಡು ಬರುವಂತೆ ಮಾಡಿದವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು. ಹಾಗಂತ ಅದು ಅವರಿಗೆ ಪ್ರಧಾನಿ ಹುದ್ದೆ ಸಲಿಸಾಗಿಯೇನು ಒಲಿದು ಬಂದಿರಲಿಲ್ಲ.

Recommended Video

ಇವತ್ತಿಗೆ HD DeveGowda ಪ್ರಧಾನಿ ಆಗಿ 25 ವರುಷ!! | Oneindia Kannada

ದೇವೇಗೌಡ ಅವರ ರಾಜಕೀಯ ಅನುಭವವೇ ಹಾಗಿತ್ತು. ಅದಕ್ಕೊಂದು ಉದಾಹರಣೆ ಹೀಗಿದೆ ನೋಡಿ, ಅದು 2016ರ ಆಗಸ್ಟ್ ತಿಂಗಳು. ಆಗಿನ್ನೂ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆ ಶುರುವಾಗಿತ್ತು. ಡೆಮಾಕ್ರೆಟಿಕ್ ಪಕ್ಷದಿಂದ ಹಿಲರಿ ಕ್ಲಿಂಟನ್ ಹಾಗೂ ರಿಪಬ್ಲಿಕ್ ಪಾರ್ಟಿಯ ಡೊನಾಲ್ಡ್ ಟ್ರಂಪ್ ತುರುಸಿನ ಪ್ರಚಾರ ಆರಂಭಿಸಿದ್ದರು. ಇಡೀ ವಿಶ್ವದಾದ್ಯಂತ ಎಲ್ಲರೂ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ನಿರಾಯಾಸವಾಗಿ ಜಯಗಳಿಸುತ್ತಾರೆ ಎಂದು ಭಾವಿಸಿದ್ದರು. ಅಧಿಕೃತ ಘೋಷಣೆಯೊಂದು ಬಾಕಿ ಎಂಬಂತೆ ಅಂತಾರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಣೆ ಶುರು ಹಚ್ಚಿಕೊಂಡಿದ್ದವು. ರಾಜಕೀಯವೇ ಗೊತ್ತಿಲ್ಲದ ಡೊನಾಲ್ಡ್ ಟ್ರಂಪ್ ಅವರು ಯಾವುದೇ ರೀತಿಯಲ್ಲೂ ಹಿಲರಿ ಕ್ಲಿಂಟನ್ ಅವರ ಎದುರು ಸಮರ್ಥ ಅಭ್ಯರ್ಥಿ ಅಲ್ಲ ಎಂಬ ತೀರ್ಮಾನಕ್ಕೆ ಅಮೆರಿಕದ ಮಾಧ್ಯಮಗಳೂ ಬಂದಾಗಿತ್ತು. ಅಮೆರಿಕ ಮಾತ್ರವಲ್ಲ ಅಂತಾರಾಷ್ಟ್ರೀಯ ಮಾದ್ಯಮಗಳು ಹಲವು ಆಯಾಮಗಳಲ್ಲಿ ಅದನ್ನೇ ಪ್ರಸಾರ ಮಾಡುತ್ತಿದ್ದವು.

ಅದೇ ಸಂದರ್ಭದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಯಾವುದೊ ವಿಚಾರ ಮಾತನಾಡಲು ಸುದ್ದಿಗೋಷ್ಠಿ ಕರೆದಿದ್ದರು. ನಾವೆಲ್ಲ ವರದಿಗಾರರು ಅದರಲ್ಲಿ ಭಾಗವಹಿಸಿ ವರದಿ ಮಾಡಿದ್ದೇವು. ಅಂದು ಗಣೇಶ ಚತುರ್ಥಿ ಇತ್ತು. ಸುದ್ದಿಗೋಷ್ಠಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಲೋಕಾಭಿರಾಮವಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಬಗ್ಗೆ ಮಾತನಾಡಿದ್ದ ದೇವೇಗೌಡರು, ಅಂತಾರಾಷ್ಟ್ರೀಯ ಮಾಧ್ಯಮಗಳು, ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಕರ ನಿರ್ಣಯವನ್ನು ತಳ್ಳಿಹಾಕಿದ್ದರು. ನೋಡ್ತಾ ಇರಿ, ಡೊನಾಲ್ಡ್ ಟ್ರಂಪ್ ಅವರೇ ಅಮೆರಿಕದ ಅಧ್ಯಕ್ಷರಾಗುತ್ತಾರೆ ಎಂದು ಕರಾರುವಕ್ಕಾಗಿ ಹೇಳಿದ್ದರು. ಅದಕ್ಕೆ ಅವರು ರಾಜಕೀಯ ವಿಶ್ಲೇಷಣೆಯನ್ನೂ ಕೊಟ್ಟಿದ್ದರು. ಅಂತಹ ರಾಜಕೀಯ ಮುತ್ಸದ್ದಿ ಮಾಜಿ ಪ್ರಧಾನಿ ದೇವೇಗೌಡರು.

ಪ್ರಧಾನಿಯಾಗಿ 25 ವರ್ಷ!

ಪ್ರಧಾನಿಯಾಗಿ 25 ವರ್ಷ!

ಸಾಮಾನ್ಯ ರೈತ ಕುಟುಂಬದ ಹಿನ್ನೆಲೆಯುಳ್ಳ ಜೆಡಿಎಸ್ ವರಿಷ್ಠ ದೇವೇಗೌಡರು ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ಇಂದಿಗೆ 25 ವರ್ಷಗಳು ಕಳೆದಿವೆ. ತಮ್ಮ ಪಕ್ಷವಾಗಿದ್ದ ಜನತಾದಳದ ಕೇವಲ 46 ಸಂಸದರ ಸಂಖ್ಯಾ ಬಲದೊಂದಿಗೆ ಲೋಕಸಭೆಯಲ್ಲಿ ಸರಳ ಬಹುಮತ ಸಾಬೀತು ಮಾಡುವುದು ಸಣ್ಣ ಮಾತೇನೂ ಆಗಿರಲಿಲ್ಲ. 13 ಪಕ್ಷಗಳ ಸಂಸದರನ್ನು ಒಟ್ಟಿಗೆ ಕಟ್ಟಿಕೊಂಡು ಹೋಗುವುದು ಸಾಮಾನ್ಯ ರಾಜಕಾರಣಿಗಳಿಗೆ ಅಸಾಧ್ಯವಾಗಿತ್ತು. ಹೀಗಾಗಿ ಪ್ರಧಾನಿ ಹುದ್ದೆಯ ಸಹವಾಸವೇ ಬೇಡ ಎಂದು ಎಲ್ಲರೂ ತೀರ್ಮಾನಿಸಿ ಆಗಿತ್ತು. ಅಂತಹ ಸಂದರ್ಭದಲ್ಲಿ ದೇಶಕ್ಕಾಗಿ ತಮ್ಮ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟಿವರು ಆಗ ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ದೇವೇಗೌಡ ಅವರು.

ಈ ಎಲ್ಲದರ ಮಧ್ಯೆ 25 ವರ್ಷಗಳ ಹಿಂದೆ ಅಂದರೆ, ಜೂನ್ 1, 1996 ರಂದು ಎಚ್.ಡಿ. ದೇವೇಗೌಡ ಅವರು ದೇಶದ 11ನೇ ಪ್ರಧಾನಿಯಾಗಿ ದೇವೇಗೌಡರು ಅಧಿಕಾರ ಸ್ವೀಕಾರ ಮಾಡಿದರು. ಸಿಕ್ಕ ಕಡಿಮೆ ಅತಿ ಕಡಿಮೆ ಅವಧಿಯಲ್ಲಿಯೆ ಅನೇಕ ಜನಪರ, ಅಭಿವೃದ್ಧಿಪರ ಕೆಲಸಗಳನ್ನು ಮಾಡಿದ್ದರು.

ದಕ್ಷಿಣ ಭಾರತದ ನಾಯಕ

ದಕ್ಷಿಣ ಭಾರತದ ನಾಯಕ

ದಕ್ಷಿಣ ಭಾರತದವರು, ಅದರಲ್ಲೂ ಪ್ರಾದೇಶಿಕ ಪಕ್ಷವೊಂದರ ನಾಯಕ ದೇಶದ ಪ್ರಧಾನಿ ಆಗುವುದು ಸಾಮಾನ್ಯವಾದ ಸಂಗತಿ ಆಗಿರಲಿಲ್ಲ. ಈಗಲೂ ಕೂಡ ಪಕ್ಷ ಯಾವುದೇ ಇರಲಿ, ಪ್ರಧಾನಿ ಹುದ್ದೆ ಮಾತ್ರ ಉತ್ತರ ಭಾರತೀಯರಿಗೆ ಎಂಬ ಅಲಿಖಿತ ನಿಯಮವಿದೆ.

ಆದರೆ 25 ವರ್ಷಗಳ ಹಿಂದೆ ಬದಲಾಗಿದ್ದ ರಾಜಕೀಯ ಸ್ಥಿತ್ಯಂತರದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು, ದೇಶಾದ್ಯಂತ 46 ಸಂಸದರನ್ನು ಒಳಗೊಂಡ ಜನತಾದಳ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಪ್ರಧಾನಿಯೂ ಆಗಿದ್ದು ಅವರ ರಾಜಕೀಯ ಚಾಣಾಕ್ಷತೆ, ಪ್ರಬುದ್ಧತೆಗೆ ಸಾಕ್ಷಿ.

ಕಾಂಗ್ರೆಸ್ ಸೋಲು, ದೇವೇಗೌಡರ ಗೆಲುವು

ಕಾಂಗ್ರೆಸ್ ಸೋಲು, ದೇವೇಗೌಡರ ಗೆಲುವು

ದಿ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಬಳಿಕ ಭಾರಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ನಂತರ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಅವರು 1996ರ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು. ಆ ಬಳಿಕ ಬಿಜೆಪಿಯೇತರ ಪಕ್ಷ ಬೆಂಬಲಿಸಲು ಕಾಂಗ್ರೆಸ್ ತೀರ್ಮಾನಿಸಿತ್ತು.

ನಮ್ಮ ಲೋಕಸಭೆಯ ಒಟ್ಟು 545 ಸ್ಥಾನಗಳ ಪೈಕಿ ಕೇವಲ 46 ಸಂಸದರ ಸಂಖ್ಯಾ ಬಲ ಹೊಂದಿದ್ದ ಜನತಾದಳ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಗೌಡರು ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷದ 140 ಸಂಸದರು, ಪ್ರಾದೇಶಿಕ ಪಕ್ಷಗಳ 100 ಹಾಗು ಎಡ ಪಕ್ಷಗಳ 44 ಸಂಸದರ ಬೆಂಬಲದೊಂದಿಗೆ ದೇವೇಗೌಡರು ಪ್ರಧಾನಿಯಾಗಿದ್ದು ಪವಾಡ. ಆದರೆ ಮುಂದೆ ಅಷ್ಟೂ ಪಕ್ಷಗಳನ್ನು, ನಾಯಕರನ್ನು ಒಂದು ಗೂಡಿಸಿಕೊಂಡು ಸರ್ಕಾರ ನಡೆಸಿದ್ದು ಮತ್ತು ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದು ಅವರ ರಾಜಕೀಯ ಪ್ರಬುದ್ಧತೆಗೆ ಸಾಕ್ಷಿ.

ದೇವೇಗೌಡರ ರಾಜಕೀಯ ಪ್ರವೇಶ

ದೇವೇಗೌಡರ ರಾಜಕೀಯ ಪ್ರವೇಶ

ದಿನದ 24 ಗಂಟೆಗಳಲ್ಲಿ ದೇವೇಗೌಡರು ರಾಜಕೀಯವನ್ನೇ ಮಾಡುತ್ತಾರೆ ಎಂಬ ಮಾತನ್ನು ನಗುತ್ತಲೇ ತೆಗೆದುಕೊಳ್ಳುವ ದೇವೇಗೌಡರು, ದೇಶದ ಕುರಿತು ಬದ್ಧತೆಯುಳ್ಳ ಕೆಲವೇ ರಾಜಕಾರಣಿಗಳಲ್ಲಿ ಒಬ್ಬರು.

ತಮ್ಮ ಡಿಪ್ಲೋಮಾ ಇಂಜಿನಿಯರಿಂಗ್ ಶಿಕ್ಷಣದ ಬಳಿಕ ಸಣ್ಣ ಸಿವಿಲ್ ಗುತ್ತಿಗೆದಾರರಾಗಿ ವೃತ್ತಿ ಶುರುಮಾಡಿದ್ದ ದೇವೇಗೌಡರು, ಮುಂದೆ ದೇಶವನ್ನು ಮುನ್ನಡೆಸುವ ಮಟ್ಟಕ್ಕೆ ಬೆಳೆದದ್ದು ಅವರ ಹೋರಾಟದ ಬದುಕಿಗೆ ಸಾಕ್ಷಿ. ಎಚ್.ಡಿ. ದೇವೇಗೌಡ ಅವರು 1952ರಲ್ಲಿ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಸಕ್ರಿಯ ರಾಜಕೀಯ ಜೀವನವನ್ನು ಆರಂಭಿಸಿದ್ದರು. ಆದರೆ ಮುಂದೆ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 1962ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿದ್ದರು.

ಹೀಗೆ ಪಕ್ಷೇತರರಾಗಿ ಸ್ಪರ್ಧಿಸಿ ಗೆಲವು ಸಾಧಿಸಿದ್ದ ದೇವೇಗೌಡರು ನಂತರ ಜನತಾ ಪರಿವಾರವನ್ನು ಕಟ್ಟಿ ಬೆಳೆಸಿದ್ದರು. 1989ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳನ್ನು ಪಡೆದುಕೊಂಡಿದ್ದ ಜನತಾದಳವನ್ನು ಮುಂದೆ ಐದೇ ವರ್ಷಗಳಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದು ಇದೇ ದೇವೇಗೌಡರು. 1994ರಲ್ಲಿ ರಾಜ್ಯ ಜನತಾದಳದ ಅಧ್ಯಕ್ಷರಾಗಿ ರಾಜ್ಯದಲ್ಲಿ ಜನತಾದಳವು ಅಧಿಕಾರಕ್ಕೆ ಬರುವಲ್ಲಿ ದೇವೇಗೌಡರು ಮಹತ್ವದ ಪಾತ್ರವನ್ನು ವಹಿಸಿದ್ದರು. ಡಿಸೆಂಬರ್ 11, 1994ರಂದು ಜನತಾದಳ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಕರ್ನಾಟಕದ 14ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಒಲಿದು ಬಂದ ಪ್ರಧಾನಿ ಹುದ್ದೆ

ಒಲಿದು ಬಂದ ಪ್ರಧಾನಿ ಹುದ್ದೆ

ಹೀಗೆ ಎಚ್.ಡಿ. ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ 16 ಲೋಕಸಭಾ ಸ್ಥಾನಗಳನ್ನು ಜನತಾದಳ ಪಕ್ಷ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಅದಕ್ಕೂ ಮೊದಲು ಎಚ್.ಡಿ. ದೇವೇಗೌಡರು ಸಂಸದರಾಗಿದ್ದಾಗ ಎರಡು ಪ್ರಬಲ ರಾಷ್ಟ್ರೀಯ ಪಕ್ಷಗಳನ್ನು (ಕಾಂಗ್ರೆಸ್ ಹಾಗೂ ಬಿಜೆಪಿ) ಹೊರತು ಪಡಿಸಿ ಮೂರನೇ ರಾಜಕೀಯ ಶಕ್ತಿ ಒಗ್ಗೂಡಿಸುವತ್ತ ಗಮನ ಹರಿಸಿದ್ದರು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದೇ ಇದ್ದಾಗ ಸಹಜವಾಗಿಯೆ ಎಲ್ಲರನ್ನೂ ಆ ಮೊದಲೇ ಸಂಘಟಿಸಿದ್ದ ದೇವೇಗೌಡರತ್ತ ಎಲ್ಲರ ಚಿತ್ತ ಹರಿಯಿತು. ದೇವೇಗೌಡರು ಪ್ರಧಾನಿಯಾಗಲು ಎಡಪಕ್ಷಗಳು ಸೇರಿದಂತೆ 13 ಪಕ್ಷಗಳ 'ಯುನೈಟೆಡ್ ಫ್ರಂಟ್' ಒಪ್ಪಿಗೆ ಸೂಚಿಸಿ ಪ್ರಧಾನಿಯಾದರು.

ಪ್ರಧಾನಿಯಾಗಿ ರಾಜ್ಯಕ್ಕೆ ಕೊಡುಗೆ

ಪ್ರಧಾನಿಯಾಗಿ ರಾಜ್ಯಕ್ಕೆ ಕೊಡುಗೆ

ಉತ್ತರ ಕರ್ನಾಟಕದ ವಿರೋಧಿ ಎಂಬಂತೆ ದೇವೇಗೌಡರನ್ನು ಬಿಂಬಿಸಲಾಗುತ್ತದೆ. ಆದರೆ ಆಲಮಟ್ಟಿ ಡ್ಯಾಂಗೆ ಕಾಯಕಲ್ಪ ಕಲ್ಪಿಸಿದ್ದು ಪ್ರಧಾನಿಯಾಗಿದ್ದ ದೇವೇಗೌಡರು. ಆಗ ಆಂಧ್ರಪ್ರದೇಶದ ಸಿಎಂ ಅಗಿದ್ದ ಚಂದ್ರಬಾಬು ನಾಯ್ಡು ಅವರ ತೀವ್ರ ವಿರೋಧದ ಮಧ್ಯೆ ಡ್ಯಾಂ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಲು ವಿನ್ಯಾಸ ರೂಪಿಸಲು ಸೂಚಿಸಿದ್ದರು. ರಾಜ್ಯಗಳ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ ನೀಡಬಾರದೆನ್ನುವ 'ಗಾಡ್ಗೀಲ್ ಫಾರ್ಮುಲಾ'ವನ್ನು ಬದಲಾಯಿಸಿ ಅಲಮಟ್ಟಿ ಡ್ಯಾಂನಂಥ ಯೋಜನೆಗಳಿಗೆ ಸಾವಿರ ಕೋಟಿ ರೂ. ಅನುದಾನ ನೀಡಿದ್ದರು. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಪ್ಪಿಗೆ, ಐಟಿ ವಲಯಕ್ಕೆ 10 ವರ್ಷಗಳ ತೆರಿಗೆ ವಿನಾಯತಿ, ರಾಜ್ಯಕ್ಕೆ ಪ್ರತ್ಯೇಕ ರೇಲ್ವೆ ವಲಯ, ರಾಜ್ಯದಲ್ಲಿ 20 ಸಕ್ಕರೆ ಕಾರ್ಖಾನೆಗಳ ಸ್ಥಾಪನೆಗೆ ಅನುಮತಿ ಕೊಟ್ಟಿದ್ದರು ಪ್ರಧಾನಿ ದೇವೇಗೌಡರು.

ಸೀಬರ್ಡ್ ನೌಕಾ ನೆಲೆಗೆ ಹೆಚ್ಚಿನ ಅನುದಾನ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ನ್ಯಾಷನಲ್ ಗೇಮ್ ವಿಲೇಜ್ ಸ್ಥಾಪಿಸಿ ನ್ಯಾಷನಲ್ ಗೇಮ್ ನಡೆಸಿದ್ದು, ತಮಿಳುನಾಡಿನ ವಿರೋಧದ ನಡುವೆಯೂ ಬೆಂಗಳೂರಿಗೆ 9 ಟಿಎಂಸಿ ಕಾವೇರಿ ನೀರು ಸಿಗುವಂತೆ ಮಾಡಿದ್ದು, ನಷ್ಟದಲ್ಲಿದ್ದ ಭದ್ರಾವತಿ ಉಕ್ಕು ಕಾರ್ಖಾನೆಗೆ ಬೀಗ ಮುದ್ರೆ ತಪ್ಪಿಸಲು 600 ಕೋಟಿ ರೂ. ಅನುದಾನ ನೀಡಿ 'ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ'ದ ಆಡಳಿತಕ್ಕೆ ಒಪ್ಪಿಸಿದ್ದು, ಇವು ರಾಜ್ಯಕ್ಕೆ ನೀಡಿದ್ದ ಕೆಲವು ಯೋಜನೆಗಳು. ಇನ್ನು ಹಲವನ್ನು ಇಲ್ಲಿ ಉಲ್ಲೇಖಿಸಿಲ್ಲ.

ಇನ್ನು ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಬಹುದೊಡ್ಡ ಸಮಸ್ಯೆಯಾಗಿದ್ದ ಹುಬ್ಬಳ್ಳಿ 'ಈದ್ಗಾ ಮೈದಾನ' ಸಮಸ್ಯೆಯನ್ನು ಸೌಹಾರ್ಧಯುತವಾಗಿ ಪರಿಹರಿಸಿದ್ದು ಅವರ ರಾಜಕೀಯ ಚಾಣಾಕ್ಷತೆಗೆ ಬಹುದೊಡ್ಡ ಸಾಕ್ಷಿ ಎನ್ನಬಹುದು.

ದೇಶಕ್ಕೆ ದೇವೇಗೌಡರ ಕೊಡುಗೆ

ದೇಶಕ್ಕೆ ದೇವೇಗೌಡರ ಕೊಡುಗೆ

2014ರಲ್ಲಿ ನಡೆಸಿದ್ದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಲ್ಲಿನ ಕಪ್ಪು ಹಣವನ್ನು ದೇಶಕ್ಕೆ ತರುವು ಭರವಸೆಯನ್ನು ಕೊಟ್ಟು ಗೆಲವು ಸಾಧಿಸಿದ್ದರು. ಆದರೆ ಮಾತನಾಡದೇ ಕಾಳಧನಿಕರಿಗೆ ಸಿಂಹಸ್ವಪ್ನದಂತೆ ಕಾಡಿದ್ದು ನಮ್ಮ ರಾಜ್ಯದ ಎಚ್ ಡಿ ದೇವೇಗೌಡರು ಎಂಬುದು ಬಹಳಷ್ಟು ಜನರಿಗೆ ಗಿತ್ತಿರಲಿಕ್ಕಿಲ್ಲ.

ಪ್ರಧಾನಿಯಾಗಿದ್ದ ದೇವೇಗೌಡರು ಪ್ರಥಮ ಬಾರಿಗೆ ಕಪ್ಪು ಹಣದ ಮೇಲೆ ಕಣ್ಣಿಟ್ಟು, ಕಾಳ ಧನಿಕರಿಂದ 25 ವರ್ಷಗಳ ಹಿಂದೆಯೇ 10 ಸಾವಿರ ಕೋಟಿ ರೂ. ಕಪ್ಪು ಹಣ ಹೊರತಂದರು. ಮುಂದೆ ವಿದೇಶದಲ್ಲಿನ ಕಪ್ಪುಹಣದ ವಿಚಾರವೇ ಬಿಜೆಪಿಯ ಪ್ರಮುಖ ಚುನಾವಣಾ ಪ್ರಣಾಳಿಕೆ ಆಗಿದ್ದನ್ನು ಗಮನಿಸಬಹುದು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕಪ್ಪು ಹಣದ ಕರಿತು ಪ್ರಸ್ತಾಪಿಸಲು ಪ್ರಧಾನಿಯಾಗಿದ್ದಾಗ ದೇವೇಗೌಡರು ಕಾಳಧನಿಕರ ಮೇಲೆ ಮಾಡಿದ್ದ ಪ್ರಹಾರವೇ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇವೇಗೌಡರು..!

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇವೇಗೌಡರು..!

ಎರಡೂವರೆ ದಶಕಗಳ ಹಿಂದೆಯೆ ಎಚ್.ಡಿ. ದೇವೇಗೌಡ ಅವರು ವಿದೇಶಗಳೊಂದಿಗೆ ಸೌಹಾರ್ಧಯುತ ಸಂಬಂಧವನ್ನು ಮುಂದುವರೆಸಲು ಪ್ರಯತ್ನಿಸಿದ್ದರು. ದೇವೇಗೌಡರು, ನೆರೆಯ ಬಾಂಗ್ಲಾದೇಶದೊಂದಿಗೆ ಗಂಗಾ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಹಾಗೂ ನೇಪಾಳದೊಂದಿಗೆ ಮಹಾಕಾಳಿ ಒಪ್ಪಂದ ಜಾರಿಗೊಳಿಸಲು ಕಾರಣೀಕರ್ತರಾದರು. ಪಾಕಿಸ್ತಾನ ಜತೆಗೆ ನಿಂತಿದ್ದ ಮಾತುಕತೆಯನ್ನು ಪುನರಾರಂಭಿಸುವ ಮೂಲಕ ದ್ವಿಪಕ್ಷೀಯ ಸಂಬಂಧಕ್ಕೆ ಮತ್ತೆ ಚಾಲನೆ ನೀಡಿದರು. ಶಿಷ್ಟಾಚಾರವನ್ನು ಬದಿಗಿಟ್ಟು ಅಂದಿನ ಚೀನಾ ಅಧ್ಯಕ್ಷರನ್ನು ಬರಮಾಡಿಕೊಳ್ಳುವ ಮೂಲಕ ಎರಡೂ ದೇಶಗಳ ಸಂಬಂಧಗಳು ವೃದ್ಧಿಸಲು ಬುನಾದಿ ಹಾಕಿದ್ದರು. ಈಗಲೂ ಹಲವು ವಿದೇಶಿ ಗಣ್ಯರು ದೇವೇಗೌಡರ ಜನ್ಮದಿನದಂದು ಅಭಿನಂದನೆ ಸಲ್ಲಿಸುವುದನ್ನು ನಾವು ನೋಡುತ್ತಿದ್ದೇವೆ.

ಕೃಷಿ ಕ್ಷೇತ್ರಕ್ಕೆ ದೇವೇಗೌಡರ ಕೊಡುಗೆಗಳು!

ಕೃಷಿ ಕ್ಷೇತ್ರಕ್ಕೆ ದೇವೇಗೌಡರ ಕೊಡುಗೆಗಳು!

ಲೋಕಪಾಲ್ ಮಸೂದೆ ಮಂಡನೆ, ಮಹಿಳೆಯರ ಸಬಲೀಕರಣಕ್ಕಾಗಿ ಶೆಕಡಾ 30ರಷ್ಟು ಮಹಿಳಾ ಮೀಸಲು ವಿಧೇಯಕ ಮಂಡನೆ, ದೆಹಲಿ ಮೆಟ್ರೋಗೆ ಅನುಮತಿ ಜೊತೆಗೆ ಕೇಂದ್ರ ಸರ್ಕಾರದಿಂದ ಶೇಕಡಾ 5 ರಷ್ಟು ಅನುದಾನ ಕೊಟ್ಟು ಚಾಲನೆ ಕೊಟ್ಟಿದ್ದರು. ತಮ್ಮ 10 ತಿಂಗಳುಗಳ ಅಧಿಕಾರವಧಿಯಲ್ಲಿ ಕೃಷಿ ವಲಯಕ್ಕೆ ಅತ್ಯಂತ ಹೆಚ್ಚಿನ ಕೊಡುಗೆಗಳನ್ನು ದೇವೇಗೌಡರು ನೀಡಿದ್ದರು.


ರಾಷ್ಟ್ರೀಯ ಕೃಷಿ ನೀತಿಯನ್ನು ಜಾರಿಗೆ, ಹನಿ ನೀರಾವರಿ ಯೋಜನೆಗಳಿಗೆ ರೈತರುಗಳಿಗೆ ಶೇಕಡಾ 90 ರಷ್ಟು ಅನುದಾನವನ್ನು ಕೊಡುವ ಮೂಲಕ ಕೃಷಿ ಕ್ರಾಂತಿಗೆ ದೇವೇಗೌಡರು ಕಾರಣರಾದು. 1997ರಲ್ಲಿ ಪಂಜಾಬ್‌ ರಾಜ್ಯದ ರೈತರು ಹೆಚ್ಚಾಗಿ ಭತ್ತ ಬೆಳೆದಿದ್ದರಿಂದ ಬತ್ತ ಮಾರಾಟವಾಗದೇ ರೈತರು ಆತ್ಮಹತ್ಯೆಯ ಹಾದಿ ಹಿಡಿಯುವುದರಲ್ಲಿದ್ದರು. ಅಲ್ಲಿನ ಸ್ಥಳೀಯ ಸರ್ಕಾರವೂ ಕೈಚೆಲ್ಲಿತ್ತು. ಆಗ ರೈತರು ಬೆಳೆದಿದ್ದ ಅಷ್ಟೂ ಭತ್ತವನ್ನು ಕೇಂದ್ರ ಸರ್ಕಾರ ಖರೀದಿಸುವಂತೆ ದೇವೇಗೌಡರು ಸೂಚಿಸಿದ್ದರು. ಅದರಿಂದಾಗಿ ಪಂಜಾಬ್ ರೈತರು ಸಂಕಷ್ಟದಿಂದ ಪಾರಾಗಿದ್ದರು. ಹೀಗಾಗಿ ದೇವೇಗೌಡರ ಮೇಲಿನ ಗೌರವದಿಂದ ಪಂಜಾಬ್‌ ರೈತರು ಬತ್ತದ ತಳಿಯೊಂದಕ್ಕೆ ದೇವೆಗೌಡರ ಹೆಸರನ್ನೇ ಇಟ್ಟಿದ್ದಾರೆ.

ದೇವೇಗೌಡರು ಪ್ರಧಾನಿಯಾದ ಬಳಿಕ ಜಮ್ಮು ಕಾಶ್ಮೀರದಲ್ಲಿ 1988ರ ನಂತರ ಚುನಾಯಿತ ಸರ್ಕಾರ ರಚನೆಯಾಗುವಂತೆ ಮಾಡಿದ್ದರು. ಕಾಶ್ಮೀರದಲ್ಲಿ ಸುಮಾರು 290 ಕಿ.ಮೀ. ಉದ್ದದ ಉದಾಮಪುರ ಮತ್ತು ಬಾರಾಮುಲ್ಲಾ ನಡುವೆ ರೈಲ್ವೆ ಸಂಪರ್ಕಕ್ಕೆ ಹಸಿರು ನಿಶಾನೆ ನೀಡಿ, ಜಮ್ಮು ಕಾಶ್ಮೀರದ ಕಣಿವೆ ಭಾಗವು ಭಾರತದೊಂದಿಗೆ ಬೆಸೆಯಲು ಕಾರಣಕರ್ತರಾದರು. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ದುಲಾಸ್ತಿ ಮತ್ತು ಯುರಿ ಹೈಡ್ರೋಎಲೆಕ್ಟ್ರಿಕ್ ಯೋಜನೆಗೆ ಸಂಪುಟದಲ್ಲಿ ಒಪ್ಪಿಗೆ ಕೊಟ್ಟಿದ್ದರು.

ಹೀಗೆ ಪಟ್ಟಿ ಮಾಡಲು ಆಗದಷ್ಟು ಕೊಡುಗೆಗಳನ್ನು ಪ್ರಧಾನಿಯಾಗಿ ದೇವೇಗೌಡರು ನಾಡಿಗೆ, ದೇಶಕ್ಕೆ ಕೊಟ್ಟಿದ್ದಾರೆ.

ಈಗ ಮಾಜಿ ಪ್ರಧಾನಿ ಆಗಿದ್ದರೂ!

ಈಗ ಮಾಜಿ ಪ್ರಧಾನಿ ಆಗಿದ್ದರೂ!

ದೇಶದಲ್ಲಿರುವ ಇತರ ಮಾಜಿ ಪ್ರಧಾನಿಗಳನ್ನು ಹೋಲಿಕೆ ಮಾಡಿದರೆ ದೇವೇಗೌಡರ ಮಹತ್ವ ಅರಿವಾಗುತ್ತದೆ. ದೇಶದಲ್ಲಿರುವ ಯಾವುದೇ ಮಾಜಿ ಪ್ರಧಾನಿಗಳು ಜನತೆಗೆ, ಮಾಧ್ಯಮಗಳಿಗೆ ನೇರವಾಗಿ ಸಿಗುವುದೇ ಇಲ್ಲ. ಆದರೆ ಮಾಜಿ ಪ್ರಧಾನಿ ದೇವೇಗೌಡರು ಹಾಗಲ್ಲ. ಮಾಜಿ ಪ್ರಧಾನಿ ಆಗಿದ್ದರೂ ಈಗಲೂ ಪದ್ಮನಾಭವನಗರ ಅವರ ನಿವಾಸದಲ್ಲಿ ನೂರಾರು ಜನರನ್ನು ಭೇಟಿ ಮಾಡುತ್ತಾರೆ.

ಅವರ ರಾಜಕೀಯ ಅನುಭವದ ಅರ್ಧದಷ್ಟು ವಯಸ್ಸಿನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬೆರೆಯುತ್ತಾರೆ. ಕೋಪ ಬಂದರೆ ರೇಗುತ್ತಾರೆ. ತಮ್ಮ ಖಾಸಗಿ ಕೋಣೆಗೂ ಪತ್ರಕರ್ತರನ್ನು ದೇವೇಗೌಡರು ಬಿಟ್ಟುಕೊಳ್ಳುತ್ತಾರೆ ಎಂದರೆ ಅವರ ಸರಳತೆ ಅರ್ಥವಾಗುತ್ತದೆ. ಕನ್ನಡ ಪ್ರಾದೇಶಿಕ ಮಾಧ್ಯಮಗಳ ಯಾವುದೇ ವರದಿಗಾರ ಹೋದರೂ ಇಲ್ಲ ಎನ್ನದೆ ಸಂದರ್ಶನ ಕೊಡುತ್ತಾರೆ. ರಾಜಕೀಯ ಅನುಭವ ಹಂಚಿಕೊಳ್ಳುತ್ತಾರೆ.

ದೇವೇಗೌಡರ ಮೇಲಿನ ಆರೋಪಗಳಿಗೂ ಕಮ್ಮಿಯಿಲ್ಲ

ದೇವೇಗೌಡರ ಮೇಲಿನ ಆರೋಪಗಳಿಗೂ ಕಮ್ಮಿಯಿಲ್ಲ

ಇಷ್ಟೆಲ್ಲ ಕೆಲಸಗಳ ಬಳಿಕವೂ ಮಾಜಿ ಪ್ರಧಾನಿ ದೇವೇಗೌಡರ ಮೇಲಿನ ಆರೋಪಗಳಿಗೆ ಕಡಿಮೆಯಿಲ್ಲ. ಆಧುನಿಕ ಧೃತರಾಷ್ಟ್ರ, ಕುಟುಂಬ ರಾಜಕಾರಣಿ, ಸ್ವಜನಪಕ್ಷಪಾತಿ, 24 ಗಂಟೆ ರಾಜಕಾರಣಿ ಹೀಗೆ ಇವರನ್ನು ಹತ್ತಾರು ಬೇರೆ ಬೇರೆ ಹೆಸರುಗಳಿಂದ ಕರೆಯುವ ರಾಜಕೀಯ ವಿರೋಧಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ ಎಂಬುದೂ ಸುಳ್ಳಲ್ಲ. ಅದಕ್ಕೆ ಕಾರಣಗಳು ಇಲ್ಲದಿಲ್ಲ.

ಪಕ್ಕಾ ಜಾತ್ಯತೀತ ರಾಜಕಾರಣಿಯಾಗಿರುವ ದೇವೇಗೌಡರು ಬಿಜೆಪಿ ಜೊತೆಗೆ ಸರ್ಕಾರ ರಚನೆ ಮಾಡಲು ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅವಕಾಶ ಮಾಡಿಕೊಟ್ಟಿದ್ದರು ಎಂಬ ಆರೋಪವಿದೆ. ಪುತ್ರನನ್ನು ಸಿಎಂ ಮಾಡುವುದಕ್ಕಾಗಿಯೆ ರಾಜಕೀಯ ತಂತ್ರವನ್ನು ದೇವೇಗೌಡರು ಮಾಡಿದ್ದರು ಎಂಬುದು ಆರೋಪವದು. ಅದಾದ ಬಳಿಕ 2019ರಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರದಿಂದ ದೂರ ಇಡುವುದಕ್ಕಾಗಿ ಕಾಂಗ್ರೆಸ್ ಜೊತೆಗೆ ಸರ್ಕಾರ ರಚನೆ ಮಾಡುವ ಮೂಲಕ ತಮ್ಮ ಮೇಲಿನ ಆರೋಪ ಮುಕ್ತರಾಗಲು ಪ್ರಯತ್ನಿಸಿದ್ದಾರೆ.

ಮೊಮ್ಮಗನಿಗೆ ರಾಜಕೀಯ ಅವಕಾಶ ಕಲ್ಪಿಸಲು ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದು, ಈಗಲೂ ಜೆಡಿಎಸ್‌ ಪಕ್ಷವನ್ನು ಕುಟುಂಬಕ್ಕೆ ಮಾತ್ರ ಸೀಮಿತ ಮಾಡಿರುವುದು ದೇವೇಗೌಡರ ಮೇಲಿರುವ ಆರೋಪಗಳು. ಹುಬ್ಬಳ್ಳಿಯಲ್ಲಿ ನೈರಯತ್ಯ ರೇಲ್ವೆ ಸ್ಥಾಪನೆಗೆ ದೇವೇಗೌಡರ ವಿರೋಧಿವಿತ್ತು ಎಂಬ ಆರೋಪಗಳಿವೆ. ಅವೆಲ್ಲವನ್ನೂ ದೇವೇಗೌಡರು ಸಾಕ್ಷಿ ಸಹಿತ ನಿರಾಕರಿಸಿದ್ದಾರೆ.

ಸಾಧನೆಯ ಶಿಖರಾಹೋಣ

ಸಾಧನೆಯ ಶಿಖರಾಹೋಣ

ಮಾಜಿ ಪ್ರಧಾನಿ ದೇವೇಗೌಡ ಅವರ ಕುರಿತಾದ `ಸಾಧನೆಯ ಶಿಖರಾರೋಹಣ' ಎಂಬ ಪುಸ್ತಕ ಬಿಡುಗಡೆಯಾಗಿದೆ. ಡಾ. ಪ್ರಧಾನ್ ಗುರುದತ್ತ, ಡಾ.ಸಿ. ನಾಗಣ್ಣ ಅವರು ಬರೆದಿರುವ ಪುಸ್ತಕವಾಗಿದ್ದು, ಪ್ರಧಾನ ಮಂತ್ರಿಯಾಗಿ ದೇವೇಗೌಡ ಅವರು ಮಾಡಿರುವ ಸಾಧನೆಗಳು, ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಷಡ್ಯಂತ್ರಗಳು ಸೇರಿದಂತೆ ಹಲವು ವಿವರಗಳಿವೆ ಪುಸ್ತಕದಲ್ಲಿವೆ.

1994ರಲ್ಲಿ ದೇವೇಗೌಡರು ಜನತಾದಳದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುವಾಗ ವಿಧಾನಸೌಧದಲ್ಲಿ ದೊಡ್ಡ ಗಲಾಟೆಯೆ ಆಗಿತ್ತು. ಆಗ ದಿ. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರಿಗೆ ಪಾದರಕ್ಷೆಯಲ್ಲಿ ಹೊಡೆತ ಬಿದ್ದು, ಮತ್ತೊಬ್ಬ ದಿ. ಮಾಜಿ ಸಿಎಂ ಬೊಮ್ಮಾಯಿಯವರಿಗೆ ಪೆಟ್ಟಾದ ವಿಷಯ ಉಲ್ಲೇಖ ಮಾಡಲಾಗಿದೆ. ದೇವೇಗೌಡರು ಸಿಎಂ ಆಗ ಬಳಿಕ ಪತ್ರಿಕೆಯೊಂದಕ್ಕೆ ಸಂದರ್ಶನ ಕೊಟ್ಟಿದ್ದ ರಾಮಕೃಷ್ಣ ಹೆಗಡೆ ಅವರು, 'ಯಾರನ್ನೊ ಮುಖ್ಯಮಂತ್ರಿ ಮಾಡಲು ಹೋಗಿ ನಾನು ಚಪ್ಪಲಿ ಏಟು ತಿಂದೆ' ಎಂದಿದ್ದರು.

ಡೋನಾಲ್ಡ್ ಟ್ರಂಪ್ ಭವಿಷ್ಯ ನುಡಿದಿದ್ದ ಎಚ್‌ಡಿಡಿ!

ಡೋನಾಲ್ಡ್ ಟ್ರಂಪ್ ಭವಿಷ್ಯ ನುಡಿದಿದ್ದ ಎಚ್‌ಡಿಡಿ!

ಮೊದಲೇ ಹೇಳಿದಂತೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಬರುವ 4 ತಿಂಗಳು ಮೊದಲೇ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗ್ತಾರೆ ಅಂತಾ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಭವಿಷ್ಯ ನುಡಿದಿದ್ದರು. ಆದರೆ ಅಮೆರಿಕದ ಖ್ಯಾತ ಪತ್ರಿಕೆಗಳಾದ TIME, CNN Politics ಸೇರಿದಂತೆ ಹಲವು ಮಾಧ್ಯಮಗಳು ನವೆಂಬರ್ 7, 2016ರಂದು ಹಿಲರಿ ಕ್ಲಿಂಟನ್ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಹೇಗೆ ಸೋಲಿಸಲಿದ್ದಾರೆ ಎಂಬ ವಿಶ್ಲೇಷಣೆಯನ್ನೇ ಮಾಡಿದ್ದವು.

ಆದರೆ ದೇವೇಗೌಡರು ಮಾತ್ರ ಆಗಷ್ಟ್ ತಿಂಗಳಿನಲ್ಲಿಯೆ "ನೋಡಿ, ಆ ಡೋನಾಲ್ಡ್ ಟ್ರಂಪ್ ಇದ್ದಾರಲ್ಲ, ಹುಚ್ಚ ಅಂದ್ಕೊಬೇಡಿ. ಜಗತ್ತಿನಾದ್ಯಂತ ಬಲಪಂಥೀಯ ರೀತೀಯ ಅಲೆ ಇದೆ. ಇದಕ್ಕೆ ಮುಖ್ಯ ಕಾರಣ ಭಯೋತ್ಪಾದನೆ. ಅಮೆರಿಕದ ಜನರನ್ನು ದಾರಿ ತಪ್ಪಿಸಲಾಗಿದೆ. ಹಾಗಾಗಿ ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವುದು ಆ ಟ್ರಂಪ್, ನೋಡ್ತಾಯಿರಿ ಎಂದಿದ್ದರು. ಆಗ ದೇವೇಗೌಡರ ಮಾತು ತಳ್ಳಿಹಾಕಿದ್ದ ಪತ್ರಕರ್ತರೂ ಕೂಡ ಫಲಿತಾಂಶದ ಬಳಿಕ ತಲೆದೂಗಿದ್ದರು!.

ಅಂಥ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದು ಆಕಸ್ಮಿಕವೂ ಅಲ್ಲ, ಪವಾಡವೂ ಅಲ್ಲ. ರಾಜಕೀಯ ಷಡ್ಯಂತ್ರವೂ ಅಲ್ಲ. ಅವಕಾಶವಾದಿತನವೂ ಅಲ್ಲ. ಅದು ಅವರ ರಾಜಕೀಯ ಪ್ರಬುದ್ಧತೆ!

English summary
JDS Suprimo H.D. Deve Gowda Rose to the Prime Minister Post 25 Years Ago Because of His Political Maturity.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X