ಅತಿಥಿ ಸತ್ಕಾರಕ್ಕೆ ಬೆಳಗಾವಿ ಜನತೆಗೆ ಸುವರ್ಣಾವಕಾಶ

ರಾಜ್ಯ ಮಾತ್ರವಲ್ಲ ಹೊರನಾಡಿನಿಂದ, ಹೊರದೇಶದಿಂದ ಕಲಾವಿದರು, ಸಾಹಿತಿಗಳು, ಕನ್ನಡಿಗರು, ಕನ್ನಡೇತರರು ಲಕ್ಷೋಪಕ್ಷ ಸಂಖ್ಯೆಯಲ್ಲಿ ಮಾರ್ಚ್ 11ರಿಂದ 13ರವರೆಗೆ ನಡೆಯುತ್ತಿರುವ ಕನ್ನಡ ಹಬ್ಬದಲ್ಲಿ ಭಾಗವಹಿಸುತ್ತಿದ್ದಾರೆ. ಕರ್ನಾಟಕದ ಪ್ರತಿಜಿಲ್ಲೆಯಿಂದ ವಿಶ್ವ ಕನ್ನಡ ತೇರು ಬೆಳಗಾವಿಯನ್ನು ಮಾ.10ರಂದು ತಲುಪುತ್ತಿವೆ. ಮಾ.11ರಂದು ಬೃಹತ್ ಮೆರವಣಿಗೆಯನ್ನೂ ಆಯೋಜಿಸಲಾಗಿದೆ. ಒಟ್ಟಿನಲ್ಲಿ ಭಾಷಾ ಕಲಹದಿಂದ ಕಂಗೆಟ್ಟಿರುವ ನಗರದಲ್ಲಿ ಕನ್ನಡ ಡಿಂಡಿಮ ಬಾರಿಸಲಿದೆ.
ಅತಿಥಿಗಳಿಗೆ, ಊರೂರಿಂದ ಬರುವ ಕನ್ನಡ ಪ್ರೇಮಿಗಳಿಗೆ ವಸತಿ ಕಲ್ಪಿಸಿಕೊಡುವುದಾದರೂ ಹೇಗೆ? ಇದು ಜಿಲ್ಲಾಡಳಿತದ ಮುಂದಿರುವ ಬೃಹತ್ ಸಮಸ್ಯೆ. ಅತಿಥಿಗಳ ವಸತಿಗಾಗಿ ಊರಿನಲ್ಲಿರುವ ಹತ್ತುಹನ್ನೆರಡು ಹೊಟೇಲುಗಳು, ಶಾಲೆ ಕಾಲೇಜುಗಳು, ಸಮುದಾಯ ಭವನಗಳು, ಮದುವೆ ಛತ್ರಗಳು, ಅಷ್ಟೇ ಏಕೆ ನಿರ್ಮಾಣ ಹಂತದಲ್ಲಿರುವ ಕೆಲ ಕಟ್ಟಡಗಳನ್ನು ಕೂಡ ಜಿಲ್ಲಾಡಳಿತ ತನ್ನ ಸುಪರ್ದಿಯಲ್ಲಿ ತೆಗೆದುಕೊಂಡಿದೆ.
ಈ ಸಮಸ್ಯೆಯನ್ನು ಮನಗಂಡಿರುವ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಬಂದವರಿಗೆ ವಸತಿ ಕಲ್ಪಿಸಲು ವಿನೂತನ ಕಾರ್ಯಕ್ಕೆ ಕೈಹಾಕಿದೆ. ಅದೇ 'ತೆರೆದಿದೆ ಮನೆ ಓ ಬಾ ಅತಿಥಿ'. ಬೆಳಗಾವಿ ನಗರದಲ್ಲಿರುವ ನಿಮ್ಮ ಮನೆಯಲ್ಲಿ ಇಳಕೊಳ್ಳಲು ಹೆಚ್ಚಿನ ಕೊಠಡಿಯೊಂದು ಇದ್ದರೆ, ಅದನ್ನು ಹೋಂಸ್ಟೇಯನ್ನಾಗಿ ಪರಿವಸ್ತಿಸಿ, ಊರಿಂದ ಬಂದವರಿಗೆಂದು ನೀಡಿ, ಅತಿಥಿ ಸತ್ಕಾರದ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ ಎಂದು ಪ್ರಕಟಣೆ ನೀಡಿದೆ.
ಇದಕ್ಕಾಗಿ ಅರ್ಜಿಯೊಂದನ್ನು 'ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ, ಬೆಳಗಾವಿ' ವಿಳಾಸಕ್ಕೆ ಈಮೇಲ್ : [email protected] ಅಥವಾ ಖುದ್ದಾಗಿ ನೀಡಬಹುದು. ಅದರಲ್ಲಿ ಮನೆಯ ಮಾಲಿಕನ ಹೆಸರು, ವಯಸ್ಸು, ವಿಳಾಸ, ವಿಳಾಸದ ಪ್ರಮುಖ ಹೆಗ್ಗುರುತು, ದೂರವಾಣಿ ಸಂಖ್ಯೆ, ಮಾಲಿಕತ್ವದ ಬಗ್ಗೆ ಪುರಾವೆ, ಮನೆ ಹತ್ತಿರವಿರುವ ಆಕರ್ಷಕ ತಾಣಗಳು, ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತದೆ, ಕೊಠಡಿಗಳ ಸಂಖ್ಯೆ ಇತ್ಯಾದಿ ವಿವರಗಳನ್ನು ನೀಡಿದರೆ ಆಯೋಜಕರಿಗೂ ಅನುಕೂಲ, ಆರ್ಥಿಕವಾಗಿ ಮನೆ ಮಾಲಿಕರಿಗೂ ಸಹಾಯವಾಗುತ್ತದೆ. ಕನ್ನಡಿಗರ ಹೃದಯ ಗೆಲ್ಲಲು ಬೆಳಗಾವಿ ವಾಸಿಗಳಿಗೆ ಇದೊಂದು ಸುವರ್ಣಾವಕಾಶ.
ನೆನಪಿನಲ್ಲಿಡಿ : ಈ ಅರ್ಜಿ ಮಾರ್ಚ್ 4 (ಶುಕ್ರವಾರ) ಸಂಜೆ 5 ಗಂಟೆಯೊಳಗೆ ಕಚೇರಿ ತಲುಪಬೇಕು. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 0831 - 2474649 ಅಥವಾ 89706 50214. [ಬೆಳಗಾವಿ ಸಮ್ಮೇಳನದ ಸುದ್ದಿಬಿಂಬ]












Click it and Unblock the Notifications