ಮೋಹನ ಕವನ : ಹಾಡು ಬಾ ಕನ್ನಡ ಕೋಗಿಲೆ

ನಲಿದಾಡು ಬಾ ಕನ್ನಡ ನವಿಲೆ
ಭುವನೆಶ್ವರಿ ಮಡಿಲಲಿ ಕನ್ನಡ ನಾಡಲಿ
ಹಾಡು ಬಾ ನಲಿದಾಡು ಬಾ
ಕನ್ನಡ ಕೋಗಿಲೆ ಕನ್ನಡ ನವಿಲೆ
ಕದಂಬರು ಕಟ್ಟಿದ ಕನ್ನಡ ನಾಡಿದು
ನೃಪತುಂಗನ ಕಾವ್ಯಕೆ ಸೆಲೆಯಾಗಿಹುದು
ಕೃಷ್ಣದೇವರಾಯನು ಬೆಳೆಸಿದ ನಾಡಿದು
ಶೂರರು ಜಾಣರು ಉದಿಸಿದ ನೆಲವಿದು
ನೃಪತುಂಗನ ಕಾವ್ಯಕೆ ಸೆಲೆಯಾಗಿಹುದು
ಕೃಷ್ಣದೇವರಾಯನು ಬೆಳೆಸಿದ ನಾಡಿದು
ಶೂರರು ಜಾಣರು ಉದಿಸಿದ ನೆಲವಿದು
ಚೆನ್ನಮ್ಮನು ಬಿತ್ತಿದ ಕ್ರಾಂತಿಯ ಬೀಜದ
ಓಬವ್ವನು ತೋರಿದ ದುರ್ಗೆಯ ಶೌರ್ಯದ
ಕೆಳದಿಯ ರಾಣಿಯ ಕಹಳೆಯ ಮೊಳಗಿದ
ಸಂಗೊಳ್ಳಿ ರಾಯಣ್ಣನ ರೋಷದ ನಾಡಿದು
ಪಂಪನ ರನ್ನನ ಕಾವ್ಯದ ಆಗರ
ಕನಕ ಪುರಂದರ ಭಕ್ತಿಯ ಸಾಗರ
ಬಸವನ ಅಕ್ಕನ ಅನುಭವ ಮಂಟಪ
ಬೇಂದ್ರೆ ಕುವೆಂಪು ಕವಿಗಳ ಕಮ್ಮಟ
ಚಾಲುಕ್ಯರ ಕಾಲದ ಬಾದಾಮಿ ಗುಡಿಗಳ
ಗೊಮ್ಮಟ ನಿಂತಾ ಶ್ರವಣ ಬೆಳಗೊಳ
ಗೊಲಗುಂಬಜದಿ ಓಡುವ ದ್ವನಿಗಳ
ಹಂಪಿ ಹಳೆಬೀಡಿನ ಕಲೆಗಳ ಬೀಡಿದು
ಹಂಪಿ ವಿರುಪಾಕ್ಷ ಶ್ರೀಶೈಲ ಶಿವನು
ಧರ್ಮಸ್ಥಳದ ಶ್ರೀ ಮಂಜುನಾಥನು
ಶೃಂಗೇರಿ ಶಾರದೆ ಉಡುಪಿಯ ಕೃಷ್ಣನು
ರೇಣುಕಾಂಬೆಯರು ಹರಸಿದ ನಾಡಿದು
ಕಾವೇರಿ ಕೃಷ್ಣೆ ತುಂಗೇ ಭದ್ರೇ
ಹರಿದು ಹಮ್ಮಿದ ಹಸಿರಿನ ನಾಡು
ಮೃಗಜಲ ರಾಶಿಗೆ ಪಕ್ಷಿಸಂಕುಲಕೆ
ಜೀವನೀಡುವ ಸಹ್ಯಾದ್ರಿಯ ಕಾಡು
ಕಣ್ಮನ ತಣಿಯುವ ಬನಗಳ ಸಿರಿಗಳ
ಸುಖಸಂಪದವೀಯುವ ಕನ್ನಡ ನಾಡು
ಪಂಡಿತ ಪಾಮರ ರಸಋಷಿಗಳ ಬೀಡಿದು
ಜ್ನಾನವಾಹಿನಿ ಹರಿಸಿದ ದಿವ್ಯರ ನಾಡಿದು
ಹಾಡು ಬಾ ಕನ್ನಡ ಕೋಗಿಲೆ
ನಲಿದಾಡು ಬಾ ಕನ್ನಡ ನವಿಲೆ
ಭುವನೆಶ್ವರಿ ಮಡಿಲಲಿ ಕನ್ನಡ ನಾಡಲಿ...












Click it and Unblock the Notifications