ಕನ್ನಡ ಸಮ್ಮೇಳನದಲ್ಲಿ ನಿಮಗೆ ಊಟ ಸಿಕ್ತಾ?

ಮನೆಗೆ ಹತ್ತು ಜನ ಊಟಕ್ಕೆ ಬಂದರೆ ಒಪ್ಪವಾಗಿ ಅಡುಗೆ ಮಾಡಿಸುವುದೇ ಕಷ್ಟ. ಹೀಗಿರುವಾಗ ನೊಂದಾಯಿತರ ಸಂಖ್ಯೆ ಹತ್ತು, ಭೋಜನ ಶಾಲೆಯಲ್ಲಿ ಇಪ್ಪತ್ತು ಎಂಬಂತಹ ಲೆಕ್ಕದಲ್ಲಿ ಜನ ಸೇರಿದರೆ ಸಮರ್ಪಕ ಊಟದ ಸಮಾರಾಧನೆ ಮಾಡುವುದು ಆಯೋಜಕರಿಗೆ ದುಸ್ಸಾಹಸವೇ ಸರಿ ಎಂದೂ ಹೇಳುತ್ತಿದ್ದವರು 17 ಸಾಹಿತ್ಯ ಸಮ್ಮೇಳನಗಳನ್ನು ಕಣ್ಣಾರೆ ಕಂಡಿದ್ದೇನೆ ಎಂದು ಹೇಳಿದ ನಿವೃತ್ತ ಸರಕಾರಿ ನೌಕರ, ಕನ್ನಡ ಹಿತೈಷಿ ಬಿ.ಎಸ್. ಲಕ್ಷ್ಮಿನಾರಾಯಣ(68).
ಇಂದು ಬೆಳಗ್ಗೆ ಸಮ್ಮೇಳನಕ್ಕೆ ಹೋದಾಗ ಲಕ್ಷ್ಮಿನಾರಾಯಣ ಅವರು ಹೇಳಿದಂತಹ ಯಾವೊಂದು ಅವ್ಯವಸ್ಥೆ ನಮ್ಮ ತಂಡಕ್ಕೆ ಕಾಣಲಿಲ್ಲ. 25-30 ಸಾವಿರ ಜನಕ್ಕೆ ರುಚಿಯಾದ ಉಪಹಾರ ಚೆನ್ನಾಗಿಯೇ ಏರ್ಪಾಟಾಗಿತ್ತು. ವ್ಯವಸ್ಥೆಯನ್ನು ಕಂಡ ಹಲವರು ಸಂತಸ ವ್ಯಕ್ತಪಡಿಸಿದರು. ನಮಗೂ ಸಂತೋಷ ಆಯಿತೆನ್ನಿ.
ಬೆಂಗಳೂರು ಸಾಹಿತ್ಯ ಸಮ್ಮೇಳನಕ್ಕಾಗಿ ಸಭಾಂಗಣ ಸಮೀಪದ ನಾನಾ ಕಡೆ ಊಟ ತಿಂಡಿಗೆ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ, ಚಾಮರಾಜ ಪೇಟೆಯ ಕೋಟೆ ಪ್ರೌಢಶಾಲೆ ಮೈದಾನದಲ್ಲಿಯೂ ಒಂದೈವತ್ತು ಸಾವಿರ ಜನಕ್ಕೆ ಶುಕ್ರವಾರ ಮಧ್ಯಾನ್ಹದ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬಿಸಿಲೇರುತ್ತಿದ್ದಂತೆ, ಲಂಚ್ ಅವರ್ ಸಮೀಪಿಸುತ್ತಿದ್ದಂತೆ ಅದೆಲ್ಲಿತ್ತೋ ಜನಸಾಗರ ಉಕ್ಕಿ ಹರಿಯತೊಡಗಿತು. ಸಾಮಾನ್ಯವಾಗಿ ಲೇಖಕರು, ಸಾಹಿತಿಗಳು, ಪ್ರಕಾಶಕರು, ಒಬ್ಬೊಬ್ಬರು ಒಂದು ಕಡೆ ಚದುರಿ ಹೋಗಿರುತ್ತಾರೆ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಲ್ಲ. ಆದರೆ, ಕೊನೆಗೂ ಎಲ್ಲರೂ ಒಟ್ಟಾಗಿ ಭೇಟಿ ಆಗುವುದು ಭೋಜನ ಶಾಲೆಯಲ್ಲಿ ಮಾತ್ರ. ಅಲ್ಲೇ ಕೊರತೆ ಉಂಟಾದರೆ ಸಿರಿ ಇನ್ನೆಲ್ಲಿರತ್ತೆ. ಕನ್ನಡ ಜನ ಒಂದಾದರೆ ತಲೆದೋರುವ ತೊಂದರೆ ತಾಪತ್ರಯಗಳಿಗೆ ಇದೊಂದು ಉದಾಹರಣೆ ಮಾತ್ರವೇ.
ಇವತ್ತು ಮಧ್ಯಾನ್ಹ ಕೊನೆಗೂ ಹಾಗಾಯಿತು. ಊಟಕ್ಕೆ ಸಿದ್ಧಪಡಿಸಲಾಗಿದ್ದ ರೈಸ್‌ಬಾತ್, ವಾಂಗಿವಾತ್, ಮೊಸರನ್ನ ಕ್ಷಣಾರ್ಧದಲ್ಲಿ ಮಿಂಚಿ ಮಾಯವಾಯಿತು. ಇನ್ನೂ ಊಟ ಮಾಡದೇ ಇದ್ದ, ಆದರೆ ಹಸಿದಿದ್ದ ಜನ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ವ್ಯವಸ್ಥಾಪಕರು ಮತ್ತು ಪೊಲೀಸರು ಕೈಕಟ್ಟಿಕೊಂಡು ದೂರದಿಂದಲೇ ತಮಾಷೆ ನೋಡತೊಡಗಿದರು ಎಂದು ಹಸಿದಿದ್ದ ಕನ್ನಡ ಸಾಹಿತ್ಯ ಪ್ರೇಮಿಗಳು ಅರಚಾಡತೊಡಗಿದರು. ಊಟ ಮಿಸ್ ಆದುದಕ್ಕಾಗಿ ಕುಪಿತಗೊಂಡ ಹಲವರು ಕುರ್ಚಿ, ಮೇಜುಗಳನ್ನು ಕುಟ್ಟಿಬಿಸಾಕಿ ಅಸಹನೆ ವ್ಯಕ್ತಪಡಿಸಿದರು.
ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯಕ್ಕಿಂತ ಊಟವೇ ಹೆಚ್ಚು ಸುದ್ದಿ, ಗದ್ದಲ ಮಾಡುವುದು ಸಾಮಾನ್ಯ. ಇದಕ್ಕೆ ಅಪವಾದವೆಂದರೆ ಉಡುಪಿ ಸಾಹಿತ್ಯ ಸಮ್ಮೇಳನದ ರಾಜಾಂಗಣದಲ್ಲಿ ಮಾಡಿದ್ದ ಭೋಜನ ವ್ಯವಸ್ಥೆ, ಮೂಡುಬಿದರೆಯ ಭೋಜನ ಶಾಲೆಯಲ್ಲಿ ಸ್ವಯಂಸೇವಕರು ಮಾಡಿದ ಅಚ್ಚುಕಟ್ಟಾದ ಊಟ ತಿಂಡಿ ವ್ಯವಸ್ಥೆಗಳನ್ನು ಆ ಸಮ್ಮೇಳನ ನೋಡಿದವರು ಮರೆಯುವುದಿಲ್ಲ. ಇವೆರಡು ಅಪವಾದ ಅಷ್ಟೆ.
ಕನಕಪುರದ ಸಮ್ಮೇಳನದಲ್ಲಿ, ತುಮಕೂರು ಸಮ್ಮೇಳನದಲ್ಲಿ ಉಂಟಾದ "ಭೋಜನ ಕ್ರಾಂತಿ" ಬೆಂಗಳೂರು ಸಮ್ಮೇಳನದಲ್ಲೂ ಮರುಕಳಿಸುವ ಸಾಧ್ಯತೆಗಳು ಎದ್ದು ಕಾಣುತ್ತಿವೆ. ಇಂದು ಮೊದಲ ದಿನ. ಆಯೋಜಕರಿಗೆ ಜನಸಾಗರದ ಅಂದಾಜು ಬಹುಶಃ ಸಿಕ್ಕಿರಲಿಕ್ಕಿಲ್ಲ. ಸಮ್ಮೇಳನ ಇನ್ನೂ ಎರಡು ದಿನ ಬಾಕಿಯಿದೆ. ವಾರಾಂತ್ಯ ಬೇರೆ. ಶನಿವಾರ, ಭಾನುವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಚಾಮರಾಜಪೇಟೆಯತ್ತ ಜನ ಧಾವಿಸಿ ಬರುವುದು ನಿಶ್ಚಿತ.
ಆದ ಕಾರಣ ಸನ್ಮಾನ್ಯ ಡಾ. ನಲ್ಲೂರು ಪ್ರಸಾದ್, ಗೃಹ ಮಂತ್ರಿ ಅಶೋಕ, ಚಾಮರಾಜ ಪೇಟೆ ವಿಧಾನ ಸಭಾ ವ್ಯಾಪ್ತಿಯಲ್ಲಿ ಬರುವ ಕಾರ್ಪೊರೇಟರ್‌ಗಳು ಅಡುಗೆ ಗುತ್ತಿಗೆದಾರರಾದ ವಾಸುದೇವ ಅಡಿಗರೊಂದಿಗೆ ಕುಳಿತು ಇಂದು ರಾತ್ರಿ ಸಮಾಲೋಚನೆ ನಡೆಸಿ, ಸೂಕ್ತ ಮುಂಜಾಗ್ರತಾ ಕಾರ್ಯಕ್ರಮವನ್ನು ಕೈಗೊಂಡರೆ ಸರಿ, ಇಲ್ಲಾಂದ್ರೆ ಫಜೀತಿ ಕಟ್ಟಿಟ್ಟ ಬುತ್ತಿ.
ಕಳೆದ ಆಗಸ್ಟ್‌ನಲ್ಲಿ, ನ್ಯೂಜೆರ್ಸಿಯಲ್ಲಿ ಏರ್ಪಾಟಾಗಿದ್ದ ಆರನೇ "ಅಕ್ಕ' ಕನ್ನಡ ಸಮ್ಮೇಳನದಲ್ಲೂ ಇಂತಹ ಪರಿಸ್ಥಿತಿ ಉದ್ಭವಿಸಿತ್ತು. ಮೊದಲ ದಿನ, ಇದಿದ್ದರೆ ಅದಿಲ್ಲ, ಅದಿದ್ದರೆ ಇದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿ ನೊಂದಾಯಿತ ಪ್ರತಿನಿಧಿಗಳಿಗೆ ಊಟದ ಶಾಲೆಯಲ್ಲಿ ನಿರಾಸೆಯಾಗಿತ್ತು.
ಆದರೆ, ಸಂಯೋಜನಾಧಿಕಾರಿ ಪ್ರಸನ್ನ ಕುಮಾರ್ ಅಕ್ಕದ ನಾಯಕರಾದ ರವಿ ಡೆಂಕಣಿಕೋಟೆ, ಅಮರನಾಥ ಗೌಡ, ಬೃಂದಾವನ ಕನ್ನಡ ಕೂಟದ ಅಧ್ಯಕ್ಷೆ ಉಷಾ ಅವರುಗಳ ತುರ್ತು ಕ್ರಮಗಳಿಂದಾಗಿ ಎರಡನೇ ಮತ್ತು ಮೂರನೇ ದಿನ ಬೆಳಗಿನ ಉಪಹಾರ,ಮಧ್ಯಾಹ್ನ ಮತ್ತು ರಾತ್ರಿ ಊಟಗಳು ಸಹನೀಯವಾದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕೊನೆಗೂ ಲಕ್ಷೀನಾರಾಯಣ ಅವರ ಭವಿಷ್ಯ ನಿಜವಾಯಿತು. ಅನುಭವ ಯಾರಪ್ಪನ ಮನೆಯದು ಸ್ವಾಮೀ.












Click it and Unblock the Notifications