ಸಮ್ಮೇಳನಾಧ್ಯಕ್ಷರ ಭಾಷಣದ ಪೂರ್ಣಪಾಠ (ಭಾಗ 3)
(ಮುಂದುವರಿದಿದೆ...)
ರತಿಗಳ್ ಶೃಂಗಾರಮಂ, ಶೋಭೆಗಳತಿಶಯಮಂ
ಜಾತಿಗಳ್ ರಾಗಮಂ, ದೇ
ವತೆಗಳ್ ಕಾಮ್ಯಾರ್ಥಮಂ, ನೀತಿಗಳುದಯಮನಾಕ್ಷೇಪದಿಂ
ತರ್ಪವೋಲು |
ದ್ಧತೆಯರ್ ತತ್‌ಕಾಂತೆಯರ್ಕಳ್ ತರೆ - ಮಧು ಸಹಿತಂ
ಕಂತು ಬರ್ಪಂತೆ ಬಂದಂ
ಚತುರಾಮಾತ್ಯ ಪ್ರಯುಕ್ತಂ ಸರಸಕೃತಿ ಕಲಾ
ನರ್ತಕೀ ನೃತ್ಯರಂಗಂ ||
(ಲೀಲಾವತಿ 11.95)
ರತಿಯು ಶೃಂಗಾರವನ್ನೂ, ಶೋಭೆಗಳು ಅತಿಶಯವನ್ನೂ, ಜಾತಿಯು ರಾಗವನ್ನೂ..... ಒಡಗೊಂಡು ಬರುವಂತೆ ಸಖೀನಿವಹವು ಕಂದರ್ಪನನ್ನು ಕರೆತಂದಿತೆಂಬುದೇ ಈ ಮೇಲಣ ಪದ್ಯದ ತಾತ್ಪರ್ಯ. ಇಲ್ಲಿ "ಜಾತಿ" ಎಂದರೆ ಬೇರೆಬೇರೆ ರಾಗದೊಡಗೂಡಿದ "ವಾಗ್ಗೇಯ"ದ ಒಂದು ಬಂಧವಿರಬಹುದೆಂದು ಊಹಿಸುವುದು ಅಸಂಗತವಾಗಲಾರದು. ಬದಲಾಗಿ ಸಮಂಜಸವೆನಿಸಿ "ಜಾತಿ" ಎಂಬುದರ ಅರ್ಥವಿವರ ದೊರೆತು ಬೆದಂಡೆಯ ಸ್ವರೂಪವು ಇನ್ನೂ ನಿಚ್ಚಳವಾಗಬೇಕಾದರೆ ಅದೇ ಬೆದಂಡೆಯನ್ನು ಕುರಿತು ಪ್ರಸ್ತಾಪಿಸಿರುವ ನಾಗವರ್ಮನ ಕಾವ್ಯಾವಲೋಕನದ ಮುಂದಿನ ಮೂರು ಪದ್ಯಗಳನ್ನು ನೋಡಬಹುದು:
ಸಂದಿಸಿರೆ ಕಂದಮುಂ ಪೆಱ
ತೊಂದಱಕೆಯ ವೃತ್ತ ಜಾತಿಯುಂ, ಪದಮವು ತ
ಳ್ತೊಂದಿರೆ ಪನ್ನೆರಡುವರಂ -
ಸಂದುದು ಮೆಲ್ವಾಡೆನಿಕ್ಕುಮದು ಕನ್ನಡದೊಳ್ (952)
ಪದಿನಯ್ದುಮಿರ್ಪತಯ್ದುಂ
ಪದಂ ಯಥಾಸಂಭವಂ ಪ್ರಬಂಧದ ಮೆಯ್ಯೊಳ್
ಪುದಿದೊದವಿ ನೆಗೞ್ವೊಡಂತದು
ಸದಲಂಕಾರಂ ರಸಾಸ್ಪದಂ ಪಾಡಕ್ಕುಂ (953)
ಪಾಡುಗಳಿಂದಂ ತಱಸಲೆ
ಮಾಡಿದುದಂ ಪಾಡುಗಬ್ಬಮೆಂದು ಬುಧರ್ ಕೊಂ
ಡಾಡುವರಿನ್ನದು ದಲ್ ಮೆ
ಲ್ವಾಡುಂ ರೂಢಿಯ ಬೆದಂಡೆಗಬ್ಬಮುಮಕ್ಕುಂ (954)
ಅರ್ಥಸ್ಪಷ್ಟತೆಗಾಗಿ ಮೇಲಣ ಮೂರೂ ಪದ್ಯಗಳ ಗದ್ಯಾನುವಾದ ಈ ಮುಂದಿನಂತಿದೆ ನೋಡಿ: ಕಂದವೂ ಇನ್ನೊಂದು ಪ್ರಸಿದ್ಧ ವೃತ್ತವೂ (ಮತ್ತು ಆ ಎರಡರ ನಡುವೆ) "ಪದ"ಗಳು ಸಂಖ್ಯೆಯಲ್ಲಿ ಹನ್ನೆರಡರವರೆಗೆ ಸೇರಿಕೊಂಡಿದ್ದರೆ ಅದು ಕನ್ನಡದಲ್ಲಿ ಮೆಲ್ವಾಡು ಎನಿಸಿಕೊಳ್ಳುವುದು. (952) ಆ ಕಂದ ಮತ್ತು ವೃತ್ತದ ನಡುವೆ "ಪದ"ಗಳು ಸಂಖ್ಯೆಯಲಿ ಹದಿನೈದು ಇಪ್ಪತ್ತೈದರವರೆಗೆ ಸೇರಿಕೊಂಡಿದ್ದರೆ (ಅದು ಕನ್ನಡದಲ್ಲಿ) ಪಾಡು-ಪದ- ಅಥವಾ ಹಾಡು ಎನಿಸುವುದು. (953) ಪಾಡುಗಳಿಂದ ರಚಿತವಾದುದನ್ನು ವಿದ್ವಾಂಸರು "ಪಾಡುಗಬ್ಬ"ವೆಂದು ಕೊಂಡಾಡುವರು. ಈ ಪಾಡು ಅಥವಾ ಪಾಡುಗಳಿಂದಲೇ ಅಲ್ಲವೇ ಮೆಲ್ವಾಡು ಅಥವಾ "ಬೆದಂಡೆಗಬ್ಬ"ವಾಗುವುದು! (954)
ನಾಗವರ್ಮನ ಈ ಮೇಲಣ ವಿವರಣೆಯು ಕವಿರಾಜಮಾರ್ಗದಲ್ಲಿನ ಬೆದಂಡೆಯ ಲಕ್ಷಣವನ್ನು ಹೇಳುವ ಪದ್ಯಕ್ಕೆ ಬರೆದ ವ್ಯಾಖ್ಯಾನದಂತಿದೆ. ಬೆದಂಡೆಯೆನಿಸಬೇಕಾದರೆ ಕಂದ ವೃತ್ತಗಳ ಜೊತೆಗೆ "ಜಾತಿ" ಕೂಡಿಕೊಂಡು ಬರಬೇಕೆಂದು ಕವಿರಾಜಮಾರ್ಗಕಾರನು ಹೇಳಿದ್ದರೆ ಪದ ಕೂಡಿಕೊಂಡು ಬರಬೇಕೆಂದು ಕಾವ್ಯಾವಲೋಕನಕಾರನು ಹೇಳಿರುವನಾದ್ದರಿಂದ "ಜಾತಿ"ಗೆ "ಪದ"ವು ಪರ್ಯಾಯವಾಚಿಯೆಂಬುದು ಸ್ವತಸ್ಸಿದ್ಧವಾಗಿದೆ.
ಪದವೆಂಬುದು ಹಾಡು ಅಥವಾ ಹಾಡಲೆಂದೇ ರಚಿತವಾದ ಅದಕ್ಕನುಸಾರವಾಗಿ ಛಂದಸ್ಸಹಿತವಾದ ಒಂದು ಸಾಹಿತ್ಯಬಂಧವೆಂಬುದಕ್ಕೆ ನಡುಗನ್ನಡದಲ್ಲಿ ಪ್ರಯೋಗಗಳು ಹೇರಳವಾಗಿವೆ. ಆದರೆ ಇದೇ ಅರ್ಥದಲ್ಲಿ "ಪದ" ಎಂಬ ಶಬ್ದವು ಕವಿರಾಜಮಾರ್ಗದ ಕಾಲಕ್ಕೂ (ಅದಕ್ಕಿಂತ ಹಿಂದಕ್ಕೂ) ಪ್ರಯೋಗವಾಗುತ್ತಿತ್ತೇ ಎಂಬ ಸಂದೇಹ ಬರುವುದು ಸಹಜ. ಆದರೆ ಈ ಸಂದೇಹವು ಸ್ಥಾಯಿಯಾಗುವಷ್ಟು ಪ್ರಬಲವಾದುದಲ್ಲ . ಕಾಳಿದಾಸನ ಮೇಘಸಂದೇಶದ ಉತ್ತರ ಭಾಗದಲ್ಲಿ ಬರುವ ಈ ಮುಂದಿನ ಪದ್ಯವೊಂದೇ ಅದನ್ನು ನಿವಾರಿಸುವುದು:
ಉತ್ಸಂಗೇ ವಾ ಮಲಿನ ವಸನೇ ಸೌಮ್ಯ ನಿಕ್ಷಿಪ್ಯ ವೀಣಾಂ
ಮದ್ಗೋತ್ರಾಂಕಂ ವಿರಚಿತಪದಂ ಗೇಯ ಮುದ್ಗಾತುಕಾಮಾ
ತಂತ್ರೀಮಾರ್ಧ್ರಾಂ ನಯನ ಸಲಿಲೈಃ ಸಾರಯಿತ್ವಾ ಕಥಂಚಿತ್
ಭೂಯೋ ಭೂಯಃ ಸ್ವಯಮಪಿ ಕೃತಾಂ ಮೂರ್ಛನಾಂ ವಿಸ್ಮರಂತೀ!
ಇಲ್ಲಿ ಯಕ್ಷಿ (ವಿರಹಿಣಿ)ಯು ತನ್ನ ಪ್ರಿಯತಮನ ಗೋತ್ರಾಂಕಿತ ಸಹಿತವಾದ "ಪದ"ವೊಂದನ್ನು ರಚಿಸಿ ತಂತ್ರೀವಾದ್ಯದೊಡನೆ ಹಾಡಬೇಕೆಂದಿದ್ದ ವಿಚಾರ ಸ್ಪಷ್ಟವಿದೆ. (ಇದೇ ಸಂದರ್ಭದಲ್ಲಿ ಶಿವದಾಸರ ಹರಿದಾಸರ ಮತ್ತು 17ನೇ ಶತಮಾನದ ವೈಷ್ಣವ ಭಕ್ತರ ಹಾಡುಗಳನ್ನು "ಪದ"ವೆಂದು ವ್ಯವಹರಿಸುತ್ತಿದ್ದುದನ್ನೂ ನೆನೆಯಬೇಕು.) ನಿರ್ಧರಿಸಿ ಹೇಳುವುದಾದರೆ , ಮುಖ್ಯವಾಗಿ ಹಾಡುಗಳಿಂದ ರಚಿತವಾದ ಕಾವ್ಯಕ್ಕೆ ಅಥವಾ ಗೇಯ ಕೃತಿಗೆ "ಬೆದಂಡೆ" ಎನ್ನುತ್ತಿದ್ದರು.
ತಿರುಮಲಾರ್ಯನು ತನ್ನ ಚಿಕ್ಕದೇವರಾಜ ವಿಜಯದ ವೇಶ್ಯಾವಾಟಿಕಾ ಪ್ರಸಂಗದಲ್ಲಿ ಪ್ರಸ್ತಾಪಿಸಿರುವ ಬಣ್ಣವಾಡು ಸಿಂಗರವಾಡು ಅಥವಾ ಶೃಂಗಾರ ಪದ ಎಂಬುದನ್ನು ಗಮನಿಸಿದರೆ ಅವು ಬೇರೇನೂ ಅಲ್ಲದೆ ಸೂಳೆಯರು ಹಾಡುತ್ತಿದ್ದ ಗೀತಾ ಪ್ರಬಂಧಗಳೇ ಆಗಿದ್ದವೆಂದೂ ಅವು ಬೆದಂಡೆಯ ಅವಶೇಷಗಳೋ ಅಪಭ್ರಂಶಗಳೋ ಆಗಿದ್ದವೆಂದೂ ಅನ್ನಿಸದಿರದು. ಈ ಬೆದಂಡೆಗಬ್ಬವು ಹೀಗೆ ಶೃಂಗಾರ ಪ್ರಧಾನವಾದ ಗೇಯಕೃತಿ ಯಾಗಿದ್ದುದರಿಂದಲೂ, ಅದನ್ನು ಹೆಚ್ಚಾಗಿ ವೇಶ್ಯಾವಾಟಿಕೆಗಳಲ್ಲೇ ಹಾಡುತ್ತಿದ್ದು ದರಿಂದಲೂ ಗರತಿಯರೂ ಗೊರವರೂ ಬೆದಂಡೆಗೆ ಕಿವಿಗೊಡಬಾರದೆಂಬ ನೀತಿವಾಕ್ಯ ಪ್ರಚುರವಾಯಿತು. ಮದನತಿಲಕವೆಂಬ ಶೃಂಗಾರಕಾವ್ಯದಲ್ಲಿಯೇ ಬೆದಂಡೆಯನ್ನು ಹಾಡುವ ಕಡೆ ಹೆಂಡಿರನ್ನು ಸುಳಿಯಲೂ ಬಿಡಬಾರದೆಂದು ಎಚ್ಚರಿಸಲಾಗಿದೆ "ಬೆದಂಡೆಯ ದೆಸೆ ಬೊಗಲೀಯಲಾಗದು" ಎಂದು (ಮ.ತಿಲಕ 8.29).
ಒಟ್ಟಿನ ಮೇಲೆ ಕವಿರಾಜಮಾರ್ಗದ ಪ್ರಕಾರ 9ನೇ ಶತಮಾನಕ್ಕಿಂತ ಹಿಂದಿನಿಂದಲೂ ಕರ್ನಾಟಕದಲ್ಲಿ ಮೆಲ್ವಾಡೆಂದೋ ಬೆದಂಡೆಯೆಂದೋ ಪ್ರಚುರವಾಗಿದ್ದ ಗೀತಾಸಾಹಿತ್ಯ ಪ್ರಕಾರವನ್ನು ವಸ್ತು ದೃಷ್ಟಿಯಿಂದ ಕಾಮದಿಂದ ದೈವಭಕ್ತಿಗೋ ಧರ್ಮಸಿದ್ಧಾಂತಕ್ಕೋ ತಿರುಗಿಸಿ ಕಡೆಯ ಪಕ್ಷ ಕ್ರಿ.ಶ.8-9ನೇ ಶತಮಾನದಿಂದ ಹಿಡಿದು 18-19ನೇ ಶತಮಾನದವರೆಗೆ ಸುಮಾರು ಒಂದು ಸಾವಿರ ವರ್ಷಗಳ ಕಾಲ ಸ್ವರವಚನವೆಂದೋ ವಚನವೆಂದೋ ಶಿವಶರಣರೂ, ಕೀರ್ತನೆಯೆಂದೋ ಉಗಾಭೋಗವೆಂದೋ ಹರಿದಾಸರೂ ಕರ್ನಾಟಕ ಮಾತ್ರವಲ್ಲ ಆಸೇತು ಹಿಮಾಚಲ ಭಾರತವು ಪರಕೀಯ ಧಾಳಿಗಳಿಂದ ಕಂಗೆಟ್ಟಿದ್ದ ಕಾಲದಲ್ಲಿ ನಮ್ಮ ಸಂಸ್ಕೃತಿಯನ್ನು ರಕ್ಷಿಸಿ ಕೊಳ್ಳುವುದಕ್ಕಾಗಿ ಬೇಕಾದ ಆತ್ಮಸ್ಥೈರ್ಯವನ್ನೂ ಶೌರ್ಯವನ್ನೂ ಜನತೆಗೆ ಕೊಟ್ಟಿತು , ಈ ಶರಣ ಮತ್ತು ಹರಿದಾಸ ಪರಂಪರೆ.
ಇದೇ ರೀತಿ ಬರುವ ನೂರಾರಲ್ಲ ಸಾವಿರಾರು ವರ್ಷಗಳ ಕಾಲವೂ ನಮ್ಮ ದೇಶವನ್ನು, ನಮ್ಮ ದೇಶೀಯ ಸಂಸ್ಕೃತಿಯನ್ನು ರಕ್ಷಿಸಿಕೊಂಡು ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಭಾಷೆ ಸಾಹಿತ್ಯ ಕಲೆ ಎಂದು ಮುಂತಾದ ಉಪಕರಣಗಳ ಕಡೆ ನಾವು ಸರಿದಾರಿಯಲ್ಲಿ ಗಮನ ಹರಿಸಬೇಕಾಗಿದೆ:
| ಸಮ್ಮೇಳನಾಧ್ಯಕ್ಷರ ಭಾಷಣ (ಭಾಗ 2) | ಸಮ್ಮೇಳನಾಧ್ಯಕ್ಷರ ಭಾಷಣ (ಭಾಗ 4) |
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications