ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡ ಮನೆಯ ನ್ಯಾಯದೇವತೆ ಕಣ್ಣು ತೆರೆದು ನೋಡಿಯಾಳೇ ?

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಇದೊಂದು ವಿಷಯದಲ್ಲಿ ನ್ಯಾಯದೇವತೆ ಕಣ್ಣು ತೆರೆಯಬೇಕಿದೆ. ದಶಕಗಳ ಕಾಲದಿಂದ ನ್ಯಾಯಕ್ಕಾಗಿ ಹಂಬಲಿಸುತ್ತಿರುವ ಪ್ರತ್ಯೇಕ ಹೈಕೋರ್ಟ್‌ ಪೀಠ ಬೇಕು ಎಂದು ಹೋರಾಡುತ್ತಿರುವ, ಹೋರಾಡಿ, ಹೋರಾಡಿ ಸುಸ್ತಾಗಿರುವ ಉತ್ತರ ಕರ್ನಾಟಕ ಭಾಗದ ಸ್ಥಿತಿಯನ್ನು ನ್ಯಾಯದೇವತೆ ನೋಡಬೇಕಿದೆ.

ಮೊನ್ನೆಯಷ್ಟೇ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ಜೈನ್‌ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಹೈಕೋರ್ಟ್‌ ಪೀಠದ ಅಗತ್ಯವಿಲ್ಲ ಎಂದು ಸರಕಾರಕ್ಕೆ ಪತ್ರ ಬರೆದರಲ್ಲ. ಅವತ್ತು ಕುಸಿದು ಬಿದ್ದಿದ್ದು ನ್ಯಾಯಕ್ಕಾಗಿ ಹಂಬಲಿಸಿದ ಮನಸ್ಸುಗಳು. ಇದಕ್ಕೂ ಮುನ್ನ ಉಚ್ಚ ನ್ಯಾಯಾಲಯಕ್ಕೆ ವರದಿ ನೀಡಿದ ಏಳು ಮಂದಿ ಸದಸ್ಯರ ಸಮಿತಿ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಹೈಕೋರ್ಟು ಪೀಠ ಬೇಕು ಎಂದಿತ್ತು. ಏಳು ಮಂದಿಯ ಪೈಕಿ ಇಬ್ಬರು ಬೇಡ ಎಂದಿದ್ದರಾದರೂ, ಉಳಿದವರು ಪ್ರತ್ಯೇಕ ಹೈಕೋರ್ಟ್‌ ಪೀಠ ಬೇಕು ಎಂದಿದ್ದರು.

ವರದಿಯ ಸಾರಾಂಶ ಬಹಿರಂಗವಾದಾಗ ಉತ್ತರ ಕರ್ನಾಟಕದ ಭಾಗದ ಜನ ಯಾವ ಪರಿ ಖುಷಿಯಾಗಿದ್ದರೆಂದರೆ ಇನ್ನೇನು ತಾವು ಬಯಸಿದ್ದೆಲ್ಲ ಕೈಗೂಡುತ್ತಿದೆ ಎಂದುಕೊಂಡು ಸಂತಸದಿಂದ ಹನಿಗಣ್ಣಾಗಿದ್ದರು.

Nyaya Devateನೋಡುತ್ತಾ ಹೋದರೆ ಆ ಜನರ ಹೋರಾಟವೇ ಒಂದು ಮಹಾಭಾರತ. ಬಡತನ ನಿರುದ್ಯೋಗದ ನಡುವೆ ಬಸವಳಿದ ಉತ್ತರ ಕರ್ನಾಟಕದ ಜನರಿಗೆ ನ್ಯಾಯಾಲಯ ಎಂದರೆ ಗಗನ ಕುಸುಮ.

ಒಂದು ಪ್ರಕರಣ ಸಣ್ಣಗೆ ಹೊರಳಾಡಿದರೂ ಸಾಕು. ಅದು ಸೀದಾ ಬಂದು ಉಚ್ಚ ನ್ಯಾಯಾಲಯದೆದುರು ಜಮೆಯಾಗುತ್ತದೆ. ಅದನ್ನು ಇತ್ಯರ್ಥ ಪಡಿಸಲು ಬೆಳಗಾಂ, ಬೀದರ್‌, ಗುಲ್ಬರ್ಗ, ರಾಯಚೂರು, ಬಳ್ಳಾರಿ, ಇತ್ಯಾದಿ ಊರುಗಳ ಜನರು ಮೈಲುಗಟ್ಟಲೆ ದೂರದಿಂದ ಬೆಂಗಳೂರಿಗೆ ಬರುವ ಅನಿವಾರ್ಯತೆ ಇದೆ.

ಉತ್ತರ ಕರ್ನಾಟಕವನ್ನು ತುಂಡು ಮಾಡಿ ನೋಡಿದರೆ ಹೈದ್ರಾಬಾದ್‌- ಕರ್ನಾಟಕ, ಮುಂಬೈ- ಕರ್ನಾಟಕ ಭಾಗದ ಜನಜೀವನ ಇಂದಿಗೂ ಕಡು ಬಡತನದಿಂದ ಕೂಡಿದೆ. ಹೀಗಿರುವಾಗ ಅಲ್ಲಿಂದ ಬೆಂಗಳೂರಿಗೆ ಬಂದು, ನ್ಯಾಯದೇವತೆಯ ಮುಂದೆ ನಿಂತು ವಾಪಸು ಹೋಗಬೇಕೆಂದರೆ ಹಣೆಯ ತುಂಬ ಬೆವರು, ಜೇಬು ಖಾಲಿ.

ಹಾಗಂತಲೇ ಬಿ. ಡಿ. ಜತ್ತಿ ಅವರಂತಹ ನಾಯಕರು ಉತ್ತರ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಹೈಕೋರ್ಟ್‌ ಪೀಠದ ಬಗ್ಗೆ ಪ್ರಸ್ತಾಪಿಸತೊಡಗಿದ್ದು. ‘ಜನ ಅಲ್ಲಿಂದ ಬೆಂಗಳೂರಿಗೆ ಬರುವುದು ಕಷ್ಟ. ಹೀಗಾಗಿ ಮಧ್ಯದಲ್ಲಿರುವ ಹುಬ್ಬಳ್ಳಿಯಲ್ಲೊಂದು ಪ್ರತ್ಯೇಕ ಪೀಠ ಸ್ಥಾಪಿಸಿದರೆ ಬಡಜನ ಬದುಕಿಕೊಂಡಾರು’ ಅಂದರು ಬಿ.ಡಿ. ಜತ್ತಿ.

ನಿಜವಾದ ಹೋರಾಟದ ಕೂಗು ಕೇಳಿದ್ದು ಅಂದಿನಿಂದಲೇ. ಈ ಮಧ್ಯೆ ಪ್ರತ್ಯೇಕ ಹೈಕೋರ್ಟ್‌ ಪೀಠದ ಅನಿವಾರ್ಯತೆಯ ಬಗ್ಗೆ ಬೇರೆ ಬೇರೆ ರಾಜ್ಯಗಳಲ್ಲೂ ಕೂಗು ಕೇಳಿ ಬಂತು. ಪರಿಣಾಮವಾಗಿ ಜಸ್ಟೀಸ್‌ ಜಸ್ವಂತ್‌ ಸಿಂಗ್‌ ನೇತೃತ್ವದ ಸಮಿತಿ ಪ್ರತ್ಯೇಕ ಹೈಕೋರ್ಟ್‌ ಪೀಠಗಳ ಅನಿವಾರ್ಯತೆಯ ಬಗ್ಗೆ ಅಧ್ಯಯನ ನಡೆಸಿತು. ಅದಕ್ಕೆಂತಲೇ ಕೆಲ ಮಾರ್ಗಸೂಚಿಗಳನ್ನು ರಚಿಸಿತು. ಇವತ್ತಿಗೂ ಕರ್ನಾಟಕದಲ್ಲಿ ಪ್ರತ್ಯೇಕ ಹೈಕೋರ್ಟ್‌ ಪೀಠದ ವಿರುದ್ಧ ಇರುವವರೂ ಜಸ್ಟೀಸ್‌ ಜಸ್ವಂತ್‌ ಸಿಂಗ್‌ ಸಮಿತಿಯ ಮಾತುಗಳನ್ನು ಹೆಕ್ಕಿ ತೋರಿಸುತ್ತಾರೆ.

ಅದೆಂದರೆ, ಪ್ರತ್ಯೇಕ ಹೈಕೋರ್ಟ್‌ ಪೀಠ ಬಯಸುವ ಪ್ರದೇಶದಿಂದ ಶೇಕಡಾ ಮೂವತ್ಮೂರರಷ್ಟು ಕೇಸುಗಳು ಹೈಕೋರ್ಟ್‌ಗೆ ಬರಬೇಕು. ಹಾಗೆಯೇ ಪ್ರತ್ಯೇಕ ಹೈಕೋರ್ಟ್‌ ಪೀಠವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದರೆ ಗುಲ್ಬರ್ಗದವರೋ, ಬಿಜಾಪುರದವರೋ, ಬಳ್ಳಾರಿಯವರೋ, ರಾಯಚೂರಿನವರೋ ಹುಬ್ಬಳ್ಳಿಗೆ ಹೋಗಬೇಕಾಗುತ್ತದೆ. ಉಳಿದ ಕೆಲಸಗಳಿಗಾಗಿ ಮತ್ತೆ ಬೆಂಗಳೂರಿಗೇ ಬರಬೇಕಾಗುತ್ತದೆ.

ಹೀಗಾಗಿ ನೇರವಾಗಿ ಬೆಂಗಳೂರಿಗೆ ಬರುವುದೇ ವಾಸಿ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಕೆಳ ಹಂತದ ನ್ಯಾಯಾಲಯಗಳನ್ನು ಮೀರಿ ಬರುವ ಪ್ರಕರಣಗಳ ಸಂಖ್ಯೆ ತುಂಬ ದೊಡ್ಡದಲ್ಲ. ಈ ಕಾರಣದಿಂದಾಗಿ ಪ್ರತ್ಯೇಕ ಪೀಠದ ಅಗತ್ಯವೇ ಇಲ್ಲ ಎನ್ನುವವರಿದ್ದಾರೆ.

ಆದರೆ ಈ ಮಾತುಗಳನ್ನಾಡುವವರು ನ್ಯಾಯಶಾಸ್ತ್ರದ ನೆಲೆಯಲ್ಲಿ ನಿಂತೇ ಸಮಸ್ಯೆಯನ್ನು ನೋಡಬೇಕು. ‘ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ. ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು’ ಎನ್ನುತ್ತದೆ ನ್ಯಾಯಶಾಸ್ತ್ರ . ಇಂದು ಆರ್ಥಿಕವಾಗಿ ಹಿಂದುಳಿದಿರುವ, ಶತಮಾನಗಳಿಂದ ದಬ್ಬಾಳಿಕೆಗೆ ಗುರಿಯಾಗಿರುವ, ಪ್ರಕೃತಿಯ ವಿಷಯದಲ್ಲೂ ಅನ್ಯಾಯಕ್ಕೆ ಈಡಾದ ಉತ್ತರ ಕರ್ನಾಟಕ ಭಾಗದ ಜನರ ವಿಷಯದಲ್ಲಿ ಈ ನ್ಯಾಯಶಾಸ್ತ್ರದ ನೀತಿ ಕೆಲಸ ಮಾಡಬಾರದೇ ?

ಉತ್ತರ ಕರ್ನಾಟಕದ ಒಬ್ಬ ಬಡ ಮಧ್ಯಮ ವರ್ಗದ ಮನುಷ್ಯ ಬೆಂಗಳೂರಿಗೆ ಬಂದು ಉಳಿದುಕೊಂಡು ಲಾಯರ್‌ ಫೀಸ್‌ ಕೊಟ್ಟು ಊರಿಗೆ ಹೋಗುವುದೆಂದರೆ ತಮಾಷೆಯ ಮಾತಲ್ಲ. ಒಂದೊಂದು ಹಿಯರಿಂಗಿಗೂ ಆತ ತನ್ನ ತಿಂಗಳ ಅನ್ನವನ್ನು ಚೆಲ್ಲಬೇಕಾಗುತ್ತದೆ.

ಇವತ್ತು ಉತ್ತರ ಪ್ರದೇಶವನ್ನೇ ತೆಗೆದುಕೊಳ್ಳಿ. ಅಲ್ಲಿ ಅಲಹಾಬಾದ್‌ ಉಚ್ಚ ನ್ಯಾಯಾಲಯದ ಪೀಠ ಲಖನೌದಲ್ಲಿದೆ. ಮುಂಬಯಿ ಉಚ್ಚ ನ್ಯಾಯಾಲಯದ ಪ್ರತ್ಯೇಕ ಪೀಠ ನಾಗ್ಪುರದಲ್ಲಿದೆ. ಮಧ್ಯಪ್ರದೇಶದಲ್ಲಿ ಭೂಪಾಲ್‌, ಜಬ್ಬಲ್‌ಪುರಗಳಲ್ಲೂ ಹೈಕೋರ್ಟು ಪೀಠಗಳಿವೆ. ತಮಿಳುನಾಡಿನ ಉಚ್ಚ ನ್ಯಾಯಾಲಯಕ್ಕೆ ಮಧುರೈನಲ್ಲಿ ಪ್ರತ್ಯೇಕ ಪೀಠವಿದೆ. ಈ ಮಧ್ಯೆ ಮಹಾರಾಷ್ಟ್ರ ಸರಕಾರ ಔರಂಗಾಬಾದಿನಲ್ಲೊಂದು ಪ್ರತ್ಯೇಕ ಪೀಠ ಸ್ಥಾಪನೆಗೆ ಮುಂದಾಗಿದೆ. ಇದರ ಅರ್ಥ ನ್ಯಾಯದಾನದ ಕಾರ್ಯ ತ್ವರಿತವಾಗಿ ನಡೆಯಬೇಕು, ತುಂಬ ಶ್ರಮವಿಲ್ಲದೇ ನ್ಯಾಯ ಸಿಗುವಂತಾಗಬೇಕು ಎಂದು.

ಈ ಮಾತುಗಳನ್ನಾಡುವಾಗ ಕರ್ನಾಟಕದ ಶಾಸಕಾಂಗ ತೋರಿದ ಎರಡು ಮಹತ್ವದ ಉದಾಹರಣೆಗಳನ್ನು ನಾವು ನೆನಪಿಸಿಕೊಳ್ಳಬೇಕು. ಈವತ್ತು ರಾಜಕೀಯ ವ್ಯವಸ್ಥೆಯ ದುರ್ನಡತೆಗಳ ಬಗ್ಗೆ ಎಷ್ಟೇ ಟೀಕೆ ಕೇಳಿ ಬರಲಿ, ಅದೇ ರಾಜಕೀಯ ವ್ಯವಸ್ಥೆ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅನುಷ್ಠಾನಗೊಳಿಸಿದ ಭೂ ಸುಧಾರಣೆ ಕಾನೂನು ದೊಡ್ಡದೊಂದು ಗಂಡಾಂತರದಿಂದ ರಾಜ್ಯವನ್ನು ಪಾರು ಮಾಡಿತು.

ನೆರೆಯ ಆಂಧ್ರವಿರಲಿ, ಬಿಹಾರವಿರಲಿ, ಅಥವಾ ನಕ್ಸಲ್‌ ಚಟುವಟಿಕೆಗಳು ನಡೆಯುತ್ತಿರುವ ಯಾವುದೇ ರಾಜ್ಯವಿರಲಿ, ಅಲ್ಲಿ ಭೂಮಿಯ ಸಮಾನ ಹಂಚಿಕೆ ಆಗಿರಲಿಲ್ಲ. ಸಂಪತ್ತಿನ ಸಮಾನ ಹಂಚಿಕೆಯಾಗದ ಪರಿಣಾಮವಾಗಿ ಆಂಧ್ರ ಇವತ್ತಿಗೂ ರಕ್ತ ಸಿಕ್ತ. ಬಿಹಾರದ ಪರಿಸ್ಥಿತಿ ರಾಬ್ಡೀ ದೇವಿಗೇ ಪ್ರೀತಿ. ಇಂತಹ ಅವಘಡ ಕರ್ನಾಟಕದಲ್ಲಿ ಸಂಭವಿಸಲಿಲ್ಲ. ಕಾರಣ ಭೂ ಹಂಚಿಕೆಯ ವಿಷಯದಲ್ಲಿ ಶಾಸಕಾಂಗ ತೋರಿದ ಆಸ್ಥೆ.

ಹಾಗೆಯೇ ಅಧಿಕಾರ ವಿಕೇಂದ್ರೀಕರಣದ ಪಂಚಾಯ್ತಿ ವ್ಯವಸ್ಥೆ. ಮೊದಲು ಪಶ್ಚಿಮ ಬಂಗಾಳದಲ್ಲಿ ಜಾರಿಗೆ ಬಂದ ಈ ವ್ಯವಸ್ಥೆಯನ್ನು ರಾಮಕೃಷ್ಣ ಹೆಗಡೆ ಕರ್ನಾಟಕಕ್ಕೆಳೆದು ತಂದರು. ಶುರುವಿನಲ್ಲಿ ಜಿಲ್ಲಾ ಪರಿಷತ್ತಾಗಿ, ಈಗ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿಯಾಗಿ ಅಸ್ತಿತ್ವದಲ್ಲಿರುವ ಈ ವ್ಯವಸ್ಥೆಯಲ್ಲೂ ಭ್ರಷ್ಟಾಚಾರ ತುಂಬಿಕೊಂಡಿರುವುದು ನಿಜ. ಆದರೆ ಸಾಮಾನ್ಯ ಮನುಷ್ಯ ತನ್ನ ಕೆಲಸಕ್ಕಾಗಿ ಬೆಂಗಳೂರಿನವರೆಗೆ ಬರುವ ಅಗತ್ಯವಿಲ್ಲ ಎಂಬುದನ್ನಂತೂ ಸಾಬೀತು ಮಾಡಿತಲ್ಲ !

ಇವು ಶಾಸಕಾಂಗದ ಘನತೆ, ಶಕ್ತಿ, ಔದಾರ್ಯವನ್ನು ಎತ್ತಿ ಹಿಡಿದ ಎರಡು ಉದಾಹರಣೆಗಳು ಎಂಬುದನ್ನು ಎಂಥವರೂ ಒಪ್ಪಿಕೊಳ್ಳುತ್ತಾರೆ.

ಭೂ ಸುಧಾರಣಾ ಕಾನೂನು ಸಮಗ್ರವಾಗಿ ನ್ಯಾಯ ದೊರಕಿಸಲಿಲ್ಲ . ಜಿಲ್ಲಾ ಪಂಚಾಯ್ತಿ , ತಾಲ್ಲೂಕು ಪಂಚಾಯ್ತಿಗಳು ಹಗಲು ದರೋಡೆಯ ಅಡ್ಡೆಗಳಾಗಿ ಪರಿವರ್ತಿತವಾಗಿವೆ ಎಂದು ನಿಜವೇ ಆದರೂ ಅದು ಮನುಷ್ಯನ ನಿಯತ್ತು ಇಳಿಮುಖವಾಗುತ್ತ , ದುರಾಸೆ ಏರುಮುಖವಾಗುತ್ತಾ ಬಂದುದರ ಪರಿಣಾಮ. ಆದರೆ ಅದು ಒಂದು ವ್ಯವಸ್ಥೆಯನ್ನು ಸರಳಗೊಳಿಸುತ್ತಾ , ಬದುಕುವುದು ಸುಲಭ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದು ನಿಜವಲ್ಲವೇ? ಬಿ. ಡಿ. ಜತ್ತಿಯಿಂದ ಹಿಡಿದು ಹೆಗಡೆಯವರೆಗೆ. ಬೊಮ್ಮಾಯಿಯಿಂದ ಎಸ್ಸೆಂ. ಕೃಷ್ಣರವರೆಗೆ ಪ್ರತಿಯಾಬ್ಬರೂ ಉತ್ತರ ಕರ್ನಾಟಕಕ್ಕೆ ಒಂದು ಪ್ರತ್ಯೇಕ ಪೀಠ ಬೇಕು. ನ್ಯಾಯದಾನ ದೂರದ ಗುರಿಯಾಗಬಾರದು ಎಂದಿದ್ದು ಸುಮ್ಮನಲ್ಲ. ಅದಕ್ಕಿಂತ ಮುಖ್ಯವಾಗಿ ಮೂರ್ನಾಲ್ಕು ದಶಕಗಳಿಂದ ಒಂದೇ ಸಮನೆ ಆಳುವವರ ಮೇಲೆ ಒತ್ತಡ ಹೇರುತ್ತಾ ನ್ಯಾಯಕೊಡಿ ಎಂದು ಬೇಡಿದ ಜನರೂ ಪ್ರಭಾವಿಗಳಲ್ಲ.

ಅವರು ಈ ನಾಡಿನ ಶ್ರೀ ಸಾಮಾನ್ಯರು, ನೊಂದವರು. ತುತ್ತು ಅನ್ನಕ್ಕಾಗಿ ಪಡಿಪಾಟಲು ಪಟ್ಟವರು. ಅಂಥವರ ವಿಷಯದಲ್ಲಿ ಕಡು ಭ್ರಷ್ಟ ಎನಿಸಿಕೊಂಡ ಶಾಸಕಾಂಗವೇ ಕರುಣೆ ತೋರಿಸುತ್ತದೆಂದರೆ ಪರಿಶುದ್ಧಳಾದ ನ್ಯಾಯ ದೇವತೆಗೇನಾಗಿದೆ ?

ಕನಿಷ್ಠ ಪಕ್ಷ ಆಕೆ ಒಂದು ಕಣ್ಣನ್ನಾದರೂ ತೆರೆದು ನೋಡಬೇಕಲ್ಲವೇ ?

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X