ನ.3ರಂದು ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆ ಅನುಮೋದನೆಯ ಭವಿಷ್ಯ ನಿರ್ಧಾರ: WHO
ನವದೆಹಲಿ, ಅಕ್ಟೋಬರ್ 27: ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅಂತಿಮ ಅನುಮೋದನೆ ನೀಡುವುದಕ್ಕೂ ಮೊದಲು ಲಸಿಕೆ ಬಳಸುವುದರಿಂದ ಆಗುವ ಅಪಾಯ ಮತ್ತು ಪ್ರಯೋಜನದ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಕಂಪನಿಗೆ ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿಯು ನವೆಂಬರ್ 3ರಂದು ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೆ ಸಂಬಂಧಿಸಿದಂತೆ ಅಂತಿಮ ಮೌಲ್ಯಮಾಪನ ಪ್ರಕ್ರಿಯೆ ನಡೆಸಲಿದೆ. ತದನಂತರದಲ್ಲಿ ಲಸಿಕೆಯ ತುರ್ತು ಬಳಕೆ ಕುರಿತು ಅನುಮೋದನೆ ನೀಡಬೇಕೇ ಬೇಡವೇ ಎಂಬ ಬಗ್ಗೆ ಅಧಿಕೃತವಾಗಿ ತಿಳಿಸಲಿದೆ.
ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಕೊರೊನಾವೈರಸ್ ಸೋಂಕಿನ ವಿರುದ್ಧ ತುರ್ತು ಬಳಕೆಯ ಲಸಿಕೆ ಪಟ್ಟಿಗೆ ಸೇರಿಸುವಂತೆ ಕೋರಿ ಕಂಪನಿಯು ಕಳೆದ ಏಪ್ರಿಲ್ 19ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಿಕೊಂಡಿತ್ತು. ಈ ಸಂಬಂಧ ಅಗತ್ಯ ದಾಖಲೆಗಳೊಂದಿಗೆ ಅನುಮೋದನೆ ಶಿಫಾರಸ್ಸಿಗಾಗಿ ಅರ್ಜಿಯಲ್ಲಿ ಸಲ್ಲಿಸಿತ್ತು.

ಕೊವ್ಯಾಕ್ಸಿನ್ ಬಳಕೆ ಕುರಿತು WHO ಸಭೆ
ಭಾರತದಲ್ಲಿ ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿರುವ ಲಸಿಕೆಗಳ ತುರ್ತು ಬಳಕೆಯ ಪಟ್ಟಿಯಲ್ಲಿ ಕೊವ್ಯಾಕ್ಸಿನ್ ಅನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಭಾರತ್ ಬಯೋಟೆಕ್ ಕಂಪನಿಯು ಸಲ್ಲಿಸಿದ ಅಂಕಿ-ಅಂಶಗಳನ್ನು ಪರಿಶೀಲಿಸಲು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಗುಂಪು ಮಂಗಳವಾರ ಸಭೆ ನಡೆಸಿತು. "ತಾಂತ್ರಿಕ ಸಲಹಾ ಸಮಿತಿಯು 2021ರ ಅಕ್ಟೋಬರ್ 26ರಂದು ಸಭೆ ನಡೆಸಿದ್ದು, ಲಸಿಕೆಯ ಜಾಗತಿಕ ಬಳಕೆಗಾಗಿ ಅಂತಿಮ ತುರ್ತು ಬಳಕೆ ಅನುಮೋದನೆಗೂ ಪೂರ್ವದಲ್ಲಿ ಅಪಾಯ-ಪ್ರಯೋಜನ ಮೌಲ್ಯಮಾಪನವನ್ನು ನಡೆಸಲು ಲಸಿಕೆ ಉತ್ಪಾದಕರಿಂದ ಹೆಚ್ಚುವರಿ ಸ್ಪಷ್ಟೀಕರಣಗಳ ಅಗತ್ಯವಿರುವ ಬಗ್ಗೆ ನಿರ್ಧರಿಸಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ನವೆಂಬರ್ 3ರಂದು ಮತ್ತೆ ತಾಂತ್ರಿಕ ಸಲಹಾ ಸಮಿತಿ ಸಭೆ
"ಈ ವಾರದ ಅಂತ್ಯದ ವೇಳೆಗೆ ಕೊವ್ಯಾಕ್ಸಿನ್ ಲಸಿಕೆ ಉತ್ಪಾದಕ ಕಂಪನಿಯಿಂದ ಸ್ಪಷ್ಟೀಕರಣಗಳನ್ನು ಸ್ವೀಕರಿಸಲು ತಾಂತ್ರಿಕ ಸಲಹಾ ಸಮಿತಿ ನಿರೀಕ್ಷಿಸುತ್ತದೆ. ನವೆಂಬರ್ 3ರ ಬುಧವಾರ ಅಂತಿಮವಾಗಿ ಅಪಾಯ ಮತ್ತು ಪ್ರಯೋಜನಗಳ ಬಗ್ಗೆ ಮೌಲ್ಯಮಾಪನಕ್ಕಾಗಿ ಮರುಸಂಗ್ರಹಿಸುವ ಗುರಿಯನ್ನು ಹೊಂದಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇತ್ತೀಚಿಗಷ್ಟೇ ಈ ಕುರಿತು ಪ್ರತಿಕ್ರಿಯೆ ನೀಡಿದ್ದ WHO ವಕ್ತಾರರಾದ ಡಾ ಮಾರ್ಗರೇಟ್ ಹ್ಯಾರಿಸ್, ಕೊವ್ಯಾಕ್ಸಿನ್ ಅನ್ನು ಸಂಭಾವ್ಯ ತುರ್ತು ಬಳಕೆಯ ಪಟ್ಟಿಗೆ ಸೇರಿಸುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ದತ್ತಾಂಶವನ್ನು ತಾಂತ್ರಿಕ ಸಲಹಾ ಸಮಿತಿಯು ಪರಿಶೀಲಿಸುತ್ತಿದೆ ಎಂದು ಹೇಳಿದ್ದರು.

ಲಸಿಕೆ ತುರ್ತು ಬಳಕೆಗೆ ಸ್ವತಂತ್ರ ಸಲಹಾ ಸಮಿತಿ ಶಿಫಾರಸ್ಸು
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಯಾವ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದಿಸಬೇಕು ಎಂಬುದನ್ನು ನಿರ್ಧರಿಸುವ ತಾಂತ್ರಿಕ ಸಲಹಾ ಸಮಿತಿಯು ಒಂದು ಸ್ವತಂತ್ರ ಸಲಹಾ ಸಮಿತಿ ಆಗಿದೆ. ತುರ್ತು ಬಳಕೆ ಪಟ್ಟಿಯಲ್ಲಿ ಸೇರಿಸುವುದಕ್ಕೆ ಸಂಬಂಧಿಸಿದಂತೆ ಇರುವ ಕಾರ್ಯ ವಿಧಾನದ ಅಡಿಯಲ್ಲಿ ಸಮಿತಿಯು ಕೆಲಸ ಮಾಡುತ್ತದೆ. ಯಾವ ಲಸಿಕೆಯನ್ನು ತುರ್ತು ಬಳಕೆ ಪಟ್ಟಿಗೆ ಸೇರ್ಪಡೆ ಮಾಡುವುದು ಸೂಕ್ತ ಎಂಬ ಬಗ್ಗೆ ಈ ತಾಂತ್ರಿಕ ಸಲಹಾ ಸಮಿತಿಯು ವಿಶ್ವ ಆರೋಗ್ಯ ಸಂಸ್ಥೆಗೆ ಶಿಫಾರಸ್ಸು ಮಾಡಲಿದೆ.

ಕೊವ್ಯಾಕ್ಸಿನ್ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಉಲ್ಲೇಖ
ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯು ಕೊರೊನಾವೈರಸ್ ವಿರುದ್ಧ ಶೇ.77.8ರಷ್ಟು ಪರಿಣಾಮಕಾರಿಯಾಗಿದೆ. ಅಲ್ಲದೇ ಕೊವಿಡ್-19 ರೂಪಾಂತರ ಡೆಲ್ಟಾ ವೈರಸ್ ವಿರುದ್ಧ ಶೇ.65.2ರಷ್ಟು ಪರಿಣಾಮಕಾರಿಯಾಗಿದೆ. ಜೂನ್ ತಿಂಗಳಿನಲ್ಲಿ 3ನೇ ಹಂತದ ವೈದ್ಯಕೀಯ ಪ್ರಯೋಗಗಳಿಗೆ ಸಂಬಂಧಿಸಿದಂತೆ ಅಂತಿಮ ವಿಶ್ಲೇಷಣೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಭಾರತ್ ಬಯೋಟೆಕ್ ಕಂಪನಿ ಹೇಳಿದೆ.

ಜನರ ನಿರೀಕ್ಷೆಗಾಗಿ WHO ಅವಸರ ಮಾಡುವಂತಿಲ್ಲ
"ಕೊರೊನಾವೈರಸ್ ವಿರುದ್ಧ ತುರ್ತು ಬಳಕೆಯ ಲಸಿಕೆಗಳ ಪಟ್ಟಿಯಲ್ಲಿ ಕೋವಾಕ್ಸಿನ್‌ಗೆ ಅನುಮೋದನೆ ನೀಡುವ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿಗಾಗಿ ಅನೇಕ ಜನರು ಕಾಯುತ್ತಿದ್ದಾರೆ ಎಂದು ನಮಗೆ ತಿಳಿದಿದೆ, ಆದರೆ ನಾವು ಯಾವುದೇ ಕಾರಣಕ್ಕೂ ಅವಸರ ಮಾಡುವಂತಿಲ್ಲ. ತುರ್ತು ಬಳಕೆಗಾಗಿ ಉತ್ಪನ್ನವನ್ನು ಶಿಫಾರಸು ಮಾಡುವ ಮೊದಲು, ಅದರ ಪರಿಣಾಮಕಾರಿತ್ವ ಹಾಗೂ ಸುರಕ್ಷಿತೆಯನ್ನು ಖಚಿತಪಡಿಸಿಕೊಳ್ಳಲು ನಾವು ಅದನ್ನು ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸಬೇಕಿದೆ," ಎಂದು ಕಳೆದ ಅಕ್ಟೋಬರ್ 19ರಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.
"ವಿಶ್ವ ಆರೋಗ್ಯ ಸಂಸ್ಥೆಯು ಕೇಳಿರುವ ಎಲ್ಲ ಪ್ರಶ್ನೆಗಳಿಗೆ ಕಂಪನಿಯು ಒದಗಿಸಿದ ಉತ್ತರಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. WHO ಮತ್ತು ತಾಂತ್ರಿಕ ಸಲಹಾ ಸಮಿತಿಯು ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರದಲ್ಲಿ ಲಸಿಕೆಯನ್ನು ತುರ್ತು ಬಳಕೆಯ ಪಟ್ಟಿಗೆ ಸೇರಿಸಬೇಕೇ ಬೇಡವೇ ಎಂಬ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ," ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತ್ತು.

ದೇಶದಲ್ಲಿ ಈ ಕೊವಿಡ್-19 ಲಸಿಕೆಗೆ ಅನುಮೋದನೆ
ಭಾರತದಲ್ಲಿ ಒಟ್ಟು ನಾಲ್ಕು ಕಂಪನಿಗಳ ಕೊರೊನಾವೈರಸ್ ಲಸಿಕೆಯ ವಿತರಣೆಗೆ ಅನುಮೋದನೆ ನೀಡಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್, ರಷ್ಯಾದಲ್ಲಿ ಸಂಶೋಧಿಸಿ ಭಾರತದ ರೆಡ್ಡೀಸ್ ಕಂಪನಿ ಜೊತೆಗಿನ ಸಹಭಾಗಿತ್ವದಲ್ಲಿ ಉತ್ಪಾದನೆ ಆಗುತ್ತಿರುವ ಸ್ಪುಟ್ನಿಕ್-ವಿ ಹಾಗೂ ಮಾಡೆರ್ನಾ ಲಸಿಕೆಯನ್ನು ವಿತರಿಸುವುದಕ್ಕೆ ಕೇಂದ್ರ ವೈದ್ಯಕೀಯ ಔಷಧೀಯ ನಿಯಂತ್ರಣ ಪ್ರಾಧಿಕಾರವು ಅನುಮೋದನೆ ನೀಡಿದೆ. ಇದರ ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆಯು ಫೈಜರ್-ಬಯೋನಟೆಕ್, ಜಾನ್ಸನ್ ಆಂಡ್ ಜಾನ್ಸನ್, ಮಾಡರ್ನಾ ಮತ್ತು ಸಿನೋಫಾರ್ಮಾ ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ನೀಡಲಾಗಿದೆ.












Click it and Unblock the Notifications