ರಾಜಾಸೀಟ್‌ನಲ್ಲಿ ಪ್ರವಾಸಿಗರ ಆಕರ್ಷಿಸುವ ಜಿಫ್‌ಲೈನ್: ಮಡಿಕೇರಿಯಲ್ಲಿ ಪ್ರವಾಸಿಗರ ದಂಡು
ಮಡಿಕೇರಿ, ಏಪ್ರಿಲ್ 13: ಬೇಸಿಗೆಯ ಈ ದಿನಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆಯಿರುವುದರಿಂದ ಪ್ರವಾಸಿಗರು ಕೊಡಗಿನತ್ತ ಮುಖ ಮಾಡಿದ್ದು, ಹೀಗೆ ಬರುವ ಪ್ರವಾಸಿಗರು ಮಡಿಕೇರಿಯಲ್ಲಿರುವ ರಾಜಾಸೀಟ್‌ಗೆ ಲಗ್ಗೆಯಿಡುತ್ತಿದ್ದು, ಪ್ರಶಾಂತ ಸ್ಥಳದಲ್ಲಿ ನಿಸರ್ಗ ಸೌಂದರ್ಯವನ್ನು ಸವಿದು ತಮ್ಮೂರ ಹಾದಿಯನ್ನು ಹಿಡಿಯುತ್ತಿದ್ದರು. ಆದರೆ ಇನ್ಮುಂದೆ ಪ್ರವಾಸಿಗರು ಇಲ್ಲಿ ಒಂದಷ್ಟು ಕಸರತ್ತು ಮಾಡಿ ಹೊಸ ಅನುಭವ ಪಡೆಯಬಹುದಾಗಿದೆ.
ಪ್ರವಾಸಿಗರು ಅದರಲ್ಲೂ ಕಸರತ್ತು ಮಾಡಲು ಬಯಸುವ ಸಾಹಸಿಗರಿಗಾಗಿಯೇ ಇದೀಗ ರಾಜಾಸೀಟ್‌ನಲ್ಲಿ ಜಿಫ್‌ಲೈನ್ ಸಾಹಸ ಕ್ರೀಡೆನ್ನು ಆರಂಭಿಸಲಾಗಿದೆ. ತೋಟಗಾರಿಕೆ ಇಲಾಖೆಯ ಖಾಸಗಿ ಸಹಭಾಗಿತ್ವದಲ್ಲಿ ಜಿಪ್‌ಲೈನ್ ಸಾಹಸ ಕ್ರೀಡೆ ನಡೆಸಲಾಗುತ್ತಿದೆ. ಬೆಂಗಳೂರು ಮೂಲದ ಸಂಸ್ಥೆಯವರು ಐದು ವರ್ಷದ ವರೆಗೆ ನಿರ್ವಹಣೆ ಮಾಡಲಿದ್ದಾರೆ. ಒಟ್ಟು 310 ಮೀಟರ್ ಉದ್ದದ ಜಿಫ್‌ಲೈನ್ ಹೊಸ ಅನುಭವ ನೀಡಲಿದ್ದು, ಇದಕ್ಕೆ 300 ರೂ ದರ ನಿಗದಿ ಮಾಡಲಾಗಿದೆ.

ಮಡಿಕೇರಿಯಲ್ಲಿರುವ ರಾಜಾಸೀಟ್ ಪ್ರಮುಖ ತಾಣವಾಗಿದೆ. ಇಲ್ಲಿನ ನಿಸರ್ಗ ಸೌಂದರ್ಯ ಕಣ್ಣನ್ನು ತಂಪುಗೊಳಿಸಿದರೆ, ಮುಂಜಾನೆ, ಸಂಜೆ ಮಾತ್ರವಲ್ಲ ಮಟಮಟ ಮಧ್ಯಾಹ್ನದಲ್ಲಿ ಬೀಸುವ ತಂಗಾಳಿ ಮನಕ್ಕೆ ಮುದನೀಡುತ್ತದೆ. ರಾಜಾಸೀಟ್‌ಗೆ ಭೇಟಿ ನೀಡಿದರೆ ಇಲ್ಲಿನ ಸುಂದರ ದೃಶ್ಯಗಳು ನಮ್ಮ ಕಣ್ಣಮುಂದೆ ಹಾದುಹೋಗುತ್ತದೆ. ಹಾಗೆಸುಮ್ಮನೆ ನಿಂತು ನೋಡಿದರೆ ಇಲ್ಲಿಂದ ಕಂಡು ಬರುವ ನೋಟ ಅದ್ಭುತ ಲೋಕಕ್ಕೆ ಕರೆದೊಯ್ಯುತ್ತದೆ.
ಬ್ರಿಟೀಷರ ಮಸಣದಲ್ಲಿ ಅರಳಿದ ಉದ್ಯಾನ
ರಾಜಾಸೀಟ್‌ನ ಇತಿಹಾಸವನ್ನು ಕೆದಕಿ ನೋಡಿದರೆ, ಒಂದು ಕಾಲದಲ್ಲಿ ಇದು ಬ್ರಿಟೀಷರ ಮಸಣವಾಗಿತ್ತು. ಕಾಲಕ್ರಮೇಣ ಇಲ್ಲಿದ್ದ ಬ್ರಿಟೀಷರ ಶವಪೆಟ್ಟಿಗೆಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಉದ್ಯಾನವನ್ನು ಅಭಿವೃದ್ಧಿಗೊಳಿಸಲಾಯಿತು ಎಂದು ಹೇಳಲಾಗುತ್ತಿದೆ. ಅದಕ್ಕೂ ಮುನ್ನ ರಾಜರ ಕಾಲದಲ್ಲಿ ಅಂದಿನ ರಾಜನಾಗಿದ್ದ ಚಿಕ್ಕವೀರರಾಜನು ಸಂಜೆಯ ಸಮಯದಲ್ಲಿ ಅರಮನೆಯಿಂದ ರಾಣಿಯೊಂದಿಗೆ ವಿಹಾರ ಹೊರಟು ನಗರದಂಚಿಗೆ ಬಂದು ಕುಳಿತು ದಿನನಿತ್ಯ ಸೂರ್ಯಾಸ್ತಮಾನದ ಸುಂದರ ದೃಶ್ಯಗಳನ್ನು ನೋಡುತ್ತಿದ್ದಂತೆ. ರಾಜ ಕುಳಿತು ನೋಡುತ್ತಿದ್ದ ಸ್ಥಳವೇ ಮುಂದೆ ರಾಜಾಸೀಟ್ ಆಯಿತು ಎಂದು ಹೇಳಲಾಗುತ್ತಿದೆ.
ಬ್ರಿಟೀಷರ ಆಡಳಿತಾವಧಿಯಲ್ಲಿ ಇಲ್ಲೊಂದು ಸಿಮೆಂಟ್ ಹಾಗೂ ಹೆಂಚು ಬಳಸಿ ನಾಲ್ಕು ಕಮಾನುಗಳುಳ್ಳ ಭವ್ಯ ಮಂಟಪವನ್ನು ನಿರ್ಮಿಸಲಾಯಿತು. ಈ ಮಂಟಪ ಅಂದಿನಿಂದ ಇಂದಿನವರೆಗೆ ರಾಜಾಸೀಟಿನ ಪ್ರಮುಖ ಆಕರ್ಷಣೆಯಾಗಿದ್ದು,ರಾಜಾಸೀಟ್ ಎಂದ ತಕ್ಷಣವೇ ಭವ್ಯ ಮಂಟಪ ನಮ್ಮ ಮುಂದೆ ಬಂದು ನಿಲ್ಲುತ್ತದೆ. ವರ್ಷದಿಂದ ವರ್ಷಕ್ಕೆ ರಾಜಾಸೀಟ್ ಅಭಿವೃದ್ಧಿಯಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಉದ್ಯಾನದ ಅಂಚಿನಲ್ಲಿ ವೀಕ್ಷಣಾ ತಾಣವನ್ನು ನಿರ್ಮಿಸಲಾಗಿದೆ.

ಹೆಚ್ಚಿನವರಿಗೆ ಗೊತ್ತಿಲ್ಲದ ನೆಹರು ಮಂಟಪ
ಉದ್ಯಾನದಲ್ಲಿ ಅಲ್ಲಲ್ಲಿ ಕಲ್ಲುಬೆಂಚುಗಳನ್ನು ನಿರ್ಮಿಸಿ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ. ಕಾರಂಜಿ, ಕೃತಕ ಜಲಪಾತಗಳನ್ನು ಕೂಡ ನಿರ್ಮಿಸಲಾಗಿದೆ. ಉದ್ಯಾನದ ಬಳಿಯಲ್ಲಿಯೇ ಪುಟಾಣಿ ರೈಲು ಕೂಡ ಇದೆ. ರಾಜಾಸೀಟ್ ಉದ್ಯಾನದ ಒಂದು ಭಾಗದಲ್ಲಿ ಶಕ್ತಿದೇವತೆ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮನ ದೇಗುಲವಿದೆ. ದೇವಾಲಯವನ್ನು ದಾಟಿ ಮುನ್ನಡೆದರೆ ಆಕಾಶವಾಣಿ ಕೇಂದ್ರ, ನೆಹರು ಮಂಟಪವಿದೆ.
ಈ ನೆಹರು ಮಂಟಪದ ಬಗ್ಗೆ ಹೇಳಲೇ ಬೇಕಾಗುತ್ತದೆ. ಹಲವು ವರ್ಷಗಳ ಹಿಂದೆ ರಾಜಾಸೀಟ್‌ನಷ್ಟೆ ಸೌಂದರ್ಯವನ್ನು ಈ ಮಂಟಪ ಹೊಂದಿತ್ತು. ನೆಹರು ಮಂಟಪವಿರುವ ಗುಡ್ಡ ಪ್ರಕೃತಿಯ ಚೆಲುವಿನ ಆಕರ್ಷಕ ತಾಣವಾಗಿತ್ತು. ಈ ಗುಡ್ಡದಿಂದ ನಿಂತು ನೋಡಿದ್ದೇ ಆದರೆ ಮಡಿಕೇರಿ ಪಟ್ಟಣದ ವಿಹಂಗಮ ನೋಟ ಕಣ್ಣಿಗೆ ರಾಚುತ್ತಿತ್ತು. ದೂರದಲ್ಲಿ ಸಾಲು ಸಾಲಾಗಿ ನಿಂತು ಬಾನಿಗೆ ಮುತ್ತಿಕ್ಕುತ್ತಿವೆಯೇನೋ ಎಂಬಂತೆ ಭಾಸವಾಗುವ ಪರ್ವತ ಶ್ರೇಣಿಗಳು, ಒತ್ತೊತ್ತಾಗಿ ಬೆಳೆದು ನಿಂತ ವೃಕ್ಷ ರಾಶಿಗಳು, ಗದ್ದೆಬಯಲುಗಳು, ಅಂಕುಡೊಂಕಾಗಿ ಹಾದು ಹೋದ ರಸ್ತೆಗಳು ಕಣ್ಮನ ತಣಿಸುತ್ತಿದ್ದವು.
ರಾಜಾಸೀಟ್‌ಗೆ ಭೇಟಿ ನೀಡಲು ಮರೆಯದಿರಿ
1957ರಲ್ಲಿ ಕೊಡಗಿಗೆ ಭೇಟಿ ನೀಡಿದ ಪ್ರಧಾನಿ ಜವಾಹರಲಾಲ್ ನೆಹರುರವರ ಸವಿನೆನಪಿಗಾಗಿ ಆಗಿನ ರಾಜ್ಯಪಾಲ ಧರ್ಮವೀರ ಎಂಬುವರು ಈ ಗುಡ್ಡದಲ್ಲಿ ಮಂಟಪ ನಿರ್ಮಿಸಿ ನೆಹರು ಮಂಟಪ ಎಂದು ಹೆಸರಿಟ್ಟಿದ್ದರು. ಈ ಮಂಟಪ ಈಗ ವೈಭವ ಕಳೆದುಕೊಂಡಿದೆ. ನಾಗರಿಕತೆಯ ಪ್ರಭಾವ, ಜನಸಂಖ್ಯೆ ಹೆಚ್ಚಳ, ಹೀಗಾಗಿ ಪ್ರಶಾಂತವಾಗಿದ್ದ ಗುಡ್ಡಗಳ ಮೇಲೆ ಮನೆಗಳು ತಲೆ ಎತ್ತಿದ್ದು, ನಿಸರ್ಗ ಸೌಂದರ್ಯ ಮರೆಯಾಗಿದೆ. ರಾಜಾಸೀಟ್ ಸಮೀಪವೇ ಇರುವುದರಿಂದ ನೆಹರು ಮಂಟಪಕ್ಕೆ ಪ್ರವಾಸಿಗರು ಭೇಟಿ ನೀಡಬಹುದಾಗಿದೆ.
ಅದು ಏನೇ ಇರಲಿ ಮಡಿಕೇರಿಗೆ ರಾಜಾಸೀಟ್ ನಿಸರ್ಗ ಸುಂದರ ಪ್ರವಾಸಿ ತಾಣವಾಗಿದ್ದು, ಇದೀಗ ಸಾಹಸಿಗರಿಗೆ ಅನುಕೂಲವಾಗುವಂತೆ ಜಿಫ್‌ಲೈನ್ ಸಾಹಸ ಕ್ರೀಡೆಯನ್ನು ಆರಂಭಿಸಿರುವುದರಿಂದ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವಂತೆ ಮಾಡಿದೆ. ಪ್ರವಾಸಿಗರೇ ಕೊಡಗಿನತ್ತ ಬಂದರೆ ರಾಜಾಸೀಟ್‌ಗೆ ಭೇಟಿ ನೀಡಲು ಮರೆಯದಿರಿ.












Click it and Unblock the Notifications