ಈ ಬಾರಿ ಮಳೆ ಇಲ್ಲ.. ಆದ್ರೂ ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಿವೆ ಮಂಜಿನ ನಗರಿಯ "ಆ" ಅದ್ಭುತ ದೃಶ್ಯಗಳು
ಮಡಿಕೇರಿ, ಜೂನ್, 17: ಮುಂಗಾರು ಹಿನ್ನೆಲೆ ಕೊಡಗು ಜಿಲ್ಲೆಯಲ್ಲೆಡೆ ಅಚ್ಚಹರಿಸಿನ ವಾತಾವರಣ ನಿರ್ಮಾಣವಾಗಿದ್ದು, ಇಲ್ಲಿ ನಿಸರ್ಗದ ಸ್ವರ್ಗವೇ ನಿರ್ಮಾಣವಾದಂತೆ ಭಾಸವಾಗುತ್ತಿದೆ. ಹಾಗೆಯೇ ಈ ಭಾಗದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಹಸಿರು ಹಾಸಿದೆ. ಮೋಡದ ಮುಸುಕು ಸರಿಸಲೇನೋ ಎಂಬಂತೆ ಆಗೊಮ್ಮೆ ಈಗೊಮ್ಮೆ ಸುರಿಯುವ ಮಳೆ, ಗಿಡ ಮರಗಳ ನಡುವೆ ಅವಿತು ಕಣ್ಣುಮುಚ್ಚಾಲೆಯಾಡುವ ಮಂಜು, ಇದನ್ನೆಲ್ಲ ಹಾಗೆ ಸುಮ್ಮನೆ ನಿಂತು ನೋಡಿದರೆ ನಿಸರ್ಗವೇ ಧರೆಗಿಳಿದಿದೆ ಅನಿಸುತ್ತದೆ.
ಕೊಡಗು ಏಕೆ ಇಷ್ಟವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಹೇಳಲೇನೋ ಎಂಬಂತೆ ಇದೀಗ ಇಲ್ಲಿನ ನಿಸರ್ಗ ಸಿರಿ ಸರ್ವ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಮುಂಗಾರು ಮಳೆಯಲ್ಲಿ ಮಿಂದೇಳಲು ಸಜ್ಜಾಗಿದೆ. ಮುಂಗಾರು ಆರಂಭದ ದಿನಗಳಲ್ಲಿ ಕೊಡಗಿಗೆ ಭೇಟಿ ನೀಡುವುದೇ ಒಂಥರಾ ಮಜಾ ಅನಿಸುತ್ತದೆ.

ಜಿಟಿ ಜಿಟಿ ಮಳೆಯೊಂದಿಗೆ ಬೆಟ್ಟಗುಡ್ಡವನ್ನೆಲ್ಲಾ ಮುಸುಕು ಹಾಕಿ ಮಲಗಿದೆಯೇ ಎಂಬಂತೆ ಹರಡಿಕೊಳ್ಳುವ ಮಳೆ ಮೋಡ ಮತ್ತು ಅದರಾಚೆಗೆ ಯಾರೆಂದು ಗೊತ್ತಾಗದಷ್ಟು ದಟ್ಟವಾದ ಮಂಜು, ಇದರ ನಡುವೆ ಸಣ್ಣಗೆ ಮೈನಡುಗಿಸುವ ಚಳಿಯೂ ಅದ್ಭತ ಅನುಭವ ಕೊಡಲಿದೆ.
ದೂರದಿಂದ ಬೇಸಿಗೆಯ ಬಿಸಿಲಲ್ಲಿ ಬೆಂದು ಬಂದವರು ಇಲ್ಲಿನ ವಾತಾವರಣ ಬೇಗನೇ ಹೊಂದಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಭೂಮಿ ಮೇಲಿನ ನಿಸರ್ಗ ಸೌಂದರ್ಯ ತಮ್ಮ ಎದುರೇ ಬಂದು ನಿಂತಂತಹ ಅನುಭವ ಆಗುತ್ತದೆ. ನಿಜಕ್ಕೂ ಕೊಡಗಿನ ಸೌಂದರ್ಯವೇ ಹಾಗೆ. ಇಲ್ಲಿನ ವಾತಾವರಣ, ಪ್ರಕೃತಿಯ ಮೆರಗು, ಜನ, ಆಚಾರ, ವಿಚಾರ, ಕಲೆ ಸಂಸ್ಕೃತಿ ಎಲ್ಲವೂ ವಿಭಿನ್ನ ಹಾಗೂ ವಿಶಿಷ್ಟ.
ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ
ಮೂರ್ನಾಲ್ಕು ದಶಕಗಳಿಗೆ ಹೋಲಿಸಿದರೆ ಇತ್ತೀಚೆಗಿನ ದಿನಗಳಲ್ಲಿ ಕೊಡಗು ತುಂಬಾ ಅಭಿವೃದ್ಧಿ ಆಗಿದೆ. ಕೇವಲ ಕೃಷಿಗೆ ಅವಲಂಬನೆಯಾಗಿದ್ದವರು ಇದೀಗ ಅದರಾಚೆಗೆ ವ್ಯಾಪಾರ, ವ್ಯವಹಾರ, ಉದ್ಯಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೃಷಿ ಸುತ್ತ ಬದುಕು ಕಟ್ಟಿಕೊಂಡಿದ್ದವರು ಅದರಾಚೆಗೆ ಬೇರೆ ಉದ್ಯಮಗಳನ್ನು ನಡೆಸುವಷ್ಟರ ಮಟ್ಟಿಗೆ ಬೆಳೆದಿದೆ. ಕಳೆದ ಒಂದೆರಡು ದಶಕಗಳಿಂದ ಪ್ರವಾಸೋದ್ಯಮ ಚೇತರಿಕೆ ಕಂಡಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಭೇಟಿ ನೀಡುತ್ತಿರುವುದರಿಂದ ಪ್ರವಾಸೋದ್ಯಮದ ಸುತ್ತಲೂ ವ್ಯಾಪಾರ ವಹಿವಾಟುಗಳು ಹೆಚ್ಚಾಗಿವೆ.
ಜಿಲ್ಲೆಗೆ ಲಗ್ಗೆಯಿಡುತ್ತಿರುವ ಪ್ರವಾಸಿಗರು
ಹೋಂ ಸ್ಟೇ, ರೆಸಾರ್ಟ್ ಸೇರಿದಂತೆ ಹೋಟೆಲ್ ಉದ್ಯಮ ಸಾಕಷ್ಟು ರೀತಿಯಲ್ಲಿ ವೃದ್ಧಿಯಾಗಿದೆ. ಪ್ರವಾಸೋದ್ಯಮದಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಒಂದು ಕಾಲದಲ್ಲಿ ಪ್ರವಾಸಿಗರಿಲ್ಲದೆ ಭಣಗುಡುತ್ತಿದ್ದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಹೆಚ್ಚಾಗಿ ಕಾಣಿಸುವಂತಾಗಿದೆ.
ಕಾಡು ಮೇಡು, ಬೆಟ್ಟ ಗುಡ್ಡಗಳಿಗೂ ಪ್ರವಾಸಿಗರು ಬರುವಂತಾಗಿದೆ. ಜೊತೆಗೆ ಕಾಫಿ ತೋಟಗಳ ನಡುವಿನ ಹೋಂಸ್ಟೇಗಳಲ್ಲಿ ಒಂದಷ್ಟು ಕಾಲ ಕಳೆದು ಇಲ್ಲಿನ ತಂಪಾದ ವಾತಾವರಣದಲ್ಲಿ ಮಿಂದೇಳುವ ಆಸೆ ಪ್ರವಾಸಿಗರಲ್ಲಿ ಹೆಚ್ಚುತ್ತಿದೆ. ಇದೆಲ್ಲವೂ ಕೊಡಗು ಅಭಿವೃದ‍್ದಿಯತ್ತ ಸಾಗಲು ಮತ್ತು ಒಂದಷ್ಟು ಬದಲಾವಣೆ ಕಾಣಲು ಕಾರಣವಾಗಿದೆ.
ಕೊಡಗಿನಲ್ಲಿ ಇನ್ನೂ ಆರಂಭವಾಗದ ಮುಂಗಾರು
ಈ ಬಾರಿ ಕೊಡಗಿಗೆ ವರುಣ ದಯೆಪಾಲಿಸಿಲ್ಲ. ಬೇಸಿಗೆಯ ದಿನಗಳಲ್ಲೂ ಮಳೆ ಸಮರ್ಪಕವಾಗಿ ಸುರಿದಿಲ್ಲ. ಜೊತೆಗೆ ಮುಂಗಾರು ಕೂಡ ವಾಡಿಕೆಯಂತೆ ಆರಂಭವಾಗಿಲ್ಲ. ಆದರೂ ಬೇಸಿಗೆಯ ಸುಡು ಬಿಸಿಲ ನಡುವೆಯೂ ಆಗೊಮ್ಮೆ, ಈಗೊಮ್ಮೆ ಸುರಿದ ಮಳೆ ಮಣ್ಣನ್ನು ತಂಪಾಗಿಸಿದ್ದು, ಎಲೆ ಒಣಗಿ ಸತ್ತೇ ಹೋದೆವೇನೋ ಎಂಬಂತಿದ್ದ ಗಿಡಮರಗಳಿಗೆ ಜೀವ ಬಂದಿದೆ. ಹೀಗಾಗಿ ಈಗ ನಾವು ಎತ್ತ ನೋಡಿದರೂ ಅಚ್ಚಹಸಿರಿನ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಮಳೆಗಾಗಿ ಕಾಯುವುದು ಮಾಮೂಲಿ
ಇನ್ನು ಮುಂಗಾರು ಮಳೆಗೆ ಕೊಡಗಿನ ಜನ ಕಾಯುವುದು ಮಾಮೂಲಿಯಾಗಿದೆ. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಕೃಷಿ ಚಟುವಟಿಕೆಗಳು ವೇಗ ಪಡೆಯುತ್ತವೆ. ಭತ್ತದ ಕೃಷಿಯಿಂದ ಕಾಫಿ ತೋಟದ ಕೆಲಸದವರೆಗೆ ಒಂದಲ್ಲ ಒಂದು ಕೆಲಸಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗಿನ ವರ್ಷಗಳಲ್ಲಿ ಪರಿಸರ ಮತ್ತು ವಾತಾವರಣದಲ್ಲಿ ಆಗುತ್ತಿರುವ ಏರುಪೇರುಗಳಿಂದಾಗಿ ಮುಂಗಾರು ಮಳೆ ಸುರಿಯುವುದರಲ್ಲೂ ವ್ಯತ್ಯಾಸವಾಗುತ್ತಿದೆ.
ಮೊದಲೆಲ್ಲ ಜಿಟಿ ಜಿಟಿಯಾಗಿ ಆರಂಭವಾಗುತ್ತಿದ್ದ ಮಳೆ ನಿಧಾನವಾಗಿ ರಭಸವನ್ನು ಹೆಚ್ಚಿಸಿಕೊಳ್ಳುತ್ತಿತ್ತು. ಅದರಲ್ಲೂ ಜುಲೈ ಮತ್ತು ಆಗಸ್ಟ್ ತಿಂಗಳು ನಡು ಮಳೆಗಾಲದ ದಿನಗಳಾಗಿರುತ್ತಿದ್ದವು. ಈ ವೇಳೆ ಮಲೆನಾಡಿನಲ್ಲಿ ನದಿ ತೊರೆಗಳು ತುಂಬಿ ಹರಿಯುತ್ತಿದ್ದವು. ಪ್ರವಾಹವೂ ಏರ್ಪಡುತ್ತಿತ್ತು. ಆದರೆ ಈ ಬಾರಿ ಮಳೆ ಬಾರದಿದ್ದರೂ ಕೂಡ ಇಲ್ಲಿ ಅಚ್ಚಹರಿಸಿರಿನ ವಾತಾರಣ ನಿರ್ಮಾಣ ಆಗಿರುವುದು ಅಚ್ಚರಿ ಮೂಡಿಸಿದಂತಿದೆ.
ಹಿಂದಿನಂತೆ ಇಲ್ಲ ಮುಂಗಾರು ಮಳೆ
ಜಿಲ್ಲೆಯಲ್ಲಿ ಈ ಬಾರಿ ಮಳೆ ಯಾವಾಗ ಯಾವ ರೀತಿಯಲ್ಲಿ ಸುರಿಯುತ್ತದೆ ಎನ್ನುವುದನ್ನು ಊಹಿಸಲಾಗುತ್ತಿಲ್ಲ. ಜೊತೆಗೆ ಮಳೆ ಬರೀ ಮಳೆಯಾಗಿ ಸುರಿಯುತ್ತಿಲ್ಲ. ಪ್ರಕೃತಿ ವಿಕೋಪಗಳಿಗೂ ಆಹ್ವಾನ ನೀಡುತ್ತಿದೆ. ಹೀಗಾಗಿ ಮುಂಗಾರು ಮಳೆ ಹಿಂದಿನಂತೆ ಸಂತಸ ಪಡುವುದಕ್ಕಿಂತಲೂ ಜನ ಭಯಪಡುತ್ತಿದ್ದಾರೆ. ಅದರಲ್ಲೂ ನಾಲ್ಕೈದು ವರ್ಷಗಳಿಂದ ಪ್ರತಿ ಮಳೆಗಾಲದಲ್ಲೂ ಒಂದಲ್ಲ ಒಂದು ಅನಾಹುತಗಳು ಸಂಭವಿಸುತ್ತಲೇ ಇರುತ್ತಿರುವುದರಿಂದ ಜನರಲ್ಲಿ ಆತಂಕವೂ ಮನೆ ಮಾಡಿತ್ತು.
ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಕೊಡಗು
ಅದೇನೆ ಇರಲಿ ಈಗ ಕಡಗು ಜಿಲ್ಲೆ ಹಸಿರಿನ ಸೌಂದರ್ಯದಿಂದ ಕಂಗೊಳಿಸುತ್ತಿದ್ದು, ಅದರೊಳಗಿನ ವನದೇವಿ ವಿಜ್ರಂಭಿಸುತ್ತಾ ನೋಡಬರುವವರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದ್ದಾಳೆ.











Click it and Unblock the Notifications