ಕಾಫಿನಾಡಿನ ಪ್ರವಾಸಿ ತಾಣಗಳಲ್ಲಿಲ್ಲ ಮೂಲಭೂತ ಸೌಲಭ್ಯ: ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ
ಚಿಕ್ಕಮಗಳೂರು, ಜೂನ್ 08: ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ನೆಚ್ಚಿನ ಜಿಲ್ಲೆ. ಅದರಲ್ಲೂ ಕಾಫಿನಾಡಿನ ಮುಳ್ಳಯ್ಯನಗಿರಿ ಪ್ರವಾಸಿಗರ ಹಾಟ್ ಸ್ಪಾಟ್, ಆದರೆ ಕಾಫಿನಾಡಿನ ಆಗಮಿಸುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಮರೀಚಿಕೆಯಾಗಿವೆ.
ಕಳೆದ ಕೆಲವು ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸುವ ಪ್ರವಾಸಿ ಗರ ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ. ಆದರೆ, ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ಸೌಲಭ್ಯ ಒದಗಿಸುವಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ವಿಫಲವಾಗಿದೆ. ಮೂಲಭೂತ ಸೌಲಭ್ಯವಿಲ್ಲದೆ ಪ್ರವಾಸಿಗರು ಕಿರಿಕಿರಿ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠಗೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಸಿಗುತ್ತಿಲ್ಲ. ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದ್ದು ಪ್ರವಾಸಿಗರ ಜಿಲ್ಲಾಡಳಿತ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಕೆಲವೆಡೆ ಇರುವ ಶೌಚಾಲಯ ಕ್ಕೆ ನಿರ್ವಹಣೆಗೆ ಸಿಬ್ಬಂದಿ ಇಲ್ಲದೇ ಸ್ವಚ್ಛತೆ ಕಾಪಾಡದೇ ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಪ್ರವಾಸಿಗರು ಪರದಾಡುವ ಸ್ಥಿತಿ ಇದೆ. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಇಲ್ಲಿನ ಜಿಲ್ಲಾಡಳಿತ ವಿಫಲವಾಗಿದೆ ಎಂದು ಮಹಿಳೆಯೊಬ್ಬರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಎಲ್ಲರ ಗಮನ ಸೆಳೆದಿದೆ.
ಪತ್ರದ ಕೊನೆಯಲ್ಲಿ ಸಾಮಾನ್ಯ ಮಹಿಳೆ ಜಡೆಮ್ಮ ಎಂದು ಉಲ್ಲೇಖಿಸಿದ್ದಾರೆ. ಅವರು ಬರೆದ ಪತ್ರದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಗಿರಿ ಪ್ರದೇಶದ ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಬೇರೆ ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ವಿಫಲವಾಗಿದೆ. ಇದರಿಂದ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದಿದ್ದಾರೆ.

ದೇಶದ ಪ್ರಥಮ ಪ್ರಜೆಯಾಗಿರುವ ತಾವು ಬುಡಕಟ್ಟು ಸಮುದಾಯದಿಂದ ಬಂದವರು. ಅತ್ಯುನ್ನತ ಸ್ಥಾನಕ್ಕೆ ಏರಿರು ವುದು ನಮ್ಮಂತಹ ಸಾಮಾನ್ಯ ಮಹಿಳೆಯರಿಗೆ ಸ್ಫೂರ್ತಿಯಾಗಿದೆ ಎಂದು ಪತ್ರ ಆರಂಭಿಸಿರುವ ಅವರು, ಕೆಲವು ದಿನಗಳ ಹಿಂದೆ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠಕ್ಕೆ ಕುಟುಂಬ ಸಮೇತರಾಗಿ ತೆರಳಿದ್ದೇವು. ಈ ಪ್ರದೇಶದಲ್ಲಿ ಶೌಚಾಲಯ ವ್ಯವಸ್ಥೆಯಿಲ್ಲದೆ ಪರದಾಡಬೇಕಾಯಿತು ಎಂದು ತಿಳಿಸಿದ್ದಾರೆ.
ಸೀತಾಳಯ್ಯನಗಿರಿ ಮತ್ತು ದತ್ತಪೀಠದಲ್ಲಿ ಶೌಚಾಲಯವಿದ್ದರೂ ಸಮಸ್ಯೆಗಳಿಂದ ಕೂಡಿವೆ. ಶೌಚಾಲಯವಿಲ್ಲದೆ ಮಹಿಳೆಯರು, ಯುವತಿಯರು ಪರದಾಡಬೇಕಾದ ಪರಿಸ್ಥಿತಿ ಇದೆ ಎಂದು ಉಲ್ಲೇಖಿಸಿದ್ದಾರೆ. ಇಲ್ಲಿ ಶೌಚಾಲಯ ನಿರ್ಮಿಸದೇ ನಿರ್ಲಕ್ಷ್ಯವಹಿಸಿದ್ದು ನೋಡಿದರೇ ಬೇಸರವಾಗುತ್ತದೆ. ಶೌಚಾಲಯವಿಲ್ಲದಿರುವುದು ಸಂವಿಧಾನದ 19 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನಾವಿನ್ನೂ ಶೌಚಾಲಯದ ಬಗ್ಗೆ ಮಾತನಾಡುತ್ತಿದ್ದೇವೆ ಎಂದರೆ ಬೇಜಾರಾಗುತ್ತದೆ ಎಂದು ಬರೆದಿದ್ದಾರೆ.
ಲಕ್ಷಾಂತರ ಜನರು ಭೇಟಿ ನೀಡುವ ಈ ಪ್ರದೇಶದಲ್ಲಿ ಶೌಚಾಲಯ ನಿಮಾಣ ಮಾಡುವುದರಿಂದ ಅನೇಕರಿಗೆ ಅನುಕೂಲವಾಗುತ್ತದೆ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸುತ್ತೇನೆಂದು ಭರವಸೆ ಇದೆ ಎಂದಿದ್ದಾರೆ. ಮುಳ್ಳಯ್ಯನಗಿರಿ ಶ್ರೇಣಿ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇರುವ ಬಗ್ಗೆ ಈಗಾಗಲೇ ಅನೇಕ ಬಾರೀ ಚರ್ಚೆಯಾಗಿದೆ. ಈ ಬಗ್ಗೆ ಅನೇಕರು ಜಿಲ್ಲಾಡಳಿತದ ಗಮನಕ್ಕೂ ತಂದಿದ್ದಾರೆ. ಆದರೆ, ಮಹಿಳೆಯೊಬ್ಬರು ರಾಷ್ಟ್ರಪತಿಗೆ ಪತ್ರ ಬರೆಯುವ ಮೂಲಕ ಮೂಲಭೂತ ಸೌಲಭ್ಯದ ಕೊರತೆ ಬಗ್ಗೆ ಮತ್ತೊಮ್ಮೆ ಬೆಳಕು ಚೆಲ್ಲಿದ್ದಾರೆ. ಇನ್ನದರೂ ಜಿಲ್ಲಾಡಳಿತ ಮೂಲಭೂತ ಸೌಲಭ್ಯ ಕಲ್ಪಿಸುವುದೇ ಕಾದು ನೋಡಬೇಕಿದೆ.












Click it and Unblock the Notifications