ಆಲಮಟ್ಟಿ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ ಮೋದಿ-ಎಷ್ಟು ಕೋಟಿ ವೆಚ್ಚ?
ಆಲಮಟ್ಟಿ, ಫೆಬ್ರವರಿ, 25: "ಅಮೃತ ಭಾರತ ನಿಲ್ದಾಣಗಳ" ಯೋಜನೆಯಡಿ ಸೇರ್ಪಡೆಗೊಂಡಿರುವ ಆಲಮಟ್ಟಿ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 26ರಂದು ಚಾಲನೆ ನೀಡಲಿದ್ದಾರೆ. ಹಾಗಾದರೆ ಇದಕ್ಕೆ ತಗಲುವ ವೆಚ್ಚ ಎಷ್ಟು ಕೋಟಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಆನ್‌ಲೈನ್ ಮೂಲಕ ಏಕಕಾಲದಲ್ಲಿಯೇ ದೇಶಾದ್ಯಂತ ಶಂಕುಸ್ಥಾಪನೆ ಸಮಾರಂಭದಲ್ಲಿ ಆಲಮಟ್ಟಿ ಸಂಸದರು, ಸ್ಥಳೀಯ ಜನಪ್ರತಿನಿಧಿಗಳು, ರೈಲ್ವೆ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈಗಾಗಲೇ ಆಧುನೀಕರಣದ ಕಾಮಗಾರಿಗಳು ಆರಂಭಗೊಂಡಿದೆ. ಪ್ರವಾಸಿ ತಾಣವಾಗಿರುವ ಆಲಮಟ್ಟಿಯ ರೈಲು ನಿಲ್ದಾಣದ ಅಧುನೀಕರಣ ಕಾಮಗಾರಿಯನ್ನು ನೈರುತ್ಯ ರೈಲ್ವೆ ವಲಯ 15.21 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾರಂಭಿಸಿದೆ. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಜಿ+ ಅಂತಸ್ತಿನ ರಚನೆಯು ಆಧುನಿಕ ಸೌಲಭ್ಯಗಳ ಕಟ್ಟಡ ನೋಡಲು ಅದ್ಭುತವಾಗಿರಲಿದೆ.

ಫ್ಲಾಟ್ ಫಾರ್ಮ್ ಶೆಲ್ಟರ್‌ಗಳು (ಚಾವಣಿ), ಪಾರ್ಕಿಂಗ್ ವ್ಯವಸ್ಥೆ ಸುಧಾರಣೆ, ಈಗಿರುವ ಪಾದಚಾರಿ ಮೇಲ್ಸೆತುವೆ 12 ಮೀಟರ್‌ಗೆ ವಿಸ್ತರಣೆ ಮಾಡಲಾಗುವುದು ಎಂದು ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗೀಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ ಕವಲಗಿ ತಿಳಿಸಿದರು. ದಟ್ಟಣೆ ತಡೆಗಟ್ಟಲು ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರ ನಿರ್ಮಾಣ ಮಾಡಲಾಗುತ್ತದೆ. ವೇಟಿಂಗ್ ಹಾಲ್, ಕ್ಯಾಂಟೀನ್, ರಿಸರ್ವೇಷನ್ ಕೌಂಟರ್, ಹೈಟೆಕ್ ಶೌಚಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.
ರೈಲು ಸೂಚನಾ ಫಲಕಗಳು ಹಾಗೂ ವಿವಿಧ ಕೌಂಟರ್‌ಗಳು ಸೂಚನಾ ಫಲಕಗಳನ್ನು ಆಧುನಿಕರಣಗೊಳಿಸಲಾಗುತ್ತದೆ. ನಿಲ್ದಾಣವು ದಿವ್ಯಾಂಗ-ಸ್ನೇಹಿಯಾಗಲಿದ್ದು, 2 ಲಿಫ್ಟ್‌ಗಳು ಮತ್ತು 2 ಎಸ್ಕಲೇಟರ್‌ಗಳು ಪ್ರಯಾಣಿಕರಿಗೆ ಅನುಕೂಲ ಒದಗಿಸಲಿದೆ. ಪ್ಲಾಟ್‌ಫಾರ್ಮ್‌ಗೆ ಸಬ್ ವೇ ಸಂಪರ್ಕದೊಂದಿಗೆ ಎರಡನೇ ಪ್ರವೇಶ ದ್ವಾರ ನಿರ್ಮಾಣಗೊಳ್ಳಲಿದೆ. ಈಗಿರುವ ಫ್ಲಾಟ್‌ಫಾರ್ಮ್ ವಿಸ್ತರಣೆ ಕಾರ್ಯವೂ ನಡೆಯಲಿದೆ ಎಂದು ಅವರು ಹೇಳಿದರು.
ಆಲಮಟ್ಟಿ ರೈಲು ನಿಲ್ದಾಣದ ಆಧುನೀಕರಣದಿಂದ ಪ್ರಯಾಣಿಕರ ಸ್ನೇಹಿ ನಿಲ್ದಾಣ ಆಗಲಿದೆ. ಎಲ್‌ಇಡಿ ದೀಪವನ್ನು ನಿಲ್ದಾಣದಾದ್ಯಂತ ಅಳವಡಿಜೆ ಮಾಡಲಾಗುತ್ತದೆ. ಪಾರ್ಕಿಂಗ್ ವ್ಯವಸ್ಥೆ ಸುಧಾರಣೆ ಆಗಲಿದೆ ಎಂದು ತಿಳಿಸಿದರು.












Click it and Unblock the Notifications