Vande Bharat; ಬೆಂಗಳೂರು-ಕಲಬುರಗಿ ರೈಲಿಗೆ ಯಾದಗಿರಿ ನಿಲುಗಡೆ ಏಕಿಲ್ಲ
ಯಾದಗಿರಿ, ಮಾರ್ಚ್ 11: ಬೆಂಗಳೂರು-ಕಲಬುರಗಿ ನಡುವಿನ ನೂತನ ವಂದೇ ಭಾರತ್ ರೈಲಿಗೆ ಮಾರ್ಚ್ 12ರಂದು ಹಸಿರು ನಿಶಾನೆ ತೋರಿಸಲಾಗುತ್ತದೆ. ಈ ಮೂಲಕ ಬಹುದಿನಗಳ ಬೇಡಿಕೆ ಈಡೇರುತ್ತಿದೆ. ಆದರೆ ಯಾದಗಿರಿ ಜನರು ಈ ರೈಲು ಸೇವೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೆಂಗಳೂರು-ಕಲಬುರಗಿ ನಡುವಿನ ನೂತನ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ. ಕಲ್ಯಾಣ ಕರ್ನಾಟಕ ಮತ್ತು ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ರೈಲು ಸಂಚಾರ ನಡೆಸಲಿದೆ.

ಕಲಬುರಗಿ-ಎಸ್‌ಎಂವಿ ಬೆಂಗಳೂರು ನಡುವೆ ರೈಲು ಸಂಖ್ಯೆ 22231 ಮತ್ತು ಎಸ್‌ಎಂವಿ ಬೆಂಗಳೂರು-ಕಲಬುರಗಿ ನಡುವೆ ರೈಲು ಸಂಖ್ಯೆ 22232 ಗುರುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳ ಕಾಲ ಸಂಚಾರ ನಡೆಸಲಿದೆ. ಈಗಾಗಲೇ ರೈಲು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಬೆಂಗಳೂರು ಎಸ್‌ಎಂವಿ-ಕಲಬುರಗಿ ರೈಲು ರಾಯಚೂರು, ಮಂತ್ರಾಲಯ ರಸ್ತೆ, ಗುಂತಕಲ್, ಅನಂತಪುರ ಮತ್ತು ಯಲಹಂಕದಲ್ಲಿ ನಿಲುಗಡೆ ಹೊಂದಿದೆ. ಬೆಳಗ್ಗೆ 5.15ಕ್ಕೆ ಕಲಬುರಗಿಯಿಂದ ಹೊರಡುವ ರೈಲು ಮಧ್ಯಾಹ್ನ 12.47ಕ್ಕೆ ಯಲಹಂಕ ತಲುಪುತ್ತದೆ.

ಯಾದಗಿರಿಯಲ್ಲಿ ನಿಲುಗಡೆ ಇಲ್ಲ: ಬೆಂಗಳೂರು-ಕಲಬುರಗಿ ನಡುವಿನ ನೂತನ ವಂದೇ ಭಾರತ್ ರೈಲು ಯಾದಗಿರಿಯಲ್ಲಿ ನಿಲ್ಲುವುದಿಲ್ಲ ಎಂಬುದು ಜಿಲ್ಲೆಯ ಜನರ ಬೇಸರಕ್ಕೆ ಕಾರಣವಾಗಿದೆ. ಯಾದಗಿರಿ ಜಿಲ್ಲೆಯಾಗಿ 14 ವರ್ಷ ಕಳೆದಿದೆ. ಆದರೆ ಇಂದಿಗೂ ಸಹ 8 ರಿಂದ 10 ಪ್ರಮುಖ ರೈಲುಗಳು ನಿಲುಗಡೆಗೊಳ್ಳುತ್ತಿಲ್ಲ. ಈಗ ವಂದೇ ಭಾರತ್ ಸಹ ನಿಲುಗಡೆ ಇಲ್ಲ.
ಯಾದಗಿರಿ ಗುಂತಕಲ್ ವಿಭಾಗಕ್ಕೆ ಸೇರುತ್ತದೆ. ಈ ವಿಭಾಗದಲ್ಲಿ ತಿರುಪತಿ ಬಳಿಕ ಅತಿ ಹೆಚ್ಚು ಆದಾಯ ತಂದು ಕೊಡುವ 2ನೇ ನಿಲ್ದಾಣ ಯಾದಗಿರಿ. ಆದರೆ ಪ್ರಮುಖ ರೈಲುಗಳನ್ನು ಇಲ್ಲಿ ನಿಲುಗಡೆ ಮಾಡಿ ಎಂದು ಜಿಲ್ಲೆಯ ಜನರು ಬೇಡಿಕೊಳ್ಳುವ ಪರಿಸ್ಥಿತಿ ಇದೆ.
ಬೆಂಗಳೂರು-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್, ಯಶವಂತಪುರ-ಅಹಮದಾಬಾದ್, ಯಶವಂತಪುರ-ಗೋರಖ್‌ಪುರ, ಯಶವಂತಪುರದಿಂದ ಉತ್ತರ ಭಾರತದ ಕಡೆ ಹೋಗುವ ಯಾವುದೇ ರೈಲು ಯಾದಗಿರಿಯಲ್ಲಿ ನಿಲ್ಲುವುದಿಲ್ಲ. ಈಗ ವಂದೇ ಭಾರತ್‌ಗೆ ಸಹ ನಿಲುಗಡೆ ನೀಡದೆ ಜಿಲ್ಲೆಯ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ.
ಯಾದಗಿರಿ ರೈಲ್ವೆ ಹೋರಾಟ ಸಮಿತಿಯ ಪ್ರಸನ್ನ ದೇಶಮುಖ ಮಾತನಾಡಿ, "ವಂದೇ ಭಾರತ್ ರೈಲಿಗೆ ಇಲ್ಲಿ ನಿಲುಗಡೆ ಇಲ್ಲ. ಕರ್ನಾಟಕಕ್ಕೆ ರೈಲು ಕೊಟ್ಟಿದ್ದೇವೆ ಎಂದು ಹೇಳುವವರು ಅದು ಆಂಧ್ರ ಪ್ರದೇಶ-ತೆಲಂಗಾಣದಲ್ಲಿಯೇ ಹೆಚ್ಚು ನಿಲುಗಡೆ ಹೊಂದಿದೆ ಎಂಬುದನ್ನು ಗಮನಿಸಬೇಕು. ಹಿಂದೆಯೂ ಹೋರಾಟ ಮಾಡಿ ರೈಲು ನಿಲುಗಡೆ ಪಡೆಯಲಾಗಿತ್ತು. ಈಗಲೂ ಅದೇ ಹಾದಿ ಹಿಡಿಯಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
ರೈಲ್ವೆ ಇಲಾಖೆ ಕಲಬುರಗಿ-ಬೆಂಗಳೂರು ರೈಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ ಯಾದಗಿರಿ ಜನರ ಬೇಡಿಕೆ ಪರಿಗಣಿಸಿ ಯಾದಗಿರಿಯಲ್ಲಿ ನಿಲುಗಡೆ ನೀಡಲಿದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications