ಇಷ್ಟಾರ್ಥ ನೆರವೇರಿಸುವ ಮಂಡ್ಯದ ತೊಣ್ಣೂರಿನ ಮದಗ! ಇಲ್ಲಿನ ದೇಗುಲಗಳ ಐಹಿತ್ಯವೇನು?
ಮಂಡ್ಯ, ಆಗಸ್ಟ್ 08: ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದಾದ ತೊಣ್ಣೂರಿಗೆ ತೆರಳಿದವರಿಗೆ ಸ್ಪಟಿಕದಂತೆ ಹೊಳೆಯುವ ಮುತ್ತಿನ ಕೆರೆ ಮತ್ತು ಅದರಾಚೆಗಿನ ದೇಗುಲಗಳು, ಸುಂದರ ನಿಸರ್ಗ ಆಕರ್ಷಿಸುತ್ತದೆ. ಹೀಗಾಗಿಯೇ ಈ ಸುಂದರ ಪರಿಸರದಲ್ಲಿ ಕಾಲಕಳೆದು ದೇವರ ದರ್ಶನ ಮಾಡಿಕೊಂಡು ಹೋಗಲೆಂದೇ ಹೆಚ್ಚಿನವರು ಇಲ್ಲಿಗೆ ಬರುತ್ತಾರೆ. ಹೀಗಾಗಿ ಇಲ್ಲಿ ಸದಾ ಪ್ರವಾಸಿಗರು, ಭಕ್ತರು ನೆರೆದಿರುವುದು ಕಂಡು ಬರುತ್ತದೆ. ಇಲ್ಲಿ ಸುಂದರ ಕೆರೆ ಮಾತ್ರವಲ್ಲದೆ, ಐತಿಹಾಸಿಕ ದೇಗುಲಗಳಿದ್ದು, ಅವು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಬರುತ್ತಿವೆ.

ಸಾಮಾನ್ಯವಾಗಿ ತೊಣ್ಣೂರಿಗೆ ಆಗಮಿಸುವವರು ವಿಶಾಲಕೆರೆಯನ್ನು ವೀಕ್ಷಿಸಿ ದಡದಲ್ಲಿ ಕುಳಿತು ಒಂದಷ್ಟು ಕಾಲ ವಿಶ್ರಾಂತಿ ಪಡೆದು ಮುಂದೆ ಸಾಗುತ್ತಾರೆ. ಎರಡು ಗುಡ್ಡಗಳಿಗೆ 'ಕಟ್ಟೆ' ಕಟ್ಟಿ ನಿರ್ಮಿಸಲಾಗಿರುವ ಕೆರೆ ಆಳ, ಅಗಲವಿದ್ದು, ಇಲ್ಲಿರುವ ನೀರು ಯಾವುದೇ ಕಲ್ಮಶದಿಂದ ಕೂಡಿರದೆ ಸ್ಪಟಿಕದಂತೆ ಹೊಳೆಯುತ್ತದೆ. ಆದುದರಿಂದ ಈ ಕೆರೆಯನ್ನು 'ಮುತ್ತಿನಕೆರೆ' ಎಂದು ಕೂಡ ಕರೆಯಲಾಗುತ್ತಿದೆ. ಇನ್ನು ಈ ವಿಶಾಲ ಕೆರೆಯನ್ನು ಯಾವಾಗ ನಿರ್ಮಿಸಲಾಯಿತು ಎಂಬುವುದಕ್ಕೆ ಸೂಕ್ತ ದಾಖಲೆಗಳು ಸಿಗುತ್ತಿಲ್ಲವಾದರೂ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ಯಾದವ ಸಮುದ್ರ ಇದಾಗಿರಬಹುದೆಂಬ ಅಭಿಪ್ರಾಯವೂ ಕೇಳಿಬರುತ್ತದೆ.
ಈ ಕೆರೆಯನ್ನು ನೋಡಿಕೊಂಡು ಮುನ್ನಡೆದರೆ ಮೇಲಿನಿಂದ ಕೆಳಕ್ಕೆ ಧುಮುಕುವ ಮದಗ ಕಂಡುಬರುತ್ತದೆ. ಈ ಮದಗದಲ್ಲಿ ತಲೆಕೊಟ್ಟು ಸ್ನಾನ ಮಾಡಿದರೆ ಇಷ್ಟಾರ್ಥಗಳು ನೆರವೇರುವುದರೊಂದಿಗೆ ಜನ್ಮ ಪಾವನವಾಗುತ್ತದೆ. ಅಷ್ಟೇ ಅಲ್ಲದೆ ಚರ್ಮವ್ಯಾಧಿಗಳು ಮಾಯವಾಗುತ್ತವೆ ಎಂಬ ನಂಬಿಕೆಯೂ ಜನರಲ್ಲಿದೆ. ಇಲ್ಲಿ ಮಸೀದಿಯಿದೆ. ಇದರಾಚೆಗೆ ಹಲವಾರು ದೇಗುಲಗಳಿವೆ. ಈ ದೇಗುಲಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಬೇಡಿಕೊಳ್ಳುವುದನ್ನು ಕಾಣಬಹುದಾಗಿದೆ. ಹೀಗಾಗಿ ಇದೊಂದು ಪವಿತ್ರ ಕ್ಷೇತ್ರವಾಗಿಯೂ ಗಮನಸೆಳೆಯುತ್ತದೆ.

ತೊಣ್ಣೂರಿನ ದೇಗುಲಗಳಿಗಿವೆ ಇತಿಹಾಸ
ಹೊಯ್ಸಳರ ರಾಜ ವಿಷ್ಣುವರ್ಧನನ ತಾಯಿ ಮೊದಲ ಮಹಾದೇವಿ ಇಲ್ಲಿ ತುಪ್ಪಲೇಶ್ವರ ಎಂಬ ಶಿವದೇವಾಲಯವೊಂದನ್ನು ಕಟ್ಟಿಸಿದಳೆಂದೂ ಅದಕ್ಕೆ ವಿಷ್ಣುವರ್ಧನ ದತ್ತಿ ಬಿಟ್ಟಿದ್ದನೆಂದೂ ಹೇಳಲಾಗಿದೆ. ಮತ್ತೊಂದೆಡೆ ವಿಷ್ಣುವರ್ಧನ ಯುವರಾಜನಾಗಿದ್ದ ಸಂದರ್ಭ ಕೆರೆತೊಣ್ಣೂರನ್ನು ಅಗ್ರಹಾರವನ್ನಾಗಿ ಪರಿವರ್ತಿಸಿದನೆಂದೂ ಈತ ನಿರ್ಮಿಸಿದ ಐದು ದೇವಾಲಯಗಳಲ್ಲಿ ಇಲ್ಲಿರುವ ಲಕ್ಷ್ಮಿನಾರಾಯಣ ದೇವಾಲಯ ಒಂದಾಗಿರಬಹುದೆಂಬ ಅಭಿಪ್ರಾಯವೂ ಇದೆ. ಜೊತೆಗೆ ಇಲ್ಲಿಯೇ ರಾಮಾನುಜಚಾರ್ಯರು ವಿಷ್ಣುವರ್ಧನನ್ನು ಭೇಟಿ ಮಾಡಿ ಜೈನಮತದಿಂದ ವೈಷ್ಣವ ಮತದತ್ತ ಮನವೊಲಿಸಿದ್ದರು ಎಂದು ಇತಿಹಾಸ ಹೇಳುತ್ತದೆ.
ಇನ್ನು ಕೆರೆತೊಣ್ಣೂರಿನಲ್ಲಿ ನಿರ್ಮಾಣವಾಗಿರುವ ದೇವಾಲಯಗಳ ಬಗ್ಗೆಯೂ ಐಹಿತ್ಯಗಳು ಇರುವುದನ್ನು ನಾವು ಕಾಣಬಹುದು. ಒಂದನೆಯ ನರಸಿಂಹನ ಕಾಲದಲ್ಲಿ ಕೃಷ್ಣನ ದೇವಾಲಯವನ್ನೂ ಹಾಗೂ ಕೈಲಾಸೇಶ್ವರ ದೇವಾಲಯ, ನರಸಿಂಹನ ದೇವಾಲಯವನ್ನು ಕೂಡ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇಮ್ಮಡಿ ಬಲ್ಲಾಳನ ಕಾಲದಲ್ಲಿ ಈ ದೇವಾಲಯಗಳ ಅಭಿವೃದ್ಧಿಯಾಗಿದ್ದು, ಹೊಯ್ಸಳರ ಆಳ್ವಿಕೆಯ ಕೊನೆಗಾಲದಲ್ಲಿ ರಾಜ ಮುಮ್ಮಡಿ ಬಲ್ಲಾಳ ಕೆಲವು ಸಮಯ ಇಲ್ಲಿದ್ದನು ಎನ್ನಲಾಗುತ್ತಿದೆ. ಇಲ್ಲಿರುವ ದೇವಾಲಯಗಳ ಅಭಿವೃದ್ಧಿಯನ್ನು ವಿಜಯನಗರ ಮತ್ತು ಮೈಸೂರು ಅರಸರ ಕಾಲದಲ್ಲಿ ಮಾಡಲಾಯಿತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

ದ್ರಾವಿಡ ಶೈಲಿ ಮಾದರಿಯ ದೇವಾಲಯ
ಕೆರೆತೊಣ್ಣೂರಿನಲ್ಲಿರುವ ದೇವಾಲಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೊಯ್ಸಳರ ಕಾಲದಲ್ಲಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ನಿರ್ಮಿತವಾದ ದ್ರಾವಿಡ ಶೈಲಿಯ ದೇವಾಲಯಗಳ ಮಾದರಿಯನ್ನು ಹೋಲುವುದನ್ನು ಕಾಣಬಹುದು. ಇಲ್ಲಿನ ಲಕ್ಷ್ಮಿನಾರಾಯಣ ದೇಗುಲದ ಗರ್ಭಗೃಹ, ಸುಕನಾಸಿ ಹಾಗೂ ನವರಂಗಗಳುಳ್ಳ ಮೂಲಗುಡಿಯ ಗೋಡೆಗಳು ದಪ್ಪ ಗ್ರಾನೈಟ್ ಕಲ್ಲುಗಳಿಂದ ಕಟ್ಟಿದ್ದು, ಗೋಡೆಯಲ್ಲಿ ಚೌಕ ಅರೆಗಂಬಗಳು, ಆಳವಿಲ್ಲದ ಗೂಡುಗಳೂ ಮೇಲೆ ಪಿರಮಿಡ್ ಆಕೃತಿಯ ಅರೆಗೋಪುರಗಳಿದ್ದು, ಕೆಳಭಾಗದಲ್ಲಿ ಅಷ್ಟಕೋನಾಕೃತಿಯ ದುಂಡಾದ ದಿಂಡುಗಳು, ನವರಂಗದಲ್ಲಿ ತಿರುಗಣೆಯಿಂದ ಕಡಿದು ಹೊಳಪು ಮಾಡಿರುವ ಹೊಯ್ಸಳ ಮಾದರಿಯ ಬಳಪದ ಕಂಬಗಳಿದ್ದು, ಇವುಗಳು ಮೇಲ್ನೋಟಕ್ಕೆ ಬೇಲೂರಿನ ಚೆನ್ನಕೇಶವ ದೇವಾಲಯದ ನವರಂಗದ ಕಂಬಗಳಂತೆ ಕಾಣುತ್ತವೆ.
ದೇಗುಲದ ಮುಂಭಾಗ ಬೃಹತ್ ಮುಖಮಂಟಪ ಹಾಗೂ ಪಾತಾಳಾಂಕಣವಿದ್ದು ಇದರ ಸುತ್ತಲೂ ವಿಜಯನಗರ ಮತ್ತು ಮೈಸೂರು ರಾಜರ ಕಾಲದಲ್ಲಿ ನಿರ್ಮಿಸಲಾದ ಎತ್ತರದ ಎರಡು ಸುತ್ತಿನ ಪ್ರಾಕಾರಗಳಿವೆ. ಶಾಸನವೊಂದರ ಪ್ರಕಾರ ಪಕ್ಕದಲ್ಲಿರುವ ಲಕ್ಷ್ಮಿದೇವಿಯ ಗುಡಿಯನ್ನು ವಿಷ್ಣುವರ್ಧನನ ಕಾಲದಲ್ಲಿ ಸುರಿಗೆಯ ನಾಗಯ್ಯನೆಂಬ ದಂಡನಾಯಕ ಕಟ್ಟಿಸಿದನೆಂದು ತಿಳಿದು ಬರುತ್ತದೆ. ಕೃಷ್ಣದೇವಾಲಯ ಕೂಡ ವೈಶಿಷ್ಟ್ಯಪೂರ್ಣವಾಗಿದ್ದು, ಇದಕ್ಕೆ ಬೃಹತ್ ಪ್ರವೇಶ ದ್ವಾರವಿದೆ. ಗೋಪುರವು ಬಲ್ಲಾಳರ ಕಾಲದಲ್ಲಿ ನಿರ್ಮಿಸಲಾಗಿರಬಹುದು ಎನ್ನಲಾಗುತ್ತಿದ್ದು ಗೋಪುರವನ್ನು ವೀರಬಲ್ಲಾಳನ ಗೋಪುರ ಎಂದು ಕರೆಯುತ್ತಿರುವುದು ಅದಕ್ಕೆ ಸಾಕ್ಷಿಯಾಗಿದೆ.
ತೊಣ್ಣೂರು ಕೆರೆಗೆ ಹೋಗುವುದು ಹೇಗೆ?
ದೇವಾಲಯದ ಗರ್ಭಗುಡಿಯಲ್ಲಿ ಕೃಷ್ಣನ ದೊಡ್ಡ ಮೂರ್ತಿ ಪಕ್ಕದಲ್ಲಿ ರುಕ್ಮಿಣಿ ಸತ್ಯಭಾಮೆಯರ ಚಿಕ್ಕಮೂರ್ತಿಗಳಿವೆ. ವೇಣುಗೋಪಾಲ, ರುಕ್ಮಿಣಿ, ಸತ್ಯಭಾಮೆಯರ ಲೋಹದ ಉತ್ಸವ ಮೂರ್ತಿಗಳೂ ಕೂಡ ಗಮನಸೆಳೆಯುತ್ತವೆ. ಪ್ರಾಚೀನ ಕಾಲದ ಕೈಲಾಸೇಶ್ವರ ದೇವಾಲಯದ ಗೋಡೆಗಳ ಮೇಲೆ ದಿಂಡು ಕಲ್ಲುಗಳ ಹಲವು ಶಾಸನಗಳು ಕಾಣಸಿಗುತ್ತವೆ.
ಪಕ್ಕದ ನರಸಿಂಹ ದೇವಾಲಯದಲ್ಲಿ ಯೋಗನರಸಿಂಹನ ಮೂರ್ತಿಯಿದೆ. ಈ ದೇವಾಲಯದ ನವರಂಗದ ಮೂಲೆಯಲ್ಲಿ ರಾಮಾನುಜಚಾರ್ಯರ ಗಚ್ಚಿನ ಮೂರ್ತಿಯಿದೆ. ಇಲ್ಲಿ ರಾಮಾನುಜಚಾರ್ಯರು ಜೈನರೊಂದಿಗೆ ವಾದ ಮಾಡಿದರೆಂಬುದಾಗಿ ಹಿರಿಯರು ಹೇಳುತ್ತಾರೆ. ಕೆರೆಯದಂಡೆಯಲ್ಲಿ 'ನಿಕುಂಬಿನಿ' ಎಂಬ ದೇವಿಯ ದೇವಾಲಯವಿದ್ದು, ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಶಾಹ ಸಲಾ ಮಸೂದ್ ಘಾಸಿಯ ದರ್ಗಾವೂ ಇಲ್ಲಿದೆ. ಇದನ್ನು 1358ರಲ್ಲಿ ನಿರ್ಮಿಸಿದ್ದು, ಈ ದರ್ಗಾದ ಕಟ್ಟಡಕ್ಕೆ ದೇವಾಲಯದ ಕಂಬಗಳನ್ನು ಬಳಸಿರುವುದು ಗಮನಾರ್ಹವಾಗಿದೆ. ಕೆರೆ ಬಳಿಯ ಬೆಟ್ಟಗಳು ಚಾರಣಪ್ರಿಯರಿಗೆ ಹೇಳಿಮಾಡಿಸಿದಂತಿದೆ. ಬೆಟ್ಟದ ಮೇಲ್ಭಾಗದಿಂದ ಕಾಣಸಿಗುವ ಕಾಣಸಿಗುವ ನಿಸರ್ಗದ ಸುಂದರ ಚಿತ್ತಾರ ಮೂಕಸ್ಮಿತರನ್ನಾಗಿ ಮಾಡಿಬಿಡುತ್ತದೆ.
ಕರ್ನಾಟಕದಲ್ಲಿರುವ ಕೆರೆಗಳ ಪೈಕಿ ಎರಡನೆಯ ದೊಡ್ಡಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತೊಣ್ಣೂರುಕೆರೆ ಮಂಡ್ಯ ಜಿಲ್ಲೆಯ ಪಾಂಡವಪುರಕ್ಕೆ ಸುಮಾರು ಒಂಬತ್ತು ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಸ್ವಂತ ವಾಹನದಲ್ಲಿ ಅಥವಾ ಪಾಂಡವಪುರದಿಂದ ಆಟೋ, ಟೆಂಪೋ, ಬಸ್ಸುಗಳಲ್ಲಿ ತೆರಳಬಹುದಾಗಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications