Kodagu: ಇದೊಂದು ಗುಡಿಗೋಪುರವಿಲ್ಲದ ವಿಭಿನ್ನ, ವಿಶಿಷ್ಟ ದೇಗುಲ: ಇಲ್ಲಿನ ಆಚರಣೆಯೂ ವಿಭಿನ್ನ
ಮಡಿಕೇರಿ, ಮೇ 04: ಕೊಡಗಿನಲ್ಲಿರುವ ದೇಗುಲಗಳ ಪೈಕಿ ವಿಭಿನ್ನ ಮತ್ತು ವಿಶಿಷ್ಟವಾಗಿ ಕಂಗೊಳಿಸುವ ದೇವಾಲಯವೇ ಮಕ್ಕಿ ಶಾಸ್ತಾವು ದೇಗುಲ. ಇದು ಗುಡಿಗೋಪುರವಿಲ್ಲದ ದೇಗುಲವಾಗಿದ್ದು, ನಿಸರ್ಗದ ನಡುವೆ ನೆಲೆ ನಿಂತು ತನ್ನದೇ ಆದ ಕಾರ್ಣಿಕದೊಂದಿಗೆ ಜನಜಾನುವಾರುಗಳನ್ನು ಕಾಪಾಡುತ್ತಾ ಬಂದಿರುವ ದೈವವಾಗಿದೆ.
ಮಕ್ಕಿಶಾಸ್ತಾವು ದೇಗುಲವು ನಿಸರ್ಗ ನಿರ್ಮಿತ ದೇಗುಲವಾಗಿದ್ದು, ಜಿಲ್ಲೆಯ ನಾಪೋಕ್ಲು ಬಳಿಯಿದೆ. ಇಲ್ಲಿ ವರ್ಷಕ್ಕೆರಡು ಬಾರಿ ಜಾತ್ರೆ ನಡೆಯುವುದು ವಿಶೇಷವಾಗಿದೆ. ಮೇನಲ್ಲಿ ನಡೆಯುವ ಹಬ್ಬವು ದೊಡ್ಡ ಹಬ್ಬವಾದರೆ, ಡಿಸೆಂಬರ್ ನಲ್ಲಿ ನಡೆಯುವ ಹಬ್ಬವು ಚಿಕ್ಕ ಹಬ್ಬವಾಗಿದೆ. ಹಬ್ಬದ ಹಿನ್ನಲೆಯಲ್ಲಿ ಹಲವು ದೇವತಾ ಕಾರ್ಯಗಳಲ್ಲದೆ, ಕೋಲವೂ ನಡೆಯುತ್ತದೆ. ಹಬ್ಬದ ದಿನಗಳನ್ನು ಹೊರತುಪಡಿಸಿದರೆ ಈ ತಾಣವು ಪ್ರಶಾಂತವಾಗಿರುತ್ತದೆ.

ಮಕ್ಕಿ ಶಾಸ್ತಾವು ದೇವಾಲಯ ನೆಲೆ ನಿಂತ ತಾಣವು ವಿಶಿಷ್ಟ ಅನುಭವ ನೀಡುವ ಕ್ಷೇತ್ರವಾಗಿದೆ. ಸಾಮಾನ್ಯವಾಗಿ ದೇಗುಲವೆಂದಾಕ್ಷಣ ನಮ್ಮ ಮುಂದೆ ಬರುವ ಎಲ್ಲ ಕಲ್ಪನೆಗಳು ಇಲ್ಲಿ ಗೌಣವಾಗಿ ಬಿಡುತ್ತವೆ. ಗುಡಿಗೋಪುರ ಯಾವುದೂ ಇಲ್ಲದ ಈ ದೇಗುಲ ನೋಡುಗರಿಗೆ ವಿಸ್ಮಯ ಮೂಡಿಸುತ್ತದೆ. ದಿಬ್ಬದ ಮೇಲೆ ಸಮತಟ್ಟಾದ ಜಾಗದಲ್ಲಿ ಸುಮಾರು ಐದು ಅಡಿ ಎತ್ತರದ ವೃತ್ತಾಕಾರದ ಕಟ್ಟೆ ಮೇಲೆ ದೇಗುಲ ಸೃಷ್ಟಿಯಾಗಿದೆ. ಇಲ್ಲಿ ತ್ರಿಶೂಲಧಾರಿ ಶಾಸ್ತಾವು ದೇವರ ಮೂರ್ತಿಯಿದೆ. ಅಲ್ಲದೆ ದೇವರಿಗೆ ಆಶ್ರಯವಾಗಿ ಒಂದು ಹಲಸಿನ ಮರವಿದ್ದು ಸುತ್ತಲೂ ಹರಕೆಯಾಗಿ ಅರ್ಪಿಸಿದ ಮಣ್ಣಿನ ನಾಯಿಗಳಿರುವುದು ಇಲ್ಲಿನ ವಿಶೇಷತೆಯಾಗಿದೆ.
ಇಲ್ಲಿ ವರ್ಷಕ್ಕೆ ಎರಡು ಬಾರಿ ಹಬ್ಬ
ಸಾಮಾನ್ಯ ದಿನಗಳಲ್ಲಿ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ವಿರಳವಾಗಿರುತ್ತದೆ. ಹಬ್ಬದ ಸಮಯದಲ್ಲಿ ಸ್ಥಳೀಯರು ಸೇರಿದಂತೆ ಸುತ್ತಮುತ್ತಲಿನವರು ಇಲ್ಲಿ ನೆರೆಯುತ್ತಾರೆ. ಪ್ರತಿ ವರ್ಷ ಡಿಸೆಂಬರ್ ಹಾಗೂ ಮೇ ತಿಂಗಳಲ್ಲಿ ಈ ದೇವಾಲಯದಲ್ಲಿ ವಿಜ್ರಂಭಣೆಯಿಂದ ಹಬ್ಬ ನಡೆಯುತ್ತದೆ. ಮೇ ತಿಂಗಳಲ್ಲಿ ನಡೆಯುವ ದೊಡ್ಡ ಹಬ್ಬವು ಇದೀಗ ನಡೆಯುತ್ತಿದ್ದು, ಈ ಸಂದರ್ಭ ಸುತ್ತ ಮುತ್ತಲಿನ ಗ್ರಾಮಗಳ ಅಸಂಖ್ಯ ಭಕ್ತರು ಇಲ್ಲಿ ನೆರೆಯುತ್ತಾರೆ. ಡಿಸೆಂಬರ್ನಲ್ಲಿ ನಡೆಯುವ ಹಬ್ಬವನ್ನು ಇಲ್ಲಿನವರು ಚಿಕ್ಕ ಹಬ್ಬ ಎಂದು ಕರೆಯುತ್ತಾರೆ. ಎರಡು ದಿನಗಳ ಕಾಲದ ಹಬ್ಬದ ಆಚರಣೆಯಲ್ಲಿ ಎತ್ತುಹೇರಾಟ, ದೀಪಾರಾಧನೆ, ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು, ಮೇಲೇರಿ ಮುಂತಾದ ಸಾಂಪ್ರದಾಯಿಕ ಪೂಜೆಗಳು ನಡೆಯುತ್ತವೆ.

ಎತ್ತುಹೇರಾಟದ ಮೂಲಕ ಮೊದಲ ದಿನದ ಹಬ್ಬವು ಆರಂಭವಾಗುತ್ತದೆ. ನಡು ಮಧ್ಯಾಹ್ನ ಗ್ರಾಮಸ್ಥರು ಎತ್ತುಗಳನ್ನು ಸಿಂಗರಿಸಿ ಅವುಗಳ ಬೆನ್ನಮೇಲೆ ಶ್ವೇತವಸ್ತ್ರದಲ್ಲಿ ಹರಕೆಯ ಅಕ್ಕಿಯನ್ನು ಕಟ್ಟಿ ದೇವಾಲಯಕ್ಕೆ ಕರೆತರುತ್ತಾರೆ. ಬಳಿಕ ಚಂಡೆ ವಾದ್ಯದೊಂದಿಗೆ ಅವುಗಳನ್ನು ದೇವಾಲಯದ ಕಟ್ಟೆಯ ಸುತ್ತ ಓಡಿಸಲಾಗುತ್ತದೆ. ಮಾರನೆಯ ದಿನ ಬೆಳಿಗ್ಗೆಯಿಂದಲೇ ದೇವಾಲಯದ ನಿರ್ದಿಷ್ಟ ಸ್ಥಳದಲ್ಲಿ ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು ನಡೆಯುತ್ತವೆ.
ಭಕ್ತರಿಗೆ ಒಳಿತಾಗಲೆಂದು ಹರಸುವ ದೈವ
ತಿರುವಳನಿಗೆ ತೆಂಗಿನಗರಿಗಳಿಂದ ಮಾಡಿದ ಅಲಂಕೃತ ಪೋಷಾಕನ್ನು ಧರಿಸಲಾಗುತ್ತದೆ. ಬಳಿಕ ಚಂಡೆ ವಾದ್ಯ ಮೊಳಗುತ್ತಿದ್ದಂತೆಯೇ ತಿರುವಳನ ಮೇಲೆ ದೇವರು ಅವಾಹನೆಗೊಂಡು ನರ್ತಿಸುತ್ತಾ ಸಾಗುತ್ತವೆ. ಈ ಸಂದರ್ಭದ ದೃಶ್ಯ ನೆರೆದವರಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಮಧ್ಯಾಹ್ನ ಕೆಂಡದ ರಾಶಿಯ ಮೇಲೆ ಕೋಲಗಳು ಬೀಳುವ ಮೇಲೇರಿ ಕಾರ್ಯಕ್ರಮಗಳು ನಡೆಯುತ್ತವೆ. ಆ ನಂತರ ಬೆಳ್ಳಿಯ ಮುಖವಾಡ ಧರಿಸಿ ದೇವಾಲಯದ ಪ್ರಾಂಗಣಕ್ಕೆ ಬಂದು ಭಕ್ತರ ಇಷ್ಟಾರ್ಥಗಳು ನೆರವೇರಲಿ ಎಂದು ಹರಸುತ್ತದೆ. ಈ ಸಂದರ್ಭ ಭಕ್ತರು ತಮ್ಮ ಕಷ್ಟ ಸುಖಗಳನ್ನು ಹೇಳಿಕೊಂಡು ದೇವರಿಂದ ಪರಿಹಾರ ಪಡೆಯುತ್ತಾರೆ. ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ನಡೆಯುವ ದೀಪಾರಾಧನೆ ಮನಸ್ಸೆಳೆಯುತ್ತದೆ.

ಇನ್ನು ದೇಗುಲಕ್ಕೆ ತೆರಳಿದವರಿಗೆ ಇಲ್ಲೊಂದು ಹಲಸಿನ ಮರ ಮತ್ತು ಅದರಲ್ಲಿ ಸಿಲುಕಿಕೊಂಡಿರುವ ಕಬ್ಬಿಣದ ಸರಪಳಿ ಅಚ್ಚರಿ ಮೂಡಿಸುತ್ತದೆ. ಇದರ ಹಿಂದೆ ಕಥೆಯೊಂದು ಜನಜನಿತವಾಗಿದೆ. ಅದು ಏನೆಂದರೆ ಹಿಂದಿನ ಕಾಲದಲ್ಲಿ ಹಬ್ಬದ ಸಂದರ್ಭ ತಿರುವಳ ಬರುತ್ತಿದ್ದ ವ್ಯಕ್ತಿಯೊಬ್ಬನನ್ನು ಯಾವುದೋ ಕಾರಣಕ್ಕೆ ಬಂಧಿಸಲಾಗಿತ್ತಂತೆ. ಆದರೆ ಹಬ್ಬದ ಸಂದರ್ಭ ಮಂತ್ರಘೋಷ ಮೇಳೈಸುತ್ತಿದ್ದಂತೆಯೇ ತಿರುವಳನ ಮೇಲೆ ದೇವರು ಅವಾಹನೆಯಾಗಿ ಬಂಧನದಿಂದ ತಪ್ಪಿಸಿಕೊಂಡು ಬಂದು ದೇವರ ಸನ್ನಿಧಿಯಲ್ಲಿ ಆತ ಕೈ ಕೊಡವಿದಾಗ ಆತನ ಕೈಯ್ಯಲ್ಲಿದ್ದ ಖೋಳ ತುಂಡಾಗಿ ಹಲಸಿನ ಮರದಲ್ಲಿ ಸಿಲುಕಿತಂತೆ. ಅದುವೇ ಈಗಲೂ ಕಾಣಿಸುವ ಸರಪಳಿಯಾಗಿದೆ.
ಮಣ್ಣಿನ ನಾಯಿ ಹರಕೆಯಾಗಿ ಅರ್ಪಣೆ
ನಿಸರ್ಗ ನಿರ್ಮಿತ ದೇಗುಲವಾಗಿರುವುದರಿಂದ ಇಲ್ಲಿ ಸಾಕುಪ್ರಾಣಿಳಾದ ನಾಯಿ, ಜಾನುವಾರುಗಳ ಆರೋಗ್ಯ ಮತ್ತು ಅವುಗಳ ಏಳಿಗೆಗಾಗಿ ಹರಸಿಕೊಳ್ಳುವುದು ಸಾಮಾನ್ಯವಾಗಿದೆ. ಮನೆಗಳಲ್ಲಿ ನಾಯಿಗಳು ವೃದ್ಧಿಯಾಗದಿದ್ದರೆ, ಶಾಸ್ತಾವು ಸನ್ನಿಧಿಯಲ್ಲಿ ಮಣ್ಣಿನ ನಾಯಿಯನ್ನು ಹರಕೆಯಾಗಿ ಒಪ್ಪಿಸುವುದಾಗಿ ಬೇಡಿಕೊಂಡರೆ ಅದು ನೆರವೇರುತ್ತದೆಯಂತೆ. ಹೀಗಾಗಿ ಹರಸಿಕೊಂಡವರು ಇಷ್ಟಾರ್ಥ ನೆರವೇರಿದ ಹಿನ್ನಲೆಯಲ್ಲಿ ಹರಕೆಯಾಗಿ ಮಣ್ಣಿನ ನಾಯಿಯನ್ನು ಅರ್ಪಿಸುವುದು ಇಂದಿಗೂ ನಡೆಯುತ್ತಿದೆ. ಅಷ್ಟೇ ಅಲ್ಲದೆ ಇಷ್ಟಾರ್ಥ ನೆರವೇರಿದಕ್ಕೆ ಹರಕೆ ರೂಪದಲ್ಲಿ ಹಾಕಲಾಗಿರುವ ಮಣ್ಣಿನ ನಾಯಿಗಳೇ ಸಾಕ್ಷಿಯಾಗಿ ನಿಂತಿವೆ.
ಮಕ್ಕಿಶಾಸ್ತಾವು ದೇಗುಲಕ್ಕೆ ತೆರಳುವವರು ಮಡಿಕೇರಿ ಅಥವಾ ವೀರಾಜಪೇಟೆಗೆ ಬಂದರೆ ಅಲ್ಲಿಂದ ನಾಪೋಕ್ಲುಗೆ ತೆರಳಿದರೆ ಅಲ್ಲಿನ ಬೇತು ರಸ್ತೆಯಲ್ಲಿ ಸುಮಾರು ಎರಡು ಕಿ.ಮೀ ಸಾಗಿದರೆ ಮಕ್ಕಿ ಶಾಸ್ತಾವು ತಾಣವನ್ನು ತಲುಪಬಹುದಾಗಿದೆ. ಹಬ್ಬದ ದಿನಗಳನ್ನು ಹೊರತು ಪಡಿಸಿದರೆ ಉಳಿದ ದಿನಗಳಲ್ಲಿ ಈ ತಾಣವು ನಿಶಬ್ದವಾಗಿರುತ್ತದೆ. ಸುತ್ತಲಿನ ವನರಾಶಿ, ಕಾಫಿತೋಟಗಳ ನಡುವಿನಿಂದ ಕೇಳಿ ಬರುವ ಹಕ್ಕಿಗಳ ಚಿಲಿಪಿಲಿ, ಜೆನ್ನೊಣಗಳ ಝೇಂಕಾರ ಹೊರತು ಪಡಿಸಿದರೆ ಮತ್ತೇನು ಕೇಳುವುದಿಲ್ಲ.












Click it and Unblock the Notifications