ಸಾಲು ಸಾಲು ರಜೆಯ ವೀಕೆಂಡ್ ಟ್ರಿಪ್ ಸುಖಮಯವಾಗಿರಲು ಕುಶಾಲನಗರ ಸೂಕ್ತ: ಯಾಕೆ ಗೊತ್ತಾ?
ಮಡಿಕೇರಿ, ಜನವರಿ 12: ವೀಕೆಂಡ್ ಮತ್ತು ಸಂಕ್ರಾಂತಿ ಹಬ್ಬ ಜೊತೆಗೆ ಬಂದಿರುವ ಹಿನ್ನಲೆಯಲ್ಲಿ ಸಾಲು ಸಾಲು ರಜೆಯಿದ್ದು, ಕುಟುಂಬ ಸಹಿತ ಪ್ರವಾಸ ಹೊರಡುವವರಿಗೆ ಸುಸಂದರ್ಭವಾಗಿದೆ. ವಾರಪೂರ್ತಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಒತ್ತಡದಲ್ಲಿದ್ದವರಿಗೆ ಒಂದಷ್ಟು ದಿನಗಳ ಕಾಲ ಮನಸ್ಸು ಹಗುರ ಮಾಡಿಕೊಂಡು ಬರಬಹುದಾಗಿದ್ದು, ವಾಸ್ತವ್ಯ ಹೂಡಲು ಕೊಡಗಿನ ಹೆಬ್ಬಾಗಿಲೆಂದೇ ಕರೆಯುವ ಕುಶಾಲನಗರ ಸೂಕ್ತವಾಗಿದೆ.
ಹೆಚ್ಚು ಚಳಿಯಲ್ಲದ, ಕೊಡಗು, ಹಾಸನ ಮತ್ತು ಮೈಸೂರಿನ ವಾತಾವರಣ ಇಲ್ಲಿದ್ದು, ಸುತ್ತಲೂ ನೋಡಲು ಹಲವು ತಾಣಗಳಿದ್ದು ಖುಷಿಯಾಗಿ ಕಾಲ ಕಳೆಯಲು ಅನುಕೂಲವಾಗುವಂತೆ ಪಟ್ಟಣದಲ್ಲಿ ಹೋಟೆಲ್‌ಗಳು ಮತ್ತು ಸುತ್ತಮುತ್ತ ರೆಸಾರ್ಟ್, ಹೋಂಸ್ಟೇಗಳಿದ್ದು ಅಲ್ಲಿ ವಾಸ್ತವ್ಯ ಹೂಡಬಹುದಾಗಿದೆ. ಜೊತೆಗೆ ಕುಶಾಲನಗರವನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಮುತ್ತ ಇರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಬರಬಹುದಾಗಿದೆ.

ಕುಶಾಲನಗರ ವ್ಯಾಪ್ತಿಯಲ್ಲಿ ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ದುಬಾರೆ, ಚಿಕ್ಲಿಹೊಳೆ ಜಲಾಶಯ, ವೀರಭೂಮಿ, ಬೇಳೂರು ಬಾಣೆ, ಕಣಿವೆ ರಾಮೇಶ್ವರ ದೇಗುಲ ಹೀಗೆ ಹಲವು ತಾಣಗಳಿದ್ದು, ಎಲ್ಲವೂ ಸುಂದರವಾಗಿದೆ. ಅದರಲ್ಲೂ ಈ ಸಂದರ್ಭ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಕೂಡ ಸಂತಸ ನೀಡುತ್ತದೆ. ಈಗಂತೂ ಇಲ್ಲಿಯ ವಾತಾವರಣ ಉಲ್ಲಾಸಕರವಾಗಿರುತ್ತದೆ.
ಕಾವೇರಿ ನಿಸರ್ಗಧಾಮದಿಂದ ಆರಂಭಿಸಿ
ಇನ್ನು ಪ್ರವಾಸಕ್ಕೆ ತೆರಳುವವರು ಕುಶಾಲನಗರದಿಂದ ಮಡಿಕೇರಿ ಕಡೆಗಿನ ಮುಖ್ಯ ರಸ್ತೆಯಲ್ಲಿ ಸುಮಾರು ಒಂದೂವರೆ ಕಿ.ಮೀ. ಸಾಗಿದರೆ ರಸ್ತೆಯ ಎಡಭಾಗದಲ್ಲಿಯೇ ನಿಸರ್ಗಧಾಮದ ಪ್ರವೇಶ ಸಿಗುತ್ತದೆ. ನಿಸರ್ಗಧಾಮದ ಪ್ರವೇಶ ದ್ವಾರದ ಮೂಲಕ ತೂಗು ಸೇತುವೆಯ ಮೇಲೆ ಹೆಜ್ಜೆ ಹಾಕುತ್ತಾ ಮುನ್ನಡೆದರೆ ನಿಸರ್ಗದ ಸುಂದರ ನೋಟ ಕಣ್ಮುಂದೆ ಬರುತ್ತದೆ. ಇಲ್ಲಿ ನಿಗದಿತ ಹಣವನ್ನು ನೀಡಿ ಆನೆಯ ಮೇಲೆ ಕುಳಿತು ಸವಾರಿಯನ್ನು ಮಾಡಬಹುದಾಗಿದೆ. ಆನೆ ಸವಾರಿ ಪಕ್ಕದಲ್ಲಿಯೇ ಜಿಂಕೆವನವಿದೆ. ಸುಮಾರು 5 ಎಕರೆ ಪ್ರದೇಶದಲ್ಲಿ ಸುತ್ತಲೂ ಸುಸಜ್ಜಿತವಾಗಿ ತಂತಿ ಬೇಲಿ ಹಾಕಿ ನಿರ್ಮಿಸಲಾಗಿರುವ ಈ ವನದಲ್ಲಿ ಹಲವಾರು ಜಿಂಕೆ, ಕಡವೆಗಳಿವೆ.
ಕಾಲು ದಾರಿಯಲ್ಲಿ ಹೆಜ್ಜೆಯಿಡುತ್ತಾ ಮುನ್ನಡೆದರೆ ಮರದಿಂದ ನಿರ್ಮಿಸಲಾಗಿರುವ ಕುಟೀರಗಳು ಮನಸ್ಸೆಳೆಯುತ್ತವೆ. ಈ ಕುಟೀರಗಳಿಗೆ ಹತ್ತಲು ಏಣಿಗಳನ್ನು ನಿರ್ಮಿಸಿದ್ದು, ಇದರಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು. ನಿಸರ್ಗದ ಚೆಲುವನ್ನು ಸವಿಯುತ್ತಾ ಅಲ್ಲಿಯೇ ತಂಗುವುದಾದರೆ ಅದಕ್ಕೂ ವ್ಯವಸ್ಥೆಯಿದೆ. ಇಟ್ಟಿಗೆ ಗೋಡೆ, ತೇಗದ ಮರ, ಹುಲ್ಲಿನ ಛಾವಣಿಯಿಂದ ನಿರ್ಮಿಸಲಾದಂತಹ ಐದು ಕಾಟೇಜ್‌ಗಳಿದ್ದು, ಇವುಗಳಿಗೆ ನಿಗದಿತ ಶುಲ್ಕ ಪಾವತಿಸ ಬೇಕಾಗುತ್ತದೆ. ಪ್ರವಾಸಿಗರಿಗಾಗಿಯೇ ಇಲ್ಲೊಂದು ಮಾಹಿತಿ ಕೇಂದ್ರವನ್ನು ಕೂಡ ನಿರ್ಮಿಸಲಾಗಿದೆ.

ಕಾವೇರಿ ನದಿ ಸೃಷ್ಟಿಯ ದುಬಾರೆ
ದುಬಾರೆಯು ಕುಶಾಲನಗರದಿಂದ ಸುಮಾರು 18 ಕಿ.ಮೀ. ದೂರದಲ್ಲಿದೆ. ಸಿದ್ದಾಪುರ ರಸ್ತೆಯಲ್ಲಿ ಸಾಗಿದಾಗ ಸಿಗುವ ನಂಜರಾಯಪಟ್ಟಣದಿಂದ ಎಡಕ್ಕೆ ತಿರುಗಿದರೆ ಅಲ್ಲಿಂದ ಸುಮಾರು 1 ಕಿ.ಮೀ. ದೂರದಲ್ಲಿ ದುಬಾರೆ ಸಿಗುತ್ತದೆ. ದೋಣಿಯಲ್ಲಿ ವಿಹರಿಸಿ, ಆನೆ ಸಫಾರಿ ಮಾಡಿ ಒಂದಷ್ಟು ಹೊತ್ತು ನಿಸರ್ಗದ ಮಡಿಲಲ್ಲಿ ಮೈಮರೆತು ನೀರಾಟವಾಡಿ ತಮ್ಮ ಊರುಗಳಿಗೆ ಹಿಂದಿರುಗುವ ಪ್ರವಾಸಿಗರಿಗೆ ದುಬಾರೆ ಒಂದು ಅದ್ಭುತ ತಾಣ.
ದುಬಾರೆಯಿಂದ ಸುಂಟಿಕೊಪ್ಪದ ಕಡೆಗಿನ ರಸ್ತೆಯಲ್ಲಿ ಸಾಗಿದರೆ ಚಿಕ್ಲಿಹೊಳೆ ಜಲಾಶಯವನ್ನು ತಲುಪಬಹುದು. ಈ ಜಲಾಶಯವನ್ನು ಕಾವೇರಿ ನದಿಯ ಉಪನದಿಯಾದ ಚಿಕ್ಲಿಹೊಳೆಗೆ 1982ರಲ್ಲಿ ಸುಮಾರು 12ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಬ್ರಿಟಿಷರ ಕಾಲದಲ್ಲಿಯೇ ಕೃಷಿಗೆ ನೀರು ಹರಿಸಲು ಇಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಲಾಗಿತ್ತು ಎನ್ನಲಾಗಿದೆ.
ನಿಸರ್ಗ ತಾಣ ಬೇಳೂರು ಬಾಣೆ
ಇನ್ನು ಹಾರಂಗಿ ಜಲಾಶಯವು ಕುಶಾಲನಗರದಿಂದ ಸುಮಾರು 8ಕಿ.ಮೀ. ದೂರದಲ್ಲಿದೆ. ಸುಮಾರು 47 ಮೀಟರ್ ಎತ್ತರವಿರುವ ಅಣೆಕಟ್ಟು ಸುಮಾರು 846 ಮೀ. ಉದ್ದವನ್ನು ಹೊಂದಿದೆ. ಮಳೆಗಾಲದಲ್ಲಿ ಜಲಾಶಯ ತುಂಬಿದಾಗ ಕ್ರಸ್ಟ್ಗೇಟ್ಗಳ ಮೂಲಕ ಭೋರ್ಗರೆಯುವ ಸುಂದರ ದೃಶ್ಯ ಮನಮೋಹಕವಾಗಿರುತ್ತದೆ. ಹಾರಂಗಿ ಜಲಾಶಯದ ಮುಂದಿನ ರಸ್ತೆಯಲ್ಲಿ ಸೋಮವಾರಪೇಟೆ ಕಡೆಗೆ ತೆರಳಿದರೆ ಬೇಳೂರು ಬಾಣೆ ಸಿಗುತ್ತದೆ.

ಬೇಳೂರು ಬಾಣೆಯ ಸೌಂದರ್ಯ ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಲಭ್ಯವಾಗುತ್ತದೆ. ಇತ್ತೀಚೆಗಿನ ತನಕವೂ ಆಗೊಮ್ಮೆ ಈಗೊಮ್ಮೆ ಮಳೆ ಸುರಿಯುತ್ತಿರುವ ಕಾರಣ ಇಡೀ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದ್ದರೆ ಅದರ ನಡುವೆ ಏರು ಪ್ರದೇಶದಲ್ಲಿ ಪ್ರಕೃತಿಯೇ ನಿರ್ಮಿಸಿರುವ ಹಸಿರು ಹುಲ್ಲಿನಿಂದ ನಿರ್ಮಿತವಾಗಿರುವ ಬಾಣೆ(ಮೈದಾನ ಪ್ರದೇಶ) ಕಣ್ಮನ ಸೆಳೆಯುತ್ತದೆ. ಸಂಜೆ ಮತ್ತು ಮುಂಜಾನೆ ಕಾಲ ಕಳೆಯಲು ಮಜಾವಾಗಿರುತ್ತದೆ.
ಸುಂದರ ವೀರಭೂಮಿ ಪ್ರವಾಸಿ ತಾಣ
ಕುಶಾಲನಗರದಿಂದ ಹಾಸನದ ಕಡೆಗೆ ತೆರಳುವ ರಸ್ತೆಯಲ್ಲಿ ಕೂಡಿಗೆ ಬಳಿ ಇರುವ ಕಣಿವೆ ಶ್ರೀರಾಮಲಿಂಗೇಶ್ವರ ದೇಗುಲದಿಂದ ಪ್ರಸಿದ್ಧಿ ಹೊಂದಿದೆ ಕಾವೇರಿ ನದಿ ತಟದಲ್ಲಿರುವ ಈ ದೇಗುಲ ಸುಂದರವಾಗಿದೆ. ಸುಂದರ ಪರಿಸರ ಹೊಂದಿರುವ ಈ ಪ್ರದೇಶ ನಿಸರ್ಗಪ್ರೇಮಿಗಳ ಮನಸೆಳೆಯುತ್ತದೆ. ಪ್ರಶಾಂತ ವಾತಾವರಣದೊಂದಿಗೆ ಹಚ್ಚಹಸಿರಿನ ಬಯಲು ಪ್ರದೇಶ ಆಕರ್ಷಿಸುತ್ತದೆ. ಹಾರಂಗಿಯಿಂದ ಹಾದು ಹೋಗಿರುವ ನಾಲೆ ಮತ್ತು ತೂಗುಸೇತುವೆ ವಿಶೇಷವಾಗಿದೆ.
ಇಲ್ಲಿಗೆ ಸಮೀಪವಿರುವ ಕೂಡ್ಲೂರು ಎಂಬಲ್ಲಿರುವ ವೀರಭೂಮಿ ಕೂಡ ಪ್ರವಾಸಿ ತಾಣವಾಗಿ ಗಮನಸೆಳೆಯುತ್ತದೆ. ಇದನ್ನು ನಿರ್ಮಿಸಿದ ಕೀರ್ತಿ ಆರ್.ಕೆ.ಸುಳ್ಯ( ರಾಮಕೃಷ್ಣ ಭಟ್) ಅವರಿಗೆ ಸಲ್ಲುತ್ತದೆ. ಅವರು ಪುತ್ತೂರಿನ ಸಮೀಪ ಪರ್ಪುಂಜ ಎಂಬಲ್ಲಿ ಮೊದಲಿಗೆ ವಿಹಾರಧಾಮ ನಿರ್ಮಿಸಿದ್ದರು. ಅದರ ಪ್ರೇರಣೆಯಲ್ಲಿಯೇ ಕೂಡ್ಲೂರಲ್ಲಿ ವೀರಭೂಮಿ ವಿಹಾರಧಾಮವನ್ನು ಸ್ಥಾಪಿಸಿದ್ದಾರೆ. ಪ್ರವಾಸಿಗರಿಗೆ ಮತ್ತು ಸಂಸ್ಕೃತಿ ಪರಂಪರೆಗೆ ಇಲ್ಲಿ ಒತ್ತು ನೀಡಲಾಗಿದೆ.

ಬೈಲುಕುಪ್ಪೆಯಲ್ಲಿದೆ ಗೋಲ್ಡನ್ ಟೆಂಪಲ್
ಮೈಸೂರು ಜಿಲ್ಲೆಗೆ ಸೇರಿರುವ ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್ ಪ್ರಸಿದ್ಧ ತಾಣವಾಗಿದೆ. ಇಲ್ಲಿ ಸ್ವರ್ಣ ದೇಗುಲದೊಂದಿಗೆ ಸುಮಾರು ಹದಿನಾರಕ್ಕೂ ಹೆಚ್ಚು ವಿವಿಧ ದೇಗುಲಗಳು, ಧ್ಯಾನಕೇಂದ್ರ, ಸನ್ಯಾಸಿನಿಯರ ಬೌದ್ಧವಿಹಾರ, ಬೌದ್ಧ ಭಿಕ್ಷುಗಳ ಮಹಾವಿದ್ಯಾಲಯ, ಆಸ್ಪತ್ರೆ, ಬೌದ್ಧವಿಹಾರದ ಸುತ್ತ 1300 ಪ್ರಾರ್ಥನಾ ಚಕ್ರಗಳು, ಎಂಟು ಸ್ಥೂಪಗಳು ತನ್ನದೇ ವೈಶಿಷ್ಟ್ಯತೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿವೆ. ಟಿಬೆಟ್ ದೇಶದ ಸಂಪ್ರದಾಯಗಳಿಗೆ ತಕ್ಕಂತೆ ನಿರ್ಮಾಣಗೊಂಡಿರುವುದು ಸ್ವರ್ಣ ದೇಗುಲದ ವಿಶೇಷತೆಯಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಕುಶಾಲನಗರದ ಸುತ್ತಮುತ್ತ ನೋಡತಕ್ಕದಾದ ಸ್ಥಳಗಳಿದ್ದು, ನಿಶ್ಚಿಂತೆಯಿಂದ ಈ ತಾಣಗಳಿಗೆ ಭೇಟಿ ನೀಡಬಹುದಾಗಿದೆ. ಪ್ರವಾಸಿ ತಾಣಗಳಿಗೆ ತೆರಳುವಾಗಲೆಲ್ಲ ಸುತ್ತಲಿನ ಕಾಫಿ ತೋಟ, ಕರಿಮೆಣಸು ಎಲ್ಲವೂ ನೋಡುಗರ ಮನಸೆಳೆಯುತ್ತದೆ.












Click it and Unblock the Notifications