Weekend trip plan: ಕುಂಭದ್ರೋಣ ಮಳೆಯಲ್ಲಿ ಮಲ್ಲಳ್ಳಿ ಜಲಪಾತದ ಸೊಬಗು ಸವಿಯುವುದೇ ಒಂಥರಾ ಮಜಾ, ತಲುಪುವುದೇಗೆ?, ಇಲ್ಲಿದೆ ಮಾಹಿತಿ
ಮಡಿಕೇರಿ, ಜುಲೈ, 27: ಒಂದು ಕಾಲದಲ್ಲಿ ಕೊಡಗಿನ ದಟ್ಟ ಕಾನನದ ಏಲಕ್ಕಿ ತೋಟದೊಳಗೆ ಹೆಬ್ಬಂಡೆಯ ಮೇಲೆ ಭೋರ್ಗರೆದು ಧುಮುಕುತ್ತಿದ್ದರೂ ಅದರ ಸೌಂದರ್ಯವನ್ನು ನೋಡಲು ಜನ ಮನಸ್ಸು ಮಾಡುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅಲ್ಲೊಂದು ಸುಂದರ ಜಲಪಾತವಿದೆ ಎಂಬುದು ಸ್ಥಳೀಯರನ್ನು ಹೊರತುಪಡಿಸಿ ಹೊರಗಿನವರಿಗೆ ಗೊತ್ತೇ ಆಗುತ್ತಿರಲಿಲ್ಲ.
ಈಗ ಹಾಗಿಲ್ಲ ಅದು ಕೂಡ ಜಲಪಾತಗಳ ಸಾಲಿನಲ್ಲಿ ಹೆಸರು ಪಡೆದುಕೊಂಡಿದೆ. ಇದರ ಅಂದ ನೋಡಲೆಂದೇ ನೂರಾರು ಕಿ.ಮೀ. ದೂರದಿಂದ ಪ್ರವಾಸಿಗರ ದಂಡೇ ಹರಿದುಬರುತ್ತದೆ. ನಿಸರ್ಗದ ಮೌನವನ್ನೆಲ್ಲ ಆಚೆಗೆ ನೂಕಿ ಆರ್ಭಟಿಸಿ ರುದ್ರನರ್ತನ ಗೈಯ್ಯುವ ಜಲಧಾರೆಯ ಸೊಬಗು ನೋಡಿ ಖುಷಿ ಪಡುತ್ತಾರೆ.

ಈಗಾಗಲೇ ಇದ್ಯಾವುದಪ್ಪಾ ಜಲಪಾತ ಎಂದು ಮನದೊಳಗೆ ಪ್ರಶ್ನೆಗಳು ಮೂಡಿರಬಹುದು. ಅದು ಬೇರಾವ ಜಲಪಾತವಲ್ಲ ಮಲ್ಲಳ್ಳಿ ಜಲಪಾತ. ಈ ಜಲಪಾತ ತನ್ನ ಸೌಂದರ್ಯಕ್ಕಿಂತ ಹೆಚ್ಚಾಗಿ ಇಲ್ಲಿ ನಡೆಯುವ ದುರಂತದಿಂದಾಗಿ ಸುದ್ದಿಯಾಗಿದೆ ಎಂದರೆ ತಪ್ಪಾಗಲಾರದು. ಈ ಜಲಪಾತದ ಸೌಂದರ್ಯವನ್ನು ದೂರದಿಂದಲೇ ನೋಡಿ ಹಿಂತಿರುಗಿದರೆ ಯಾವುದೇ ಸಮಸ್ಯೆಗಳಾಗುವುದಿಲ್ಲ.
ಪ್ರವಾಸಿಗರ ಹುಚ್ಚಾಟದಿಂದ ಅನಾಹುತ
ಇಲ್ಲಿ ಸಮಸ್ಯೆಗಳಾಗುತ್ತಿರುವುದು ಕೆಲವು ಪ್ರವಾಸಿಗರ ಹುಚ್ಚಾಟದಿಂದ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜಲಪಾತವನ್ನು ನೋಡಿಕೊಂಡು ಬರುವ ಬದಲು, ಜಲಪಾತದ ಅಂಚಿಗೆ ಇಳಿದು ಫೋಟೋ ತೆಗೆಯುವ ದುಸ್ಸಾಹಸ ಮಾಡುತ್ತಾರೆ. ಈ ವೇಳೆ ನಸೀಬು ಕೈಕೊಟ್ಟು ಕಾಲು ಜಾರಿ ಬಿದ್ದು ಜಲಪಾತದ ಪಾಲಾಗುತ್ತಾರೆ. ಹೀಗೆ ಪ್ರಾಣಕಳೆದುಕೊಂಡವರ ದೊಡ್ಡ ಪಟ್ಟಿಯಿದೆ.
ಅದು ಏನೇ ಇರಲಿ.. ಇದನ್ನು ಹೊರತುಪಡಿಸಿ ಜಲಪಾತ ಸುಂದರ ಮತ್ತು ಭಯಂಕರ. ಇದರ ಸೌಂದರ್ಯವನ್ನು ಬಣ್ಣಿಸುವುದು ತುಸು ಕಷ್ಟವಾಗುತ್ತದೆ. ಏಕೆಂದರೆ ಬೃಹತ್ ಬೆಟ್ಟ-ಗುಡ್ಡಗಳ ವನರಾಶಿ ನಡುವೆ ಕರ್ರಗಿನ ಹೆಬ್ಬಂಡೆಗಳ ಮೇಲೆ ಧುಮ್ಮಿಕ್ಕುವ ದೃಶ್ಯ ನಯನಮನೋಹರವಾಗಿರುತ್ತದೆ. ಇದು ಭೂಗರ್ಭದ ಬೆಳ್ಳಿಯೆಲ್ಲ ಕರಗಿ ನೀರಾಗಿ ಹರಿಯುತ್ತಿದೆಯೇನೋ ಎಂಬ ಕಲ್ಪನೆಗೆ ನಮ್ಮನ್ನು ಒಂದು ಕ್ಷಣ ನೂಕಿ ಬಿಡುತ್ತದೆ.
ಪ್ರವಾಸಿಗರಿಂದ ದೂರವಿದ್ದ ಜಲಪಾತ
ಇವತ್ತು ಮಲ್ಲಳ್ಳಿ ಜಲಪಾತ ಕೊಡಗಿನಲ್ಲಿರುವ ಪ್ರವಾಸಿ ತಾಣಗಳ ಪೈಕಿ ಒಂದಾಗಿದೆ. ಜಲಪಾತದವರೆಗೆ ತೆರಳಲು ರಸ್ತೆ ಸೌಕರ್ಯ ಮತ್ತು ಜಲಪಾತ ವೀಕ್ಷಣೆಗೆ ಅನುಕೂಲವಾಗುವಂತೆ ಒಂದಷ್ಟು ಅಭಿವೃದ್ಧಿಯನ್ನು ಮಾಡಲಾಗಿದೆ. ಆದರೆ ಹಿಂದೆ ಹೀಗಿತ್ತಾ? ಖಂಡಿತಾ ಇರಲಿಲ್ಲ. ಸರಿಯಾದ ರಸ್ತೆ ಸಂಪರ್ಕವಿರಲಿಲ್ಲ. ಜನವಸತಿಯೂ ಸುತ್ತಮುತ್ತ ಇರಲಿಲ್ಲ. ಪಕ್ಕದಲ್ಲಿದ್ದ ಏಲಕ್ಕಿ ತೋಟಗಳಿಗೆ ಕೆಲಸಕ್ಕೆ ತೆರಳುವವರು ಮತ್ತು ಸುತ್ತಮುತ್ತ ವಾಸವಿದ್ದ ಕೆಲವರು ಇದರ ಸೌಂದರ್ಯವನ್ನು ವೀಕ್ಷಿಸುತ್ತಿದ್ದರು.
ನಂತರದ ದಿನಗಳಲ್ಲಿ ಈ ಜಲಪಾತದ ಬಗ್ಗೆ ಪತ್ರಿಕೆಗಳಲ್ಲಿ ಲೇಖನಗಳು ಬರಲಾರಂಭಿಸಿದವು. ಹೀಗಾಗಿ ಪ್ರವಾಸಿಗರು ಇದರತ್ತ ಬರಲಾರಂಭಿಸಿದರು. ಈಗಂತೂ ಇದು ತನ್ನದೇ ಆದ ಖ್ಯಾತಿಯೊಂದಿಗೆ ಎಲ್ಲರ ತನ್ನ ಕೈಬೀಸಿ ಕರೆಯುತ್ತಿದೆ. ಇದರ ಸೌಂದರ್ಯವನ್ನು ಸವಿಯಲು ಪ್ರತಿನಿತ್ಯ ಪ್ರವಾಸಿಗರ ದಂಡೇ ಆಗಮಿಸುತ್ತದೆ.
ಮಲ್ಲಳ್ಳಿ ಜಲಪಾತಕ್ಕೆ ಹೋಗುವುದು ಹೇಗೆ?
ಇನ್ನು ಮಲ್ಲಳ್ಳಿ ಜಲಪಾತ ನೋಡಬೇಕೆಂದರೆ ಕೊಡಗಿನ ತಾಲೂಕು ಕೇಂದ್ರ ಸೋಮವಾರಪೇಟೆಗೆ ತೆರಳಿದರೆ ಅಲ್ಲಿಂದ ಶಾಂತಳ್ಳಿ ಮೂಲಕ ಸುಮಾರು 20 ಕಿ.ಮೀ. ತೆರಳಿದರೆ ಹಂಚಿನಳ್ಳಿ ಗ್ರಾಮ ಸಿಗುತ್ತದೆ. ಅಲ್ಲಿಂದ ಬಲಕ್ಕೆ ಇರುವ ರಸ್ತೆಯಲ್ಲಿ 4 ಕಿ.ಮೀ. ಏರು-ತಗ್ಗುಗಳನ್ನು ದಾಟಿ ಮುನ್ನಡೆದರೆ ಮಲ್ಲಳ್ಳಿ ಜಲಪಾತದತ್ತ ತೆರಳಬಹುದಾಗಿದೆ.
ಜಲಪಾತದ ಬಗ್ಗೆ ಹೇಳುವುದಾದರೆ ಇದು ಪುಷ್ಪಗಿರಿ ಬೆಟ್ಟ ಶ್ರೇಣಿಯ ಕುಮಾರಪರ್ವತದ ನಡುವಿನ ಕುಮಾರಧಾರಾ ನದಿಯಿಂದ ಸೃಷ್ಟಿಯಾಗಿರುವ ಜಲಪಾತವಾಗಿದೆ. ಹಸಿರ ಬೆಟ್ಟಗಳ ನಡುವಿನ ಹೆಬ್ಬಂಡೆಗಳ ಮೇಲಿನಿಂದ ಬೃಹತ್ ಕಂದಕಕ್ಕೆ ಸುಮಾರು 80 ಅಡಿ ಅಗಲವಾಗಿ, 150 ಅಡಿಯಷ್ಟು ಎತ್ತರದಿಂದ ಧುಮುಕುವ ಜಲಾಧಾರೆಯ ದೃಶ್ಯವೇ ಜಲಪಾತದ ಪ್ರಮುಖ ಆಕರ್ಷಣೆಯಾಗಿದೆ.
ಮನಮೋಹಕ ದೃಶ್ಯ ಸವಿಯುವುದನ್ನ ಮರೆಯಬೇಡಿ
ಜಲಧಾರೆ ಒಂದು ಬಂಡೆಯಿಂದ ಇನ್ನೊಂದು ಬಂಡೆಗೆ ಚಿಮ್ಮುವಾಗ ಕಾಣಸಿಗುವ ದೃಶ್ಯ ಮನಮೋಹಕ. ಆ ನಂತರ ಕಂದಕದಾಳದಲ್ಲಿ ಹರಿದು ಹೋಗುವ ನೋಟ ನೋಡುಗರ ಮೈಮನವನ್ನು ಪುಳಕಗೊಳಿಸುತ್ತದೆ. ಸ್ಥಳೀಯರು ಮಲ್ಲಳ್ಳಿ ಜಲಪಾತವನ್ನು ಮಲ್ಲಳ್ಳಿ ಅಬ್ಬಿ, ಪುಷ್ಪಹಾರಿ ಜಲಧಾರೆ, ಕುಮಾರಧಾರಾ ಜಲಧಾರೆ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ.
ಕುಮಾರಪರ್ವತದಿಂದ ಹರಿದು ಬರುವ ನದಿಯನ್ನು ಇಲ್ಲಿನವರು ಮಲ್ಲಳ್ಳಿ ಹೊಳೆ, ಹೆಗ್ಗಡೆಮನೆ ಹೊಳೆ ಎಂಬುವುದಾಗಿಯೂ ಕರೆಯುತ್ತಾರೆ. ಈ ನದಿಯ ವೈಶಿಷ್ಟ್ಯತೆ ಏನೆಂದರೆ ಕೊಡಗಿನಲ್ಲಿರುವ ಬೇರೆಲ್ಲಾ ನದಿಗಳು ಪೂರ್ವ ದಿಕ್ಕಿಗೆ ಹರಿದು ಕಾವೇರಿಯನ್ನು ಸೇರಿ ಬಳಿಕ ಬಂಗಾಳಕೊಲ್ಲಿಯಲ್ಲಿ ಲೀನವಾದರೆ, ಈ ನದಿ ಮಾತ್ರ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರ ಸೇರುತ್ತದೆ.
ಮನಸಿಗೆ ಮುದ ನೀಡುವ ನಿಸರ್ಗ
ಜಲಪಾತದತ್ತ ತೆರಳುವವರಿಗೆ ಕೇವಲ ಜಲಪಾತದ ಸೊಬಗು ಮಾತ್ರವಲ್ಲದೆ, ಇಲ್ಲಿ ದಾರಿಯುದ್ದಕ್ಕೂ ಕಂಡುಬರುವ ನಿಸರ್ಗ ಸೌಂದರ್ಯ ನೋಡಿ ಖುಷಿಪಡಬಹುದು. ಮಲ್ಲಳ್ಳಿ ಜಲಪಾತಕ್ಕೆ ತೆರಳುವ ಹಾದಿಯಲ್ಲೇ ಅಂಬೂರ ಅಬ್ಬಿ ಹಾಗೂ ಹಾಸರ ಅಬ್ಬಿ ಎಂಬ ಪುಟ್ಟ ಜಲಧಾರೆಗಳಿವೆ. ಜಲಪಾತವನ್ನು ನೋಡಲು ತೆರಳುವವರು ಬೆಳಗ್ಗೆ ಹೋಗಿ ಸಂಜೆಯೊಳಗೆ ಹಿಂತಿರುಗಬೇಕು.
ಹೊತ್ತಲ್ಲ ಹೊತ್ತಿನಲ್ಲಿ ಇತ್ತ ಹೋಗುವ ಪ್ರಯತ್ನವನ್ನು ಮಾಡದಿರುವುದು ಒಳಿತು. ನಿರ್ಜನ ಪ್ರದೇಶ ಆಗಿರುವುದರಿಂದ ಏನೇ ಸಮಸ್ಯೆಗಳಾದರೂ ಸಹಾಯಕ್ಕೆ ಯಾರೂ ಬರಲಾರರು. ಅದರಲ್ಲೂ ಜಲಪಾತವನ್ನು ದೂರದಿಂದಲೇ ನೋಡಿ ಹಿಂತಿರುಗುವುದು ಕ್ಷೇಮ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.
ಜಲಪಾತದ ಬಳಿಗೆ ತೆರಳಲು ಸ್ಥಳೀಯರ ಸಹಾಯಪಡೆದರೆ ಇನ್ನಷ್ಟು ಒಳ್ಳೆಯದು. ಮಲ್ಲಳ್ಳಿ ಜಲಪಾತವಿರುವ ಸ್ಥಳ ಜನವಲಯದಿಂದ ದೂರವಿದ್ದು ಇಲ್ಲಿ ಯಾವುದೇ ಪದಾರ್ಥಗಳು ಸಿಗಲಾರದು. ಹಾಗಾಗಿ ಎಲ್ಲವನ್ನು ಜೊತೆಯಲ್ಲಿಯೇ ಕೊಂಡೊಯ್ಯುವುದು ಉತ್ತಮ. ಹಾಗೆಂದು ಕಸವನ್ನು ಎಲ್ಲೆಂದರಲ್ಲೇ ಎಸೆದು ಪರಸರ ಹಾಳು ಮಾಡಬೇಡಿ ಎನ್ನುವುದು ಇಲ್ಲಿನ ಸ್ಥಳೀಯರ ಮನವಿಯಾಗಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications