ಮೇ 10ರಂದು ಜೋಗ ಜಲಪಾತಕ್ಕೆ ಪ್ರವಾಸಿಗರ ಭೇಟಿಗೆ ನಿರ್ಬಂಧ
ಶಿವಮೊಗ್ಗ, ಏಪ್ರಿಲ್ 25; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದೆ. ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಏರಿಕೆ ಮಾಡಲು ಚುನಾವಣಾ ಆಯೋಗ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದೆ.
ಮತದಾನದ ದಿನ ರಜೆ ಇರುತ್ತದೆ. ರಜೆ ಸಿಕ್ಕಿತು ಎಂದು ಪ್ರವಾಸ ಹೋಗುವ ಜನರಿಗೆ ಕಡಿಮೆ ಏನಿಲ್ಲ. ಆದ್ದರಿಂದ ಮತದಾನ ನಡೆಯುವ ದಿನದಂದು ಪ್ರವಾಸಿ ತಾಣಗಳಿಗೆ ಜನರಿಗೆ ನಿಷೇಧ ಹೇರಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ವಿಶ್ವವಿಖ್ಯಾತ ಜೋತ ಜಲಪಾತದಲ್ಲಿ ಈ ಕುರಿತು ಈಗಾಗಲೇ ಪೋಸ್ಟ್ರ್ ಅಳವಡಿಕೆ ಮಾಡಲಾಗಿದೆ.

ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. 10/5/2023ರಂದು ಜೋಗ ಜಲಪಾತ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಮತದಾನ ದಿನ ಜನರು ಕಡ್ಡಾಯವಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಬೇಕು. ರಜೆ ಸಿಕ್ಕಿದೆ ಎಂದು ಪ್ರವಾಸ ಮಾಡುವಂತ್ತಿಲ್ಲ.

ಪ್ರಕಟಣೆಯಲ್ಲಿ ಏನಿದೆ?; ಜೋಗದಲ್ಲಿ ಹಾಕಿರುವ ಬ್ಯಾನರ್‌ನಲ್ಲಿ. ಸಾರ್ವಜನಿಕ ಪ್ರಕಣೆ. ಈ ಮೂಲಕ ಎಲ್ಲಾ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ದಿನಾಂಕ 10/5/2023ರಂದು ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ನಡೆಯುವ ಹಿನ್ನಲೆಯಲ್ಲಿ ಜೋಗ ಜಲಪಾತ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಪ್ರಯುಕ್ತ ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕೋರಿದೆ ಎಂದು ತಿಳಿಸಲಾಗಿದೆ.
ಈಗ ಬೇಸಿಗೆ ರಜೆ ಇದೆ, ಮತದಾನದ ದಿನ ರಜೆ ಇರುತ್ತದೆ. ಆದ್ದರಿಂದ ಅಂದು ಜನರು ಮತದಾನ ಮಾಡದೇ ಪ್ರವಾಸ ಹೋಗಬಹುದು ಎಂಬ ಹಿನ್ನಲೆಯಲ್ಲಿ ಪ್ರವಾಸಿ ತಾಣಗಳಿಗೆ ಜನರ ಪ್ರವೇಶ ನಿರಾಕರಿಸಲಾಗುತ್ತಿದೆ. ಬೇರೆ ಬೇರೆ ಜಿಲ್ಲಾಡಳಿತಗಳು ಸಹ ಪ್ರವಾಸಿಗರ ನಿರ್ಬಂಧ ಆದೇಶ ಹೊರಡಿಸುವ ಸಾಧ್ಯತೆ ಇದೆ.
ಮೇ 10ರಂದು ನಡೆಯುವ ಮತದಾನದ ದಿನ ಜನರು ತಪ್ಪದೇ ಮತಗಟ್ಟೆಗೆ ಹೋಗಿ ಮತದಾನ ಮಾಡುವಂತೆ ಮತದಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಮತದಾನದ ಜಾಗೃತಿಗಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮ ರೂಪಿಸಲಾಗಿದೆ. ಮೇ 10ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.
ಮಾರ್ಚ್ 29ರಂದು ಚುನಾವಣಾ ದಿನಾಂಕ ಘೋಷಣೆ ಮಾಡುವ ಮೊದಲು ಕೇಂದ್ರ ಚುನಾವಣಾ ಆಯೋಗ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿತ್ತು. ಆಗ ಕಳೆದ ಬಾರಿ ಕಡಿಮೆ ಮತದಾನವಾದ ಮತಗಟ್ಟೆಗಳನ್ನು ಗುರುತಿಸಿ ಈ ಬಾರಿ ಹೆಚ್ಚು ಮತದಾನವಾಗುವಂತೆ ಮಾಡಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿತ್ತು.
ಸ್ವೀಪ್ ಎಕ್ಸ್‌ಪ್ರೆಸ್ ಬಸ್; ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಜನರಲ್ಲಿ ಮತದಾನ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸುವುದು ಹಾಗೂ ಮತದಾನ ಪ್ರಮಾಣ ಹೆಚ್ಚಿಸಲು 'ಸ್ವೀಪ್ ಎಕ್ಸ್‌ಪ್ರೆಸ್ ಬಸ್ ಆರಂಭಿಸಿದೆ. ಜಿಲ್ಲಾ ಚುನಾವಣಾಧಿಕಾರಿ, ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ . ಆರ್ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಮೇ 9ರ ತನಕ ಜಿಲ್ಲೆಯಾದ್ಯಂತ ಬಸ್ ಸಂಚಾರ ನಡೆಸಿ ಜಾಗೃತಿ ಮೂಡಿಸಲಿದೆ.
ಜಿಲ್ಲಾಧಿಕಾರಿಗಳು ಮಾತನಾಡಿ, "ಗ್ರಾಮೀಣ ಭಾಗದಲ್ಲಿ ಈ ಹಿಂದೆ ಉತ್ತಮವಾಗಿ ಮತದಾನ ಆಗಿದೆ. ಆದರೆ ನಗರ ಪ್ರದೇಶದಲ್ಲಿ ಕಡಿಮೆ ಮತದಾನ ಆಗಿದ್ದು, ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ವತಿಯಿಂದ ಅನೇಕ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಕಳೆದ ಬಾರಿಗಿಂತ ಶೇ.10 ರಷ್ಟಾದರೂ ಮತದಾನ ಪ್ರಮಾಣ ಹೆಚ್ಚಬೇಕು. ಈ ಬಸ್ ಜಿಲ್ಲಾದ್ಯಂತ ಕಡಿಮೆ ಮತದಾನ ಆದ ಸ್ಥಳಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಿದೆ" ಎಂದರು.












Click it and Unblock the Notifications