ಭಕ್ತರ ಸಂಕಷ್ಟ ನಿವಾರಿಸುವ ಮಾವತ್ತೂರಮ್ಮ..ಎಲ್ಲಿದೆ ಈ ದೇಗುಲ? ಏನಿದರ ವಿಶೇಷತೆ?
ಮೈಸೂರು, ಫೆಬ್ರವರಿ 23: ಶಕ್ತಿ ದೇವತೆಯಾಗಿ ಊರನ್ನು ಮತ್ತು ತನ್ನನ್ನು ನಂಬಿ ಬರುವ ಭಕ್ತರ ಸಂಕಷ್ಟಗಳನ್ನು ದೂರಮಾಡಿ, ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಬರುತ್ತಿರುವ ಕೆ.ಆರ್.ನಗರ ತಾಲೂಕಿನಲ್ಲಿರುವ ಮಾವತ್ತೂರಮ್ಮ ದೇಗುಲದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲವೇನೋ ಆದರೆ ಮೈಸೂರು ಮತ್ತು ಕೊಡಗು ಭಾಗದ ಹೆಚ್ಚಿನ ಜನರು ಈಕೆಯ ಭಕ್ತರಾಗಿದ್ದು, ವರ್ಷಕ್ಕೊಮ್ಮೆ ಸನ್ನಿಧಿಗೆ ಬಂದು ದರ್ಶನ ಮಾಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಹೋಗುವುದು ಹಿಂದಿನಿಂದಲೂ ನಡೆದು ಬಂದಿದೆ.
ತಾಯಿ ಚಾಮುಂಡೇಶ್ವರಿಯ ಸಹೋದರಿಯಾಗಿರುವ ಮಾವತ್ತೂರಮ್ಮ ಕೆ.ಆರ್.ನಗರ ತಾಲೂಕಿನ ಹಸಿರು ಹಚ್ಚಡದ, ಹೊಲಗದ್ದೆಗಳ ನಡುವೆ ಊರಿನ ಹೊರಭಾಗದಲ್ಲಿ ಪ್ರಶಾಂತ ವಾತಾವರಣದಲ್ಲಿ ನೆಲೆನಿಂತಿದ್ದಾಳೆ. ಕೆ.ಆರ್.ನಗರದಿಂದ ಸುಮಾರು ಎಂಟು ಕಿ.ಮೀ. ಹಾಗೂ ಹುಣಸೂರಿನಿಂದ ಹನ್ನೆರಡು ಕಿ.ಮೀ. ದೂರದಲ್ಲಿರುವುದರಿಂದ ಕೊಡಗು ಭಾಗದಿಂದ ಬರುವವರು ಹುಣಸೂರು ಮೂಲಕ, ಮೈಸೂರು ಕಡೆಯಿಂದ ಬರುವವರು ಹುಣಸೂರು ಅಥವಾ ಕೆ.ಆರ್,ನಗರ ಕಡೆಯಿಂದಲೂ ಇಲ್ಲಿಗೆ ತೆರಳಬಹುದಾಗಿದೆ.

ಮಾವತ್ತೂರು ಗ್ರಾಮಕ್ಕೆ ಪ್ರವೇಶವಾಗುತ್ತಿದ್ದಂತೆಯೇ ಸುಂದರ ಬೃಹತ್ ಪ್ರವೇಶದ್ವಾರ ಮಾವತ್ತೂರಮ್ಮನ ದೇವಸ್ಥಾನದ ಹಾದಿಯನ್ನು ತೋರಿಸುತ್ತದೆ. ಅಲ್ಲಿಂದ ಸುಮಾರು ಒಂದು ಕಿ.ಮೀ. ದೂರ ಸಾಗಿದರೆ ದೇಗುಲವನ್ನು ತಲುಪಬಹುದಾಗಿದೆ. ರಸ್ತೆಯ ಬಲಭಾಗದ ತಗ್ಗು ಪ್ರದೇಶದಲ್ಲಿ ಆಕರ್ಷಕ ಉಯ್ಯಾಲೆ ಮಂಟಪ, ಅದರಾಚೆಗೆ ಪುಟ್ಟದಾದ ಕಲ್ಲಿನಿಂದ ಕಟ್ಟಲ್ಪಟ್ಟ ದೇಗುಲ ಕಾಣಿಸುತ್ತದೆ. ಇದು ಹಲವು ಶತಮಾನಗಳ ಹಿಂದೆ ಕಟ್ಟಲಾದ ದೇಗುಲವಾಗಿದ್ದು, ತದ ನಂತರದಲ್ಲಿ ಒಂದಷ್ಟು ಅಭಿವೃದ್ಧಿ ಕಂಡಿರುವುದು ಗೋಚರಿಸುತ್ತದೆ.
ಕೋಣನ ಬಲಿ ಕೇಳುತ್ತಿದ್ದ ಶಕ್ತಿ ದೇವತೆ
ದೇಗುಲದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆವರೆಗೆ ಪೂಜೆ ನಡೆಯುತ್ತದೆ. ಈ ವೇಳೆ ಮಾವತ್ತೂರಮ್ಮನಿಗೆ ಮಹಾಮಂಗಳಾರತಿ ಜರುಗುತ್ತದೆ. ಈ ವೇಳೆ ಭಕ್ತರು ಪೂಜೆ ಸಲ್ಲಿಸಿ ತಾವು ಹರಕೆಯಾಗಿ ಬಲಿ ನೀಡಲು ತಂದಿರುವ ಮೇಕೆ, ಕೋಳಿಗಳಿಗೆ ಪೂಜೆ ಮಾಡಿ ನಂತರ ವಧಾ ಸ್ಥಾನದಲ್ಲಿ ಬಲಿ ನೀಡುತ್ತಾರೆ. ತದ ನಂತರ ಅಡುಗೆ ಮಾಡಿ ದೇವರಿಗೆ ಬಡಿಸಿ ತಾವು ಬೋಜನ ಮಾಡಿ ತಮ್ಮ ಊರಿಗೆ ಹಿಂತಿರುಗುವುದು ಇಲ್ಲಿ ನಡೆದು ಬಂದಿರುವ ಪದ್ಧತಿಯಾಗಿದೆ.

ಹಿಂದಿನ ಕಾಲದಲ್ಲಿ ಶಕ್ತಿ ದೇವತೆಯಾದ ಮಾವತ್ತೂರಮ್ಮ ಉಗ್ರರೂಪ ತಾಳಿ ಬಂದು ದುಷ್ಟ ರಾಕ್ಷಸರನ್ನು ಸಂಹರಿಸಿದ್ದಳು ಎಂಬುದು ಪುರಾಣದ ಕಥೆಯಾಗಿದೆ. ಅದರಂತೆ ಆಕೆ ತನ್ನ ಉಗ್ರರೂಪ ತಣಿದು ಸಮಾಧಾನವಾಗಬೇಕಾದರೆ ಆಕೆಗೆ ಕೋಣ ಬಲಿಕೇಳುತ್ತಿದ್ದಳಂತೆ. ಹೀಗಾಗಿ ಹಿಂದಿನ ಕಾಲದಲ್ಲಿ ಇಲ್ಲಿ ಹರಕೆಯಾಗಿ ಕೋಣನನ್ನು ನೀಡಲಾಗುತ್ತಿತ್ತು. ಇವತ್ತು ಇಲ್ಲಿ ಕೋಣನನ್ನು ಹರಕೆಯಾಗಿ ನೀಡಲಾಗುತ್ತದೆಯಾದರೂ ಬಲಿ ನೀಡುವುದಿಲ್ಲ. ಕೋಣಗಳಿಗೆ ಪೂಜೆ ಮಾಡಿ ದೇಗುಲಕ್ಕೆ ಒಪ್ಪಿಸಲಾಗುತ್ತದೆ.
ಮಾವತ್ತೂರಮ್ಮನ ಪವಾಡದ ಕಥೆ
ಆದರೆ ಐದು ವರ್ಷಕ್ಕೊಮ್ಮೆ ಏಳು ಊರಿನ ಹದಿಮೂರು ಕೋಮಿನ ಮಂದಿ ಸೇರಿ ಪೂಜಾ ಕೈಂಕರ್ಯ ನೆರವೇರಿಸಿ ಸೇವೆಯ ಬಗ್ಗೆ ದೇವಿಯಲ್ಲಿ ಬೇಡಿಕೊಳ್ಳುತ್ತಾರೆ. ಈ ವೇಳೆ ಒಂಬತ್ತು ವರ್ಷದ ಬಾಲಕಿ ಮೇಲೆ ಅವಾಹನೆಯಾಗುವ ತಾಯಿ ಮಾವತ್ತೂರಮ್ಮ ಮಾಡಬೇಕಾದ ಕಾರ್ಯಗಳ ಬಗ್ಗೆ ಆದೇಶಿಸುತ್ತಾಳೆ ಅದರಂತೆ ಬೃಹತ್ ಜಾತ್ರೆ ನಡೆಯುತ್ತದೆ. ಈ ವೇಳೆ ಸುತ್ತಮುತ್ತಲಿನ ಊರಿನವರಲ್ಲದೆ ಹೊರಗಿನಿಂದಲೂ ಭಕ್ತರು ಆಗಮಿಸಿ ಮಾವತ್ತೂರಮ್ಮನ ಕೃಪೆಗೆ ಪಾತ್ರರಾಗುತ್ತಾರೆ.

ಇನ್ನು ಶಕ್ತಿದೇವತೆ ಮಾಮತ್ತೂರಮ್ಮನ ಪವಾಡದ ಕುರಿತಂತೆ ಜನರು ಕೆಲವೊಂದು ಕಥೆಗಳನ್ನು ಹೇಳುತ್ತಾರೆ. ಅವರ ಪ್ರಕಾರ ಘಟ್ಟಪ್ರದೇಶದಿಂದ ಮಾವತ್ತೂರಮ್ಮ ಇಲ್ಲಿ ಬಂದು ನೆಲೆ ನಿಂತಳೆಂದೂ ಒಮ್ಮೆ ತಾಯಿಯೊಬ್ಬಳಿಂದ ಬೇರ್ಪಟ್ಟ ಮಗು ದೇವಿಯ ಸನ್ನಿಧಾನದ ಬಳಿ ಉಳಿದು ಹೋಯಿತು. ಈ ವೇಳೆ ಮಗು ತಾಯಿಗಾಗಿ ಅಳಲು ಆರಂಭಿಸಿದಾಗ ದೇವಿಯು ಸರ್ಪರೂಪದಲ್ಲಿ ಬಂದು ಮಗುವನ್ನು ಆಟಾಡಿಸಿ ಸಮಾಧಾನ ಪಡಿಸಿದ್ದಲ್ಲದೆ, ಮಗುವಿನ ತಾಯಿಗೆ ಸನ್ನಿಧಿಗೆ ಬರುವಂತೆ ಮನಸ್ಸು ನೀಡಿದಳಂತೆ. ಹೀಗೆ ಬಂದ ಆಕೆ ತನ್ನ ಮಗು ಸನ್ನಿಧಾನದಲ್ಲಿ ಇರುವುದನ್ನು ನೋಡಿ ಖುಷಿಪಟ್ಟಿದಲ್ಲದೆ, ದೇವರಿಗೆ ಹರಕೆ ಸಲ್ಲಿಸಿ ಸ್ಥಳೀಯರಿಗೆ ಊಟ ಬಡಿಸಿ ಮಗುವಿನೊಂದಿಗೆ ತನ್ನೂರಿಗೆ ಹಿಂತಿರುಗಿದಳಂತೆ.
ಬೇಡಿದ್ದನ್ನು ಈಡೇರಿಸುವ ಮಾವತ್ತೂರಮ್ಮ
ಹಿಂದಿನ ಕಾಲದಲ್ಲಿ ಮಾವತ್ತೂರು ಅಮ್ಮನಿಗೆ ಹರಕೆಯಾಗಿ ಒಪ್ಪಿಸುವ ಕೋಣಕ್ಕೆ ಕೊಡಗಿನಲ್ಲಿ ಹರಕೆ ಕಟ್ಟಿ ಅದರ ತಲೆ ನೀರು ಹಾಕಿ ಪ್ರಾರ್ಥಿಸಿದರೆ ಅದು ಅಲ್ಲಿಂದ ನೇರವಾಗಿ ಬಂದು ಮಾವತ್ತೂರಮ್ಮನ ಸನ್ನಿಧಿಯಲ್ಲಿ ತಲೆಭಾಗಿ ನಿಲ್ಲುತ್ತಿತ್ತು ಎಂಬ ಮಾತುಗಳು ಜನವಲಯದಲ್ಲಿವೆ. ಹಲವು ಸಮಸ್ಯೆಗಳಿಂದ ಬದುಕಿನಲ್ಲಿ ಸಂಕಷ್ಟ ಅನುಭವಿಸುವವರು ಸನ್ನಿಧಿಗೆ ಬಂದು ಅಮ್ಮನಿಗೆ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಂಡರೆ ಅದು ಈಡೇರುತ್ತದೆ ಎಂಬ ನಂಬಿಕೆಯೂ ಇದೆ. ಅದರಂತೆ ವಾರದ ಎರಡು ದಿನ ಮಂಗಳವಾರ ಮತ್ತು ಶುಕ್ರವಾರ ಭಕ್ತರು ಕುಟುಂಬ, ಬಂಧು ಬಳಗದ ಜತೆಗೆ ಆಗಮಿಸಿ ಹರಕೆ ತೀರಿಸಿ ಹೋಗುವುದು ಕಂಡು ಬರುತ್ತದೆ.

ಇಲ್ಲಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪೂಜೆ ಸಲ್ಲಿಸಿ ಹರಕೆ ತೀರಿಸಿ ಊಟೋಪಚಾರಗಳನ್ನು ಮಾಡುತ್ತಾರೆ. ಹೀಗಾಗಿ ಬೆಳಿಗ್ಗೆಯಿಂದ ಸಂಜೆವರೆಗೂ ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ಎಲ್ಲರೂ ಇಲ್ಲಿಯೇ ಇರುತ್ತಾರೆ. ಆದರೆ ಇಲ್ಲಿ ಬಹುಮುಖ್ಯವಾದ ಶೌಚಾಲಯದ ವ್ಯವಸ್ಥೆಯಿಲ್ಲದಿರುವುದು ಹೆಣ್ಣುಮಕ್ಕಳಿಗೆ ಹಿಂಸೆಯಾಗಿ ಕಾಡುತ್ತಿದೆ. ಈ ಬಗ್ಗೆ ದೇಗುಲದ ಆಡಳಿತ ಮಂಡಳಿಯಾಗಲೀ, ಸ್ಥಳೀಯ ಗ್ರಾಮಪಂಚಾಯಿತಿಯಾಗಲೀ ಗಮನಹರಿಸದಿರುವುದು ಮಾತ್ರ ಬೇಸರದ ಸಂಗತಿಯಾಗಿದೆ. ದೇಶದಾದ್ಯಂತ ಸ್ವಚ್ಚತಾ ಅಭಿಯಾನ ಮತ್ತು ಶೌಚಾಲಯದ ಕುರಿತಂತೆ ಜಾಗೃತಿ ಕಾರ್ಯಕ್ರಮಗಳು ನಡೆದಿದ್ದರೂ ಇಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗದಿರುವುದು ಅಚ್ಚರಿ ಮೂಡಿಸುತ್ತದೆ. ಇನ್ನಾದರೂ ಈ ಬಗ್ಗೆ ಗಮನಹರಿಸಿದರೆ ಒಳಿತು.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್












Click it and Unblock the Notifications