ಮೈಸೂರಿಗೆ ಹೋದಾಗ ಈ ಸ್ಥಳ ಮಿಸ್‌ ಮಾಡಲೇಬೇಡಿ: ಶಿವಪಾರ್ವತಿ ನೆಲೆ ಸೋಮಗಿರಿಬೆಟ್ಟದ ಬಗ್ಗೆ ನಿಮಗೆಷ್ಟು ಗೊತ್ತು..?

ಮೈಸೂರು, ಡಿಸೆಂಬರ್‌ 02: ಕೊಡಗಿನ ತಲಕಾವೇರಿಯಲ್ಲಿ ಜನ್ಮತಾಳುವ ಜೀವನದಿ ಕಾವೇರಿ. ತಾನು ಹರಿದು ಹೋಗುವ ಹಾದಿಯಲ್ಲೆಲ್ಲ ಪವಿತ್ರ ಕ್ಷೇತ್ರ, ಜಲಪಾತ ಸೇರಿದಂತೆ ನಿಸರ್ಗ ಸುಂದರ ತಾಣಗಳನ್ನು ಸೃಷ್ಟಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇಂತಹ ನಿಸರ್ಗ ಸುಂದರ ತಾಣಗಳಲ್ಲಿ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿರುವ ಐತಿಹಾಸಿಕ ಕ್ಷೇತ್ರ ತಲಕಾಡು ಬಳಿಯ ಮುಡುಕುತೊರೆಯೂ ಒಂದಾಗಿದೆ. ಜೊತೆಗೆ ಇಲ್ಲಿರುವ ಸೋಮಗಿರಿಬೆಟ್ಟವು ಶಿವಪಾರ್ವತಿಯ ನೆಲೆಯಾಗಿರುವುದು ಗಮನಾರ್ಹವಾಗಿದೆ.

ಕಾವೇರಿ ನದಿ ದಡದ ಮುಡುಕುತೊರೆ ನಿಸರ್ಗ ರಮಣೀಯ ತಾಣವಾಗಿಯೂ ದೈವಿಕ ತಾಣವಾಗಿಯೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಮಳೆಗಾಲದಲ್ಲಿ ತುಂಬಿ ಹರಿಯುವ ಕಾವೇರಿ ನದಿ ವಿಭಿನ್ನ ನೋಟ ನೀಡಿದರೆ ಮಳೆಗಾಲ ಕಳೆಯುತ್ತಿದ್ದಂತೆಯೇ ಹಸಿರಿನಿಂದ ಕಂಗೊಳಿಸುವ ನಿಸರ್ಗ ಸಿರಿಯ ನಡುವೆ ಜುಳುಜುಳುಗುಟ್ಟುತ್ತಾ ಹರಿಯುವ ಕಾವೇರಿ ಮನಸ್ಸಿಗೆ ಮುದ ನೀಡುತ್ತಾಳೆ.

Travel News: Mysuru Mudukutore Somagiribetta Speciality

ದೂರದಿಂದ ಮೈಸೂರಿಗೆ ಬರುವ ಪ್ರವಾಸಿಗರು ಕೇವಲ ನಗರದಲ್ಲಿರುವ ತಾಣಗಳನ್ನು ನೋಡಿಕೊಂಡು ಹಿಂತಿರುಗಿ ಬಿಡುತ್ತಾರೆ. ಆದರೆ ಮೈಸೂರು ನಗರವನ್ನು ಕೇಂದ್ರವಾಗಿಟ್ಟುಕೊಂಡು ಒಂದೆರಡು ದಿನಗಳ ಕಾಲ ವಾಸ್ತವ್ಯ ಹೂಡಿ ಜಿಲ್ಲೆಯಾದ್ಯಂತ ಸುತ್ತಾಡಿದರೆ ಹಲವು ಪ್ರವಾಸಿ ತಾಣ ಮತ್ತು ದೇಗುಲಗಳ ದರ್ಶನ ಮಾಡಲು ಸಾಧ್ಯವಾಗಲಿದೆ.

ಮನಸ್ಸಿಗೆ ಮುದ ನೀಡುವ ಹಸಿರ ಸಿರಿ

ಮುಡುಕುತೊರೆ ನಿಸರ್ಗ ಸೌಂದರ್ಯದ ನಲೆವೀಡು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ವೇಳೆ ಮುಡುಕುತೊರೆಗೆ ಭೇಟಿ ನೀಡಿ ಹಾಗೆ ಸುಮ್ಮನೆ ಕಣ್ಣು ಹಾಯಿಸಿದರೆ ವಿಶಾಲವಾಗಿ ಹರಿಯುವ ಕಾವೇರಿ ನದಿ, ಸುತ್ತ ಮುತ್ತ ಹಸಿರಿನಿಂದ ಕಂಗೊಳಿಸುವ ನಿಸರ್ಗ, ಬೆಟ್ಟದ ಮೇಲೆ ಭವ್ಯ ಮಲ್ಲಿಕಾರ್ಜುನ ಸ್ವಾಮಿ ದೇಗುಲ ಹಾಗೂ ಸುತ್ತಲೂ ಕಂಗೊಳಿಸುವ ಸುಂದರ ಪ್ರಾಕೃತಿಕ ಸೌಂದರ್ಯ ನಮ್ಮೆಲ್ಲ ನೋವುಗಳನ್ನು ಮರೆ ಮಾಡಿ ಮನಸ್ಸಿಗೆ ಖುಷಿ ಕೊಡುತ್ತದೆ.

Travel News: Mysuru Mudukutore Somagiribetta Speciality

ಕೊಡಗಿನಿಂದ ಹರಿದು ಬಂದ ಕಾವೇರಿ ನದಿ ಇಲ್ಲಿ ಹರಿಯುವ ವೇಳೆ ಪಶ್ಚಿಮದಿಂದ ಉತ್ತರ ದಿಕ್ಕಿನತ್ತ ಹರಿದು, ಪೂರ್ವಕ್ಕೆ ಮುರಿದು ದಕ್ಷಿಣಕ್ಕೆ ಪ್ರವೇಶಿಸಿದ್ದರಿಂದ ಮುಡುಕುತೊರೆ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ. ನದಿ ದಡದಲ್ಲಿಯೇ ಬೆಟ್ಟವಿದ್ದು, ಈ ಬೆಟ್ಟವನ್ನು ಸೋಮಗಿರಿ ಬೆಟ್ಟವೆಂದು ಕರೆಯಲಾಗುತ್ತದೆ. ಇಲ್ಲಿ ಮಲ್ಲಿಕಾರ್ಜುನ ದೇಗುಲವಿದ್ದು, ಇಲ್ಲಿನ ಲಿಂಗವು ತಲಕಾಡು ಪಂಚಲಿಂಗದೊಂದಿಗೆ ಬೆರೆತಿರುವುದು ವಿಶೇಷವಾಗಿದೆ.

ಮಹಾಮಹಿಮೆಯ ಸೋಮಗಿರಿಬೆಟ್ಟ

ಸೋಮಗಿರಿಬೆಟ್ಟವು ಸುಮಾರು 300 ಅಡಿಯಷ್ಟು ಎತ್ತರದಲ್ಲಿದ್ದು, ಈ ಬೆಟ್ಟವನ್ನೇರಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಈ ಬೆಟ್ಟಕ್ಕೆ ದ್ವಾಪರಯುಗದ ನಂಟಿರುವುದನ್ನು ತಳ್ಳಿಹಾಕುವಂತಿಲ್ಲ. ಪೌರಾಣಿಕ ಕಥೆಯ ಪ್ರಕಾರ ಕೌರವರ ಕುಟಿಲತೆಯಿಂದ ರಾಜ್ಯವನ್ನು ಕಳೆದುಕೊಂಡು ವನವಾಸ ಹೊರಟ ಪಾಂಡವರು ಸೋಮಗಿರಿ ಬೆಟ್ಟಕ್ಕೆ ಬಂದಿದ್ದರಂತೆ. ಈ ಸಂದರ್ಭ ಸುತ್ತಲಿನ ಪ್ರಕೃತಿಯ ಸೊಬಗನ್ನು ಕಂಡು ಆಕರ್ಷಿತಗೊಂಡ ಅರ್ಜುನ ಲಿಂಗರೂಪಿಯಾಗಿದ್ದ ಈಶ್ವರನನ್ನು ಕಂಡು ಹರ್ಷಗೊಂಡನಲ್ಲದೆ, ಲಿಂಗಕ್ಕೆ ಮಲ್ಲಿಕಾಪುಷ್ಪಗಳಿಂದ ಪೂಜಿಸಿ ತನ್ನ ಇಷ್ಟಾರ್ಥವನ್ನು ಪಡೆದನು ಎಂಬ ಐಹಿತ್ಯವಿದೆ.

Travel News: Mysuru Mudukutore Somagiribetta Speciality

ಇಲ್ಲಿ ಭ್ರಮರಾಂಭಸಹಿತ ಮಲ್ಲಿಕಾರ್ಜುನ ನೆಲೆಸಿರುವುದು ಮಹತ್ವವನ್ನು ಪಡೆದಿದೆ. ಅರುಣ ಎಂಬ ದುಷ್ಟರಾಕ್ಷಸನನ್ನು ಶಿವನ ಪತ್ನಿ ಪಾರ್ವತಿದೇವಿ ಭ್ರಮರ(ದುಂಬಿ) ರೂಪ ತಳೆದು ಬಂದು ಸಂಹರಿಸುವುದರ ಮೂಲಕ ಭ್ರಮರಾಂಭೆಯಾಗಿ ನೆಲೆಸಿದಳೆಂಬ ಪೌರಾಣಿಕ ಕಥೆಗಳು ಪ್ರಚಲಿತದಲ್ಲಿದೆ. ಬೆಟ್ಟದಲ್ಲಿ ಮಲ್ಲಿಕಾರ್ಜುನ ದೇಗುಲವಿದ್ದರೆ, ತಳಭಾಗದಲ್ಲಿ ಬೆಟ್ಟಹಳ್ಳಿ ಮಾರಮ್ಮ ಎಂಬ ಗ್ರಾಮ ದೇವತೆಯ ದೇಗುಲವಲ್ಲದೆ, ಸುತ್ತಮುತ್ತ ಕಣ್ಣೀರ್‌ ಕಟ್ಟೆ, ಹಾಲುಗಟ್ಟೆ, ಕಪಿಲಗೋಮಾಳ ಮುಂತಾದ ವೀಕ್ಷಣಾರ್ಹ ಸ್ಥಳಗಳಿವೆ.

ಸೋಮನಗಿರಿಯಿಂದ ಭಕ್ತರ ಪರಿಷೆ

ಇನ್ನು ವರ್ಷಕ್ಕೊಮ್ಮೆ ಇಲ್ಲಿ ಪರ್ವತ ಪರಿಷೆ ನಡೆಯುವುದು ವಿಶೇಷವಾಗಿದೆ. ಪುರಾಣ ಕಥೆಯ ಪ್ರಕಾರ ಪಾರ್ವತಿಯು ಸೋಮನಗಿರಿಯಿಂದ ಶಿವನ ವಾಹನ ಬಸವನ ಮೇಲೆ ತನ್ನ ತವರು ಮನೆಯಾದ ಶ್ರೀಶೈಲಕ್ಕೆ ಹೋಗಿ ಬರುತ್ತಿದ್ದಳೆಂದೂ ಆ ನಂಬಿಕೆ ಇಂದಿಗೂ ಜನಮನದಲ್ಲಿದ್ದು ಅದರಂತೆ ಇವತ್ತಿಗೂ ಬಸವನೊಂದಿಗೆ ಭಕ್ತರು ಪರಿಷೆ ಹೊರಡುವವುದು ನಡೆಯುತ್ತದೆ. ಕಾಲ್ನಡಿಗೆಯಲ್ಲಿಯೇ ಭಕ್ತರು ಮದ್ದೂರು, ಚನ್ನಪಟ್ಟಣ, ಬೆಂಗಳೂರು, ನಂದ್ಯಾಲ ಮೂಲಕ ಶ್ರೀಶೈಲವನ್ನು ಯುಗಾದಿ ಸಂದರ್ಭ ತಲುಪಿ ಬಳಿಕ ಅಲ್ಲಿಂದ ಹಿಂತಿರುಗಿ ಮುಡುಕುತೊರೆಗೆ ಆಗಮಿಸಿ ಸೋಮಗಿರಿ ಬೆಟ್ಟದಲ್ಲಿರುವ ಮಲ್ಲಿಕಾರ್ಜುನನಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ.

ಅದು ಏನೇ ಇರಲಿ ಪ್ರಕೃತಿ ರಮಣೀಯ ತಾಣವಾಗಿಯೂ, ಐತಿಹಾಸಿಕ ಕ್ಷೇತ್ರವಾಗಿಯೂ ಗಮನಸೆಳೆದಿರುವ ಮುಡುಕುತೊರೆ ಎಲ್ಲ ದಿನಗಳಲ್ಲಿಯೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಮುಡುಕುತೊರೆಗೆ ತೆರಳುವವರು ಮೈಸೂರಿನಿಂದ ತಾಲೂಕು ಕೇಂದ್ರವಾದ ತಿ.ನರಸೀಪುರಕ್ಕೆ ತೆರಳಿದರೆ ಅಲ್ಲಿಂದ 19ಕಿ.ಮೀ. ಸಾಗಿದರೆ ಮುಡುಕುತೊರೆಯನ್ನು ತಲುಪಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+