Get Updates
Get notified of breaking news, exclusive insights, and must-see stories!

Mysuru: ನಿಸರ್ಗ ಸುಂದರ ಕಾವೇರಿ ನದಿ ತಟದ ಮುಡುಕುತೊರೆ

ಮೈಸೂರು, ಜೂನ್‌ 12: ಈಗ ಮಳೆ ಸುರಿದ ಪರಿಣಾಮ ನಿಸರ್ಗ ಸೌಂದರ್ಯ ಎಲ್ಲೆಡೆ ಇಮ್ಮಡಿಸಿದೆ. ಹೀಗಾಗಿ ನಿಸರ್ಗ ಸುಂದರ ಪ್ರವಾಸಿ ತಾಣಗಳೆಲ್ಲವೂ ಹಸಿರು ಹಚ್ಚಡದೊಂದಿಗೆ ಕಂಗೊಳಿಸುತ್ತಾ ಪ್ರಕೃತಿ ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತಿದೆ. ಹೀಗಾಗಿ ಈ ಸಮಯದಲ್ಲಿ ಪ್ರವಾಸಿಗರು ನಿಸರ್ಗದ ಸುಂದರತೆಯನ್ನು ಸವಿಯಲೆಂದೇ ಟ್ರಿಪ್ ಹೊರಡುತ್ತಿದ್ದಾರೆ. ಪರಿಣಾಮ ಪ್ರವಾಸಿ ತಾಣಗಳೆಲ್ಲವೂ ಪ್ರವಾಸಿಗರಿಂದ ತುಂಬಿ ತುಳುಕುವುದು ಎದ್ದು ಕಾಣಿಸುತ್ತಿದೆ.

ಕನ್ನಡ ನಾಡಿನ ಜೀವನದಿ ಕಾವೇರಿ ತಾನು ಹರಿದು ಹೋಗುವಲೆಲ್ಲ ಪ್ರವಾಸಿ ತಾಣಗಳನ್ನು ಸೃಷ್ಟಿಸಿದ್ದು, ಇದರಲ್ಲಿ ದೇವಸ್ಥಾನಗಳು, ಜಲಪಾತ ಸೇರಿದಂತೆ ಹಲವು ತಾಣಗಳನ್ನು ಸೃಷ್ಟಿಸಿದೆ. ಇದರಲ್ಲೊಂದು ಮೈಸೂರು ಜಿಲ್ಲೆಯ ಮುಡುಕುತೊರೆಯಾಗಿದೆ. ಇದೊಂದು ನಿಸರ್ಗ ರಮಣೀಯ ಮಾತ್ರವಲ್ಲದೆ, ಪವಿತ್ರ ಕ್ಷೇತ್ರ ಜತೆಗೆ ಪಂಚಲಿಂಗ ದರ್ಶನದಲ್ಲಿ ಇಲ್ಲಿನ ಶಿವಲಿಂಗವಿರುವುದು ವಿಶೇಷವಾಗಿದೆ.

Travel News Here Is The Specialty Of Mysuru Mudukuthore

ಇನ್ನು ಮುಡುಕುತೊರೆಗೆ ಭೇಟಿ ನೀಡುವ ಪ್ರವಾಸಿಗರನ್ನು ಹಚ್ಚ ಹಸುರಿನ ಸೌಂದರ್ಯ ಆಕರ್ಷಿಸುತ್ತದೆ. ಕಣ್ಣು ಹಾಯಿಸಿದರೆ ವಿಶಾಲವಾಗಿ ಹರಡಿ ಹರಿಯುವ ಕಾವೇರಿ ನದಿ ಅದರ ದಡದಲ್ಲಿ ಬೆಳೆದು ನಿಂತ ಹಸಿರುವನಗಳು, ಗದ್ದೆ ತೋಟದ ಬಯಲು ಮುಗಿಲತ್ತ ಬೆಳೆದು ನಿಂತ ತೆಂಗಿನ ಮರಗಳು, ಅಲ್ಲಲ್ಲಿ ಬಯಲು, ಜನವಸತಿಗಳು, ಅದರಾಚೆಗೆ ಕಾಣಸಿಗುವ ಹಸಿರಿನಿಂದ ಆವೃತವಾದ ಸೋಮಗಿರಿಬೆಟ್ಟ.. ಎಲ್ಲವೂ ನಿಸರ್ಗವನ್ನು ಪ್ರೀತಿಸುವವರು ಒಂದು ಕ್ಷಣ ತನ್ನ ಆಕರ್ಷಣೆಯಿಂದ ಹಿಡಿದಿಡುತ್ತದೆ.

ಮನಶಾಂತಿ ನೀಡುವ ಮುಡುಕುತೊರೆ

ಈಗಂತೂ ಎಲ್ಲರದು ಒತ್ತಡದ ಜೀವನ ಹೀಗಾಗಿ ಮಾನಸಿಕ ನೆಮ್ಮದಿಗಾಗಿ, ಮನಶಾಂತಿಗಾಗಿ ತಡಕಾಡುವುದು ಮಾಮೂಲಿಯಾಗಿದೆ. ಸದಾ ಕೆಲಸದಲ್ಲಿ ಮಗ್ನರಾದವರ ಮನಸ್ಸಿಗೆ ಮುದ ನೀಡುವ ಶಕ್ತಿಯಿರುವುದು, ಪ್ರವಾಸಿ ತಾಣಗಳಿಗೆ ಮಾತ್ರ. ನಿತ್ಯದ ಜಂಜಾಟದಿಂದ ಹೊರ ಬಂದವರಿಗೆ ಪ್ರಾಕೃತಿಕ ಚೆಲುವಿನ ತಾಣಗಳು ಮನವೊಲ್ಲಾಸ ನೀಡಿ ನೋವು ಮರೆಸಿ ಖುಷಿ ಕೊಡುತ್ತವೆ. ಹೀಗಾಗಿಯೇ ಈ ಸಮಯದಲ್ಲಿ ಮುಡುಕುತೊರೆಗೆ ಬಂದವರಿಗೆ ಮನಶಾಂತಿ ಸಿಗುವುದರಲ್ಲಿ ಎರಡು ಮಾತಿಲ್ಲ.

ಕಾವೇರಿ ನದಿ ದಡದ ಮುಡುಕುತೊರೆ ನಿಸರ್ಗ ರಮಣೀಯ ತಾಣವಾಗಿಯೂ ದೈವಿಕ ತಾಣವಾಗಿಯೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಾ ಬಂದಿದ್ದು, ಈ ತಾಣವು ಮೈಸೂರು ಜಿಲ್ಲೆಯ ತಾಲೂಕು ಕೇಂದ್ರವಾದ ತಿ.ನರಸೀಪುರದಿಂದ 19ಕಿ.ಮೀ. ದೂರದಲ್ಲಿದೆ. ಬೇಸಿಗೆಯಲ್ಲಿ ಬಿಸಿಲಿನ ಧಗೆಗೆ ತನ್ನ ಸೌಂದರ್ಯವನ್ನು ಕಳೆದು ಕೊಂಡಿದ್ದ ಮುಡುಕುತೊರೆಗೆ ಈಗ ಸುರಿದ ಮಳೆ ಮೆರಗು ತಂದಿದೆ. ಕಾವೇರಿ ನದಿಯ ನೀರಿನ ಪ್ರಮಾಣವೂ ಹೆಚ್ಚಾಗಿರುವ ಕಾರಣದಿಂದಾಗಿ ಹೊಸ ಕಳೆ ಬಂದಿದ್ದು, ಅದು ನಿಸರ್ಗ ಪ್ರೇಮಿಗಳನ್ನು ಕೈಬೀಸಿ ಕರೆಯುವಂತೆ ಮಾಡಿದೆ.

ಮುಡುತೊರೆ ವೀಕ್ಷಣೆಗೀಗ ಸುಸಮಯ

ಈ ಸಮಯದಲ್ಲಿ ಮುಡುಕುತೊರೆಗೆ ಹೋದರೆ ಇಲ್ಲಿನ ಸುಂದರತೆಯೊಂದಿಗೆ ಕ್ಷೇತ್ರದ ಮಹತ್ವವೂ ಅರಿವಾಗುತ್ತದೆ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಹರಿದು ಬರುವ ಕಾವೇರಿ ನದಿ ಮುಡುಕುತೊರೆಯಲ್ಲಿ ಹರಿಯುವ ವೇಳೆ ಪಶ್ಚಿಮದಿಂದ ಉತ್ತರ ದಿಕ್ಕಿನತ್ತ ಹರಿದು, ಪೂರ್ವಕ್ಕೆ ಮುರಿದು ದಕ್ಷಿಣಕ್ಕೆ ಪ್ರವೇಶಿಸಿದ್ದರಿಂದ ಮುಡುಕುತೊರೆ ಎಂಬ ಹೆಸರು ಬಂದಿದೆ. ನದಿ ದಡದಲ್ಲಿಯೇ ಸೋಮಗಿರಿ ಬೆಟ್ಟವಿದ್ದು, ಮಲ್ಲಿಕಾರ್ಜುನ ದೇಗುಲವಿದೆ.

ಈ ಸೋಮಗಿರಿಬೆಟ್ಟವು ಸುಮಾರು 300 ಅಡಿಯಷ್ಟು ಎತ್ತರದಲ್ಲಿದ್ದು, ಈ ಬೆಟ್ಟವನ್ನೇರಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಈ ಬೆಟ್ಟಕ್ಕೆ ದ್ವಾಪರಯುಗದ ನಂಟಿದ್ದು, ಮಹಾಭಾರತದ ಕಾಲದಲ್ಲಿ ಕೌರವರ ಕುಟಿಲತೆಯಿಂದ ರಾಜ್ಯವನ್ನು ಕಳೆದುಕೊಂಡು ವನವಾಸ ಹೊರಟ ಪಾಂಡವರು ಸೋಮಗಿರಿ ಬೆಟ್ಟಕ್ಕೆ ಬಂದಿದ್ದರಂತೆ.

ಈ ಸಂದರ್ಭ ಸುತ್ತಲಿನ ಪ್ರಕೃತಿಯ ಸೊಬಗನ್ನು ಕಂಡು ಆಕರ್ಷಿತಗೊಂಡ ಅರ್ಜುನ ಲಿಂಗರೂಪಿಯಾಗಿದ್ದ ಈಶ್ವರನನ್ನು ಕಂಡು ಹರ್ಷಗೊಂಡನಲ್ಲದೆ, ಲಿಂಗಕ್ಕೆ ಮಲ್ಲಿಕಾಪುಷ್ಪಗಳಿಂದ ಪೂಜಿಸಿ ತನ್ನ ಇಷ್ಟಾರ್ಥವನ್ನು ಪಡೆದನಂತೆ. ಅರ್ಜುನ ಮಲ್ಲಿಕಾ ಪುಷ್ಪಗಳಿಂದ ಪೂಜೆ ಮಾಡಿದ್ದರಿಂದ ಮಲ್ಲಿಕಾರ್ಜುನ ಎಂಬ ಹೆಸರು ಬಂದಿದೆ ಎಂಬ ಮಾತುಗಳಿವೆ.

ನಾಸ್ತಿಕ-ಆಸ್ತಿಕರಿಗೆ ಇಷ್ಟವಾಗುವ ತಾಣ

ಇಲ್ಲಿ ಮಲ್ಲಿಕಾರ್ಜುನನು ಪತ್ನಿ ಭ್ರಮರಾಂಭ ಸಹಿತ ನೆಲೆಸಿರುವುದು ವಿಶೇಷ ಮಹತ್ವವನ್ನು ಪಡೆದಿದ್ದು, ಅರುಣ ಎಂಬ ದುಷ್ಟರಾಕ್ಷಸನನ್ನು ಶಿವನ ಪತ್ನಿ ಪಾರ್ವತಿದೇವಿ ಭ್ರಮರ(ದುಂಬಿ) ರೂಪ ತಳೆದು ಬಂದು ಸಂಹರಿಸುವುದರ ಮೂಲಕ ಭ್ರಮರಾಂಭೆಯಾಗಿ ನೆಲೆಸಿದಳೆಂದು ಪೌರಾಣಿಕ ಕಥೆಗಳು ಹೇಳುತ್ತವೆ. ಮಲ್ಲಿಕಾರ್ಜುನ ದೇಗುಲ ನೆಲೆ ನಿಂತ ಸೋಮಗಿರಿ(ಬೆಟ್ಟ) ಏರಲು ನಿರ್ಮಿಸಿರುವ ಮೆಟ್ಟಿಲುಗಳ ಮೇಲೆ ದಾನಿಗಳ ಹೆಸರು ಹಾಗೂ ಸೂಕ್ತಿಗಳನ್ನು ಬರೆದಿರುವುದು ಗಮನಾರ್ಹವಾಗಿದೆ ಅದು ಏನೇ ಇರಲಿ ಮುಡುಕುತೊರೆ ನಾಸ್ತಿಕ-ಆಸ್ತಿಕರೆನ್ನದೆ ಎಲ್ಲರನ್ನು ತನ್ನತ್ತ ಸೆಳೆಯುವ ಸುಂದರ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+